ಪುತ್ತೂರು: ಮುಸ್ಲಿಂ ಮೀಸಲಾತಿ ರದ್ಧತಿ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

0

ಪುತ್ತೂರು: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ರದ್ದು ಮಾಡಿದ ನಿರ್ಣಯವನ್ನು ಖಂಡಿಸಿ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಮಾ.28ರಂದು ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.


ಮುಸ್ಲಿಂಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವುದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿಯಾಗಿದೆ. ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದ್ದು, ಬಿಜೆಪಿ ತನ್ನ ಕೋಮುವಾದಿತನವನ್ನು ಪದೇ ಪದೇ ಪ್ರದರ್ಶಿಸುತ್ತಲೇ ಇದೆ. ಬರುವ ಚುನಾವಣೆಯಲ್ಲಿ ಇದರ ಪರಿಣಾಮ ಬಿಜೆಪಿ ಎದುರಿಸಬೇಕಾದಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.


ಹೋರಾಟದ ಮೂಲಕ ನ್ಯಾಯಾಲಯದಲ್ಲ ಪ್ರಶ್ನಿಸಲಿದ್ದೇವೆ:
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಮಜೀದ್ ಖಾನ್ ಅವರು ಮಾತನಾಡಿ ವಿವಿಧ ಆಯೋಗ ಕೂಡ ಮುಸ್ಲಿಂಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ನಾವು ಕಾಣಬಹುದು. ವಾಸ್ತವಾಂಶ ಹೀಗಿದ್ದರೂ ಸಹ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ನೋಡಿಕೊಳ್ಳುವ ಕುತಂತ್ರ ಮುಂದುವರಿದ ಭಾಗವಾಗಿ 2ಬಿ ಮೀಸಲಾತಿ ರದ್ದುಪಡಿಸಿರುವುದು ದೃಢವಾಗಿದೆ. ಧರ್ಮವನ್ನು ಗುರಿ ಮಾಡಿ ರಾಜಕೀಯ ಬೇಳೆ ಬೆಯಿಸಲು ನಾವು ಬಿಡುವುದಿಲ್ಲ. ಟಿಪ್ಪು ಮತ್ತು ಅಸ್ಮತ್ತುಲ್ಲಾ ಖಾನ್ ಅವರ ಸಂತತಿಯಾಗಿರುವ ನಾವು ಹೋರಾಟದ ಮೂಲಕ ನ್ಯಾಯಾಲಯದಲ್ಲಿ, ಹೈಕೋರ್ಟ್, ಸುಪ್ರೀಮ್ ಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ ಎಂದರು.


ಮೀಸಲಾತಿ ಕೊಡದಿದ್ದರೆ ವಿಧಾನಸಭಾ ಚಲೋ ಚಳುವಳಿ ಎಚ್ಚರಿಕೆ:
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಅವರು ಮಾತನಾಡಿ ಬಿಜೆಪಿ ಸರಕಾರ ಬಂದ ಬಳಿಕ ಮುಸಲ್ಮಾನರ ಮೇಲೆ ನಿರಂತರ ದಬ್ಬಾಳಿಕೆ ಮಾಡಿಕೊಂಡು ಬಂದಿದೆ. ಮುಸಲ್ಮಾನರಿಗೆ ಶೈಕ್ಷಣಿಕ, ಉದ್ಯೋಗದಲ್ಲಿ ಸೌಲಭ್ಯವನ್ನು ಸರಕಾರ ಕಿತ್ತುಕೊಳ್ಳುವ ಮೂಲಕ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಸಲ್ಮಾನರನ್ನು ಇಲ್ಲದಂತೆ ಮಾಡುವ ಹುನ್ನಾರವನ್ನು ಕೋಮುವಾದಿ ಸರಕಾರ ಮಾಡುತ್ತಿದೆ. ಮೀಸಲಾತಿ ಪುನಃ ಕೊಡದಿದ್ದರೆ ವಿಧಾನಸಭಾ ಚಲೋ ಚಳುವಳಿ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.


ಹಸಿವು, ಭಯಮುಕ್ತ ಸಮಾಜವನ್ನು ಪಡೆದೇ ಪಡೆಯುತ್ತೇವೆ:
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಅವರು ಮಾತನಾಡಿ ಬೇತಾಳ ಶವವನ್ನು ಎತ್ತಿಕೊಂಡು ಹೋಗುವ ಕಥೆಯಂತೆ ಬಿಜೆಪಿಗೂ ತನ್ನ ಕೊನೆ ಹಂತದ ಪರಿಸ್ಥಿತಿ ಬರಲಿದೆ. ರಾಜ್ಯದಲ್ಲಿ ಹಸಿವು ಮುಕ್ತ, ಭಯಮುಕ್ತ ಸಮಾಜವನ್ನು ನಾವು ಪಡೆದೇ ಪಡೆಯುತ್ತೇವೆ ಎಂದರು.

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಮುಖಂಡರಾದ ಅಶ್ರಫ್ ಬಾವು, ಪ್ರಧಾನ ಕಾರ್ಯದರ್ಶಿ ರಹೀಮ್, ಕಬಕ ಗ್ರಾ.ಪಂ ಸದಸ್ಯ ಪಾರೂಕ್ ಕಬಕ, ಉಪ್ಪಿನಂಗಡಿ ಗ್ರಾ.ಪಂ ಸದಸ್ಯ ರಶೀದ್ ಪುಣ್ಚಪ್ಪಾಡಿ, ವಿಶ್ವನಾಥ್ ಪುಣ್ಚತ್ತಾರ್, ಪಿಬಿಕೆ ಮಹಮ್ಮದ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here