ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ ನಾಮಕರಣ ಅನಾವರಣ

0

ನಾಮಕರಣ ಮಾತ್ರವಲ್ಲ 264 ಗರಡಿಗಳನ್ನು ಸರಕಾರ ಗೌರವಿಸಲಿದೆ- ಸಂಜೀವ ಮಠಂದೂರು
ಪುತ್ತೂರು ಮುತ್ತೂರಾಗಬೇಕಾದರೆ ಪಡುಮಲೆಯಲ್ಲಿ ಗರಡಿ ನಿರ್ಮಾಣ ಆಗಬೇಕು – ಹರಿಕೃಷ್ಣ ಬಂಟ್ವಾಳ್
ಕೋಟಿ ಚೆನ್ನಯರ ಜನ್ಮಸ್ಥಳ ಶೀಘ್ರ ಅಭಿವೃದ್ಧಿ ಹೊಂದಲಿ – ಚನಿಲ ತಿಮ್ಮಪ್ಪ ಶೆಟ್ಟಿ
ಕೋಟಿಚೆನ್ನಯರ ಜನ್ಮಸ್ಥಳದಲ್ಲಿ ಗರಡಿ ನಿರ್ಮಾಣಕ್ಕೆ ಜಿಲ್ಲಾಡಳಿತ ಸಹಕಾರ – ಎಂ ರವಿ ಕುಮಾರ್
ಬಸ್‌ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು ನಗರಸಭೆಗೆ ಕಿರೀಟ ತಂದಿದೆ – ಕೆ.ಜೀವಂಧರ್ ಜೈನ್
ಶಾಸಕರಿಂದ ಕೋಟಿ ಚೆನ್ನೆಯರ ಚರಿತ್ರೆ ನೆನಪಿಸುವ ಕೆಲಸವಾಗಿದೆ – ಜಯಂತ ನಡುಬೈಲು

ಪುತ್ತೂರು: ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ ಚೆನ್ನಯ್ಯರ ಹೆಸರನ್ನು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ನಾಮಕರಣದ ಫಲಕ ಅನಾವರಣ ಕಾರ್ಯಕ್ರಮ ಮಾ.26ರಂದು ನಡೆಯಿತು. ಶಾಸಕ ಸಂಜೀವ ಮಠಂದೂರು ಅವರು ನಾಮಫಲಕ ಅನಾವರಣ ಮಾಡಿದರು. ಬಳಿಕ ಅರ್ಚಕರು ತೆಂಗಿನ ಕಾಯಿ ಒಡೆದು ನಾಮಕರಣ ಮುಹೂರ್ತ ನೆರವೇರಿಸಿದರು.


ನಾಮಕರಣ ಮಾತ್ರವಲ್ಲ 264 ಗರಡಿಗಳನ್ನು ಸರಕಾರ ಗೌರವಿಸಲಿದೆ:
ನಾಮಕರಣದ ಪಲಕ ಅನಾವರಣ ಮಾಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ವಿಧಾನಸೌಧದ ಎದುರು ಹೋಗಬೇಕಾದರೆ ಎದುರುಗಡೆ ಬಾಬಾ ಸಾಹೇಬ್ ಅಂಬೇಡ್ಕರ್, ದೇವರಾಜು ಅರಸು, ಹನುಮಂತಯ್ಯ ಸಹಿತ ಹತ್ತಾರು ಮಂದಿ ಮಹಾನುಭಾವರನ್ನು ನೋಡುವ ಮತ್ತು ಅವರ ವಿಚಾರವನ್ನು ಕೇಳುವ ಸಂಗತಿ ಮಾಡುತ್ತೇವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಾಗ ಯಾರನ್ನು ನೆನಸಬೇಕು. ಯಾರನ್ನು ನೋಡಬೇಕು ಎಂದು ನೋಡಿದಾಗ ಕೋಟಿ ಚೆನ್ನಯರು ಮೊದಲ ಸ್ಥಾನದಲ್ಲಿದ್ದಾರೆ. ತುಳುನಾಡಿನ ಪರಶುರಾಮ ಸೃಷ್ಟಿಯ ಕೊಡುಗೆಯಾಗಿ ಇವತ್ತು ಮತ್ತೊಮ್ಮೆ ಕೋಟಿ ಚೆನ್ನಯರನ್ನು ಇಡಿ ದೇಶ ನೆನಪಿಸುವ ಕೆಲಸ ಮಾಡಬೇಕೆಂದು ಪುತ್ತೂರಿನ ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು ಇಡುವ ಕೆಲಸ ಮಾಡಿದೆ. ಆದರೆ ಕೇವಲ ನಾಮಕರಣ ಮಾತ್ರವಲ್ಲ ಅವರ ಹೆಸರು ಶಾಶ್ವತವಾಗಿ ಉಳಿಯಲು ದೈವಾಂಶ ಸಂಭೂತರಾಗಿರುವ ಅವರನ್ನು ಆರಾಧನೆ ಮಾಡುತ್ತಿರುವ 264 ಗರಡಿಗಳನ್ನು ಸರಕಾರ ಗೌರವಿಸಲಿದೆ ಎಂದರು. 10 ವರ್ಷದ ಹಿಂದೆ ಪುತ್ತೂರು ಬಸ್ ನಿಲ್ದಾಣವನ್ನು ಪಿಪಿ ಮೂಲಕ ಆಗಿನ ಶಾಸಕಿಯಾಗಿದ್ದ ಮಲ್ಲಿಕಾಪ್ರಸಾದ್ ಅವರು ಮಾಡಿದ್ದರು. ಆ ಸಂದರ್ಭದಲ್ಲೇ ನಾವು ಪುತ್ತೂರು ಬಸ್‌ನಿಲ್ದಾಣಕ್ಕೆ ನಾಮಕರಣಕ್ಕೆ ಚಿಂತನೆ ಮಾಡಿದ್ದೆವು. ಅದು ಇವತ್ತು ಕೂಡಿ ಬಂದಿದೆ ಎಂದು ಸಂಜೀವ ಮಠಂದೂರು ಹೇಳಿದರು.


ಒಂದು ವರ್ಷದ ಹೋರಾಟ ಯಶಸ್ವಿ:
ಸಂಚಲನ ಮೂಡಿಸಿದ ಕೋಟಿ ಚೆನ್ನಯ ತುಳು ಚಲನಚಿತ್ರ ಅವತ್ತು ಅವಳಿ ಪುರಷರನ್ನು ನೆನಪಿಸುವ ತಿಳಿಸುವ ಕಾರ್ಯ ಮಾಡಿತ್ತು. ಇವತ್ತು ಮತ್ತೊಮ್ಮೆ ಬಸ್‌ ನಿಲ್ದಾಣಕ್ಕೆ ಹೆಸರು ನೀಡುವ ಮೂಲಕ ಮತ್ತೊಮ್ಮೆ ನೆನಪು ಮಾಡುವ ಕೆಲಸ ಸರಕಾರದ ವತಿಯಿಂದ ಮಾಡಿದ್ದೇವೆ. ಪಡುಮಲೆಯಲ್ಲಿ ಹುಟ್ಟಿ ಗೆಜ್ಜೆಗಿರಿಯಲ್ಲಿ ಬೆಳದು ಅವಿಭಜಿತ ಪುತ್ತೂರು ತಾಲೂಕಿನ ಎಣ್ಮೂರಿನಲ್ಲಿ ಅವರು ವೀರ ಮರಣವನ್ನು ಹೊಂದಿದ ವಿಚಾರ ಆಗಬೇಕಾಗಿದ್ದರೆ ಇವತ್ತು ಯುವ ಪೀಳಿಗೆ ಕೋಟಿ ಚೆನ್ನಯರ ಸಾಹಸ, ಆಧ್ಯಾತ್ಮಿಕ ಬದುಕಿನ ಚಿಂತನೆಯನ್ನು ತಿಳಿದು ಕೊಳ್ಳುವ ಕೆಲಸ ಆಗುತ್ತಾ ಇದೆ. ಇದಕ್ಕೆ ಕಾರಣ ನಮ್ಮ ಸಂಸದರು. ಪುತ್ತೂರಿನಲ್ಲಿ ಒಂದು ತೀಮ್ ಪಾರ್ಕ್‌ಮಾಡಬೇಕೆಂಬ ಚಿಂತನೆ ಮಾಡಿದ್ದೆ. ಜಾಗದ ಸಮಸ್ಯೆ ಇತ್ತು. ಇವತ್ತು ಜಿಲ್ಲಾಧಿಕಾರಿಗಳು ಜಾಗ ಕೊಡಿಸುವ ಭರವಸೆ ನೀಡಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಸರಕಾರಿ ಜಾಗದಲ್ಲಿರುವ ಗರಡಿಗಳಿಗೆ ಜಾಗ ಕೊಡಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಪುತ್ತೂರು ಬಸ್‌ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಲು ಒಂದು ವರ್ಷದ ಹೋರಾಟ ಮಾಡಿದ್ದೇವೆ. ಕೋಟಿ ಚೆನ್ನಯರಂತೆ ಬೇರೆ ಬೇರೆ ರೀತಿಯಲ್ಲಿ ದೈವಾಂಶ ಸಂಭೂತರು ಈ ನಾಡಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರನ್ನು ಕೂಡಾ ನೆನಪಿಸುವ ಕೆಲಸ ಮಾಡಬೇಕು ಎಂದು ಶಾಸಕರು ಹೇಳಿದರು.


ಪುತ್ತೂರು ಮುತ್ತೂರಾಗಬೇಕಾದರೆ ಪಡುಮಲೆಯಲ್ಲಿ ಗರಡಿ ನಿರ್ಮಾಣ ಆಗಬೇಕು:
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಅವರು ಮಾತನಾಡಿ ಪುತ್ತೂರಿನ ಚರಿತ್ರೆಗೆ ನಕ್ಷತ್ರದಂತೆ ಇರುವ ಶಕ್ತಿ ಕೋಟಿ ಚೆನ್ನಯರು. ಪಡುಮಲೆ ಅನ್ನುವುದೇ ಕೋಟಿ ಚೆನ್ನಯರ ನಿಜವಾದ ಮೂಲ. ಆದರೆ ವಿಪರ್ಯಾಸ ಎಂದರೆ ಕೋಟಿ ಚೆನ್ನಯರ ಇತಿಹಾಸ ಕುರಿತು ಅಧ್ಯಾಯನ, ಸಂಶೋಧನೆ ಮಾಡಿದವರು ಬಹಳ ಕಡಿಮೆ. ಆದರೆ ತುಳುನಾಡಿನ ಪಾರ್ದನವನ್ನು ಕಲಿತು ಕೋಟಿ ಚೆನ್ನಯರನ್ನು ಪರಿಚಯಿಸಿದ್ದು ಜರ್ಮನಿಯ ವಿದ್ವಾಂಸರು. ಬಳಿಕದ ಬೆಳವಣಿಗೆಯಲ್ಲಿ ಮತ್ತಿಬ್ಬರು ಬ್ರಿಟೀಷ್ ವಿದ್ವಾಂಸರು ಆ ಚರಿತ್ರೆಯನ್ನು ವಿಸ್ತಾರವಾಗಿ ಮಾಡಿದರು. ಆದಾದ ಬಳಿಕ ಪಂಜೆ ಮಂಗೇಶರಾಯರು, ಬನ್ನಂಜೆಯವರು ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದರು. ಆದರೆ ಕೋಟಿ ಚೆನ್ನಯರ ಕುರಿತು ಎಷ್ಟು ಮಂದಿ ತಿಳಿದು ಕೊಂಡಿದ್ದಾರೆ ಎಂಬುದು ಮುಖ್ಯ ಎಂದ ಅವರು ಭಾರತದಲ್ಲಿ ಎಷ್ಟೋ ಜನಕ್ಕೆ ಇತಿಹಾಸ ತಿಳಿದಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಮೊದಲ ಶಿಕ್ಷಣ ಸಚಿವ ಭಾರತದವರಲ್ಲ. ಅವರು ಮಕ್ಕಾ ಮದೀನದವರು. 