ಏ.10ರಿಂದ ಪುತ್ತೂರು ಜಾತ್ರೆ ಆರಂಭ ; ಈ ಬಾರಿ ಶೂನ್ಯ ತ್ಯಾಜ್ಯ ಜಾತ್ರೆಯ ಉದ್ದೇಶ-ಸಾಂಪ್ರದಾಯಿಕ ಉಡುಗೆಗೆ ಅದ್ಯತೆಗೆ ವಿನಂತಿ

0

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಗೆ ಭಕ್ತರ ಪೂರ್ಣ ಸಹಕಾರವಿದೆ. ಕಳೆದ ವರ್ಷದಿಂದ ಜಾತ್ರೆಯ ಸಂದರ್ಭದಲ್ಲಿ 11 ದಿವಸ ಮಹಾರುದ್ರಯಾಗ ನಡೆಯುತ್ತಿದೆ. ಶೂನ್ಯ ತ್ಯಾಜ್ಯ ಜಾತ್ರೆ, ಶ್ರೀ ದೇವರ ನಿತ್ಯ ಉತ್ಸವ, ಪೇಟೆ ಸವಾರಿ, ಕಟ್ಟೆಪೂಜೆಗಳಲ್ಲಿ ಪ್ರತಿ ವರ್ಷದಂತೆ ಸಂಪ್ರದಾಯ ರೀತಿಯಲ್ಲಿ ನಡೆಯಲಿದೆ. ಭಕ್ತರು ಕೂಡಾ ಜಾತ್ರೆಯ ಸಂದರ್ಭದಲ್ಲಿ ಆದಷ್ಟು ಸಾಂಪ್ರದಾಯಿಕ ಉಡುಗೆಗಳಲ್ಲಿ ಆಗಮಿಸಿ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ವಿನಂತಿಸಿದ್ದಾರೆ.

ದೇವಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಾತ್ರೆ ಸಂದರ್ಭ 11 ದಿವಸ ಮಹಾರುದ್ರಯಾಗ ನಡೆಯಲಿದೆ. ರಾಜ್ಯದ ವಿವಿಧ ಕಡೆಗಳಿಂದ ಕರ್ತೃಗಳಾಗಿ ಭಾಗವಹಿಸುತ್ತಾರೆ. ಅದೇ ರೀತಿ ‘ಶೂನ್ಯ ತ್ಯಾಜ್ಯ ಜಾತ್ರೆ’ಯ ಉದ್ದೇಶವಿಟ್ಟುಕೊಂಡಿದ್ದೇವೆ. ದೇವಳದ ಜಾತ್ರೆ ಗದ್ದೆಯಲ್ಲಿ ಉತ್ಪತ್ತಿಯಾಗುವ ಕಸಗಳನ್ನು ಸಂತೆ ವ್ಯಾಪಾರಸ್ಥರು ಹಸಿ ಮತ್ತು ಒಣಕಸವೆಂದು ವಿಂಗಡಿಸಿ ಕೊಟ್ಟಲ್ಲಿ ಅದನ್ನು ದೇವಳದ ಬೃಹತ್ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸೆಗ್ರೇಷನ್ ಮಾಡಿ ಗೊಬ್ಬರವನ್ನಾಗಿ ಮಾಡಲಾಗುತ್ತದೆ.ಈ ಬಾರಿ ಜಾತ್ರೆಯ ಧಾರ್ಮಿಕ ಕಾರ್ಯಕ್ರಮ ಪುಷ್ಕರಣಿಯ ಮಂಟಪ ಪೂಜೆಯ ಮೂಲಕ ಆರಂಭಗೊಳ್ಳಲಿದೆ. ಏ.9ಕ್ಕೆ ನೂತನ ಶಿಲಾಮಯ ಪುಷ್ಕರಣಿಯ ಕಟ್ಟೆಗೆ ರಾತ್ರಿ ವಾಸ್ತು ಹೋಮಾದಿಗಳು ನಡೆಯಲಿದೆ. ಏ.10ಕ್ಕೆ ಧ್ವಜಾರೋಹಣದ ಬಳಿಕ ಶಿಲಾಮಯ ಕಟ್ಟೆಗೆ ಪೂಜೆ ನಡೆಯಲಿದೆ. ಅದೇ ದಿನ ಸಂಜೆಯಿಂದ ಶ್ರೀ ದೇವರ ಪೇಟೆ ಸವಾರಿ ಆರಂಭಗೊಳ್ಳಲಿದೆ. ಏ.15ಕ್ಕೆ ಸೌರಮಾನ ಯುಗಾದಿ ವಿಶೇಷ ಕಾರ್ಯಕ್ರಮ, ಉತ್ಸವ, ಬಂಡಿ ಉತ್ಸವ, ಏ.16ಕ್ಕೆ ತುಲಾಭಾರ ಸೇವೆ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ, ಪಾಲಕಿ ಉತ್ಸವ, ಸಣ್ಣರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ. ಏ.17ರಂದು ದರ್ಶನ ಬಲಿ, ರಾತ್ರಿ ಸಿಡಿಮದ್ದು ಪ್ರದರ್ಶನದ ‘ಪುತ್ತೂರು ಬೆಡಿ’, ಬ್ರಹ್ಮರಥೋತ್ಸವ ನಡೆಯಲಿದೆ. ಏ.18ಕ್ಕೆ ಕವಾಟೋದ್ಘಾಟನೆ, ವೀರಮಂಗಲ ಅವಭೃತ ಸವಾರಿ, ಏ.19ಕ್ಕೆ ಧ್ವಜಾವರೋಹಣ, ರಾತ್ರಿ ಚೂರ್ಣೋತ್ಸವ, ಹುಲಿಭೂತ, ರಕ್ತೇಶ್ವರಿ ನೇಮ,ಏ.20ಕ್ಕೆ ಅಂಜಣತ್ತಾಯ ಪಂಜುರ್ಲಿ ವಗೈರೆ ದೈವಗಳ ನೇಮ ನಡೆಯಲಿದೆ. ಪ್ರತಿ ದಿನ ಸಂಜೆ ದೇವಳದ ಎದುರು ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದ ಅಧ್ಯಕ್ಷರು, ಪುತ್ತೂರು ಜಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಸೇರುತ್ತಾರೆ. ಇಂತಹ ಸಂದರ್ಭದಲ್ಲಿ ಭಕ್ತರಿಗೆ ಮಧ್ಯಾಹ್ನ ಪೂಜೆಯ ಬಳಿಕ ಅನ್ನಪ್ರಸಾದ ವಿತರಣೆ ನಡೆಯುತ್ತದೆ. ಅನ್ನಬ್ರಹ್ಮನ ಯಜ್ಞ ಸೇವೆಗೂ ಭಕ್ತರಿಗೆ ಅವಕಾಶವಿದೆ ಎಂದರು.

