ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕೇಕನಾಜೆ ಎಂಬಲ್ಲಿ ಹರಿಯುವ ಸಣ್ಣ ಹೊಳೆಗೆ ಕಿರು ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಕಳೆದ ಹತ್ತು ವರ್ಷಗಳಿಂದ ಸ್ಥಳೀಯರು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿ ಸಕರಾತ್ಮಕ ಸ್ಪಂದನೆ ಸಿಗದಿದ್ದಾಗ, ಒಂದೆರಡು ಬಾರಿ ಪ್ರತಿಭಟನೆಯನ್ನೂ ಮಾಡಿದ್ದರು.ಅದರಂತೆ ಈಗ ಕೇಕನಾಜೆ ಎಂಬಲ್ಲಿ ಕಿರು ಸೇತುವೆ ನಿರ್ಮಾಣಗೊಂಡಿದ್ದು 10 ವರ್ಷಗಳ ಹೋರಾಟಕ್ಕೆ ಕೊನೆಗೂ ಮುಕ್ತಿ ದೊರಕಿದೆ. ಈ ಬಾರಿ ಮಳೆಗಾಲದಲ್ಲಿ ಇಲ್ಲಿ ಅಪಾಯವಿಲ್ಲ ಕೊನೆಗೂ ನಮ್ಮ ಬೇಡಿಕೆ ಈಡೇರಿತು ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಭರವಸೆ ಈಡೇಸಿದ ಶಾಸಕರು:
ಕಳೆದ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ರವರು ತನ್ನ ಅವಧಿಯಲ್ಲಿ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದರು.ಅದರಂತೆ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ಕೇಕನಾಜೆಯಲ್ಲಿ ಕಿರು ಸೇತುವೆ ನಿರ್ಮಾಣವಾಗಿದೆ.
ಜನರ ಬೇಡಿಕೆಯನ್ನು ಈಡೇರಿಸಲಾಗಿದೆ. ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ಸರಕಾರದಿಂದ ಸಿಗುವ ಸೌಲಭ್ಯ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಸ್ಥಳೀಯ ಮುಖಂಡರ ಇಚ್ಚಾಶಕ್ತಿಯೂ ಇದರ ಹಿಂದೆ ಇದೆ. ಗ್ರಾಮದ ಪ್ರತೀ ರಸ್ತೆಗಳೂ ಅಭಿವೃದ್ದಿಯಾಗಬೇಕು, ಸೇತುವೆ ನಿರ್ಮಾಣವಾಗಬೇಕೆಂಬುದೇ ನಮ್ಮ ಕನಸಾಗಿದೆ.
ಸಂಜೀವ ಮಠಂದೂರು , ಶಾಸಕರು
ಹತ್ತು ವರ್ಷಗಳ ಬೇಡಿಕೆ ಈಡೇರಿದೆ. ಇಲ್ಲಿ ಕಿರು ಸೇತುವೆ ನಿರ್ಮಾಣವಾಗಿರುವುದು ನಮಗೆಲ್ಲಾ ಅತೀವ ಸಂತೋಷವನ್ನು ತಂದಿದೆ. ಅನುದಾನ ನೀಡಿ ನಮ್ಮ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ.
ಶಾಫಿ ಕೇಕನಾಜೆ, ಸ್ಥಳೀಯರು