1979ರ ತನಕ ನಾಲ್ಕು ಮಂದಿ ಶಿಕ್ಷಣ ಮಂತ್ರಿ ಬಂದರು. ಆದರೆ ಅವರೆಲ್ಲ ಮುಸಲ್ಮಾನರಾಗಿದ್ದರು. ಹಾಗಾಗಿ ನಮ್ಮ ಇಲ್ಲಿ ಚರಿತ್ರೆ ತಪ್ಪಿದೆ ಎಂಬುದನ್ನು ಎಚ್ಚರಿಸುತ್ತಿದ್ದೇನೆ. ಯಾವಾಗಲು ಸತ್ಯಕ್ಕೆ ಬೆಲೆ ಕೊಡಬೇಕು. ಇವತ್ತು ಕೋಟಿ ಚೆನ್ನೆಯರ ಹೆಸರನ್ನು ಬಸ್‌ನಿಲ್ದಾಣಕ್ಕೆ ಇಡುವ ಮೂಲಕ ನಮ್ಮ ಶಾಸಕ ಸಂಜೀವ ಮಠಂದೂರು ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಾರ್ಯ ಮಹತ್ವದ್ದು ಅವರಿಗೆ ಹ್ಯಾಟ್ಸ್ ಫ್ ಎಂದರು. ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಪ್ರತಿಷ್ಟಾನದ ಅಧ್ಯಕ್ಷ ನೆಲೆಯಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇವತ್ತು ಮಂಗಳೂರಿನ ನಂದಿಗುಡ್ಡೆಯ ಸರ್ಕಲ್‌ಗೂ ಕೋಟಿ ಚೆನ್ನಯ ಹೆಸರು ಇಡುವ ಕಾರ್ಯ ನಡೆಯುತ್ತಿದೆ. ಕೋಟಿ ಚೆನ್ನಯರು ಶೋಷಣೆ, ದೌರ್ಜನ್ಯ, ಅನ್ಯಾಯದ ವಿರುದ್ಧ ಹೋರಾಟ ಮಾಡಿದವರು. ಹಾಗಾಗಿ ಯಾವ ದೇವರಿಗೂ ಇಲ್ಲದಿರುವಂಹ 264 ಗರಡಿಗಳು ಕೋಟಿ ಚೆನ್ನಯರಿಗಿದೆ. ಕೋಟಿ ಚೆನ್ನಯರು ಹುಟ್ಟುವಾಗ ಬಿಲ್ಲವರು, ಆದರೆ ಬೆಳೆದದ್ದು, ದೈವತ್ವಕ್ಕೆ ಏರಿದ್ದು ಬಿಲ್ಲವರಾಗಿ ಅಲ್ಲ. ಅವರು ಮಾನವೀತೆಯನ್ನು ಪಡೆದು ದೈವಶಕ್ತಿಯನ್ನು ಪಡೆದವರು ಹಾಗಾಗಿ ಅವರನ್ನು ಜಾತಿಗೆ ಸೀಮಿತವಾಗಿ ಇಟ್ಟುಕೊಳ್ಳಬಾರದು. ಕೋಟಿ ಚೆನ್ನಯರಿಗೆ 264 ಗರಡಿ ಇದೆ. ಆದರೆ ಅವರ ಜನ್ಮಭೂಮಿಯಲ್ಲಿ ಗರಡಿಯಿಲ್ಲ. ಹಾಗಾಗಿ ಪುತ್ತೂರು ಮುತ್ತೂರು ಆಗಬೇಕಾದರೆ ಕೋಟಿ ಚೆನ್ನಯರಿಗೆ ಸರಿಯಾದ ಗರಡಿ ನಿರ್ಮಾಣ ಮಾಡುವಂತೆ ಶಾಸಕರಲ್ಲಿ ಬೇಡಿಕೆಯಿಟ್ಟರು.