ಬಟ್ಟಲು ಕಾಣಿಕೆ ಸಂದರ್ಭ ಪಾಠಕರ ಉದ್ಘೋಷಣೆ: ಏ.17ರಂದು ಶ್ರೀ ದೇವರ ದರ್ಶನ ಬಲಿಯ ಬಳಿಕ ಬಟ್ಟಲು ಕಾಣಿಕೆಯನ್ನು ಸುಸೂತ್ರವಾಗಿ ನೆರವೇರಿಸಲು ಪಾಠಕರ ಉದ್ಘೋಷಣೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ದೇವಳದ ಆಡಳಿತ ವರ್ಗ, ತಂತ್ರಿ, ಅರ್ಚಕರು, ಹಿಂದಿನ ಆಡಳಿತ ಮೊಕ್ತೇಸರರು, ಮಾಜಿ ಅಧ್ಯಕ್ಷರಿಗೆ ಗೌರವ ಪೂರ್ವಕವಾಗಿ ಕರೆಯುವ ವಿಧಾನವಿದು. ಈ ರೀತಿಯ ಸಂಪ್ರದಾಯ ಇತರ ಹಿರಿಯ ದೊಡ್ಡ ದೇವಸ್ಥಾನಗಳಲ್ಲಿ ಇದೆ. ಅದನ್ನು ಇಲ್ಲಿಯೂ ಆರಂಭಿಸಲಾಗುವುದು ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ಅವಭೃತ ಸ್ನಾನಘಟ್ಟದಲ್ಲಿ ವ್ಯವಸ್ಥೆ: ಶ್ರೀದೇವರ ಅವಭೃತ ಸವಾರಿಯ ಸಂದರ್ಭ ಶ್ರೀ ದೇವರ ಜೊತೆ ಬರುವ ಮಹಿಳೆಯರಿಗಾಗಿ 3 ಕಡೆ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಅವಭೃತ ಸ್ನಾನಘಟ್ಟದಲ್ಲಿ ಕಾರ್ಯನಿರ್ವಹಣಾಧಿಕಾರಿಯವರ ಮುತುವರ್ಜಿಯಲ್ಲಿ ವಿವಿಧ ಕಾಮಗಾರಿಗಳು ನಡೆದಿವೆ. ಅದೇ ರೀತಿ ಆ ಕಟ್ಟೆಯ ಸುತ್ತ 5 ಸೆಂಟ್ಸ್ ಜಾಗವನ್ನು ಆ ಭಾಗದ ಜನರ ಮೂಲಕ ದೇವಳಕ್ಕೆ ನೀಡಲಾಗುತ್ತಿದೆ. ಕಟ್ಟೆಯನ್ನು ಸುಂದರಗೊಳಿಸಲಾಗಿದೆ ಎಂದು ಕೇಶವಪ್ರಸಾದ್ ಹೇಳಿದರು.

