ಚುನಾವಣಾ ದಿನಾಂಕ ಘೋಷಣೆ; ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ

0

ಬಿಜೆಪಿಯಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ ಸಂಜೀವ ಮಠಂದೂರು: ಬದಲಾದರೆ ಯಾರು…?

ಅರುಣ್ ಪುತ್ತಿಲ, ಕಿಶೋರ್ ಬೊಟ್ಯಾಡಿ, ಯತೀಶ್ ಆರ‍್ವಾರ ಹೆಸರೂ ರೇಸ್‌ನಲ್ಲಿ

ವರದಿ: ಸಂತೋಷ್ ಕುಮಾರ್ ಶಾಂತಿನಗರ

ಪುತ್ತೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮತದಾನದ ದಿನ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದೆ. ರಾಜ್ಯಾದ್ಯಂತ ಚುನಾವಣೆಯ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮತಗಟ್ಟೆ, ಮತದಾರರ ಪಟ್ಟಿ, ಭದ್ರತೆ, ವಿದ್ಯುನ್ಮಾನ ಮತಯಂತ್ರದ ಸಿದ್ಧತೆ, ಚುನಾವಣಾ ಕಾರ್ಯಕ್ಕೆ ಸಿಬ್ಬಂದಿಗಳ ನೇಮಕ, ಮುನ್ನೆಚ್ಚರಿಕೆ, ತರಬೇತಿ ವ್ಯವಸ್ಥೆಗಳು ಸುವ್ಯವಸ್ಥಿತವಾಗಿ ನಡೆಯುತ್ತಿದೆ. ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆಗೆ ಬೇಕಾದ ಸಕಲ ತಯಾರಿ ನಡೆಸಲಾಗಿದೆ. ಅಲ್ಲಲ್ಲಿ ರಾರಾಜಿಸುತ್ತಿರುವ ಫಲಕ, ಬ್ಯಾನರ್, ಕಟೌಟ್, ಬಂಟಿಂಗ್ಸ್‌ಗಳನ್ನು ತೆರವು ಮಾಡಲಾಗುತ್ತಿದೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡಲಾಗಿದೆ. ಅಕ್ರಮ, ಅವ್ಯವಹಾರ ನಡೆಯದಂತೆ ಎಲ್ಲೆಡೆ ತಪಾಸಣೆ ಮಾಡಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಅಧಿಕಾರಿಗಳಿಂದ ಭರದ ತಯಾರಿ ನಡೆಯುತ್ತಿದೆ. ಇದರೊಂದಿಗೆ ರಾಜಕೀಯ ಪಕ್ಷಗಳಲ್ಲಿಯೂ ಬಿರುಸಿನ ಚಟುವಟಿಕೆ ನಡೆಯತೊಡಗಿದೆ. ತಮ್ಮ ಪಕ್ಷದ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲು ಕಸರತ್ತು ನಡೆಸುತ್ತಿದೆ. ಪ್ರತೀ ಚುನಾವಣೆಯ ವೇಳೆ ರಾಜ್ಯದಲ್ಲಿ ಗಮನ ಸೆಳೆಯುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರ‍್ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಮುಂದುವರಿದಿದೆ. ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಸಲದ ಚುನಾವಣೆಯ ಕುರಿತು ಜನರಲ್ಲಿ ಹೆಚ್ಚಿನ ಆಸಕ್ತಿ ಕಂಡು ಬರುತ್ತಿದೆ. ಎಲ್ಲೆಡೆಯೂ ಚುನಾವಣೆಯದ್ದೇ ಮಾತುಕತೆ ಜೋರಾಗಿದೆ. ಅದರಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಕುರಿತು ಚರ್ಚೆ ಹೆಚ್ಚಾಗಿದೆ.

ಬಿಜೆಪಿಯಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ ಸಂಜೀವ ಮಠಂದೂರು: ಬದಲಾದರೆ ಯಾರು.?:

ಬಿಜೆಪಿಯಿಂದ ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನೇ ಮತ್ತೆ ಕಣಕ್ಕಿಳಿಸಲು ಸಿದ್ಧತೆ ನಡೆದಿದೆ. ಕೊನೇಯ ಕ್ಷಣದಲ್ಲಿ ಮಠಂದೂರು ಬದಲಾದರೆ ಅವರ ಉತ್ತರಾಧಿಕಾರಿ ಯಾರು ಎಂದು ಚರ್ಚೆ ಜೋರಾಗಿ ನಡೆಯುತ್ತಿದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಕುಂತಳಾ ಶೆಟ್ಟಿಯವರ ಎದುರು ಪರಾಜಯಗೊಂಡಿದ್ದ ಮತ್ತು 2019ರ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿಯವರನ್ನು ಪರಾಜಯಗೊಳಿಸಿ ಪ್ರಥಮ ಬಾರಿ ವಿಧಾನಸಭೆ ಪ್ರವೇಶಿಸಿದ್ದ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ, ಸಹಕಾರಿ ಪ್ರಕೋಷ್ಠದ ರಾಜ್ಯ ಸಂಚಾಲಕ ಸಂಜೀವ ಮಠಂದೂರು ಅವರೇ ಮತ್ತೆ ಕಮಲ ಪಾಳಯದಿಂದ ಸ್ಪರ್ಧಿಯಾಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸೈಲೆಂಟ್ ಆಗಿರುವ ಸಂಜೀವ ಮಠಂದೂರು ಅವರು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ, ಸಂಘ ಪರಿವಾರಕ್ಕೆ ನಿಷ್ಠರಾಗಿದ್ದಾರೆ ಮತ್ತು ಪ್ರಭಾವಿ ಒಕ್ಕಲಿಗ ಸಮುದಾಯದವರಾಗಿದ್ದಾರೆ ಹಾಗೂ ಸಿಟ್ಟಿಂಗ್ ಎಂಎಲ್‌ಎಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಅವರನ್ನೇ ಮತ್ತೆ ಶಾಸಕರನ್ನಾಗಿಸಲು ಯೋಜನೆ ರೂಪಿಸಲಾಗಿದೆ. ದ.ಕ. ಸಂಸದರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಲವಾಗಿ ಸಂಜೀವ ಮಠಂದೂರು ಅವರ ಪರವಾಗಿ ನಿಂತಿದ್ದಾರೆ. ಹಾಗಾಗಿ ಸಂಜೀವ ಮಠಂದೂರು ಅವರೇ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಆದರೆ, ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರೋಧ ಇದೆ ಎಂಬ ಕಾರಣಕ್ಕಾಗಿ ಸಂಜೀವ ಮಠಂದೂರುರವರನ್ನು ಬದಲಾಯಿಸಬೇಕು ಎಂದು ಆಗ್ರಹ ಕೇಳಿ ಬಂದಿದೆ. ಈ ಬಗ್ಗೆ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆಯೂ ನಡೆದಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ.ಯವರ ಬಳಿಗೆ ಹಲವರ ಹೆಸರು ರವಾನೆಯಾಗಿದೆ. ಇದು ರಾಜ್ಯ ಬಿಜೆಪಿ ಮತ್ತು ಕೇಂದ್ರ ಬಿಜೆಪಿಯ ವರಿಷ್ಠರಿಗೂ ತಲುಪಿದೆ. ಇದರಲ್ಲಿ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದೆ. ‘ಪುತ್ತಿಲ ಫಾರ್ ಪುತ್ತೂರು’ ಎಂದು ಕಾರ್ಯಕರ್ತರು ನಡೆಸಿದ ಸೋಶಿಯಲ್ ಮೀಡಿಯಾ ಅಭಿಯಾನ ಹೈಕಮಾಂಡ್ ಅಂಗಳಕ್ಕೆ ಮುಟ್ಟಿದೆ. ಹಿಂದೂ ಸಂಘಟನೆ ಕಾರ್ಯಕರ್ತರ ‘ಹಾಟ್ ಫೇವರೀಟ್’ ಆಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಹಿಂದೂ ಸಂಘಟನೆಯ ಫೈರ್‌ಬ್ರಾಂಡ್ ನಾಯಕರು ಹೌದಾದರೂ ಅವರು ಇವತ್ತಿಗೂ ಬಿಜೆಪಿಯ ಕೆಲವು ನಾಯಕರಿಗೆ ಅಸ್ಪಶ್ಯರಾಗಿದ್ದಾರೆ. ಪಕ್ಷದ ಕಛೇರಿಯಲ್ಲಿ ಅವರ ಚಟುವಟಿಕೆಯೂ ಇರುವುದಿಲ್ಲ. ಬಜರಂಗದಳದ ಪ್ರಭಾವೀ ನಾಯಕರಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಬಳಿಕ ಶ್ರೀರಾಮಸೇನೆಯ ಮೂಲಕ ಸಂಘ ಪರಿವಾರಕ್ಕೆ ಸೆಡ್ಡು ಹೊಡೆದಿದ್ದಾರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಡಿ.ವಿ. ಸದಾನಂದ ಗೌಡರವರಿಗೆ ಸವಾಲು ಹಾಕಿ ಪುತ್ತೂರಿನಲ್ಲಿ ಶನಿಪೂಜೆ ನಡೆಸಿದ್ದಾರೆ, ಚಿಕ್ಕಮುಡ್ನೂರಿನ ಅಕ್ಷತಾ ಕೊಲೆಯನ್ನು ಖಂಡಿಸಿ ಪುತ್ತೂರು ಬಂದ್‌ಗೆ ಕರೆ ನೀಡಿ ಅಂದಿನ ಬಿಜೆಪಿ ಸರಕಾರಕ್ಕೆ ಠಕ್ಕರ್ ನೀಡಿದ್ದಾರೆ, 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿದ್ದ ಶಕುಂತಳಾ ಶೆಟ್ಟಿಯವರ ಪರವಾಗಿ ಫೀಲ್ಡ್‌ಗಿಳಿದು ಸ್ವಾಭಿಮಾನಿ ಹೋರಾಟದಲ್ಲಿ ತೊಡಗಿಸಿಕೊಂಡು ಬಿಜೆಪಿಗೆ ದ್ರೋಹ ಮಾಡಿದ್ದಾರೆ ಎಂಬುದು ಪಕ್ಷದ ಕೆಲವು ನಾಯಕರ ಆರೋಪವಾಗಿದೆ. ಬಿಜೆಪಿ ವಿರುದ್ಧ ಕೆಜೆಪಿ ಸೇರಿ ಬಿಜೆಪಿಯನ್ನು ಸೋಲಿಸಿದ್ದ ಬಿ.ಯಸ್. ಯಡಿಯೂರಪ್ಪರವರನ್ನೇ ಬಿಜೆಪಿಯವರು ಮತ್ತೆ ಸೇರಿಸಿಕೊಂಡು ಮುಖ್ಯಮಂತ್ರಿಯನ್ನಾಗಿಸಿದ್ದಾರೆ, ಹಾಗಾದರೆ ಅರುಣ್ ಕುಮಾರ್ ಪುತ್ತಿಲರವರಿಗೆ ಯಾಕೆ ಅವಕಾಶ ನೀಡಬಾರದು ಎಂಬುದು ಅವರ ಅಭಿಮಾನಿಗಳ ಪ್ರಶ್ನೆಯಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿನ ಪ್ರಮುಖ ಚರ್ಚೆಯ ವಿಷಯವೂ ಆಗಿದೆ. ಅಲ್ಲದೆ, ಅರುಣ್ ಕುಮಾರ್ ಪುತ್ತಿಲರವರನ್ನು ಕಳೆದ ಚುನಾವಣೆಯ ವೇಳೆ ಬಿಜೆಪಿ ನಾಯಕರೇ ಮನೆಗೆ ಭೇಟಿ ನೀಡಿ ಬರಮಾಡಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಈ ಬಾರಿಯಾದರೂ ಅವಕಾಶ ನೀಡಬೇಕು ಎಂಬುದು ಅರುಣ್ ಪುತ್ತಿಲ ಬೆಂಬಲಿಗರ ಒತ್ತಾಯವಾಗಿದೆ. ಸಂಜೀವ ಮಠಂದೂರೂ ಬೇಡ, ಅರುಣ್ ಕುಮಾರ್ ಪುತ್ತಿಲರೂ ಬೇಡ ಎಂದಾದರೆ ಮೆಸ್ಕಾಂ ನಿರ್ದೇಶಕರಾಗಿರುವ ಜಿಲ್ಲಾ ಬಿಜೆಪಿ ಯುವಮೋರ್ಛಾದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಜಮ್ಮು ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಉಗ್ರರ ಸವಾಲಿನ ನಡುವೆ ತ್ರಿವರ್ಣ ಧ್ವಜ ಹಾರಿಸಿರುವ ತಂಡದಲ್ಲಿದ್ದ ಸರ್ವೆ ಬೊಟ್ಯಾಡಿಯ ಕಿಶೋರ್ ಕುಮಾರ್, ಎಬಿವಿಪಿ ಮೂಲಕ ಗುರುತಿಸಿಕೊಂಡಿರುವ ಮತ್ತು ಬೆಂಗಳೂರಿನಲ್ಲಿ ತನ್ನ ಚಟುವಟಿಕೆಯ ಮೂಲಕ ಸಂಘ ಪರಿವಾರದ ಮತ್ತು ಬಿಜೆಪಿ ನಾಯಕರ ನಿಕಟ ಸಂಪರ್ಕದಲ್ಲಿರುವ ಬೆಳ್ಳಾರೆ ಕೊಡಿಯಾಲ ಆರ‍್ವಾರದ ಯತೀಶ್ ಆರ‍್ವಾರ ಅವರ ಹೆಸರು ಚರ್ಚೆಯಲ್ಲಿದೆ. ಕಿಶೋರ್ ಕುಮಾರ್ ಅವರು ಸಚಿವ ವಿ.ಸುನೀಲ್ ಕುಮಾರ್ ಅವರ ಆಪ್ತ ಎಂಬ ಕಾರಣಕ್ಕಾಗಿ ಕಳೆದ ಬಾರಿಗಿಂತ ಈ ಸಲ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಇನ್ನು ಎಂದಿನಂತೆ ಬಿಜೆಪಿಯಿಂದ ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಅವರ ಹೆಸರು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕೇಳಿ ಬರುತ್ತಿದೆಯಾದರೂ ಹಾಲಿ ಸಂಸದರನ್ನು ಶಾಸಕ ಸ್ಥಾನದ ಚುನಾವಣಾ ಕಣಕ್ಕಿಳಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಸುಳ್ಯ ಬಿಜೆಪಿಯ ನಾಯಕ ಹರೀಶ್ ಕಂಜಿಪಿಲಿ ಹೆಸರೂ ಚಾಲ್ತಿಯಲ್ಲಿದೆ. ಬಿಜೆಪಿಯ ಪ್ರಭಾವೀ ನಾಯಕ, ಮಾಸ್ಟರ್ ಮೈಂಡ್ ಬಿ.ಎಲ್.ಸಂತೋಷ್ ಅವರು ಜಾತಿಗೆ ಮಣೆ ಹಾಕುವ ಬದಲು ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಹೇಳಿರುವುದು ಮತ್ತು ಕರಾವಳಿಯ ಕೆಲವು ಹಾಲಿ ಶಾಸಕರಿಗೆ ಈ ಬಾರಿ ಅವಕಾಶ ಇಲ್ಲ ಎಂದು ಪಕ್ಷದೊಳಗೆ ನಿರ್ಧಾರವಾಗಿರುವುದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾರವರ ಕೈಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸೇರಿದೆ. ಕೆಲವೇ ದಿನಗಳಲ್ಲಿ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ.

ಕಾಂಗ್ರೆಸ್‌ನಿಂದ ಯಾರು?:

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಲವರ ಹೆಸರು ಕೇಳಿ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸುಳ್ಯ ಮೀಸಲು ಕ್ಷೇತ್ರದಿಂದ ಕೆಪಿಸಿಸಿ ಸಂಯೋಜಕ ಜಿ. ಕೃಷ್ಣಪ್ಪ, ಬಂಟ್ವಾಳದಿಂದ ಮಾಜಿ ಸಚಿವ ಬಿ. ರಮಾನಾಥ ರೈ, ಬೆಳ್ತಂಗಡಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಂಗಳೂರಿನಿಂದ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರನ್ನು ಈಗಾಗಲೇ ಕಾಂಗ್ರೆಸ್ ಕಣಕ್ಕಿಳಿಸಿದೆ. ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಮತ್ತು ಪುತ್ತೂರು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪೆಂಡಿಂಗ್ ಲಿಸ್ಟ್‌ನಲ್ಲಿಟ್ಟಿದೆ. ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಕೆಪಿಸಿಸಿಗೆ ಶುಲ್ಕ ಸಹಿತ ಅರ್ಜಿ ಸಲ್ಲಿಸಿರುವ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ, ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಜಿ.ಪಂ.ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ ಮತ್ತು ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈಯವರ ಪೈಕಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವವರು ಯಾರು ಎಂದು ಕೆಪಿಸಿಸಿ ಮತ್ತು ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆ ನಡೆದಿದೆ. ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವವರು ಅಲ್ಲದೆ ಪಕ್ಷದಲ್ಲಿ ಬೇರೆ ಯಾರಾದರೂ ಇತರ ಸಮರ್ಥರು ಇದ್ದಾರೆಯೇ ಎಂದೂ ತಲಾಶ್ ನಡೆದಿದೆ. ಜಾತಿ ಬಲ, ಹಣ ಬಲ, ಸಂಘಟನಾ ಶಕ್ತಿ, ವರ್ಚಸ್ಸು, ಮಾತುಗಾರಿಕೆ ಇರುವವರ ಅರ್ಹತೆಯನ್ನು ಪರಿಗಣಿಸಿ ಅವಕಾಶ ಕಲ್ಪಿಸಲು ಎಐಸಿಸಿ ಸಿದ್ಧತೆ ನಡೆಸಿದೆ. ಲಭ್ಯ ಮಾಹಿತಿಯ ಪ್ರಕಾರ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮತ್ತು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೆಸರು ಮಾತ್ರ ಹೈಕಮಾಂಡ್ ಪಟ್ಟಿಯಲ್ಲಿ ಉಳಿದಿದೆ. ಪುತ್ತೂರಿಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿರುವ ರಾಜ್ಯಸಭಾ ಮಾಜಿ ಸದಸ್ಯ ಬಿ.ಕೆ.ಹರಿಪ್ರಸಾದ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲಾರವರು ಹರಸಾಹಸ ಪಡುತ್ತಿದ್ದಾರೆ. ಯಾವ ಹೆಸರನ್ನು ಅಂತಿಮಗೊಳಿಸಿದರೂ ವಿರೋಧ ವ್ಯಕ್ತವಾಗುತ್ತಿದೆ, ಲಾಬಿ ಮುಂದುವರಿಯುತ್ತಿದೆ. ಪುತ್ತೂರು ಕಾಂಗ್ರೆಸ್ಸಿನಲ್ಲಿ ಗೊಂದಲ ಇರುವುದರಿಂದ ಪ್ರಥಮ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಾಗಿಲ್ಲ. ಎರಡನೇ ಪಟ್ಟಿಯಲ್ಲಿ ಅಳೆದು ತೂಗಿ ಅಂತಿಮವಾಗಿ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಪುತ್ತೂರಿನ ಕಗ್ಗಂಟನ್ನು ಸರಿಪಡಿಸಲು ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ರಂಗ ಪ್ರವೇಶ ಮಾಡುವ ಅನಿವಾರ್ಯತೆ ಎದುರಾಗಿದೆ.

LEAVE A REPLY

Please enter your comment!
Please enter your name here