ಕಾವು ಶ್ರೀ ಪಂಚಲಿಂಗೇಶ್ವರ ದೇವರ ಅಮ್ಚಿನಡ್ಕಕ್ಕೆ ಸವಾರಿ ಮೆರುಗು ನೀಡಿದ ವೈಭವದ ಭವ್ಯ ಮೆರವಣಿಗೆ

0

✍️ವಿಶೇಷ ವರದಿ: ಎನ್.ಎಸ್ ಕಾವು

ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವರ ವರ್ಷಂಪ್ರತಿ ಜಾತ್ರೋತ್ಸವದ ಅಂಗವಾಗಿ ಶ್ರೀದೇವರ ಅಮ್ಚಿನಡ್ಕ-ಬಿಂತೋಡಿ ಸವಾರಿಯು ಮಾ.26ರಂದು ರಾತ್ರಿ ವಿವಿಧ ಮೆರುಗುಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಚಿತ್ರ: ಎನ್.ಎಸ್ ಕಾವು


ಹೌದು! ಕಾವು ಶ್ರೀ ಪಂಚಲಿಂಗೇಶ್ವರ ದೇವರ ಅಮ್ಚಿನಡ್ಕ-ಬಿಂತೋಡಿ ಸವಾರಿಯು ಈ ಹಿಂದೆಂದೂ ಕಾಣದ ಅತ್ಯಂತ ವೈಭವಯುತವಾಗಿ ಕಂಡುಬಂತು, ಶ್ರೀದೇವರ 5 ದಿನದ ಜಾತ್ರಾ ಉತ್ಸವದಲ್ಲಿ ದೇವರು ರಾಜಾಂಗಣವನ್ನು ಬಿಟ್ಟು ಪೇಟೆ ಸವಾರಿಯ ಮೂಲಕ ಭಕ್ತಜನರ ಹತ್ತಿರ ಬರುತ್ತಿರುವುದು ಜಾತ್ರೆಯ 4ನೇ ದಿನವಾದ ಮಾ.26ರಂದು ಮಾತ್ರ, ಹಾಗಾಗಿ ಶ್ರೀದೇವರ ಪೇಟೆ ಸವಾರಿಯ ಸಂದರ್ಭದಲ್ಲಿ ದೇವರ ಜತೆಯಲ್ಲಿ ಭಕ್ತಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಶ್ರೀದೇವರ ಸವಾರಿಯ ವೈಭವವನ್ನು ಹೆಚ್ಚಿಸಲು ಕಾರ್ಯಕ್ರಮಕ್ಕೆ ಹೆಚ್ಚು ಮೆರುಗನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ದೇವಳದ ಆಡಳಿತ ಸಮಿತಿ ಈ ಬಾರಿ ವಿಶೇಷ ಮುತುವರ್ಜಿಯನ್ನು ವಹಿಸಿ ಭಕ್ತಾದಿಗಳಿಗೆ ಒಂದಷ್ಟು ಸೂಚನೆ ಮತ್ತು ವಿನಂತಿಯನ್ನು ಮಾಡಲಾಗಿತ್ತು. ದೇವಳದ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡರವರು ಈ ಬಾರಿಯ ಜಾತ್ರಾ ಉತ್ಸವವು ಸಮಿತಿಯ ಉತ್ಸವ ಆಗಬಾರದು, ಇದು ಗ್ರಾಮದ ಭಕ್ತಜನರ ಉತ್ಸವ ಆಗಬೇಕು ಹಾಗಾಗಿ ಜಾತ್ರಾ ಉತ್ಸವದಲ್ಲಿ ಗ್ರಾಮದ ಎಲ್ಲಾ ಭಕ್ತಾದಿಗಳು ಎಲ್ಲ ದಿನವೂ ಶ್ರದ್ಧೆಯಿಂದ ಭಾಗವಹಿಸುವಂತೆ ಮನವಿ ಮಾಡಿದ್ದರು, ಜತೆಗೆ ಮಾ.26ರ ಪೇಟೆ ಸವಾರಿಯ ಉತ್ಸವದ ಮೆರುಗನ್ನು ಹೆಚ್ಚಿಸಲು ಸಮಿತಿ ಸದಸ್ಯರಿಗೆ ವಿಶೇಷ ಜವಾಬ್ದಾರಿಯನ್ನು ನೀಡಿ ಆ ಮೂಲಕ ಗ್ರಾಮದ ಎಲ್ಲಾ ಸಂಘ-ಸಂಸ್ಥೆಗಳ, ಭಜನಾ ತಂಡಗಳ, ಹಿಂದೂ ಸಂಘಟನೆಗಳ ಸಂಪರ್ಕ ಮಾಡಿ ಶ್ರೀದೇವರ ಪೇಟೆ ಸವಾರಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಇಡೀ ಮೆರವಣಿಗೆಯನ್ನು ಕೇಸರಿಮಯಗೊಳಿಸುವಂತೆ ಮತ್ತು ಹಿಂದೂ ಧರ್ಮದ ಸಂಪ್ರದಾಯವನ್ನು ಅನಾವರಣ ಮಾಡುವಂತೆ ವಿನಂತಿ ಮಾಡಲಾಗಿತ್ತು.