ಬಂಗಾರ್ ಕಾಯರ್ ಕಟ್ಟೆಯೂ ನವೀಕರಣ: ಏ.17ರಂದು ಬ್ರಹ್ಮರಥೋತ್ಸವದ ಬಳಿಕ ಶ್ರೀ ದೇವರು ಉಳ್ಳಾಲ್ತಿ ಅಮ್ಮನವರ ಬೀಳ್ಕೊಡುವ ಸವಾರಿಗೆ ಹೋಗುವ ಸಂದರ್ಭ ಸಿಗುವ ಬಂಗಾರ್ ಕಾಯರ್ ಕಟ್ಟೆಯನ್ನು ಈ ಬಾರಿ ಸಮಿತಿ ಸದಸ್ಯ ರಾಮದಾಸ್ ಗೌಡ ಅವರ ಮುತುವರ್ಜಿಯಲ್ಲಿ ಆ ಭಾಗದ ದಾನಿಗಳಿಂದ ನವೀಕರಣ ಮಾಡಲಾಗಿದೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ಪುತ್ತೂರು ಬೆಡಿ ಆಕರ್ಷಣೆ: ಪುತ್ತೂರು ಜಾತ್ರೆಯಲ್ಲಿ ‘ಪುತ್ತೂರು ಬೆಡಿ’ಗೆ ವಿಶೇಷ ಹೆಸರಿದೆ.ಈ ನಿಟ್ಟಿನಲ್ಲಿ ಸಿಡಿಮದ್ದು ಪ್ರದರ್ಶನದ ಮೊದಲು ಅದರ ಅಣಕು ಪ್ರದರ್ಶನ ನೋಡಿದ್ದೇವೆ. ಅದರಲ್ಲಿ ಆಯ್ಕೆ ಮಾಡಿ ಸುಮಾರು ರೂ.7 ಲಕ್ಷ ವೆಚ್ಚದಲ್ಲಿ ಪುತ್ತೂರು ಬೆಡಿ ಪ್ರದರ್ಶನಗೊಳ್ಳಲಿದೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ಕಟ್ಟೆಗಳ ಅಲಂಕಾರಕ್ಕೆ ದೇವಳದಿಂದ ಅನುಮತಿ ಪತ್ರ: ಚುನಾವಣೆ ಸಂದರ್ಭ ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ದೇವಳಕ್ಕೆ ಸಂಬಂಧಿಸಿ 152 ಕಟ್ಟೆಗಳಲ್ಲಿಯೂ ಬಂಟಿಂಗ್ಸ್ ಮತ್ತು ಅಲಂಕಾರಗಳಿಗೆ ದೇವಳದ ಮೂಲಕ ಕಟ್ಟೆಗಳ ಪರವಾಗಿ ಇಲಾಖೆಯಿಂದ ಅನುಮತಿ ಪತ್ರ ಪಡೆದುಕೊಳ್ಳಲಾಗುವುದು.ಸಂಬಂಧಿಸಿದ ಕಟ್ಟೆಗಳ ಪ್ರತಿನಿಧಿಗಳು ದೇವಳಕ್ಕೆ ಬಂದು ಆ ಅನುಮತಿ ಪತ್ರವನ್ನು ಸರಕಾರಿ ಶುಲ್ಕ ಪಾವತಿಸಿ ಪಡೆಯಬಹುದು ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ವಿಷುಕಣಿಗೆ ದೇವಳಕ್ಕೆ ತರಕಾರಿ ಅಲಂಕಾರ: ವಿಷುಕಣಿ ದಿವಸ ದೇವಳವನ್ನು ಸಂಪೂರ್ಣವಾಗಿ ತರಕಾರಿಗಳಿಂದ ಅಲಂಕಾರಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಭಕ್ತರು ತರಕಾರಿ ನೀಡಿ ಸಹಕರಿಸುವಂತೆ ವಿನಂತಿಸಿದ ಅಧ್ಯಕ್ಷರು, ಏ.18ರಂದು ಬೆಳಿಗ್ಗೆ ನಡೆಯುವ ಕವಾಟೋದ್ಘಾಟನೆಯನ್ನು ಎಲ್‌ಇಡಿ ಪರದೆಯ ಮೂಲಕ ಭಕ್ತರಿಗೆ ನೋಡಲು ಅವಕಾಶ ಮಾಡಲಾಗುವುದು ಎಂದರು.

