ಪಾಲ್ತಾಡು : ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ಪ್ರತಿಷ್ಠಾ ಕಾರ್ಯಕ್ರಮ, ದೈವಗಳ ನೇಮೋತ್ಸವ

0

ಪುತ್ತೂರು: ಪಾಲ್ತಾಡು ಸ್ವಾಮಿ ಕೊರಗಜ್ಜ ದೈವ ಸನ್ನಿಧಿಯಲ್ಲಿ ನಾಗ, ರಕ್ತೇಶ್ವರಿ, ಗುಳಿಗ, ಕಲ್ಲುರ್ಟಿ ಮತ್ತು ಕೊರಗಜ್ಜ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಗಳ ನೇಮೋತ್ಸವ ಕಾರ್ಯಕ್ರಮ ಮಾ. 26, 27 ರಂದು ನಡೆಯಿತು.

ಮಾ. 26 ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸಭಾ ಕಾರ್ಯಕ್ರಮ, ಮಾ.27 ರಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಿತು.

ಮಾ.26 ರಂದು ನಡೆದ ಸಭಾ ಕಾರ್ಯಕ್ರಮವನ್ನು ಕೆಎಂಎಫ್ ಉಪಾಧ್ಯಕ್ಷ ಎಸ್ ಬಿ ಜಯರಾಮ ರೈ ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೊರಗಜ್ಜನ ಕಾರಣಿಕ ನನಗೆ ಸ್ವತಃ ಅನುಭವಕ್ಕೆ ಬಂದಿದೆ. ಕಾವು ಹೇಮನಾಥ್ ಶೆಟ್ಟಿಯವರು ನಮ್ಮನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ತುಂಬಾ ಖುಷಿಯಿಂದ ಒಪ್ಪಿಕೊಂಡಿದ್ದೇನೆ. ನನ್ನಿಂದ ಕ್ಷೇತ್ರಕ್ಕೆ ಏನು ಆಗಬೇಕು ಎಂದು ಅವರು ಹೇಳುತ್ತಾರೆ ಅದನ್ನು ಖಂಡಿತಾ ನೆರವೇರಿಸುತ್ತೇನೆ ಎಂದು ಹೇಳಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕ್ಷೇತ್ರದ ಧರ್ಮದರ್ಶಿ ಬಾಬು ಅವರು ಹಲವು ಬಾರಿ ನನ್ನನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಯ ಚರ್ಚೆ ನಡೆಸಿದ್ದರು. ಎಲ್ಲರೂ ಒಟ್ಟಾಗಿ ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕು ಎಂದು ಧರ್ಮದರ್ಶಿಗಳ ಬಳಿ ಹೇಳಿಕೊಂಡಿದ್ದೆ. ಎರಡು ಬಾರಿ ಇದೇ ಜಾಗದಲ್ಲಿ ಸಭೆ ಕರೆದರು ನನ್ನನ್ನು ಬಿಟ್ಟರೆ ಬೇರೆ ಯಾರೂ ಪ್ರಮುಖರು ಬರಲಿಲ್ಲ. ನನಗೂ ಬೇಸರ ಕಂಡಿತು. ನೀವು ದೈವ ಚಿಂತನೆ ಮಾಡಿ ಆಮೇಲೆ ಯೋಚನೆ ಮಾಡುವ ಎಂದು ಹೇಳಿದ್ದೆ. ಹಾಗೆ ಪ್ರಶ್ನೆ ಚಿಂತನೆಯಲ್ಲಿ ನನ್ನ ಹೆಸರನ್ನು ಕೇಳಿದಾಗ ಇವರೇ ಸೂಕ್ತ ವ್ಯಕ್ತಿ ಎನ್ನುವ ಉತ್ತರ ಬಂದಿತ್ತು. ಕೊರಗಜ್ಜನ ಪ್ರೇರಣೆ ಇದಾದರೆ ಹಿಂದೆ ಮುಂದೆ ನೋಡಲಿಕ್ಕಿಲ್ಲ ನೀವು ಪ್ರತಿಷ್ಠಗೆ ದಿನ ನಿಗದಿ ಮಾಡಿ ಎಂದು ಹೇಳಿ ಕೆಲಸ ಪ್ರಾರಂಭ ಮಾಡಿದೆವು. ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತನಾಡಿ ದೇಣಿಗೆ ಪಡೆದು ನಿಗದಿಯಾದ ದಿನದಂದೇ ಪ್ರತಿಷ್ಠಾ ಕಾರ್ಯಕ್ರಮ ನಡೆಯುತ್ತಿದೆ. ಒಳ್ಳೆಯ ಕೆಲಸ ನಿರ್ಮಲ ಮನಸ್ಸಿನಿಂದ ಮಾಡಿದರೆ ಅಡತಡೆಯಿಲ್ಲದೆ ನಡೆಯುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಯಿತು ಎಂದು ಹೇಮನಾಥ ಶೆಟ್ಟಿಯವರು ಕ್ಷೆತ್ರ ಅಬಿವೃದ್ದಿಯಾಗಿರುವ ವಿಚಾರವನ್ನು ಭಕ್ತರ ಗಮನಕ್ಕೆ ತಂದರು.

