ರೆಂಜಿಲಾಡಿಯ ಯೋಧ ಲಿಜೇಶ್ ಕುರಿಯನ್ ಕೊಯಂಬತ್ತೂರಿನಲ್ಲಿ ನಿಧನ ; ಹುಟ್ಟೂರಲ್ಲಿ ಸರಕಾರಿ ಗೌರವಗಳೊಂದಿಗೆ ಅಂತಿಮ ಕಾರ್ಯ

0

ಕಡಬ: ಹೃದಯಾಘಾತದಿಂದ ಕೊಯಂಬತ್ತೂರಿನಲ್ಲಿ ನಿಧನರಾದ ಕಡಬ ತಾಲೂಕಿನ ರೆಂಜಿಲಾಡಿಯ ಯೋಧನಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಮಂಗಳವಾರ ಅಂತಿಮ ಗೌರವ ಸಲ್ಲಿಸಿ ಅಂತಿಮ ಕಾರ್ಯ ನೆರವೇರಿಸಲಾಯಿತು.

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ತರಪ್ಪೇಳ್ ನಿವಾಸಿ ಮಾಜಿ ಯೋಧ ಜೋನಿ ಟಿ.ಕೆ. ಅವರ ಪುತ್ರ ಚೆನೈ ರಿಜಿಮೆಂಮಟ್‌ನ ಕೊಲ್ಕತ್ತಾ ಘಟಕದಲ್ಲಿ ಯೋಧರಾಗಿದ್ದ ಲಿಜೇಶ್ ಕುರಿಯನ್ (30) ಮಾ.26 ರಂದು ಚೆನೈನ ಕೊಯಂಬತ್ತೂರುನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ತಂದೆ, ತಾಯಿ, ಪತ್ನಿ ಜೋಮಿತಾ ಕುರಿಯನ್, ಒಂದು ವರ್ಷದ ಮಗು ಜೋಝಿಲ್ ಜಾನ್ ರನ್ನು ಅಗಲಿದ್ದಾರೆ.

ಮಂಗಳವಾರ ಮೃತದೇಹವನ್ನು ಅಂಬ್ಯುಲೆನ್ಸ್ ಮೂಲಕ ಕಡಬದ ರೆಂಜಿಲಾಡಿಯ ತರಪ್ಪೇಳ್ ಮನೆಗೆ ತಂದು ಅಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಿ, ಬಳಿಕ ಕುಟ್ರುಪಾಡಿಯ ಸೈಂಟ್ ಮೇರೀಸ್ ಕ್ಯಾಥೋಲಿಕ್ ಫೊರೆನಾ ಚರ್ಚ್‌ಗೆ ಕೊಂಡೊಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು. ನೂರಾರು ಮಂದಿ ಸಾರ್ವಜನಿಕರು ಮೃತ ಯೋಧನ ಅಂತಿಮ ದರುಶನ ಪಡೆದು ಗೌರವ ಸಲ್ಲಿಸಿದರು.

19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಸಿ.ಎಚ್.ಎಂ. ಚೇತನ್ ಗೌಡ, ಹವಾಲ್ದಾರ್ ಸಮರ್ದೀಪ್, ಹವಲ್ದಾರ್ ದಿಲ್ದಾರ್ ಸಿಂಗ್, ಹವಾಲ್ದಾರ್ ವಿಪಿನ್ ಕುಮಾರ್ ಮೊದಲಾದವರ ನೇತೃತ್ವದಲ್ಲಿ ಗೌರವ ಸಲ್ಲಿಸಲಾಯಿತು. ಕಡಬ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆಪಿಎಂ ಚೆರಿಯನ್, ಪದಾಧಿಕಾರಿ ಟಿ.ಜಿ.ಮ್ಯಾಥ್ಯೂ, ಮಹಿಳಾ ವೀರ ನಾರಿ ಘಟಕದ ಅಧ್ಯಕ್ಷೆ ಗೀತಾ, ಘಟಕದ ಪದಾಧಿಕಾರಿಗಳು, ಸದಸ್ಯರು ಗೌರವ ಸಲ್ಲಿಸಿದರು. ಕಡಬ ತಾಲೂಕು ತಹಶೀಲ್ದಾರ್ ರಮೇಶ್ ಬಾಬು, ಕಡಬ ಪಿಎಸ್‌ಐ ಶಶಿಧರ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಮತ್ತಿತರರು, ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಸಾರ್ವಜನಿಕರು ಮೃತರ ಅಂತಿಮ ದರುಶನ ಪಡೆದು ನಮನ ಸಲ್ಲಿಸಿದರು. ವಂ.ರೆ. ಜೋಸ್‌ಅಯಂಕುಡಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಲಿಜೇಶ್ ಕಳೆದ 12 ವರ್ಷಗಳಿಂದ ಯೋಧರಾಗಿದ್ದು, ಕೊಯಂಬತ್ತೂರಿನಲ್ಲಿ ತಂದೆ, ತಾಯಿ, ಪತ್ನಿ, ಮಗುವಿನೊಂದಿಗೆ ವಾಸ್ತವ್ಯವಿದ್ದರು. ಲಿಜೇಶ್ ಅವರು ಮಾರ್ಚ್ 30ರಂದು ತನ್ನ 30ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವವರಿದ್ದರು.

LEAVE A REPLY

Please enter your comment!
Please enter your name here