ಚುನಾವಣಾ ನೀತಿ ಸಂಹಿತೆಯಿಂದ ಬಹುತೇಕ ಗೃಹರಕ್ಷದಳದಿಂದಲೇ ಭದ್ರತೆ: ಭದ್ರತೆ, ಆರೋಗ್ಯ, ಶುಚಿತ್ವ, ಗದ್ದೆಯ ವ್ಯವಸ್ಥೆಯ ಕುರಿತು ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಅವರು ಮಾತನಾಡಿ ಈ ಬಾರಿ ಪುತ್ತೂರು ಜಾತ್ರೆಯ ಸಂದರ್ಭ ಚುನಾವಣೆಯ ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಪೊಲೀಸರು ಭದ್ರತೆಗೆ ಲಭ್ಯವಾಗುವುದಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ನಾವು ಗೃಹರಕ್ಷಕ ದಳದವರಿಗೆ ಮನವಿ ಮಾಡಿದ್ದೇವೆ. ಏ.10ರಿಂದ 14ರ ತನಕ 25 ಮಂದಿ ಗೃಹರಕ್ಷಕದಳದ ಸಿಬ್ಬಂದಿಗಳು, ಏ.15 ರಿಂದ 19ರ ತನಕ 80 ಮಂದಿ ಗೃಹರಕ್ಷಕದಳದವರು ಕರ್ತವ್ಯ ನಿರ್ವಹಿಸಲಿದ್ದಾರೆ. ಏ.16 ಮತ್ತು 17ಕ್ಕೆ ಹೆಚ್ಚುವರಿಯಾಗಿ ಮಹಿಳಾ ಪೊಲೀಸ್ ಸಿಬ್ಬಂದಿಗಳೂ ಇರುತ್ತಾರೆ. ಏ.16 ಮತ್ತು 17ಕ್ಕೆ ಭಕ್ತರ ಸಂಖ್ಯೆ ಅಧಿಕವಾಗುವ ಸಂದರ್ಭ ವಾಹನ ಪಾರ್ಕಿಂಗ್‌ಗೆ ಕಿಲ್ಲೆ ಮೈದಾನ, ಜೈನಭವನ, ತೆಂಕಿಲ ವಿವೇಕಾನಂದ ಶಾಲೆ ಮೈದಾನ, ಅಸ್ಮಿ ಟವರ‍್ಸ್ ಬಳಿ, ಬಂಟರ ಭವನದ ಬಳಿ, ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಮೇಲಿನ ಮೈದಾನ, ಎಪಿಎಂಸಿ ಬಳಿ ಪಾರ್ಕಿಂಗ್‌ಗೆ ಮನವಿ ಮಾಡಲಾಗಿದೆ. ನಗರಸಭೆಯಿಂದ ನೀರಿನ ಪೂರೈಕೆ, ಆರೋಗ್ಯ ಇಲಾಖೆಯಿಂದ ಆರೋಗ್ಯ ಸೇವೆ ಸಿಗಲಿದೆ.ಏ.16 ಮತ್ತು 17ಕ್ಕೆ ಕೆಎಸ್‌ಆರ್‌ಟಿಸಿ ಸಂಸ್ಥೆಯಿಂದ ಹೆಚ್ಚುವರಿಯಾಗಿ 60 ಬಸ್‌ಗಳ ಓಡಾಟ ನಡೆಯಲಿದೆ. ಸಂತೆಯಲ್ಲಿ ಎಲ್ಲಾ ಅಂಗಡಿಯವರು ಒಣ ಮತ್ತು ಹಸಿ ಕಸ ಪ್ರತ್ಯೇಕಿಸಿಕೊಟ್ಟಲ್ಲಿ ಅದರ ಸಂಗ್ರಹ ವ್ಯವಸ್ಥೆ ನಡೆಯಲಿದೆ ಎಂದರು.

500 ಮಂದಿ ನಿತ್ಯ ಕರಸೇವಕರು, ಸ್ವಯಂ ಸೇವಕರು: ಸ್ವಯಂ ಸೇವಕರು ಸಹಿತ ಗದ್ದೆಯ ಜವಾಬ್ದಾರಿ ವಹಿಸಿಕೊಂಡ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಅವರು ಮಾತನಾಡಿ ಜಾತ್ರೆಗೆ ಸಂಬಂಧಿಸಿ ಭಕ್ತರಿಗೆ ವಿವಿಧ ರೀತಿಯ ಸೇವೆ ಮತ್ತು ಧಾರ್ಮಿಕ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಸ್ವಯಂ ಸೇವಕರ ಅಗತ್ಯತೆ ಬಹಳಷ್ಟಿದೆ.ಈ ನಿಟ್ಟಿನಲ್ಲಿ ದೇವಳದ ನಿತ್ಯ ಕರಸೇವಕರು ಮತ್ತು ಸ್ವಯಂ ಸೇವಕರು ಸೇರಿ ಒಟ್ಟು 500 ಮಂದಿಯನ್ನು ವಿಭಾಗಗಳನ್ನಾಗಿ ಮಾಡಲಾಗಿದೆ.ನಿತ್ಯ ಕರಸೇವಕರು ಸಹಿತ ವಿವಿಧ ಜಾತಿ ಸಮುದಾಯ, ಯುವಕ ಮಂಡಲ ಸೇರುವ ಜೊತೆಗೆ ಸುಮಾರು 40 ಭಜನಾ ಮಂಡಳಿಯವರು ಸೇವಾಕಾರ್ಯದಲ್ಲಿ ಭಾಗವಹಿಸಲಿದ್ದಾರೆ.ಜಾತ್ರೆಯ ಗದ್ದೆಯಲ್ಲಿ ಎರಡು ಜಾಯಿಂಟ್ ವೀಲ್, 250 ಸ್ಟಾಲ್‌ಗಳು ಬರಲಿದೆ.ಆರೋಗ್ಯ, ಅಗ್ನಿಶಾಮಕದಳದ ಸೇವೆಯೂ ಇರಲಿದೆ. ಹಿಂದುಗಳಿಗೆ ಮಾತ್ರ ಅಂಗಡಿಗಳನ್ನು ನೀಡಲಾಗಿದೆ. ಏ.9ಕ್ಕೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶುಚಿರುಚಿಯಾದ ಅನ್ನಪ್ರಸಾದ: ಅನ್ನಪ್ರಸಾದ ಮತ್ತು ಹೊರೆಕಾಣಿಕೆ ಜವಾಬ್ದಾರಿ ವಹಿಸಿಕೊಂಡಿರುವ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಅವರು ಮಾತನಾಡಿ, ಜಾತ್ರೆಯ ಸಂದರ್ಭ ಶುಚಿರುಚಿಯಾದ ಅನ್ನಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಪೂಜೆಯ ಬಳಿಕ ದೇವಳದ ಬಲಭಾಗದಲ್ಲಿರುವ ಬೃಹತ್ ಪೆಂಡಾಲ್ ಅಡಿಯಲ್ಲೇ ಅನ್ನಪ್ರಸಾದ ವಿತರಣೆ ನಡೆಯಲಿದೆ. ಏ.8ರಂದು ನಡೆಯುವ ಹೊರೆಕಾಣಿಕೆ ಮೆರವಣಿಗೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳೆಯರು ಕಲಶದೊಂದಿಗೆ ಭಾಗವಹಿಸಲಿದ್ದಾರೆ. ಮೆರವಣಿಗೆಯಲ್ಲಿ ಕುಣಿತ ಭಜನೆ, ಕೊಂಬು, ಕಹಳೆ, ವಾದ್ಯಗಳಿದ್ದು, ಬೊಳುವಾರು ಮತ್ತು ದರ್ಬೆಯಿಂದ ಮೆರವಣಿಗೆ ಆರಂಭಗೊಳ್ಳಲಿದೆ ಎಂದು ಹೇಳಿದರು.

54 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ: ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿರುವ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ ನಾಯ್ಕ್ ಅವರು ಮಾತನಾಡಿ ಜಾತ್ರೆಯ ಸಲುವಾಗಿ ಎ.17ರ ಬ್ರಹ್ಮರಥೋತ್ಸವದ ಸಂದರ್ಭ ಬಿಟ್ಟು ಉಳಿದ ದಿನ ಏ.10 ರಿಂದ 20ರ ತನಕ ಪ್ರತಿ ದಿನ ಸಂಜೆಯಿಂದ ರಾತ್ರಿ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ದೇವಳದ ಎದುರು ಗದ್ದೆಯಲ್ಲಿ ನಡೆಯಲಿದೆ. ಕಳೆದ ಬಾರಿಯ ವೇದಿಕೆಯ ಬದಲು ದೇವಳದ ಬಲಭಾಗದಲ್ಲಿರುವ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 5ರಿಂದ ರಾತ್ರಿ ಗಂಟೆ 11ರ ಒಳಗೆ ಕಾರ್ಯಕ್ರಮ ಮುಗಿಯಲಿದೆ. ಸುಮಾರು 54 ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿವೆ ಎಂದು ಹೇಳಿದರು.

ಪಂಜುರ್ಲಿ ದೈವಕ್ಕೆ ಅಣಿ, ಹುಲಿಭೂತಕ್ಕೆ ನಾಲಿಗೆ: ಜಾತ್ರೆಯ ದೇವರು ಹೊರಡುವ ಮತ್ತು ಕಟ್ಟೆ ಪೂಜೆಗಳಿಗೆ ಸಂಬಂಧಿಸಿ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ಅವರು ಮಾತನಾಡಿ ಜಾತ್ರೆಯಂದು ಪ್ರತಿ ದಿನ ಸಂಜೆ ಗಂಟೆ 5ಕ್ಕೆ ಗರ್ಭಗುಡಿಯಿಂದ ದೇವರ ಒಳಾಂಗಣ ಸುತ್ತು ಆರಂಭವಾಗಲಿದೆ. ಬಳಿಕ ರಾಜಾಂಗಣಕ್ಕೆ ದೇವರು ಬಂದು ಕಟ್ಟೆ ಪೂಜೆ ಬಳಿಕ ಪೇಟೆ ಸವಾರಿ ನಡೆಯಲಿದೆ. ಈ ಬಾರಿ ಏ.11ರಂದು ಅಷ್ಟಾವಧಾನ ಸೇವೆ ನಡೆಯಲಿದೆ. ಅದೇ ರೀತಿ ವಿಶೇಷವಾಗಿ ಏ.20ರಂದು ದೇವಳದ ಕೆರೆಯ ಬಳಿ ನಡೆಯುವ ಪಂಜುರ್ಲಿ ನೇಮದಲ್ಲಿ ಪಂಜುರ್ಲಿ ದೈವಕ್ಕೆ ಅಣಿ ಕಟ್ಟಿ ನೇಮೋತ್ಸವ ನಡೆಯಲಿದೆ. ಹುಲಿ ಭೂತಕ್ಕೆ ನಾಲಿಗೆ ಸಮರ್ಪಣೆಯೂ ನಡೆಯಲಿದೆ ಎಂದು ಹೇಳಿದರು.

ಭಜನೆಯೊಂದಿಗೆ ಸ್ವಯಂ ಸೇವಕರು: ಭಜನಾ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸುವ ವ್ಯವಸ್ಥಾಪನಾ ಸಮಿತಿ ಸದಸ್ಯೆ ವೀಣಾ ಬಿ.ಕೆ ಅವರು ಮಾತನಾಡಿ ಏ.10ರಿಂದ 21ರ ತನಕ ವಿವಿಧ ಭಜನಾ ತಂಡದಿಂದ ಭಜನೆಯ ಸೇವೆ ನಡೆಯಲಿದೆ. ವಿಶೇಷ ಎಂದರೆ ಭಜನೆ ತಂಡದವರು ಸ್ವಯಂ ಸೇವಕರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗೆ ಮೂರು ಭಜನಾ ತಂಡ, ಸಂಜೆ ಗಂಟೆ 4ರಿಂದ 5ರ ತನಕ ನಿತ್ಯ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.ಧಾರ್ಮಿಕ ಶಿಕ್ಷಣದ ಮಕ್ಕಳು ಮತ್ತು ಹೆತ್ತವರ ಭಜನಾ ತಂಡವೂ ಭಜನಾ ಕಾರ್ಯಕ್ರಮ ನೀಡಲಿದೆ ಎಂದರು.

