ಉಪ್ಪಿನಂಗಡಿ: ಇಲ್ಲಿನ ಜನ ನಿಬಿಡ ಬಸ್ ನಿಲ್ದಾಣದಲ್ಲಿ ಸುಡು ಬಿಸಿಲಿನಲ್ಲಿ ಅನಾಥ ವೃದ್ಧೆಯೋರ್ವರು ಕಳೆದ 5 ದಿನಗಳಿಂದ ನರಳಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಪತ್ರಿಕಾ ವರದಿಗಾರರೊಬ್ಬರು 108 ಸೇವೆಯನ್ನು ಪಡೆದು ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ ಘಟನೆ ವರದಿಯಾಗಿದೆ.
ತಾನು ಕಡಬ ತಾಲೂಕಿನ ಆಲಂಕಾರು ಗ್ರಾಮ ನಿವಾಸಿ ಎಂದಷ್ಟೇ ಹೇಳುತ್ತಿದ್ದ ಈ ವೃದ್ಧೆ ಎದ್ದು ನಡೆದಾಡಲೂ ಆಗದೇ ಸುಡು ಬಿಸಿಲಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಂತೆ, ಸಾಯಂಕಾಲವಾದೊಡನೆ ಒಂದಷ್ಟು ಚೇತರಿಸಿದಂತೆ ಕಂಡು ಬರುತ್ತಿದ್ದರು. ದಾರಿಹೋಕರು ಅಜ್ಜಿಯ ದಯನೀಯ ಸ್ಥಿತಿಯನ್ನು ಕಂಡು ಕೈಲಾದ ಮಟ್ಟದಲ್ಲಿ ಹಣವನ್ನು ನೀಡಿ, ತಿಂಡಿಯನ್ನು ನೀಡಿ ಸಾಗುತ್ತಿದ್ದರು. ದೊರೆತ ಹಣವನ್ನಾಗಲಿ, ತಿಂಡಿಯನ್ನಾಗಲಿ ಬಳಸುವ ಸ್ಥಿತಿಯಲ್ಲಿ ಇಲ್ಲದ ಅಜ್ಜಿ ಸತತ 5 ದಿನಗಳ ಕಾಲ ನರಳಾಟವಾಡುತ್ತಿದ್ದರೂ ಸ್ಥಳೀಯಾಡಳಿತವಾಗಲಿ, ಸಂಬಂಧಿತ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿತ್ತು. ಈ ಬಗ್ಗೆ ವಿಚಾರ ತಿಳಿದ ಸ್ಥಳೀಯ ಪತ್ರಿಕಾ ವರದಿಗಾರ ಎಂ. ಸರ್ವೆಶ್ ಭಟ್ ರವರು 108 ಅಂಬುಲೆನ್ಸ್ ಸೇವೆ ಪಡೆದು ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕಲು ಸಹಕಾರಿಯಾದರು.
ವಾರೀಸುದಾರರಿಲ್ಲದ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದ 108 ಸಿಬ್ಬಂದಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ವಾರೀಸುದಾರರಿಲ್ಲದ ಅಜ್ಜಿಯೊಬ್ಬರು ಅಸ್ವಸ್ಥರಾಗಿ ಬಿದ್ದಿದ್ದಾರೆ ಎಂಬ ಮಾಹಿತಿ ಲಭಿಸಿದೊಡನೆ ತ್ವರಿತವಾಗಿ ಧಾವಿಸಿ ಬಂದ 108 ರ ಸಿಬ್ಬಂದಿ ಅವಿನಾಶ್, ಚಾಲಕ ಸೈಲಾನಿರವರೊಡಗೂಡಿ ಅಜ್ಜಿಯನ್ನು ಆಂಬುಲೆನ್ಸ್‌ಗೆ ವರ್ಗಾಯಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸುವಲ್ಲಿ ಮಾನವೀಯ ಸ್ಪಂದನವನ್ನು ತೋರಿದರು. ತನ್ಮೂಲಕ ವಾರಸುದಾರರಿಲ್ಲದ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ 108 ಸಿಬ್ಬಂದಿ ನಿರಾಕರಣೆ ತೋರುತ್ತಾರೆ ಎಂಬ ಆಪಾದನೆಯನ್ನು ತೊಡೆದು ಹಾಕಿದರು.