ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್-ರಾಜ್ಯದ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಎಲೆಕ್ಷನ್-ಮೇ 10: ಮತದಾನ ಮೇ 13: ಫಲಿತಾಂಶ ಪ್ರಕಟ

0

ಚುನಾವಣಾ ವೇಳಾಪಟ್ಟಿ

ಏಪ್ರಿಲ್ 13: ಚುನಾವಣಾ ಅಧಿಸೂಚನೆ ಪ್ರಕಟ
ಏಪ್ರಿಲ್ 13: ನಾಮಪತ್ರ ಸಲ್ಲಿಕೆ ಆರಂಭ
ಏಪ್ರಿಲ್ 20: ನಾಮಪತ್ರ ಸಲ್ಲಿಕೆಗೆ ಕೊನೇಯ ದಿನ
ಏಪ್ರಿಲ್ 21: ನಾಮಪತ್ರ ಪರಿಶೀಲನೆ
ಏಪ್ರಿಲ್ 24: ನಾಮಪತ್ರ ವಾಪಸ್ ಪಡೆಯಲು ಕಡೇಯ ದಿನ
ಮೇ 10: ಮತದಾನ
ಮೇ 13: ಮತ ಎಣಿಕೆ, ಫಲಿತಾಂಶ ಪ್ರಕಟ
ಮೇ 15: ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನ

ಪುತ್ತೂರು:ಕರ್ನಾಟಕದ 15 ನೇ ವಿಧಾನಸಭೆ ರಚನೆಗಾಗಿ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು ಮಾ.29ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.ಪುತ್ತೂರು,ಸುಳ್ಯ,ಬಂಟ್ವಾಳ ಸೇರಿದಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಮೇ 13ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.


ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಾ.29ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಮಾರ್ಚ್ 29ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.ಏ.13ರಂದು ಅಧಿಸೂಚನೆ ಪ್ರಕಟವಾಗಲಿದೆ.ಅಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು ಏ.20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.ಏ.21ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಏ.24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.ಬಳಿಕ ಅಂತಿಮ ಕಣ ಘೋಷಣೆಯಾಗಲಿದೆ.ಮೇ 10ರಂದು ಚುನಾವಣೆ ನಡೆದು ಮೇ 13ರಂದು ಮತ ಎಣಿಕೆ ನಡೆಯಲಿದ್ದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.ಏ.1ಕ್ಕೆ 18 ವರ್ಷ ತುಂಬಿದವರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.80 ವರ್ಷ ಮೇಲ್ಪಟ್ಟವರಿಗೆ ಮತ್ತು ವಿಶೇಷ ಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ.


ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ:
ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಯಾದ ಕ್ಷಣದಿಂದಲೇ ಬಿಗಿಕ್ರಮ ಆರಂಭಿಸಿದೆ.ಜನಪ್ರತಿನಿಧಿಗಳು ಬಳಸುತ್ತಿರುವ ಸರಕಾರಿ ವಾಹನಗಳನ್ನು ವಾಪಸ್ ಪಡೆದುಕೊಳ್ಳಲಾಗುತ್ತಿದೆ.ಶಾಸಕರ, ಸಂಸದರ ಸಹಿತ ಜನಪ್ರತಿನಿಧಿಗಳ ಭಾವಚಿತ್ರ ಅಥವಾ ಪಕ್ಷದ ಚಿಹ್ನೆ ಇರುವ ಬ್ಯಾನರ್, ಫಲಕಗಳನ್ನು ತೆರವುಗೊಳಿಸಲಾಗುತ್ತಿದೆ.ಪತ್ರಿಕೆ, ಟಿ.ವಿ, ವೆಬ್‌ಸೈಟ್ ಸಹಿತ ಸಾಮಾಜಿಕ ಜಾಲತಾಣಗಳ ಮೇಲೆಯೂ ಹದ್ದಿನ ಕಣ್ಣಿಡಲಾಗಿದೆ.ಪೇಯ್ಡ್ ನ್ಯೂಸ್ ಬಗ್ಗೆ ಕಠಿಣ ಕಾನೂನು ಕ್ರಮ ಜಾರಿಯಾಗಲಿದೆ. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಶಿಲಾನ್ಯಾಸ, ಉದ್ಘಾಟನೆ ನೆರವೇರಿಸುವಂತಿಲ್ಲ.ಯಾವುದೇ ಹೊಸ ಯೋಜನೆಗಳನ್ನು ಘೋಷಿಸುವಂತೆಯೂ ಇಲ್ಲ.ಭರವಸೆ ನೀಡುವಂತೆಯೂ ಇಲ್ಲ.ಅಲ್ಲದೆ ಸ್ಥಳೀಯ ಸಂಸ್ಥೆಗಳ ಸಭೆಗಳು ರದ್ದುಗೊಂಡಿವೆ.