ಬ್ರಹ್ಮರಥ ಎಳೆಯುವ ಭಕ್ತರು ಪಂಚೆ/ಶಲ್ಯ/ಕಚ್ಚೆ ಧರಿಸಿರಬೇಕು: ಬ್ರಹ್ಮರಥ ಎಳೆಯುವ ಭಕ್ತರು ಪಂಚೆ/ಶಲ್ಯ/ಕಚ್ಚೆ ಧರಿಸಿರಬೇಕು.ಸಂಪ್ರದಾಯ ತೊಡುಗೆ ಅಗತ್ಯದ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.ಬ್ರಹ್ಮರಥ ಎಳೆಯುವ ರಥ ಬೀದಿಯ ಉದ್ದಕ್ಕೂ ಬಫರ್ ಝೋನ್ ಮಾಡಲಾಗುತ್ತದೆ.ಕಚ್ಚೆ ಧರಿಸಲು ಗೊತ್ತಿಲ್ಲದವರಿಗೆ ಏ.9ರಂದು ದೇವಳದ ಕಚೇರಿಯಲ್ಲಿ ಕಚ್ಛೆ ಧರಿಸುವ ಕುರಿತು ತರಬೇತಿ ನೀಡಲಾಗುತ್ತದೆ.ಆದಷ್ಟು ಯುವಜನತೆ ಬಂದು ಕಚ್ಛೆ ಧರಿಸುವುದನ್ನು ಕಲಿಯಬೇಕೆಂದು ಕೇಶವಪ್ರಸಾದ್ ಮುಳಿಯ ವಿನಂತಿಸಿದರು.

ಬಲ್ನಾಡು ದೈವಸ್ಥಾನಕ್ಕೆ ಮಹಾಲಿಂಗೇಶ್ವರ ಗೋ ಶಾಲೆಯಿಂದ ಬಸವ : ಬಲ್ನಾಡು ದೈವಸ್ಥಾನಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋ ಶಾಲೆಯಿಂದ ಬಸವ ನೀಡುವ ಯೋಜನೆ ಇದೆ.ಈ ಕುರಿತು ದೈವಸ್ಥಾನದಿಂದ ಮನವಿಯೂ ಬಂದಿದೆ.ಮುಂದಿನ ನೇಮೋತ್ಸವದ ಸಂದರ್ಭ ಬಸವ ಒಪ್ಪಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು.

ಜಲಸಂಪನ್ಮೂಲಕ್ಕೆ ವರುಣ ದೇವರ ವಿಶೇಷ ಪೂಜೆ: ಪುಷ್ಕರಣಿಯ ಜೀರ್ಣೋದ್ದಾರ ಸಂದರ್ಭ ವರುಣ ವಿಗ್ರಹ ಕಂಡಿದ್ದು, ಬ್ರಿಟೀಷ್ ಆಡಳಿತವಿದ್ದ ಸಂದರ್ಭ ಬರಗಾಲದಲ್ಲೂ ದೇವಳದ ಕೆರೆಯಲ್ಲಿ ನೀರಿತ್ತು ಎಂದು ಅವರ ದಾಖಲೆಯಲ್ಲಿದೆ. ಹಾಗಾಗಿ ಪುಷ್ಕರಣಿಯಲ್ಲಿರುವ ವರುಣ ವಿಗ್ರಹವನ್ನು ಜಲಸಂಪನ್ಮೂಲವಾಗಿ ಪೂಜೆ ಮಾಡಲು ಅವಕಾಶವಿದೆ. ಏ.10ರಂದು ಬೆಳಗ್ಗಿನಿಂದ ಸಂಜೆಯ ತನಕ ಭಕ್ತರಿಗೆ ವರುಣ ದೇವರ ವಿಗ್ರಹ ದರುಶನಕ್ಕೆ ಅವಕಾಶವಿದ್ದು, ವಿವಿಧ ಸೇವೆ ಮಾಡಿಸಬಹುದು. ಆದರೆ ಪುಷ್ಕರಣಿಯ ಬಳಿ ಬರುವಾಗ ಶುದ್ದತೆಯನ್ನು ಕಾಪಾಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ಧಾರೆ.

LEAVE A REPLY

Please enter your comment!
Please enter your name here