ಪುತ್ತೂರು:ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದವರು ಸುಳ್ಯ ಪೇಟೆಯ ಆಲೆಟ್ಟಿ ರಸ್ತೆಯಲ್ಲಿದ್ದ ಪಿಎಫ್‌ಐ ಕಚೇರಿಯನ್ನು ಮಾ.27ರಂದು ವಶಪಡಿಸಿಕೊಂಡಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳು ಪಿಎಫ್‌ಐ ಕಚೇರಿಯನ್ನು ಕೃತ್ಯಕ್ಕೆ ಬಳಸಿಕೊಂಡಿದ್ದ ಆರೋಪದಲ್ಲಿ ಎನ್‌ಐಎ ಕಚೇರಿಯನ್ನು ಸ್ವಾಧೀನಕ್ಕೆ ಪಡೆದುಕೊಂಡಿದೆ. ವಶಪಡಿಸಿಕೊಂಡ ಆಸ್ತಿಯ ಪ್ರತಿಯನ್ನು ಕಟ್ಟಡ ಮಾಲಕರು, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಲಾಗಿದೆ. ಆಸ್ತಿಯನ್ನು ಗುತ್ತಿಗೆ ಅಥವಾ ಬಾಡಿಗೆಗೆ ನೀಡಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಬೆಂಗಳೂರು ಎನ್‌ಐಎ ಬ್ಯಾಂಚ್‌ನ ಮುಖ್ಯ ತನಿಖಾಧಿಕಾರಿ ಷಣ್ಮುಗಂ ಅವರ ಸಹಿ ಇರುವ ಎರಡು ಪುಟದ ನೋಟಿಸನ್ನು ಸುಳ್ಯದ ಪಿಎಫ್‌ಐ ಕಚೇರಿಯ ಬಾಗಿಲಿಗೆ ಅಂಟಿಸಲಾಗಿದೆ. ನೋಟೀಸಿನಲ್ಲಿ ಕೆಲವೊಂದು ನಿರ್ದೇಶನಗಳನ್ನು ಸೂಚಿಸಲಾಗಿದೆ. ಬಿಜೆಪಿ ಯುವ ಮುಖಂಡರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ಕಳೆದ ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿರುವ ಅವರ ಅಕ್ಷಯ ಫಾರ್ಮ್ ಫ್ರೆಶ್ ಚಿಕನ್ ಸೆಂಟರ್ ಬಳಿಯಲ್ಲಿಯೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದೇ ಕಚೇರಿಯಲ್ಲಿ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗುತ್ತಿದ್ದು ಈ ನಿಟ್ಟಿನಲ್ಲಿ ಎನ್‌ಐಎ ಕಚೇರಿಯನ್ನು ವಶಕ್ಕೆ ಪಡೆದುಕೊಂಡಿದೆ. ಕೃತ್ಯಕ್ಕೆ ಸಂಬಂಧಿಸಿ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಲಾಗಿದ್ದು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ 20 ಮಂದಿಯ ವಿರುದ್ಧ 1,500 ಪುಟಗಳ, 240 ಸಾಕ್ಷಿಗಳ ಹೇಳಿಕೆಗಳಿರುವ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ.