ಪುತ್ತೂರು: ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಅಗತ್ಯತೆಯನ್ನು ಮನಗಂಡು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯಿಂದ ಮಾ. 30ರಂದು ಜೈನ ಭವನದಲ್ಲಿ ನಡೆಯುತ್ತಿರುವ ‘ಜನಾರೋಗ್ಯಕ್ಕಾಗಿ ನಾವು’ ಸಮಾವೇಶಕ್ಕೆ ಎಸ್‌ಕೆಎಸ್‌ಎಸ್‌ಎಫ್ ದ.ಕ. ಈಸ್ಟ್ ಜಿಲ್ಲಾ ಸಮಿತಿಯು ಬೆಂಬಲ ನೀಡಲಿದೆ ಮತ್ತು ಸಮಾವೇಶದಲ್ಲಿ ಕೈಜೋಡಿಸಲಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಅನೀಸ್ ಕೌಸರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಸ್‌ಕೆಎಸ್‌ಎಸ್‌ಎಫ್ ಈಸ್ಟ್ ಜಿಲ್ಲಾ ಸಮಿತಿಯು ಜಿಲ್ಲೆಯ ಪುತ್ತೂರು, ಸುಳ್ಯ, ಕಡಬ ಮತ್ತು ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ 115 ಶಾಖೆಗಳನ್ನು ಹೊಂದಿರುವ ಸುನ್ನೀ ವಿದ್ಯಾಥಿ೯ ಸಂಘಟನೆಯಾಗಿದೆ. ಈ ಸಂಘಟನೆಯಲ್ಲಿ 8 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಜನಾರೋಗ್ಯಕ್ಕಾಗಿ ನಾವು ಸಮಾವೇಶದಲ್ಲಿ ಪ್ರತೀ ಶಾಖೆಯಿಂದ 20 ಮಂದಿಯಂತೆ ಭಾಗವಹಿಸಲಿದ್ದಾರೆ. ಅಲ್ಲದೆ ಸಹಿ ಸಂಗ್ರಹ ಅಭಿಯಾನದಲ್ಲಿ ಎಲ್ಲಾ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಕೆಎಸ್‌ಎಸ್‌ಎಫ್ ಈಸ್ಟ್ ಜಿಲ್ಲೆ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ, ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ, ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್ ಮತ್ತು ಅಧ್ಯಾಪಕ ಇಬ್ರಾಹಿಂ ಖಲೀಲ್ ಉಪಸ್ಥಿತರಿದ್ದರು.