ಪರವಾನಗಿ ಪಡೆದ ಶಸಾಸ್ತ್ರಗಳ ಠೇವಣಿಗೆ ದ.ಕ.ಜಿಲ್ಲಾಧಿಕಾರಿ ಸೂಚನೆ

0

ಮಂಗಳೂರು: ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಕಾರಣ ಜಿಲ್ಲೆಯಲ್ಲಿ ಮುಕ್ತ, ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು, ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಪರವಾನಗಿ ಪಡೆದಿರುವ ಆಯುಧಗಳನ್ನು ಠೇವಣಿ ಮಾಡುವಂತೆ ಜಿಲ್ಲಾ ದಂಡಾಧಿಕಾರಿ, ಹಾಗೂ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಬೆಳೆ ರಕ್ಷಣೆಗಾಗಿ ಶಸಾಸ್ತ್ರ ಪರವಾನಿಗೆ ಹೊಂದಿರುವ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಶಸಾಸ್ತ್ರಗಳನ್ನು ಏ.24ರೊಳಗೆ ನಮೂನೆ ಸಂಖ್ಯೆ 8ರ ಪರವಾನಿಗೆ ಹೊಂದಿರುವ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅಧಿಕೃತ ಕೋವಿ, ಮದ್ದುಗುಂಡು ವ್ಯಾಪಾರಸ್ಥರಲ್ಲಿ ಹಾಗೂ ಹತ್ತಿರದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವುದು. ಈ ಬಗ್ಗೆ ಯಾವುದೇ ಅಕ್ಷೇಪಣೆಗಳಿದ್ದಲ್ಲಿ ತಮ್ಮ ಬೆಳೆ ರಕ್ಷಣೆಗಾಗಿ ಆಯುಧದ ತೀರಾ ಅವಶ್ಯಕತೆ ಇದೆ ಎಂದಾದಲ್ಲಿ ಈ ಆದೇಶ ಹೊರಡಿಸಿದ ಒಂದು ವಾರದೊಳಗೆ ಸಂಬಂಧಪಟ್ಟ, ಪೂರಕ ದಾಖಲೆಗಳೊಂದಿಗೆ ತಹಶೀಲ್ದಾರರಿಗೆ ಅಹವಾಲುಗಳನ್ನು ಸಲ್ಲಿಸುವುದು.

ಮೇ.20ರ ನಂತರ ಆಯುಧ ಠೇವಣಿ ಪಡೆದ ಅಧಿಕಾರಿಗಳು ಆಯುಧಗಳನ್ನು ಠೇವಣಿದಾರರಿಗೆ ಹಿಂತಿರುಗಿಸುವಂತೆಯೂ ಪರವಾನಿಗೆಗಾರರು ಆಯುಧವನ್ನು ಮರು ಪಡೆದುಕೊಳ್ಳಬಹುದಾಗಿದೆ. ಜಿಲ್ಲಾಧಿಕಾರಿಯವರಿಂದ ಮಂಜೂರಾದ ಜಿಲ್ಲೆಯ ಎಲ್ಲಾ ಆಯುಧ ಪರವಾನಿಗೆದಾರರು ಜಿಲ್ಲಾಧಿಕಾರಿಯವರ ಅಧಿಕಾರ ವ್ಯಾಪ್ತಿಯೊಳಗೆ ಆಯುಧಗಳನ್ನು ಠೇವಣಿ ಇರಿಸಬೇಕು. ಜಿಲ್ಲೆಯ ಎಲ್ಲಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರು ಹಾಗೂ ಪೊಲೀಸ್ ಠಾಣೆಗಳಲ್ಲಿ ಶಸಾಸ ನಿಯಮ 2016 ನಿಯಮ-48 ರಲ್ಲಿ ತಿಳಿಸಿರುವಂತೆ ಪ್ರತೀ ಆಯುಧಗಳಿಗೆ ತಿಂಗಳಿಗೆ 200 ರೂ.ಗಳಂತೆ ಹಾಗೂ ಮದ್ದುಗುಂಡುಗಳಿಗೆ 100 ರೂ. ಗಳಂತೆ ಆಯುಧ ಪರವಾನಿಗೆದಾರರಿಂದ ಪಡೆದು ಸರ್ಕಾರಕ್ಕೆ ಜಮೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here