ರೂ.1.04 ಕೋಟಿ ರೂ.ಪಾವತಿಸಿ ನಿಗಮದ ಸ್ವಾಮ್ಯಕ್ಕೆ ಪಡೆಯಲು ಅನುಮೋದನೆ
ಪುತ್ತೂರು:ಉಪ್ಪಿನಂಗಡಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿರುವ 110/11 ಕೆ.ವಿ ಸಬ್ ಸ್ಟೇಷನ್‌ಗೆ ಸರಕಾರ ಒಪ್ಪಿಗೆ ಸೂಚಿಸಿದ್ದು ಸಬ್‌ಸ್ಟೇಷನ್‌ಗೆ ಗುರುತಿಸಿದ ನೆಕ್ಕಿಲಾಡಿ ಗ್ರಾಮದ ಕರ್ವೇಲ್‌ನಲ್ಲಿ 3.26 ಎಕ್ರೆ ಜಮೀನು ಮಂಜೂರಾತಿ ಮಾಡಿ, ನಿಗದಿತ ಮೊತ್ತವನ್ನು ಪಾವತಿಸಿ ಜಮೀನನ್ನು ನಿಗಮದ ಸ್ವಾಮ್ಯಕ್ಕೆ ಪಡೆಯಲು ಕೆಪಿಟಿಸಿಎಲ್ ಅನುಮೋದನೆ ನೀಡಿದೆ.
ಕಾದಿರಿಸಿದ ಜಮೀನಿನ ಬಾಬ್ತು ಸರಕಾರಕ್ಕೆ ರೂ.1.04,97,899 ಪಾವತಿಸಲು ಕೆಪಿಟಿಸಿಎಲ್ ಅನುಮೋದನೆ ನೀಡಿದೆ. ಈ ಸಬ್‌ಸ್ಟೇಷನ್‌ಗಾಗಿ ಶಾಸಕ ಸಂಜೀವ ಮಠಂದೂರು ಅವರು 2020ರಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ನೆಕ್ಕಿಲಾಡಿ ಗ್ರಾಮದ ಕರ್ವೇಲ್‌ನಲ್ಲಿ 3.26 ಎಕ್ರೆ ಸರಕಾರಿ ಜಮೀನು 110/11 ಕೆವಿ ಸಬ್ ಸ್ಟೇಷನ್‌ಗಾಗಿ ಮಂಜೂರಾಗಿದ್ದು ಜಿಲ್ಲಾಧಿಕಾರಿಯವರು ತಿಳಿಸಿರುವಂತೆ, ಸ್ಥಳದ ಮೌಲ್ಯ, ಭೂ ಪರಿವರ್ತನಾ ಶುಲ್ಕ, ಅಳತೆ ಶುಲ್ಕ ಸೇರಿ ಒಟ್ಟು ರೂ. 1,04,97,899ರೂ.ಗಳನ್ನು ಪಾವತಿಸಿ ಚಲನ್ ಅನ್ನು ಜಿಲ್ಲಾಧಿಕಾರಿಯವರ ಕಚೇರಿಗೆ ಹಾಜರುಪಡಿಸಲು ತಿಳಿಸಿದೆ. ಹಂಚಿಕೆ ಮಾಡಿರುವ ಜಮೀನನ್ನು ನಿಗಮದ ಸ್ವಾಮ್ಯಕ್ಕೆ ಕೂಡಲೇ ಪಡೆದು ಜಮೀನಿನ ಸಂರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮ ನಿಗಮದ ನಿಯಮಾನುಸಾರ ಕೈಗೊಳ್ಳುವುದು ಮತ್ತು ತೆಗೆದುಕೊಂಡ ಕ್ರಮಕ್ಕೆ ಕಚೇರಿಗೆ ವರದಿಯನ್ನು ಸಲ್ಲಿಸುವ ಕುರಿತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಸಂಬಂಽಸಿದ ಕಛೇರಿಗಳಿಗೆ ಕಳುಹಿಸಲಾಗಿದೆ.
ತಾಲೂಕಿಗೊಂದೇ 110 ಕೆ.ವಿ ಇತ್ತು
1986ರಲ್ಲಿ ಪುತ್ತೂರು ತಾಲೂಕಿಗೆ ಪುತ್ತೂರು ನಗರಸಭೆ ವ್ಯಾಪ್ತಿಯ ಬನ್ನೂರಿನಲ್ಲಿ 110 ಕೆ.ವಿ ಸಬ್‌ಸ್ಟೇಷನ್ ಆರಂಭಗೊಂಡಿತ್ತು. ಆ ಬಳಿಕ ವಿದ್ಯುತ್ ವ್ಯತ್ಯಯಕ್ಕೆ ಸಂಬಂಧಿಸಿ 33 ಕೆ.ವಿ ಸಬ್‌ಸ್ಟೇಷನ್ ಆದರೂ ವಿದ್ಯುತ್ ಸಮಸ್ಯೆ ಸಂಪೂರ್ಣ ದೂರವಾಗಿಲ್ಲ.ಇನ್ನೊಂದು 110 ಕೆ.ವಿ ಸಬ್ ಸ್ಟೇಷನ್ ಪುತ್ತೂರು ತಾಲೂಕಿಗೆ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಉಪ್ಪಿನಂಗಡಿಯಲ್ಲಿ 110 ಕೆ.ವಿ ಸಬ್‌ಸ್ಟೇಷನ್‌ಗೆ 2020ರಲ್ಲಿ ಶಾಸಕ ಸಂಜೀವ ಮಠಂದೂರು ಅವರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಅದಕ್ಕೆ ಜಾಗ ಮಂಜೂರಾಗಿ ನಿಗಮಕ್ಕೆ ಸ್ವಾಧೀನ ಮಾಡಲು ಅನುಮೋದನೆ ನೀಡಲಾಗಿದೆ. ಇದೇ ರೀತಿಯಾಗಿ ಕೊಯಿಲದಲ್ಲೂ 1 ಎಕ್ರೆ ಜಾಗದಲ್ಲಿ 33 ಕೆ.ವಿ ಸಬ್‌ಸ್ಟೇಷನ್‌ಗೆ ಅನುದಾನ ಮಂಜೂರುಗೊಂಡಿದ್ದು ಮುಂದೆ ಟೆಂಡರ್ ಕೂಡಾ ಆಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.