ಅಗಲಿದ ಡೆಬ್ಬೇಲಿ ವಿಮಲ ಆಳ್ವ, ವಿದುಷಿ ಆಸ್ತಿಕಾ ಶೆಟ್ಟಿಯವರ ಶ್ರದ್ಧಾಂಜಲಿ ಸಭೆ

0

ಚಿತ್ರ: ಜೀತ್ ಪುತ್ತೂರು

-ಬಹರೈನ್‌ನಲ್ಲಿ ಹಿಂದು ಸಂಸ್ಕೃತಿಯ ಜೀವಾಳವನ್ನು ಪಸರಿಸಿದವರಾಗಿದ್ದಾರೆ ಆಸ್ತಿಕಾರವರು-ಶೋಭಿತಾ ಸತೀಶ್
-ಆಸ್ತಿಕಾರವರದ್ದು ನಿಷ್ಕಲ್ಮಶ ಪ್ರೀತಿಯನ್ನು ಹೊಂದಿರುವಂತಹ ಆದರ್ಶ ಗುಣ-ಪ್ರೊ|ದತ್ತಾತ್ರೇಯ ರಾವ್
-ಕುದ್ಕಾಡಿ ವಿಶ್ವನಾಥ ರೈಯವರದ್ದು ಕಲಾ ಪ್ರತಿಭೆಯನ್ನು ಮೈಗೂಡಿಸಿಕೊಂಡ ಸಂಸಾರ-ಹರಿಣಾಕ್ಷಿ ಜೆ.ರೈ
-ಸಾಧನೆ ಮಾಡಿ ತೋರಿಸುತ್ತೇನೆ ಎಂಬ ಛಲ ಆಸ್ತಿಕಾರವರಲ್ಲಿ ಇತ್ತು-ದೂಮಣ್ಣ ರೈ
-ಚಿಲುಮೆಯ ಚಿನ್ನದ ನಾಣ್ಯವೊಂದು ಕೈಯಿಂದ ಜಾರಿಕೊಂಡ ಹಾಗಿದೆ-ರಮೇಶ್ ಬಾಯಾರು
-ಆಸ್ತಿಕಾರವರು ಭಾರತದ ಕಲಾ ಕ್ಷೇತ್ರದ ಅಂಬಾಸಿಡರ್-ವಿಜಯಾ ರೈ
-ಆಸ್ತಿಕಾರವರ ಕಾರ್ಯ ಸಾಧನೆಗೆ ಮರಣೋತ್ತರ ಪ್ರಶಸ್ತಿ ನೀಡಿ ಗುರುತಿಸುವಿಕೆಯಾಗಬೇಕು-ರಮೇಶ್ ಮಂಜೇಶ್ವರ್

ಪುತ್ತೂರು: ಇತ್ತೀಚೆಗೆ ನಿಧನರಾದ ಮೇನಾಲ ದಿ.ಆನಂದ ಆಳ್ವರವರ ಪತ್ನಿ ಡೆಬ್ಬೇಲಿ ವಿಮಲ ಆಳ್ವ ಹಾಗೂ ಕರ್ನಾಟಕ ಕಲಾಶ್ರೀ ದಿ.ಕುದ್ಕಾಡಿ ವಿಶ್ವನಾಥ ರೈ ಹಾಗೂ ವಿದುಷಿ ನಯನ ವಿ.ರೈ ದಂಪತಿ ಪುತ್ರಿ ಭರತನಾಟ್ಯ, ಯಕ್ಷಗಾನ ಕಲಾವಿದೆ ಅಗಲಿದ ವಿದುಷಿ ಆಸ್ತಿಕ ಸುನಿಲ್ ಶೆಟ್ಟಿರವರ ಆತ್ಮ ಸದ್ಗತಿ ಬಗ್ಗೆ ಉತ್ತರಕ್ರಿಯಾದಿ ಕಾರ್ಯ ಹಾಗೂ ಶ್ರದ್ಧಾಂಜಲಿ ಸಭೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಮಾ.24 ರಂದು ನೆರವೇರಿತು.

ಬಹರೈನ್‌ನಲ್ಲಿ ಹಿಂದು ಸಂಸ್ಕೃತಿಯ ಜೀವಾಳವನ್ನು ಪಸರಿಸಿದವರಾಗಿದ್ದಾರೆ ಆಸ್ತಿಕಾರವರು-ಶೋಭಿತಾ ಸತೀಶ್:

ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಶೋಭಿತಾ ಸತೀಶ್‌ರವರು ಮಾತನಾಡಿ, ಜೀವನದಲ್ಲಿ ನಾವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ, ಧನಾತ್ಮಕ ಮನೋಭಾವ ಬೆಳೆಸಿಕೊಂಡಾಗ ಜೀವನ ಫಲಪ್ರದವಾಗಬಲ್ಲುದು. ಹಾಗೆಯೇ ಜೀವನದಲ್ಲಿ ಉತ್ಸಾಹದ ಚಿಲುಮೆಯಾಗಿದ್ದಂತಹ ಆಸ್ತಿಕಾರವರಲ್ಲಿ ಈ ಎಲ್ಲಾ ಗುಣಗಳು ಮೇಳೈಸಿವೆ. ಭಾರತ ದೇಶದ ಸಂಸ್ಕೃತಿಯನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ, ಹೊರದೇಶದ ಬಹರೈನ್‌ನಲ್ಲಿ ಹಿಂದು ಸಂಸ್ಕೃತಿಯ ಜೀವಾಳವನ್ನು ಪಸರಿಸಿದ ಆಸ್ತಿಕಾರವರ ಜೀವನ ನಮಗೆ ಮಾದರಿಯಾಗಿದೆ. ಆದ್ದರಿಂದ ನಮ್ಮನ್ನಗಲಿದ ಆಸ್ತಿಕಾರವರ ಆತ್ಮವಿಶ್ವಾಸ, ಕಾಳಜಿ, ಪ್ರೀತಿ, ಯೋಚನೆ, ಸಾಧನೆಗಳು ಸದಾ ಬದುಕಬೇಕೆಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಆಸ್ತಿಕಾರವರದ್ದು ನಿಷ್ಕಲ್ಮಶ ಪ್ರೀತಿಯನ್ನು ಹೊಂದಿರುವಂತಹ ಆದರ್ಶ ಗುಣ-ಪ್ರೊ|ದತ್ತಾತ್ರೇಯ ರಾವ್:

ನಿವೃತ್ತ ಸಹಾಯಕ ಪ್ರಾಧ್ಯಾಪಕರಾದ ಪ್ರೊ|ದತ್ತಾತ್ರೇಯ ರಾವ್ ಮಾತನಾಡಿ, ಕುದ್ಕಾಡಿ ವಿಶ್ವನಾಥ ರೈ ಹಾಗೂ ನಯನ ವಿ.ರೈಯವರ ಪುತ್ರಿಯರಾದ ಆಸ್ತಿಕಾ ಹಾಗೂ ಸ್ವಸ್ತಿಕರವರನ್ನು ತಾನು ಬಾಲ್ಯದಿಂದಲೇ ಬಲ್ಲೆ. ತನಗೆ ಹಾಡುವ ಹವ್ಯಾಸ ಇರುವುದರಿಂದ ಕುದ್ಕಾಡಿರವರ ಮನೆ ಸದಸ್ಯರಿಗೆ ಬಹಳ ಹತ್ತಿರವಾಗಿ ಬಿಟ್ಟಿದ್ದೆ. ಅಗಲಿದ ಆಸ್ತಿಕಾರವರು ಎಲ್ಲಾ ಕ್ಷೇತ್ರದಲ್ಲೂ ಮಿಂಚಿರುವ ಪ್ರತಿಭೆಯಾಗಿರುವಳು. ನಿಷ್ಕಲ್ಮಶ ಪ್ರೀತಿಯನ್ನು ಹೊಂದಿರುವಂತಹ ಆಸ್ತಿಕಾರವರ ಆದರ್ಶ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಕುದ್ಕಾಡಿ ವಿಶ್ವನಾಥ ರೈಯವರದ್ದು ಕಲಾ ಪ್ರತಿಭೆಯನ್ನು ಮೈಗೂಡಿಸಿಕೊಂಡ ಸಂಸಾರ-ಹರಿಣಾಕ್ಷಿ ಜೆ.ರೈ:

ನ್ಯಾಯವಾದಿ ಹರಿಣಾಕ್ಷಿ ಜೆ.ರೈ ಮಾತನಾಡಿ, ಮನುಷ್ಯ ಎಷ್ಟು ದಿನ ಬದುಕಿದ್ದಾನೆ, ಏನು ಸಾಧನೆ ಮಾಡಿದ್ದಾನೆ ಎಂಬುದು ಬಹಳ ಮುಖ್ಯವಾಗುತ್ತದೆ. ಓರ್ವ ಕೃಷಿ ಕುಟುಂಬದಲ್ಲಿ ಜನಿಸಿ, ಜೀವನ ಮುಂದುವರೆಸಿದ ಡೆಬ್ಬೇಲಿ ವಿಮಲ ಆಳ್ವರವರು ಉತ್ತಮ ರೀತಿಯಲ್ಲಿ ಸಂಸಾರವನ್ನು ಸಾಗಿಸುವ ಮೂಲಕ ತನ್ನ ಪತಿಗೆ ಹಾಗೂ ಮಕ್ಕಳಿಗೆ ಆದರ್ಶತೆಯನ್ನು ಬೋಧಿಸಿದವರಾಗಿರುತ್ತಾರೆ. ಹಾಗೆಯೇ ದಿ.ಕುದ್ಕಾಡಿ ವಿಶ್ವನಾಥ ರೈ ಹಾಗೂ ನಯನ ವಿ.ರೈ ಸಂಸಾರ ಕಲಾ ಪ್ರತಿಭೆಯನ್ನು ಮೈಗೂಡಿಸಿಕೊಂಡವರಾಗಿದ್ದಾರೆ. ವಿಶ್ವಕಲಾನಿಕೇತನ ನೃತ್ಯ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಈ ಕುಟುಂಬ ಸಮಾಜಕ್ಕೆ ಕಲೆಯ ಪ್ರತಿಬಿಂಬವನ್ನು ಪ್ರಚುರಪಡಿಸಿ ಶ್ರೇಷ್ಟತೆಯನ್ನು ಮೆರೆದಿದ್ದಾರೆ ಎಂದು ಹೇಳಿ ಅಗಲಿದ ಈರ್ವರ ಆತ್ಮಕ್ಕೆ ಚಿರಶಾಂತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಸಾಧನೆ ಮಾಡಿ ತೋರಿಸುತ್ತೇನೆ ಎಂಬ ಛಲ ಆಸ್ತಿಕಾರವರಲ್ಲಿ ಇತ್ತು-ದೂಮಣ್ಣ ರೈ:

ಬಹರೈನ್‌ನಲ್ಲಿ ದಿ.ಆಸ್ತಿಕಾರವರ ಕುಟುಂಬಕ್ಕೆ ಆತ್ಮೀಯರಾಗಿರುವ ದೂಮಣ್ಣ ರೈ ಮಾತನಾಡಿ, ಓರ್ವ ಗೃಹಿಣಿಯಾಗಿ, ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ, ಚಿಕ್ಕಮ್ಮಳಾಗಿ, ಗುರುವಾಗಿ ಏನು ಮಾಡಬೇಕು ಎಲ್ಲವನ್ನೂ ಅತ್ಯಂತ ಸಣ್ಣ ಪ್ರಾಯದಲ್ಲಿಯೇ ಮಾಡಿ ಮುಗಿಸಿರುವವರು ಆಸ್ತಿಕಾರವರು. ತಾನು ಸಾಧನೆ ಮಾಡಿ ತೋರಿಸುತ್ತೇನೆ ಎಂಬ ಛಲ ಆಸ್ತಿಕಾರವರಲ್ಲಿ ಇತ್ತು. ಹುಶಾರಿಲ್ಲದ ಸಂದರ್ಭದಲ್ಲೂ ಧೃತಿಗೆಡದೆ ತಾನು ಗೆದ್ದು ಬರುವೆ ಎಂಬ ಆತ್ಮವಿಶ್ವಾಸ ಕೂಡ ಅವರಲ್ಲಿತ್ತು. ಅಂತಹ ವಿಶೇಷ ವ್ಯಕ್ತಿತ್ವವುಳ್ಳ ವ್ಯಕ್ತಿ ಆಸ್ತಿಕಾರವರು ಆಗಿದ್ದರು ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಚಿಲುಮೆಯ ಚಿನ್ನದ ನಾಣ್ಯವೊಂದು ಕೈಯಿಂದ ಜಾರಿಕೊಂಡ ಹಾಗಿದೆ-ರಮೇಶ್ ಬಾಯಾರು:

ದಿ.ಆಸ್ತಿಕಾರವರ ಯಕ್ಷಗಾನ ಗುರು ರಮೇಶ್ ಬಾಯಾರು ಮಾತನಾಡಿ, ಹುಟ್ಟು ಆಕಸ್ಮಿಕ, ಬದುಕು ಆನಿವಾರ್ಯ, ಸಾವು ನಿಶ್ಚಿತ ಎಂಬುದು ಅಲಿಖಿತ ನಿಯಮ. ಆಸ್ತಿಕಾರವರು ಪ್ರತಿಭಾ ಸಂಪನ್ನಳಾಗಿದ್ದು, ದೂರದ ಬಹರೈನ್‌ನಲ್ಲಿ ತನ್ನ ಪ್ರತಿಭೆ ಛಾಪನ್ನು ಮೂಡಿಸಿದವರಾಗಿದ್ದಾರೆ. ಆಸ್ತಿಕಾರವರ ಆಕಸ್ಮಿಕ ಅಗಲಿಕೆಯ ಚಿಲುಮೆಯ ಚಿನ್ನದ ನಾಣ್ಯವೊಂದು ಕೈಯಿಂದ ಜಾರಿಕೊಂಡ ಹಾಗಿದೆ. ಅಗಲಿದ ಆಸ್ತಿಕಾರವರು ದೇವರಲ್ಲಿ ಶ್ರೇಷ್ಟವಾದ ಸ್ಥಾನ ಸಂಪಾದಿಸಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಆಸ್ತಿಕಾರವರು ಭಾರತದ ಕಲಾ ಕ್ಷೇತ್ರದ ಅಂಬಾಸಿಡರ್-ವಿಜಯಾ ರೈ:

ಬಹರೈನ್‌ನಲ್ಲಿ ದಿ.ಆಸ್ತಿಕಾ ಕುಟುಂಬದ ನಿಕಟ ಸಂಪರ್ಕ ಹೊಂದಿರುವ ವಿಜಯಾ ರೈ ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡಿಡಬಾರದು ಬದಲಾಗಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೆನ್ನುವ ನಾಣ್ಣುಡಿ ಕರ್ನಾಟಕ ಕಲಾಶ್ರೀ ದಿ.ಕುದ್ಕಾಡಿ ವಿಶ್ವನಾಥ ರೈ ಹಾಗೂ ನಯನ ವಿ.ರೈಯವರಿಗೆ ಸಲ್ಲುತ್ತದೆ. ಯಾಕೆಂದ್ರೆ ಆಸ್ತಿಕಾ ಹಾಗೂ ಸ್ವಸ್ತಿಕಾರವರ ಸಾಧನೆಯೇ ಅದು ತೋರಿಸುತ್ತದೆ. ತುಳುನಾಡಿನ ಕಲಾಶ್ರೀ ಕಟ್ಟಿದವರು ಕುದ್ಕಾಡಿ ವಿಶ್ವನಾಥ ರೈಯವರು ಮತ್ತು ಅದನ್ನು ಸಾರ್ಥಕಗೊಳಿಸಿದವರು ಕುದ್ಕಾಡಿರವರ ಮಕ್ಕಳಾಗಿದ್ದಾರೆ. ಅಗಲಿದ ಆಸ್ತಿಕಾರವರು ನಿಜಕ್ಕೂ ನಮ್ಮನ್ನು ಬಿಟ್ಟು ಹೋಗಿಲ್ಲ. ಅವರು ಯಾವಾಗಲೂ ನಮ್ಮೊಂದಿಗೆ ದಾರಿದೀಪ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಆಸ್ತಿಕಾರವರ ಕಾರ್ಯ ಸಾಧನೆಗೆ ಮರಣೋತ್ತರ ಪ್ರಶಸ್ತಿ ನೀಡಿ ಗುರುತಿಸುವಿಕೆಯಾಗಬೇಕು-ರಮೇಶ್ ಮಂಜೇಶ್ವರ್:

ಬಹರೈನ್‌ನಲ್ಲಿನ ಕಲಾ ಸಂಘಟಕರಾದ ರಮೇಶ್ ಮಂಜೇಶ್ವರ ಮಾತನಾಡಿ, ಅಗಲಿದ ಆಸ್ತಿಕಾರವರ ಪ್ರತಿಭೆಯು ಬಹರೈನ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಷ್ಟು ಚಾಕಚಾಕ್ಯತೆಯನ್ನು ಹೊಂದಿತ್ತು. ಕನ್ನಡ, ತುಳು ಸಮುದಾಯ ಮಾತ್ರವಲ್ಲ ಎಲ್ಲಾ ವರ್ಗದ ಸಮದಾಯದ ಕಾರ್ಯಕ್ಷೇತ್ರದಲ್ಲಿ ಆಸ್ತಿಕಾರವರು ತಮ್ಮ ಪ್ರತಿಭೆಯನ್ನು ವಿಸ್ತರಿಸಿಕೊಂಡವರಾಗಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಆಸ್ತಿಕಾರವರು ಕೈಯಾಡಿಸದ ಕ್ಷೇತ್ರವಿಲ್ಲ. ಬಹರೈನ್ ಹಾಗೂ ಭಾರತದ ಸಾಂಸ್ಕೃತಿಕ ರಾಯಭಾರಿ ಕೊಂಡಿಯಾಗಿ ಅವರು ಕಾರ್ಯನಿರ್ವಹಿಸಿರುತ್ತಾರೆ ಅಲ್ಲದೆ ಆಸ್ತಿಕಾರವರ ಕಾರ್ಯ ಸಾಧನೆಗೆ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗುರುತಿಸುವಿಕೆಯಾಗಬೇಕು ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅಗಲಿದ ಡೆಬ್ಬೇಲಿ ವಿಮಲ ಆಳ್ವರವರ ಪುತ್ರ ಮಂಜುನಾಥ ಆಳ್ವ ಮೂಡಾಯೂರು, ಪುತ್ರಿಯರಾದ ಕರ್ನಾಟಕ ಕಲಾಶ್ರೀ ನಯನ ವಿ.ರೈ, ಎಂ.ನೀನಾ ಆಳ್ವ, ಮಲ್ಲಿಕಾ-ದಿನೇಶ್ ಶೆಟ್ಟಿ(ಮಗಳು-ಅಳಿಯ), ಶಿಲ್ಪ-ಪ್ರತಾಪ್‌ಚಂದ್ರ ಶೆಟ್ಟಿ(ಮಗಳು-ಅಳಿಯ), ರಂಜಿಕ-ಪ್ರಸಾದ್ ರೈ(ಮಗಳು-ಅಳಿಯ), ಅಗಲಿದ ವಿದುಷಿ ಆಸ್ತಿಕಾ ಶೆಟ್ಟಿಯವರ ಪತಿ ಸುನಿಲ್ ಶೆಟ್ಟಿ, ಪುತ್ರ ಸಾಕ್ಷರ ಶೆಟ್ಟಿ, ಸಹೋದರಿ ವಿದುಷಿ ಸ್ವಸ್ತಿಕಾ ಶೆಟ್ಟಿ, ಭಾವ ರಾಜ್‌ಕುಮಾರ್ ಶೆಟ್ಟಿ, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಿಕರು, ವಿಶ್ವಕಲಾ ನಿಕೇತನ ನೃತ್ಯ ತಂಡದ ಸದಸ್ಯರು ಉಪಸ್ಥಿತರಿದ್ದರು. ಕರಾವಳಿಯ ಹಿರಿಯ ಗಾಯಕ ರವೀಂದ್ರ ಪ್ರಭುರವರು ಗೀತ ನಮನ ಸಲ್ಲಿಸಿದರು. ಉದ್ಯಮಿ ಪುರುಷೋತ್ತಮ್ ಭಂಡಾರಿ ಅಡ್ಯಾರು ಸ್ವಾಗತಿಸಿ, ವಂದಿಸಿದರು.

ಮೌನ ಪ್ರಾರ್ಥನೆ..ಪುಷ್ಪ ನಮನ..
ಈ ಸಂದರ್ಭದಲ್ಲಿ ಅಗಲಿದ ಡೆಬ್ಬೇಲಿ ವಿಮಲ ಆಳ್ವ ಹಾಗೂ ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿರವರ ಆತ್ಮಕ್ಕೆ ಚಿರಶಾಂತಿ ಕೋರಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಹಾಗೂ ಅಗಲಿದ ಈರ್ವರ ಭಾವಚಿತ್ರಕ್ಕೆ ಆಗಮಿಸಿದ ಕುಟುಂಬಿಕರು, ಹಿತೈಷಿಗಳು ಪುಷ್ಪಾರ್ಚನೆಗೈಯುವ ಮೂಲಕ ಪುಷ್ಪ ನಮನ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here