ಚುನಾವಣಾ ಹೈ ಅಲರ್ಟ್ ಘೋಷಣೆ:
ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.ಮತಗಟ್ಟೆ, ಮತದಾರರ ಪಟ್ಟಿ, ಭದ್ರತೆ, ವಿದ್ಯುನ್ಮಾನ ಮತಯಂತ್ರದ ಸಿದ್ಧತೆ, ಚುನಾವಣಾ ಕಾರ್ಯಕ್ಕೆ ಸಿಬ್ಬಂದಿಗಳ ನೇಮಕ, ಮುನ್ನೆಚ್ಚರಿಕೆ, ತರಬೇತಿ ವ್ಯವಸ್ಥೆಗಳು ಸುವ್ಯವಸ್ಥಿತವಾಗಿ ನಡೆಯುತ್ತಿದೆ.ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗೆ ಬೇಕಾದ ಸಕಲ ತಯಾರಿ ನಡೆಸಲಾಗಿದೆ.ಅಲ್ಲಲ್ಲಿ ಅಳವಡಿಸಲಾಗಿರುವ ಫಲಕ, ಬ್ಯಾನರ್, ಕಟೌಟ್, ಬಂಟಿಂಗ್ಸ್‌ಗಳನ್ನು ತೆರವು ಮಾಡಲಾಗುತ್ತಿದೆ.ಶಾಂತಿ, ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡಲಾಗಿದೆ.ಅಕ್ರಮ, ಅವ್ಯವಹಾರ ನಡೆಯದಂತೆ ಎಲ್ಲೆಡೆ ತಪಾಸಣೆ ಮಾಡಲಾಗುತ್ತಿದೆ.ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ದ.ಕ.ಜಿಲ್ಲಾ ಚುನಾವಣಾಧಿಕಾರಿಯಾಗಿರುವ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಗಿರೀಶ್ ನಂದನ್ ನೇತೃತ್ವದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

883 ಮತದಾರರಿಗೊಂದು ಮತಗಟ್ಟೆ ನಿರ್ಮಾಣ:
ರಾಜ್ಯದಲ್ಲಿ ಈ ಬಾರಿ ಯುವಕರಿಗಾಗಿ 224 ಪ್ರತ್ಯೇಕ ಮತಗಟ್ಟೆ, ಮಹಿಳೆಯರಿಗಾಗಿ 1320 ಮತಗಟ್ಟೆಗಳು ಸೇರಿ ಸರಾಸರಿ 883 ಮತದಾರರಿಗೊಂದು ಮತಗಟ್ಟೆ ನಿರ್ಮಾಣ ಮಾಡಲಾಗುತ್ತದೆ.
ಚುನಾವಣಾ ಆಯೋಗದ ಆಪ್‌ನಲ್ಲಿ ಅಭ್ಯರ್ಥಿಗಳ ಸಂಪೂರ್ಣ ವಿವರ ಲಭ್ಯವಿರುತ್ತದೆ.ಅಭ್ಯರ್ಥಿಯ ಅಫಿಡವಿಟ್ ಕೂಡ ಆಪ್‌ನಲ್ಲೇ ಲಭ್ಯವಿರಲಿದೆ.ಚುನಾವಣಾ ಅಕ್ರಮದ ಬಗ್ಗೆ ಆಪ್‌ನಲ್ಲೇ ಮತದಾರರು ದೂರು ಸಲ್ಲಿಸಬಹುದಾಗಿದೆ.ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ.ಚುನಾವಣಾ ಅಕ್ರಮ ತಡೆಗೆ ರಾಜ್ಯದಲ್ಲಿ 2400 ತಂಡಗಳ ರಚನೆ ಮಾಡಲಾಗಿದೆ.


