ನೀತಿ ಸಂಹಿತೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ: ಪತ್ರಿಕಾಗೋಷ್ಠಿಯಲ್ಲಿ ಅಭಿದ್ ಗಡ್ಯಾಲ್

0

ವಿಟ್ಲ: ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಎಲ್ಲರೂ ಕಡ್ಡಾಯವಾಗಿ ನೀತಿ ಸಂಹಿತೆಯನ್ನು ಪಾಲಿಸಬೇಕು. ನೀತಿ ಸಂಹಿತೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ನಿಯುಕ್ತಿಗೊಂಡಿರುವ ಚುನಾವಣಾಧಿಕಾರಿ ಅಭಿದ್ ಗಡ್ಯಾಲ್ ಹೇಳಿದರು.

ಅವರು ಬಂಟ್ವಾಳ ತಾಲೂಕು ಆಡಳಿತ ಸೌಧದ ಚುನಾವಣಾಽಕಾರಿಗಳ ಕಚೇರಿಯಲ್ಲಿ ಮಾ.30ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,22,901 ಮತದಾರರಿದ್ದು ಈ ಪೈಕಿ 1,09,715 ಪುರುಷ ಹಾಗೂ 1,13,186 ಮಹಿಳಾ ಮತದಾರರಿದ್ದಾರೆ. ಇಷ್ಟು ಮತದಾರರಿಗೆ 249 ಮತಗಟ್ಟೆಗಳನ್ನು ಸಿದ್ಧಮಾಡಿಕೊಂಡಿದ್ದು ಈ ಪೈಕಿ 213 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿದ್ದು 36 ಸೂಕ್ಷ್ಮ ಮತಗಟ್ಟೆಗಳಾಗಿವೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದ್ದು ಅಧಿಕಾರಿಗಳ ತಂಡವನ್ನು ರಚಿಸಿಕೊಳ್ಳಲಾಗಿದೆ. ರಾಜಕೀಯ ಸಭೆಗಳನ್ನು ನಡೆಸಲು ಕಡ್ಡಾಯವಾಗಿ ಚುನಾವಣಾಧಿಕಾರಿ ಕಚೇರಿಯಿಂದ ಅನುಮತಿ ಪಡೆದುಕೊಳ್ಳಬೇಕು. ಅಂತಹ ಕಾರ್ಯಕ್ರಮಗಳಿಗೆ ಸುವಿಧಾ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮತಿ ನೀಡಲಾಗುವುದು. ಮದುವೆ ಮೊದಲಾದ ಖಾಸಗಿ, ಸಾಮಾಜಿಕ ಕಾರ್ಯಕ್ರಮಗಳು ಜಾತ್ರೆ ಉತ್ಸವಗಳಿಗೆ ಚುನಾವಣಾಧಿಕಾರಿಯಿಂದ ಅನುಮತಿ ಪಡೆದು ಮಾದರಿ ನೀತಿಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯಕ್ರಮ ನಡೆಸುವ ಬಗ್ಗೆ ಒಪ್ಪಿಗೆ ಪತ್ರ ನೀಡಬೇಕು ಎಂದು ತಿಳಿಸಿದರು. ಅನಿವಾರ್ಯ ಸಂದರ್ಭದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ಶೇ.40ಕ್ಕಿಂತ ಹೆಚ್ಚು ಭಾಗ ವಿಕಲ ಚೇತನರು ಅಪೇಕ್ಷೆ ಪಟ್ಟಲ್ಲಿ ಮನೆಯಿಂದಲೇ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಗಡಿಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ: ಬಂಟ್ವಾಳ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಕಣ್ಗಾವಲು ಇರಿಸಲಾಗಿದೆ. ಕಾನೂನು ಬಾಹಿರವಾಗಿ ಹಣ ಸಾಗಾಟ ಸೇರಿದಂತೆ ಎಲ್ಲಾ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗುವುದು, ಜನ ಸಾಮಾನ್ಯರು 1950 ಸಹಾಯವಾಣಿಗೆ ಕರೆ ಮಾಡಿ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರುಗಳನ್ನು ದಾಖಲಿಸಬಹುದಾಗಿದೆ.

ಚುನಾವಣಾಧಿಕಾರಿ ಕಚೇರಿಯಲ್ಲೂ ಒಂದು ಕಂಟ್ರೋಲ್ ರೂಂ ಆರಂಭವಾಗಲಿದ್ದು ದೂರುಗಳು ಬಂದಾಗ ನಮ್ಮ ತಂಡ ಅಲ್ಲಿಗೆ ಧಾವಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು. ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ ಎಸ್.ಬಿ.ಕೂಡಲಗಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here