ಸಮಿತಿಯ ಗೌರವಾಧ್ಯಕ್ಷ ದಂಬೆಕ್ಕಾನ ಸದಾಶಿವ ರೈ ಮಾತನಾಡಿ ದೈವಿಕ ಶಕ್ತಿಯ ಪ್ರೇರಣೆಯಿಂದ ಇಂತಹ ಸಾನ್ನಿಧ್ಯಗಳು ಅಭಿವೃದ್ಧಿಯಾಗುತ್ತದೆ. ತುಳುನಾಡು ಎನ್ನುವುದು ದೈವಗಳ ನಾಡು. ಇಲ್ಲಿ ಜನರ ಜೀವನದೊಂದಿಗೆ ನಿತ್ಯ ಅನುಗ್ರಹ ನೀಡುವ ದೈವಗಳ ಆರಾಧನೆ ಶ್ರದ್ಧಾ ಭಕ್ತಿಯಿಂದ ಆರಾಧನೆಗೊಂಡರೆ ಊರೇ ಅಭಿವೃದ್ದಿಯಾದಂತೆ ಎಂದು ಹೇಳಿದರು. ಕಾವು ಹೇಮನಾಥ್ ಶೆಟ್ಟಿಯವರು ಯಾವುದೇ ಕೆಲಸಕ್ಕೆ ಹೊರಟರೆ ಅದನ್ನು ಶ್ರದ್ಧೆಯಿಂದ, ಭಕ್ತಿಯಿಂದ ಮಾಡುತ್ತಾರೆ ಯಶಸ್ವಿಯೂ ಆಗುತ್ತಾರೆ ಎನ್ನುವುದಕ್ಕೆ ಇದೂ ಒಂದು ಸಾಕ್ಷಿ ಎಂದು ಅಭಿಪ್ರಾಯಿಸಿದರು.

ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷರೂ, ಸಿಂಹವನ ಮತ್ತು ಮಣ್ಣಾಪು ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷರು ಪಾಲ್ತಾಡು ಸಾನ್ನಿಧ್ಯಕ್ಕೆ ಕೊರಗಜ್ಜನ ಮೂರ್ತಿ ಕೊಡುಗೆಯಾಗಿ ನೀಡಿದರು. ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ ಕೊರಗಜ್ಜನ ಸಾನ್ನಿಧ್ಯಗಳು ಹಲವು ಕಡೆ ಆರಂಭವಾಗಿದೆ. ಎಲ್ಲವೂ ನಿರ್ವಿವಾದವಾಗಿ ನಡೆಯುತ್ತಿದೆ ಎನ್ನಲು ಸಾಧ್ಯವಿಲ್ಲ. ಶ್ರದ್ಧೆಯಿಂದ ಭಕ್ತಿಯಿಂದ ಆರಾಧನೆ ಮಾಡಿ ಭಕ್ತರ ಭಾವನೆಗಳನ್ನು ಗೌರವಿಸಿ ಮುನ್ನಡೆದರೆ ಈ ಕ್ಷೇತ್ರವೂ ಭಕ್ತಜನರಿಂದ ತುಂಬಿತುಳಕಲಿದೆ. ಈ ಜವಾಬ್ದಾರಿ ಧರ್ಮದರ್ಶಿಯ ಮೇಲೆ ಇದೆ ಎಂದು ಹೇಳಿದರು. ಕಾವು ಹೇಮನಾಥ ಶೆಟ್ಟಿಯವರ ಸೇವೆಗೆ ದೈವ ದೇವರು ಸದಾ ಅನುಗ್ರಹಿಸುತ್ತಾರೆ. ಮುಂದಿನ ದಿನಗಳಲ್ಲಿ ಸಂವಿಧಾನಿಕ ಹುದ್ದೆಯನ್ನು ಅಲಂಕರಿಸಿ ಇನ್ನಷ್ಟು ಜನ ಸೇವೆ ಮಾಡುವ ಅವಕಾಶ ಸಿಗಲಿ ಎಂದು ಶುಭಹಾರೈಸಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ, ನ್ಯಾಯವಾದಿ ದುರ್ಗಾಪ್ರಸಾದ್ ರೈ ಮಾತನಾಡಿ ದೈವ ದೇವರುಗಳು ಯಾರು ಎಲ್ಲಿಗೆ ಬೇಕು ಎನ್ನುವ ತೀರ್ಮಾನದಂತೆ ಹೇಮನಾಥ್ ಶೆಟ್ಟಿಯರಿಗೆ ಇಲ್ಲಿಯ ಅಭಿವೃದ್ಧಿ ಕೆಲಸಗಳ ಜವಾಬ್ದಾರಿ ನೀಡಿದ್ದಾರೆ. ನಿತ್ಯವೂ ಜನರ ಮಧ್ಯೆ ಇದ್ದು ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಇರುವ ಇವರು ನಿಜವಾದ ಜನ ನಾಯಕರು. ಕೊರಗಜ್ಜನ ಮೇಲೆ ಇವರಿಗೆ ಬಹಳ ಭಕ್ತಿ. ಇವರ ವೈಯುಕ್ತಿಕ, ರಾಜಕೀಯ, ಸಾಮಾಜಿಕ ಬದುಕಿನ ಒತ್ತಡದ ಮಧ್ಯೆಯೂ ಇಂತಹ ಧಾರ್ಮಿಕ ಕೆಲಸಗಳನ್ನು ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿರುವುದನ್ನು ಕಂಡಾಗ ನಮಗೆ ಅಭಿಮಾನವಾಗುತ್ತದೆ ಎಂದರು.

ಕ್ಷೇತ್ರದ ಧರ್ಮದರ್ಶಿ ಬಾಬು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಜಯಪ್ರಕಾಶ್ ರೈ ನೂಜಿಬೈಲು, ಕ್ಷೇತ್ರದ ದಾನಿಗಳಾದ ಶೀನಪ್ಪ ರೈ, ಶ್ವೇತಾ ಯೋಗೀಶ್ ರೈ ಅಗರಿ, ಸುನಿಲ್ ರೈ ಪಾಲ್ತಾಡು, ಸೀತಾರಾಮ ರೈ ಕೈಕ್ಕಾರ, ಡಾ. ಆಶಾ ಭಂಡಾರಿ ಡಿಂಬ್ರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಷೇತ್ರದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು ಕೊಡುಗೈದಾನಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರು ವಿದೇಶದಿಂದಲೇ ಶುಭಾಶಂಸನೆ ಪತ್ರದ ಮೂಲಕ ಶುಭಹಾರೈಸಿದರು. ಎಸ್ ಬಿ ಜಯರಾಮ ರೈ ಮತ್ತು ದಂಬೆಕ್ಕಾನ ಸದಾಶಿವ ರೈ ಯವರ ಸೇವೆಗಾಗಿ ಗೌರವಿಸಲಾಯಿತು. ಕ್ಷೇತ್ರಕ್ಕಾಗಿ ಸೇವೆ ಮಾಡಿದ ಎಲ್ಲಾ ಸದಸ್ಯರನ್ನು ಗೌರವಿಸಲಾಯಿತು.

ನಾಗ, ರಕ್ತೇಶ್ವರಿ, ಕಲ್ಲುರ್ಟಿ, ಗುಳಿಗ ಮತ್ತು ಕೊರಗಜ್ಜನ ಪ್ರತಿಷ್ಠಾ ಸಂದರ್ಭದಲ್ಲಿ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರು ಇವರು ಆಗಮಿಸಿ ಪ್ರತಿಷ್ಠಾ ಕಾರ್ಯದಲ್ಲಿ ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ದೈವಚಿತ್ತ ಏನಿರುತ್ತದೆ ಅದರಂತೆ ಒಬ್ಬೊಬ್ಬ ವ್ಯಕ್ತಿಯ ಕೆಲಸ ಕಾರ್ಯಗಳು ನಡೆಯುತ್ತದೆ. ದೈವ ಮತ್ತು ದೇವರ ಪ್ರೇರಣೆ ಆದಾಗ ಅದನ್ನು ಅರ್ಥೈಸಿಕೊಂಡು ಶ್ರದ್ಧಾ ಭಕ್ತಿಯಿಂದ ನಿಷ್ಕಲ್ಮಶ ಮನಸಿನಿಂದ ಮಾಡುವ ಕೆಲಸ ಯಶಸ್ವಿಯಾಗುತ್ತದೆ. ಕಾವು ಹೇಮನಾಥ್ ಶೆಟ್ಟಿಯವರು ಮತ್ತು ಧರ್ಮದರ್ಶಿ ಬಾಬು ಅವರ ಶ್ರದ್ಧೆಯ ಕೆಲಸಕ್ಕೆ ಸಂಪೂರ್ಣ ಫಲ ಸಿಕ್ಕಿದೆ. ನಾವು ಆರಾಧಿಸುವ ಅಗೋಚರ ಶಕ್ತಿ ನಮ್ಮೆಲ್ಲರನ್ಬು ಹರಸಲಿ ಎಂದು ಎಲ್ಲರನ್ನೂ ಹರಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಭಕ್ತಿಗೀತೆಯನ್ನು ಬಿಡುಗಡೆ ಮಾಡಲಾಯಿತು.

LEAVE A REPLY

Please enter your comment!
Please enter your name here