ಅದ್ಧೂರಿ ಮೆರವಣಿಗೆಯಲ್ಲಿ ಸಾಗಿ ಬಂದ ಶ್ರೀದೇವರ ಸವಾರಿ:
ಶ್ರೀದೇವಳದಿಂದ ಬಲಿ ಹೊರಟು, ರಾಜಾಂಗಣದಲ್ಲಿ ಉತ್ಸವ ಬಲಿ, ಕಟ್ಟೆ ಪೂಜೆ ನಡೆದ ನಂತರ ಶ್ರೀದೇವರ ಅಮ್ಚಿನಡ್ಕ ಪೇಟೆ ಸವಾರಿ ಆರಂಭಗೊಂಡಿತು. ದೇವಳದ ಅಶ್ವತ್ಥಕಟ್ಟೆ ಬಳಿಯಿಂದ ಆರಂಭಗೊಂಡ ವೈಭವದ ಮೆರವಣಿಗೆಯಲ್ಲಿ ಕಲ್ಲಡ್ಕದ ಕೀಲು ಕುದುರೆ, ವಿವಿಧ ಆಕರ್ಷಣೀಯ ಬೊಂಬೆಗಳು, ಬಣ್ಣ ಬಣ್ಣದ ಕೊಡೆಗಳು, ಬ್ಯಾಂಡ್ ಸೆಟ್, ಸಿಂಗಾರಿ ಮೇಳ, ಮಕ್ಕಳಿಂದ ಹುಲಿ ವೇಷ ಕುಣಿತ, ಸುಮಾರು 10ಕ್ಕೂ ಮಿಕ್ಕಿದ ವಿವಿಧ ಭಜನಾ ತಂಡಗಳಿಂದ ಭಜನಾ ಹಾಡು, ಕುಣಿತ ಭಜನೆ, ಪೌರಾಣಿಕ ಸಂದೇಶ ಸಾರುವ ವಿವಿಧ ಟ್ಯಾಬ್ಲೋಗಳು, ಶಂಖ-ಜಾಗಟೆ ನಾದ, ಅರ್ಚಕರಿಂದ ರುದ್ರ ಪಠಣ, ಇವೆಲ್ಲಾ ನೋಡುಗರ ಕಣ್ಮನ ಸೆಳೆಯಿತು. ದೇವರ ಎದುರಿನಲ್ಲಿ ಮಕ್ಕಳು ದೀಪವನ್ನು ಹಿಡಿದು ಸ್ವಾಗತಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡದವರು ತಮ್ಮ ತಮ್ಮ ಸಮವಸ್ತ್ರದಲ್ಲಿ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು, ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲಾ ಭಕ್ತ ಸಮೂಹ ಕೇಸರಿ ಶಾಲು ಧರಿಸಿ ಮೆರವಣಿಗೆಯನ್ನು ಕೇಸರಿಮಯಗೊಳಿಸಿದರು. ದಾರಿಯುದ್ಧಕ್ಕೂ ಅಲ್ಲಲ್ಲಿ ಕೇಸರಿ ಪತಾಕೆಗಳು, ತಳಿರು ತೋರಣಗಳು, ವಿದ್ಯುದ್ದೀಪಾಲಂಕಾರ ರಾರಾಜಿಸಿದವು, ದಾರಿಯುದ್ಧಕ್ಕೂ ಅಲ್ಲಲ್ಲಿ ನಡೆದ ಕಟ್ಟೆ ಪೂಜೆಯ ಸಂದರ್ಭದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತಸಮೂಹಕ್ಕೆ ಮೆರವಣಿಗೆ ಹೊರಡುವ ಮುನ್ನ ಶ್ರೀದೇವಳದಲ್ಲಿ ಊಟದ ವ್ಯವಸ್ಥೆ, ಮೆರವಣಿಗೆಯ ಮಧ್ಯದಲ್ಲಿ ಶರತ್ ಕುಮಾರ್ ರೈ ನಿವಾಸದ ಕಟ್ಟೆಯ ಬಳಿಯಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಶ್ರೀದೇವರ ಉತ್ಸವಮೂರ್ತಿಯ ವೈಭವದ ಪೇಟೆ ಸವಾರಿಯು ಅಮ್ಚಿನಡ್ಕ-ಬಿಂತೋಡಿಯವರಗೆ ಸಾಗಿ ಮರಳಿ ಬಂದು ದೇವಳದಲ್ಲಿ ಶ್ರೀದೇವರ ಶಯನ ನಡೆಯಿತು.


ಗೌರವಾರ್ಪಣೆ:
ವೈಭವದ ಮೆರವಣಿಗೆ ಮೆರುಗನ್ನು ಹೆಚ್ಚಿಸಿದ ಎಲ್ಲಾ ಭಜನಾ ತಂಡದ ಸದಸ್ಯರುಗಳಿಗೆ ಬೆಳ್ಳಿಯ ಲಕ್ಷ್ಮೀಯ ಪದಕದೊಂದಿಗೆ ಪ್ರಸಾದ ನೀಡಿ ಗೌರವಿಸಲಾಯಿತು.
ಮೆರವಣಿಗೆಯ ಸಂದರ್ಭದಲ್ಲಿ ಕ್ಷೇತ್ರದ ಪವಿತ್ರಪಾಣಿ ನನ್ಯ ಅಚ್ಚುತ ಮೂಡೆತ್ತಾಯ, ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ, ಸಮಿತಿ ಸದಸ್ಯರುಗಳಾದ ಭಾಸ್ಕರ ಬಲ್ಯಾಯ, ಮಳಿ ರಾಮಚಂದ್ರ ಭಟ್, ಕೃಷ್ಣಪ್ರಸಾದ್ ಕೊಚ್ಚಿ, ಧನಂಜಯ ನಾಯ್ಕ, ಹೊನ್ನಪ್ಪ ಪೂಜಾರಿ, ಪ್ರೇಮಾಗಂಗಾಧರ ಚಾಕೋಟೆ, ನಿರ್ಮಲಾ ರೈ ಸೇರಿದಂತೆ ಸುಮಾರು ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here