ಯಾರಾಗುತ್ತಾರೆ ಅಭ್ಯರ್ಥಿಗಳು? ಮತದಾರರಲ್ಲಿ ಕುತೂಹಲ:
ವಿಧಾನಸಭಾ ಚುನಾವಣೆಗೆ ಅಧಿಕಾರಿಗಳಿಂದ ಭರದ ತಯಾರಿ ನಡೆಯುತ್ತಿದೆ.ಇದರೊಂದಿಗೆ ರಾಜಕೀಯ ಪಕ್ಷಗಳಲ್ಲಿಯೂ ಬಿರುಸಿನ ಚಟುವಟಿಕೆ ನಡೆಯತೊಡಗಿದೆ.ಈ ಬಾರಿಯ ಅಭ್ಯರ್ಥಿಗಳು ಯಾರು ಎನ್ನುವ ಕುತೂಹಲ ಮತದಾರರಲ್ಲಿ ಹೆಚ್ಚಾಗಿದೆ.ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಸ್‌ಡಿಪಿಐ ಪಕ್ಷ ಶಾಫಿ ಬೆಳ್ಳಾರೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು ಬಿಟ್ಟರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಇನ್ನೂ ಅಭ್ಯರ್ಥಿಗಳ ಹೆಸರು ಘೋಷಿಸಿಲ್ಲ.ಕಡಬ ತಾಲೂಕಿನ ಎಲ್ಲ ಗ್ರಾಮಗಳ ವ್ಯಾಪ್ತಿಯನ್ನೂ ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ಹಾಗೂ ಆಮ್ ಆದ್ಮಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಕುಶಲ ಅವರ ಪುತ್ರಿ ಸುಮನಾ ಬೆಳ್ಳಾರ್ಕರ್ ಅವರ ಆಯ್ಕೆಯಾಗಿದೆ.ಬಿಜೆಪಿ,ಇತರ ಪಕ್ಷಗಳ ಅಭ್ಯರ್ಥಿ ಹೆಸರು ಇನ್ನೂ ಪ್ರಕಟವಾಗಿಲ್ಲ.ವಿಟ್ಲ ವ್ಯಾಪ್ತಿಯನ್ನು ಹೊಂದಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಹಾಗೂ ಎಸ್‌ಡಿಪಿಐ ಅಭ್ಯರ್ಥಿಯಾಗಿ ಇಲ್ಯಾಸ್ ಮೊಹಮ್ಮದ್ ತುಂಬೆ ಅವರನ್ನು ಆಯ್ಕೆ ಮಾಡಲಾಗಿದೆ.ಇಲ್ಲಿಯೂ ಬಿಜೆಪಿ ಮತ್ತಿತರ ಪಕ್ಷಗಳ ಅಭ್ಯರ್ಥಿ ಹೆಸರು ಇನ್ನೂ ಪ್ರಕಟವಾಗಲಿಲ್ಲ.

ಚುನಾವಣಾ ಅಕ್ರಮ ತಡೆಗಟ್ಟಲು ಆದಾಯ ತೆರಿಗೆ ಇಲಾಖೆಯ ಮಂಜುನಾಥ್ ನೇಮಕ:
ಚುನಾವಣೆ ಅಕ್ರಮ ತಡೆಗಟ್ಟುವ ಅಧಿಕಾರಿಯನ್ನಾಗಿ ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕ ಎಚ್.ಎಸ್.ಮಂಜುನಾಥ್ (ಐಆರ್‌ಎಸ್) ಅವರನ್ನು ನೇಮಿಸಲಾಗಿದೆ.ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಮಾದರಿ ನೀತಿ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಾರಿಗೊಳಿಸಿ ಚುನಾವಣೆ ಸುಗಮವಾಗಿ ಮುಕ್ತವಾಗಿ ಹಾಗೂ ಶಾಂತಿಯುತವಾಗಿ ನಡೆಸುವ ಕುರಿತು ಯಾವುದೇ ರೀತಿಯ ಚುನಾವಣೆಯ ಅಕ್ರಮಗಳು ನಡೆಯದಂತೆ ನಿಗಾ ವಹಿಸುವ, ಕ್ರಮಕೈಗೊಳ್ಳುವ ಕುರಿತು ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕ ಎಚ್.ಎಸ್. ಮಂಜುನಾಥ್(ಐಆರ್‌ಎಸ್) ಇವರನ್ನು ಚುನಾವಣಾ ಅಕ್ರಮ ತಡೆಗಟ್ಟುವ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.ಅಕ್ರಮಗಳು ಕಂಡು/ತಿಳಿದು ಬಂದಲ್ಲಿ ಸಾರ್ವಜನಿಕರು ಮಂಜುನಾಥ್ ಅವರ ಮೊಬೈಲ್ ದೂರವಾಣಿ ಸಂಖ್ಯೆ:9353341788 ಮೂಲಕ ದೂರನ್ನು ಸಲ್ಲಿಸಬಹುದಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿ -ನಿರ್ಬಂಧಗಳೇನು? ವಿನಾಯ್ತಿ ಏನು?

ಚುನಾವಣೆಗೆ ದಿನಾಂಕ ಘೋಷಣೆ ಆದ ಮಾ.೨೯ರಿಂದ ಮೇ ೧೩ರಂದು ಮತ ಎಣಿಕೆ ಮುಗಿದ ಬಳಿಕವೂ ಎರಡು ದಿನ ಅಂದರೆ ಮೇ ೧೫ರ ತನಕ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಎಂದರೆ ಏನು? ನಿಯಮಗಳು ಏನಿವೆ? ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಗೆ ಏನೆಲ್ಲಾ ನಿರ್ಬಂಧ ಇರುತ್ತದೆ ಎಂಬ ವಿವರ ಇಲ್ಲಿದೆ.
ಸರ್ಕಾರ ಹೊಸ ಯೋಜನೆ ಘೋಷಿಸುವಂತಿಲ್ಲ.ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವಂತಿಲ್ಲ.ಹೊಸ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ.ಹೊಸ ಯೋಜನೆಗೆ ಹಣ ನೀಡುವಂತಿಲ್ಲ.ಹೊಸ ಟೆಂಡರ್ ಕರೆಯುವಂತಿಲ್ಲ.ಈಗಾಗಲೇ ಕರೆದಿದ್ದ ಟೆಂಡರ್ ಫೈನಲ್ ಮಾಡುವಂತಿಲ್ಲ.ಸಚಿವರು, ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ.ಅಧಿಕಾರಿಗಳ ಜೊತೆ ಸಚಿವರು, ಶಾಸಕರು ಸಭೆ ನಡೆಸುವಂತಿಲ್ಲ.ರಾಜಕೀಯ ನಾಯಕರು ಸರ್ಕಾರಿ ವಸತಿ ಗೃಹ ಬಳಸುವಂತಿಲ್ಲ.ಬೆಳಗ್ಗೆ ೬ರಿಂದ ರಾತ್ರಿ ೧೦ರವರೆಗೆ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು.ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ.ಧರ್ಮ, ಜಾತಿ ವಿಷಯಾಧಾರಿತವಾಗಿ ಮತ ಕೇಳುವಂತಿಲ್ಲ.ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಕಾರ್ಯ ಪ್ರಗತಿಯಲ್ಲಿ ಇರುವ ಅಭಿವೃದ್ಧಿ ಯೋಜನೆ ಮುಂದುವರೆಸಬಹುದು.ಈಗಾಗಲೇ ಜಾರಿಯಲ್ಲಿ ಇರುವ ಸರ್ಕಾರಿ ಕಾರ್ಯಕ್ರಮಗಳ ಮುಂದುವರಿಕೆಗೆ ಅಡ್ಡಿ ಇರುವುದಿಲ್ಲ.ಕಾರ್ಯಕ್ರಮಗಳಿಗೆ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ.ರಾಜ್ಯ ಸರ್ಕಾರ ಸಂಪುಟ ಸಭೆ ನಡೆಸಬಹುದು,ಆದರೆ ನಿರ್ಣಯ ಕೈಗೊಳ್ಳುವಂತಿಲ್ಲ.ಬರ ಮತ್ತು ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸುವುದಕ್ಕೆ ಅಡ್ಡಿ ಇಲ್ಲ.ಕುಡಿಯುವ ನೀರು ಪೂರೈಕೆ, ಗೋಶಾಲೆ ತೆರೆಯುವುದಕ್ಕೂ ಅಡ್ಡಿ ಇಲ್ಲ.ಸಾರ್ವಜನಿಕ ಬಳಕೆಯ ಅಭಿವೃದ್ದಿ ಕಾರ್ಯಗಳನ್ನು ಅಧಿಕಾರಿಗಳು ಉದ್ಘಾಟನೆ ಮಾಡಬಹುದು.