ಕೋಟಿ ಚೆನ್ನಯರ ಜನ್ಮಸ್ಥಳ ಶೀಘ್ರ ಅಭಿವೃದ್ಧಿ ಹೊಂದಲಿ:
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ ಪುತ್ತೂರಿಗೆ ಬಹಳಷ್ಟು ಇತಿಹಾಸ ಇದೆ. 264 ಗರಡಿಗಳಲ್ಲೂ ಉತ್ತಮ ರೀತಿಯಲ್ಲಿ ಆರಾಧನೆ ನಡೆಯುತ್ತಿದ್ದು, ಪಡುಮಲೆಯಲ್ಲೂ ಗರಡಿ ಆಗುವಲ್ಲಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅದಷ್ಟು ಶೀಘ್ರ ಪಡುಮಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿ ಎಂದರು.


ಕೋಟಿಚೆನ್ನಯರ ಜನ್ಮಸ್ಥಳದಲ್ಲಿ ಗರಡಿ ನಿರ್ಮಾಣಕ್ಕೆ ಜಿಲ್ಲಾಡಳಿತ ಸಹಕಾರ:
ಜಿಲ್ಲಾಧಿಕಾರಿ ಎಂ. ಆರ್ ರವಿ ಕುಮಾರ್ ಅವರು ಮಾತನಾಡಿ ನಾನು ಮಂಗಳೂರಿಗೆ ಬಂದಾಗ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಕುರಿತು ಅರಿಯುವ ಸಂದರ್ಭದಲ್ಲಿ ಕೆಲವರ ಕೋರಿಕೆಯಂತೆ ನಾನು ಕಾಂತರ ಚಲನಚಿತ್ರ ನೋಡಿದೆ. ಅದನ್ನು ನೋಡಿದ ಬಳಿಕ ದೇವ, ದೈವದ ಭಕ್ತಿ ಭಾವ ತಿಳಿದು ಬಂತು. ಯಕ್ಷಗಾನ, ಕಂಬಳ, ದೇವ, ದೈವಸ್ಥಾನಗಳ ತವರೂರು ಅಗಿರುವ ಈ ಜಿಲ್ಲೆಯಲ್ಲಿ ಕೋಟಿ ಚೆನ್ನೆಯರಂತಹ ವೀರಪುರುಷರು ತರುಣ ತರುಣಿಯರಿಗೆ ಸ್ಪೂರ್ತಿಯಾಗಿದ್ದಾರೆ. ಇದಕ್ಕೆ ಸೂಕ್ತ ಎಂಬಂತೆ ಬಸ್‌ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣವಾಗಿದೆ. ಮುಂದೆ ಅವರ ಜನ್ಮಸ್ಥಳದಲ್ಲಿ ಗರಡಿ ನಿರ್ಮಾಣಕ್ಕಾಗಿ ಶಾಸಕರು, ಸಂಸದರು. ಜಿಲ್ಲಾ ಉಸ್ತುವಾರಿ ಸಚಿವರು ಯಾವ ಕೋರಿಕೆಯನ್ನು ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಸಲ್ಲಿಸುತ್ತಾರೋ ಅದನ್ನು ನಾನೊಬ್ಬ ಕೋಟಿ ಚೆನ್ನಯರ ಭಕ್ತನಾಗಿ ನಿಮ್ಮ ಜೊತೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.


ಬಸ್‌ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು ನಗರಸಭೆಗೆ ಕಿರೀಟ ತಂದಿದೆ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಧಾರ್ಮಿಕ, ದೈವ, ದೇವರ ತುಳುನಾಡಿನ ಸಂಸ್ಕೃತಿಯಲ್ಲಿ ಒಂದು ಕಟ್ಟಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಟಿ ಚೆನ್ನಯರು ದೈವತ್ವ ಪಡೆದಿದ್ದಾರೆ. ಅವರ ಹೆಸರನ್ನು ಬಸ್‌ನಿಲ್ದಾಣಕ್ಕೆ ಇಡಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಒಮ್ಮತ ಸೂಚಿಸಿದಂತೆ ನಾವು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೆವು. ಬಳಿಕ ಶಾಸಕರೇ ಅದರ ಎಲ್ಲಾ ಕೆಲಸ ಮಾಡಿದ್ದು, ನಾವು ಸಾಮಾನ್ಯ ಸೆಭೆಯಲ್ಲಿ ನಿರ್ಣಯ ಮಾಡಿದ್ದು ಮಾತ್ರ. ಹಾಗಾಗಿ ಇವತ್ತು ಕೋಟಿ ಚೆನ್ನಯ ನಾಮಕರಣ ನಗರಸಭೆಗೆ ಒಂದು ಕಿರೀಟ ಬಂದಿದೆ ಎಂದರು.


