ಹೊಳೆಯ ಮೀನು ಹಿಡಿಯುವುದರಲ್ಲಿ ಈ ಜೋಡಿ ನಂಬರ್ ಒನ್..
ಎಂಟು ವರ್ಷಗಳಿಂದ ಬೇಸಿಗೆಯಲ್ಲಿ ಮೀನು ಹಿಡಿಯುವ ಕಾಯಕ

0

ವರದಿ: ಸಿದ್ದಿಕ್ ಕುಂಬ್ರ

ಒಬ್ಬ ಆಟೋ ಚಾಲಕ , ಇನ್ನೊಬ್ಬ ಎಲೆಕ್ಟ್ರಿಶಿಯನ್. ಇವರಿಬ್ಬರ ಜೊತೆ ಒಂದಷ್ಟು ಯುವಕರ ದಂಡು. ಪ್ರತೀ ಬೇಸಿಗೆಯ ಕೊನೆ ದಿನಗಳಲ್ಲಿ ಇವರಿಗೆ ಹೊಳೆಯಲ್ಲಿ ಮೀನು ಹಿಡಿಯುವುದೇ ಹವ್ಯಾಸ. ಕಳೆದ ಎಂಟು ವರ್ಷಗಳ ಹಿಂದೆ ಹುಟ್ಟಿಕೊಂಡ ಇವರ ಹವ್ಯಾಸ ಇಂದು ಭಾರೀ ಗಾತ್ರದ ಮೀನುಗಳನ್ನು ಹಿಡಿಯುವ ಮೂಲಕ ಸುದ್ದಿಯಾಗುತ್ತಿದ್ದಾರೆ.

ಒಳಮೊಗ್ರು ಗ್ರಾಮದ ಅಡ್ಕ ನಿವಾಸಿ ಅಟೋ ಚಾಲಕ ಹಂಝ ಮತ್ತು ಮಗಿರೆ ನಿವಾಸಿ ಸಾದಿಕ್ ಇವರ ಕೈಯಿಂದ ಯಾವುದೇ ಮೀನು ತಪ್ಪಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಇವರಿಬ್ಬರು ಹೊಳೆಗೆ ಇಳಿದರೆ ಸಾಕು ಮೀನುಗಳೇ ಇವರ ಬಳಿ ಬಂದು ನಮ್ಮನ್ನು ಹಿಡಿಯಿರಿ ಎಂದು ಹೇಳುವಂತೆ ಇವರ ಕೈಗಳಿಗೆ ಮೀನುಗಳು ಮುತ್ತಿಕೊಳ್ಳುತ್ತದೆ. ಕೆಲವೊಂದು ಚಾಣಾಕ್ಷತನ ಕೆಲವರಿಗೆ ಮಾತ್ರ ಬರುತ್ತದೆ. ಹೊಳೆಯಲ್ಲಿ ಮೀನು ಹಿಡಿಯುವ ಚಾಣಾಕ್ಷತನ ಸದ್ಯದ ಮಟ್ಟಿಗೆ ಇವರಿಗೆ ಮಾತ್ರ ಎಂದರೂ ತಪ್ಪಾಗಲಾರದು. ಹೊಳೆಗೆ ಇಳಿದರೆ ಸಾಕು ಹೊಳೆಯ ಯಾವುದೇ ಮಾಟೆಯಲ್ಲಿದ್ದ ಯಾವುದೇ ಮೀನುಗಳನ್ನು ಹಿಡಿಯದೆ ಅಲ್ಲಿಂದ ಮೇಲಕ್ಕೆ ಬರುವುದೇ ಇಲ್ಲ.

ಹೊಳೆಯ ಮೀನಿಗೆ ಭಾರೀ ಬೇಡಿಕೆ‌

ಹೊಳೆಯ ಮೀನಿಗೆ ಭಾರೀ ಬೇಡಿಕೆ ಇದೆ, ಇದರ ರುಚಿಯೇ ಬೇರೆ. ಹೊಳೆಯಲ್ಲಿ ಸಿಗುವ ಭಾರೀ ಗಾತ್ರದ ಮೀನುಗಳಾದ ಮಲೆಜ್ಜಿ, ಮಡೆಂಜಿ, ಮುಗುಡು, ಬಾಳೆ, ನೊಳಿ ಸೇರಿದಂತೆ ಚಿಕ್ಕ ಗಾತ್ರದ ಮೀನುಗಳಾದ ಚೀರ್, ಕಲುಂಬುರ, ಕರಿ ಮೀನು, ಸರು ಸೇರಿದಂತೆ ಇನ್ನೊಂದಿಷ್ಟು ಮೀನುಗಳು. ಈ ಎಲ್ಲಾ ಜಾತಿಯ ಮೀನುಗಳು ಒಂದೆ ಗುಂಡಿಯಲ್ಲಿರುತ್ತದೆ. ಮಲೆಜ್ಜಿ ಮೀನಿನಲ್ಲಿ 14 ರಿಂದ 15 ಕೇಜಿ ತನಕದ ಮೀನುಗಳನ್ನು ಇವರು ಹಿಡಿದಿದ್ದಾರೆ. ಇವರು ಒಂದು ದಿನವೂ ಮೀನುಗಳನ್ನು ಹಣಕ್ಕೆ ಮಾರಾಟ ಮಾಡಿದ್ದಿಲ್ಲ. ಹಿಡಿದ ಮೀನು ಹೆಚ್ಚಾದರೆ ಸ್ನೇಹಿತರಿಗೆ ಹಂಚುವ ಮೂಲಕ ಎಲ್ಲರೂ ಹೊಳೆ ಮೀನಿನ ರುಚಿ ಅನುಭವಿಸುವಂತೆ ಮಾಡುತ್ತಾರೆ. ಇತ್ತೀಚೆಗೆ ಭಾರೀ ಗಾತ್ರದ ಮಲೆಜ್ಜಿ ಮೀನು ಸಿಕ್ಕಿದ್ದು ಇಷ್ಟು ದೊಡ್ಡ ಗಾತ್ರದ ಮಲೆಜ್ಜಿ ಸಿಕ್ಕಿರುವುದು ಮೊದಲಬಾರಿ ಎನ್ನುತ್ತಾರೆ ಸಾದಿಕ್‌ರವರು.

ವರ್ಷದಲ್ಲಿ ಒಂದೇ ತಿಂಗಳು

ವರ್ಷದಲ್ಲಿ ಒಂದೇ ತಿಂಗಳು ಇವರು ಈ ಕೆಲಸದಲ್ಲಿ ನಿರತರಾಗುತ್ತಾರೆ. ಬಿಡುವಿನ ಸಮಯದಲ್ಲಿ ಮೀನು ಹಿಡಿಯುವ ಕಾಯಕ್ಕೆ ತೆರಳುವಾಗ ಒಂದಷ್ಟು ಸ್ನೇಹಿತರನ್ನು ಕರೆದುಕೊಂಡು ಹೋಗುತ್ತಾರೆ. ಕುಂಬ್ರ, ವಿಟ್ಲ, ಸುಳ್ಯ ಹೀಗೇ ಎಲ್ಲೆಲ್ಲಾ ನೀರು ಬತ್ತಿ ಹೋಗುವ ಹಂತದಲ್ಲಿರುವ ಗುಂಡಿಗಳಲ್ಲಿ ಮೀನು ಹಿಡಿಯುತ್ತಾರೆ. ನದಿಗಳಲ್ಲಿ ಮೀನು ಹಿಡಿಯುವಾಗ ಸ್ಥಳೀಯರನ್ನು ಕರೆದುಕೊಂಡು ಹೋಗುತ್ತಾರೆ. ಕೆಲವೊಂದು ಕಡೆಗಳಲ್ಲಿ ಕಯಾ ಇರುವ ಸಾಧ್ಯತೆ ಇದ್ದು ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ಮಾಹಿತಿಗಾಗಿ ಒಬ್ಬ ಸ್ಥಳೀಯ ಇವರ ಜೊತೆಗಿರುವುದು ವಾಡಿಕೆ.

ಜೇನಿನಲ್ಲಿಯೂ ಎತ್ತಿದ ಕೈ

ಇವರು ಕೇವಲ ಮೀನಿನಲ್ಲಿ ಮಾತ್ರವಲ್ಲ ಜೇನು ಸಂಗ್ರಹದಲ್ಲೂ ಎತ್ತಿದ ಕೈ. ಎಲ್ಲೇ ಎಷ್ಟೇ ದೊಡ್ಡ ಜೇನಿರಲಿ ಅದನ್ನು ಜೇನು ಇದ್ದರೆ ಸಲೀಸಾಗಿ ತೆಗೆಯುತ್ತಾರೆ. ಇವರಿಗೆ ನೊಣಗಳು ಕಚ್ಚುವುದೇ ಇಲ್ಲ. ಇವರಲ್ಲಿ ಅದೇನು ಕರಾಮತ್ತು ಇದೆಯೋ ಎಂದು ಕೆಲವರು ಮೂದಲಿಸಿದ್ದೂ ಉಂಟು. ಮರಗಳಲ್ಲಿ, ಹುತ್ತಗಳಲ್ಲಿ ಜೇನು ಸಂಗ್ರಹ ಮಾಡುವುದರಲ್ಲಿಯೂ ಇವರಿಬ್ಬರೂ ಪ್ರವೀಣರು. ಇದುವರೆಗೂ ಇವರಿಬ್ಬರ ಕೈಗೆ ಒಂದೇ ಒಂದು ಜೇನು ನೊಣ ಕಚ್ಚಿದ ಉದಾಹರಣೆ ಇಲ್ಲದೇ ಇರುವುದು ಇವರ ಸಾಹಸೀ ಕೆಲಸಕ್ಕೆ ಪೃಕೃತ್ತಿಯೇ ಬೆಂಬಲವಾಗಿದೆ ಎಂಬಂತೆ ಬಾಸವಾಗುತ್ತದೆ.