ವೈಯಕ್ತಿಕ ಟೀಕೆಗಿಲ್ಲ ಅವಕಾಶ
ಒಬ್ಬರ ಕೆಲಸ ಕಾರ್ಯಗಳ ಬಗ್ಗೆ ಮಾತ್ರ ಮತ್ತೊಬ್ಬ ರಾಜಕಾರಣಿ ಟೀಕೆ ಟಿಪ್ಪಣಿ ಮಾಡಬಹುದು.ವೈಯಕ್ತಿಕ ಟೀಕೆ,ಕೋಮು ಸಂಘರ್ಷಕ್ಕೆ ಆಸ್ಪದ ನೀಡುವಂತಹ ಹೇಳಿಕೆ ನೀಡಬಾರದು. ವೈಯಕ್ತಿಕ ನಿಂದನೆ ಅಥವಾ ಜಾತಿ ನಿಂದನೆ ಮಾಡುವಂತಿಲ್ಲ,ಸಭೆ ಸಮಾರಂಭ ನಡೆಸಲು ಪೊಲೀಸರ ಅನುಮತಿ ಬೇಕು, ಜನರ ಖಾಸಗಿ ಬದುಕಿಗೆ ಧಕ್ಕೆ ತರುವಂತೆ ಪ್ರಚಾರ ಮಾಡುವಂತಿಲ್ಲ.

ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್ ಪಡೆಯುವಿಕೆ ಪ್ರಕ್ರಿಯೆಗಳು ಚುನಾವಣಾಧಿಕಾರಿಯಾಗಿರುವ ಪುತ್ತೂರು ಸಹಾಯಕ ಆಯುಕ್ತರ ಕಛೇರಿಯಲ್ಲಿ ನಡೆಯಲಿದ್ದು ಮತ ಎಣಿಕೆ ಮಂಗಳೂರಿನಲ್ಲಿ ನಡೆಯಲಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು -2,10,472
80 ವರ್ಷ ಮೇಲ್ಪಟ್ಟವರು 4,482
ವಿಕಲ ಚೇತನರು 2057

LEAVE A REPLY

Please enter your comment!
Please enter your name here