ಶಾಸಕರಿಂದ ಕೋಟಿ ಚೆನ್ನೆಯರ ಚರಿತ್ರೆ ನೆನಪಿಸುವ ಕೆಲಸವಾಗಿದೆ:
ಶಾಸಕರ ಮನೆಗೆ ನಾವೆಲ್ಲ ಒಂದು ಭಾರಿ ಅವರ ಮನೆಗೆ ಹೋಗಿ ಕೋಟಿ ಚೆನ್ನಯ ನಾಮಕರಣಕ್ಕೆ ಮನವಿ ಕೊಟ್ಟಿದ್ದೆವು. ಆ ಸಂದರ್ಭದಲ್ಲೇ ಅವರು ಅದಕ್ಕೆ ಉತ್ತಮ ಸ್ಪಂಧನೆ ನೀಡಿದ್ದರಿಂದ ಇವತ್ತು ಬಸ್‌ನಿಲ್ದಾಣಕ್ಕೆ ನಾಮಕರಣವಾಗಿದೆ ಈ ನಿಟ್ಟಿನಲ್ಲಿ ನಾನು ಶಾಸಕರನ್ನು ಅಭಿನಂದಿಸುತ್ತೇನೆ ಎಂದ ಅವರು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಬ್ರಹ್ಮಕಲಶ ಸಂದರ್ಭದಲ್ಲಿ ಶಾಸಕರು ರಸ್ತೆ ಅಭಿವೃದ್ಧಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೂಲಕ ರೂ. 1 ಕೋಟಿ ಮತ್ತು ಶಾಸಕರ ಅನುದಾನ ರೂ. 50ಲಕ್ಷ ನೀಡಿದ್ದರು. ಮೊನ್ನೆ ಮೊನ್ನೆ ಗೆಜ್ಜೆಗಿರಿಗೆ ಕಾಂಕ್ರೀಟ್ ರಸ್ತೆಯನ್ನು ಕೂಡಾ ಕೊಟ್ಟಿದ್ದಾರೆ. ಇವತ್ತು ಕೋಟಿ ಚೆನ್ನಯ ಬಸ್‌ನಿಲ್ದಾಣ ನಾಮಕರಣದ ಮೂಲಕ ಕೋಟಿ ಚೆನ್ನಯರ ಹೆಸರು, ಚರಿತ್ರೆಯನ್ನು ನೆನಪಿಸುವ ಕೆಲಸ ಮಾಡಿದ್ದಾರೆ. ಪುತ್ತೂರಿನಲ್ಲಿ ಗೆಜ್ಜೆಗಿರಿ, ಪಡುಮಲೆ, ಹನುಮಗಿರಿ ಸಹಿತ ಉತ್ತಮ ಕ್ಷೇತ್ರಗಳನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ಬಿಲ್ಲವ ಸಮಾಜದಿಂದ ಶಾಸಕರಿಗೆ ಸನ್ಮಾನ:
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕೋಟಿ ಚೆನ್ನಯ ನಾಮಕರಣ ಮಾಡಲು ಕಾರಣಕರ್ತರಾಗಿರುವ ಶಾಸಕ ಸಂಜೀವ ಮಠಂದೂರು ಅವರನ್ನು ಬಿಲ್ಲವ ಸಮಾಜದ ವಿವಿಧ ಸಂಘಟನೆಯಿಂದ ಸನ್ಮಾನಿಸಲಾಯಿತು.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸಹಾಯಕ ಆಯುಕ್ತ ಗಿರೀಶ್ ನಂದನ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಪ್ರಧಾನಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಎಸ್‌ಆರ್‌ಟಿಸಿ ವಿಭಾಗೀಯ ತಾಂತ್ರಿಕ ಅಧಿಕಾರಿ ಆಶಾ ಲತಾ, ವಿಭಾಗೀಯ ಅಂಕಿ ಅಂಶ ಅಧಿಕಾರಿ ಹರೀಶ್ ಕೊಟ್ಟಾರಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ದೇವೆಂದ್ರ, ಸಹಾಯಕ ಉಗ್ರಾಣ ಅಧಿಕಾರಿ ಮಂಜುನಾಥ ಶೆಟ್ಟಿ, ಪುತ್ತೂರು ಘಟಕ ವ್ಯವಸ್ಥಾಪಕ ಇಸ್ಮಾಯಿಲ್, ಪ್ರಭಾರಿ ವಿಭಾಗೀಯ ಅಧಿಕಾರಿ ಲೊಕೇಶ್ವರ, ಶ್ರೀಶ ಭಟ್, ಸಹಸಯಕ ಲೆಕ್ಕಪತ್ರ ಅಧಿಕಾರಿಆಶಾಲತಾ, ರೇವತಿ ಅತಿಥಿಗಳನ್ನು ಗೌರವಿಸಿದರು.

ಬಿ ಸಿ ರೋಡ್ ಘಟಕದ ಸಿಬ್ಬಂದಿಗಳು ನಾಡಗೀತೆ ಹಾಡಿದರು. ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಸ್ವಾಗತಿಸಿದರು.ವಿಭಾಗೀಯ ಸಂಚರಣಾ ನಿಯಂತ್ರಣಾಧಿಕಾರಿ ಮುರಳಿಧರ ಆಚಾರ್ಯ ವಂದಿಸಿದರು. ಉಮೇಶ್ ಶೆಟ್ಟಿ ಮತ್ತು ಮಾದವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here