ಒಳ್ಳೆ ಕಚ್ಚಿದ್ದು ಲೆಕ್ಕವಿಲ್ಲ

ಹೊಳೆಯಲ್ಲಿ ಮೀನು ತಿನ್ನಲು ಕೆಲವೊಂದು ಹಾವುಗಳು ನೀರಿಗೆ ಇಳಿಯುತ್ತದೆ. ಈ ಪೈಕಿ ವಿಷವಿಲ್ಲದ ಹಾವುಗಳೇ ಹೆಚ್ಚಾಗಿರುತ್ತದೆ. ನೀರಿನಲ್ಲೇ ಇರುವ ಒಳ್ಳೆ ಹಾವು ಅನೇಕ ಬಾರಿ ಕಚ್ಚಿದೆ. ನೀರಿನಲ್ಲಿ ಏನಾದರೂ ಕಚ್ಚಿದ ಅನುಭವವಾದರೆ ತಕ್ಷಣ ಕಚ್ಚಿದ ಜಾಗದಲ್ಲಿರುವ ಗಾಯದ ಗುರುತನ್ನು ಪರಿಶೀಲಿಸಬೇಕು. ನೀರಿನೊಳಗೆ ಇರುವ ಹಾವುಗಳೋ ಅಥವಾ ಮೀನೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಜೀವಕ್ಕೆ ಅಪಾಯ ಇಲ್ಲದೇ ಇದ್ದರೂ ಮುನ್ನೆಚ್ಚರಿಕೆ ಅಗತ್ಯವಾಗಿದೆ. ಮೀನು ಹಿಡಿಯಲು ಗೊತ್ತಿಲ್ಲದವರು ಹೊಳೆಯ ಗುಂಡಿಗೆ ಇಳಿಯಬಾರದು. ಮೀನು ಹಿಡಿಯುವಾಗ ಬಹಳ ಎಚ್ಚರವೂ ಅಗತ್ಯವಾಗಿದೆ ಎನ್ನುತ್ತಾರೆ ಹಂಝ ಅಡ್ಕರವರು

ಮೀನು ಹಿಡಿಯುವುದು ನಮ್ಮ ಹವ್ಯಾಸ ಅಷ್ಟೆ. ನೀರು ಬತ್ತಿ ಹೋಗಿ ಇನ್ನೇನು ಅದರಲ್ಲಿರುವ ಮೀನುಗಳೆಲ್ಲಾ ಸತ್ತು ಹೋಗುತ್ತವೆ ಎಂಬ ಹಂತಕ್ಕೆ ತಲುಪಿದಾಗ ಮಾತ್ರ ನಾವು ಅದನ್ನು ಹಿಡಿಯುತ್ತೇವೆ. ಭಾರೀ ಗಾತ್ರದ ಮೀನುಗಳು ನಮಗೆ ಹೊಳೆಯಲ್ಲಿ ಸಿಕ್ಕಿದೆ. ಕಳೆದ ಹಲವು ವರ್ಷಗಳಿಂದ ಮೀನು ಹಿಡಯುವವರು ನೀರಿಗೆ ವಿಷ ಹಾಕದೇ ಇರುವ ಕಾರಣಕ್ಕೆ ಹೊಳೆಯ ಗುಂಡಿಗಳಲ್ಲಿ ಧಾರಾಳ ಮೀನುಗಳು ಇದೆ. ಯಾವುದೇ ಕಾರಣಕ್ಕೂ ವಿಷ ಹಾಕಿ ಮಿನು ಹಿಡಿಯಬಾರದು ಅದರಿಂದ ಮೀನುಗಳ ಸಂತಾನ ನಾಶವಾಗುತ್ತದೆ. ಬೇಸಿಗೆಯಲ್ಲಿ ಮೀನು ಹಿಡಿಯುವುದೇ ಒಂದು ಮಜಾ.. -ಸಾದಿಕ್ ಮಗಿರೆ, ಮೀನು ಹಿಡಿಯುವ ತಂಡದ ಉಸ್ತಾದ್

LEAVE A REPLY

Please enter your comment!
Please enter your name here