ಪುತ್ತೂರು:2022-23ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾ.31ರಿಂದ ಪ್ರಾರಂಭಗೊಳ್ಳಲಿದ್ದು ಪುತ್ತೂರುನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್‌ರವರ ನೇತತ್ವದಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.ಈ ಬಾರಿಯ ಪರೀಕ್ಷೆಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ಒಟ್ಟು 5096 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಪರೀಕ್ಷೆಯು ಮಾ.31ರಿಂದ ಏ.15ರ ತನಕ ನಡೆಯಲಿದೆ.
ಮಾ.31ರಂದು ಪ್ರಥಮ ಭಾಷೆ, ಏ.3ರಂದು ಗಣಿತ, ಏ.6ರಂದು ದ್ವಿತೀಯ ಭಾಷೆ, ಏ.10ರಂದು ವಿಜ್ಞಾನ, ಏ.12ರಂದು ತೃತೀಯ ಭಾಷೆ ಹಾಗೂ ಏ.15ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ.ಪ್ರತಿದಿನ ಬೆಳಿಗ್ಗೆ 10.30ಕ್ಕೆ ಪರೀಕ್ಷೆ ಪ್ರಾರಂಭಗೊಳ್ಳಲಿದೆ.ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಕೇಂದ್ರದಲ್ಲಿ ಉಪಸ್ಥಿತರಿರಬೇಕು.
5096 ವಿದ್ಯಾರ್ಥಿಗಳು:
ಈ ಬಾರಿಯ ಪರೀಕ್ಷೆಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಲ್ಲಿ ಹೊಸದಾಗಿ 4855,ಖಾಸಗಿಯಾಗಿ 241 ಸೇರಿದಂತೆ ಒಟ್ಟು 5096 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.15 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತ್ಯೇಕ ಕೇಂದ್ರವನ್ನು ತೆರೆಯಲಾಗಿದೆ.
15 ಪರೀಕ್ಷಾ ಕೇಂದ್ರಗಳು: ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ, ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ನೆಹರುನಗರ ಸುದಾನ ವಸತಿಯುತ ಶಾಲೆ, ಕಡಬ ಸರಕಾರಿ ಪದವಿ ಪೂರ್ವ ಕಾಲೇಜು, ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು, ಉಪ್ಪಿನಂಗಡಿ ಸಂತ ಮೇರೀಸ್ ಪ್ರೌಢಶಾಲೆ, ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್, ಸವಣೂರು ವಿದ್ಯಾರಶ್ಮಿ ಪ್ರೌಢಶಾಲೆ, ನೆಲ್ಯಾಡಿ ಸೈಂಟ್ ಜಾರ್ಜ್ ಪದವಿ ಪೂರ್ವ ಕಾಲೇಜು, ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲೆ, ರಾಮಕುಂಜ ರಾಮಕುಂಜೇಶ್ವರ ಪ್ರೌಢಶಾಲೆ ಹಾಗೂ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.241 ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲಿದ್ದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರವನ್ನು ತರೆಯಲಾಗಿದೆ.
220 ಕೊಠಡಿಗಳು:
ಒಟ್ಟು 15 ಕೇಂದ್ರಗಳಲ್ಲಿ 220 ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ.ಪ್ರತಿ ಕೊಠಡಿಗಳಲ್ಲಿ 12 ಡೆಸ್ಕ್ಗಳನ್ನು ಅಳವಡಿಸಲಾಗುವುದು.ಒಂದು ಡೆಸ್ಕ್ನಲ್ಲಿ ಇಬ್ಬರು ವಿದ್ಯಾರ್ಥಿಗಳಂತೆ ಪ್ರತಿ ಕೊಠಡಿಗಳಲ್ಲಿ 24 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ವಿಶೇಷಚೇತನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಹಾಗೂ ಸೌಲಭ್ಯಗಳನ್ನು ಕಲ್ಪಿಸಲಾಗುವುದು
375 ಮಂದಿ ಸಿಬ್ಬಂದಿಗಳು:
15 ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಗೆ ಸುಮಾರು 375 ಮಂದಿ ಸಿಬ್ಬಂದಿಗಳು ವಿವಿಧ ಹಂತದಲ್ಲಿ ಪರೀಕ್ಷಾ ಕರ್ತವ್ಯ ನಿರ್ವಹಿಸಲಿದ್ದಾರೆ.15 ಮಂದಿ ಮುಖ್ಯ ಅಧೀಕ್ಷಕರು, 8 ಉಪ ಅಧೀಕ್ಷಕರು, 317 ಕೊಠಡಿ ಮೇಲ್ವಿಚಾರಕರು, 15 ಮಂದಿ ಕಸ್ಟೋಡಿಯನ್, 15 ಮಂದಿ ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗಳು, 5 ಮಂದಿ ರೂಟ್ ಆಫೀಸರ್, 15 ಮಂದಿ ಸ್ಥಾನಿಕ ಜಾಗೃತ ದಳ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.ಇದರ ಜೊತೆಗೆ ಸುರಕ್ಷತೆಗಾಗಿ ಪ್ರತಿ ಕೇಂದ್ರಗಳಲ್ಲಿಯೂ ಪೊಲೀಸ್ ಸಿಬಂದಿಗಳು, ಆರೋಗ್ಯದ ಸುರಕ್ಷತೆಗಾಗಿ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಲಿದ್ದಾರೆ.ಪರೀಕ್ಷಾ ಕೇಂದ್ರಗಳ ಪರಿಸರ ಹಾಗೂ ಕೊಠಡಿಗಳಿಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
144 ಸೆಕ್ಷನ್ ಜಾರಿ: ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರದ ಸುತ್ತ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು ಎನ್ನುವುದೇ ನಮ್ಮ ಉದ್ದೇಶ.ಇದಕ್ಕಾಗಿ ಎಲ್ಲಾ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡಿದ್ದಾರೆ.25 ಅಂಶಗಳ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿತ್ತು.ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ಭಯಪಡಬೇಕಾದ ಅವಶ್ಯಕತೆಯಿಲ್ಲ.ಎಲ್ಲಾ ವಿದ್ಯಾರ್ಥಿಗಳು ಧೈರ್ಯದಿಂದ ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆದು ಶೇ.100 ಫಲಿತಾಂಶ
ಬರಬೇಕೆಂಬುವುದೇ ನಮ್ಮ ಹಾರೈಕೆ-
ಲೋಕೇಶ್ ಎಸ್.ಆರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು