ಉಪ್ಪಿನಂಗಡಿ: ಹಿಜಾಬ್ ವಿಷಯದಲ್ಲಿ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿದ್ದ ಗಲಾಟೆ- ಗದ್ದಲಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಕೆಲ ವಿದ್ಯಾರ್ಥಿಗಳ ಗುಂಪು ಹಾಗೂ ಹೊರಗಿನ ವ್ಯಕ್ತಿಯೋರ್ವ ಸೇರಿಕೊಂಡು ದಿಗ್ಭಂಧನ ವಿಧಿಸಿ, ದೈಹಿಕ ತಳ್ಳಾಟ ನಡೆಸಿದ ಬಗ್ಗೆ ನೀಡಿದ್ದ ದೂರಿಗೆ ಸಂಬಂಧಿಸಿ ಇದೀಗ ಪೊಲೀಸರು, ಇದು ಸಾಕ್ಷ್ಯಾಧಾರಗಳಿಲ್ಲದ ಪ್ರಕರಣವೆಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಬಗ್ಗೆ ದೂರುದಾರರಿಗೆ ಇಲಾಖಾ ನೊಟೀಸ್ ಜಾರಿ ಮಾಡಿದ್ದಾರೆ.
ಕಳೆದ ಜೂ. 2ರಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿರುವ ದೃಶ್ಯ ಮಾಧ್ಯಮದ ಪ್ರತಿನಿಧಿ ಅಜಿತ್ ಕುಮಾರ್ ಕೆ., ಕಾಲೇಜಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅಧಿಕೃತ ಮಾಹಿತಿ ಕೇಳಲು ನಾನು ಹಾಗೂ ಸಹೋದ್ಯೋಗಿ ಪ್ರವೀಣ್ ಕುಮಾರ್ ಎಂಬವರು ಪ್ರಾಂಶುಪಾಲರ ಕಚೇರಿಗೆ ಪೂರ್ವಾಹ್ನ 11:40ರ ಸುಮಾರಿಗೆ ತೆರಳಿದ್ದೆವು. ಘಟನಾವಳಿಗೆ ಸಂಬಂಧಿಸಿ ಪ್ರಾಂಶುಪಾಲರ ಹೇಳಿಕೆಯನ್ನು ದಾಖಲಿಸಿಕೊಂಡು ಕಾಲೇಜಿನಿಂದ ನಿರ್ಗಮಿಸುವ ಸಂದರ್ಭದಲ್ಲಿ ಕಾಲೇಜು ವರಾಂಡದಲ್ಲಿದ್ದ ಸುಮಾರು 25ಕ್ಕೂ ಅಧಿಕ ಮಂದಿಯ ವಿದ್ಯಾರ್ಥಿಗಳ ಗುಂಪೊಂದು ನಮ್ಮನ್ನು ಸುತ್ತುವರೆದು, ‘ನಿಮಗೆ ಕಾಲೇಜು ಕ್ಯಾಂಪಸ್‌ನೊಳಗೆ ಬರಲು ಅನುಮತಿ ನೀಡಿದವರು ಯಾರು ?’ ಎಂದು ಪ್ರಶ್ನಿಸಿ ದೈಹಿಕವಾಗಿ ತಳ್ಳಾಟ ನಡೆಸಿದರು. ಸತ್ಯಾಸತ್ಯತೆಯ ವರದಿ ಮಾಡುವ ಸಲುವಾಗಿ ಕಾಲೇಜಿನ ಪ್ರಾಂಶುಪಾಲರನ್ನು ಭೇಟಿ ಮಾಡುವುದು ನಮ್ಮ ಸಾಂವಿಧಾನಿಕ ಹಕ್ಕು ಎಂದು ತಿಳಿಸಿದರೂ, ನಮ್ಮ ಮೇಲೆ ಹಲ್ಲೆ ನಡೆಸುತ್ತಾ, ನನ್ನನ್ನು ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋಗಲು ಬಿಡದೇ ನನಗೆ ಅಕ್ರಮವಾಗಿ ದಿಗ್ಭಂಧನವನ್ನೂ ವಿಧಿಸಿದ್ದಾರೆ. ಬಳಿಕ ನನ್ನನ್ನು ಕಾಲೇಜಿನ ಕೋಣೆಯೊಂದರಲ್ಲಿ ಕೂಡಿ ಹಾಕಿ, ನನ್ನ ಕ್ಯಾಮರಾವನ್ನು ಬಲವಂತವಾಗಿ ಕಿತ್ತುಕೊಂಡು ಅದರಲ್ಲಿದ್ದ ಪ್ರಾಂಶುಪಾಲರ ಹೇಳಿಕೆ ಸಹಿತ ಹಲವು ನನ್ನ ವಾಣಿಜ್ಯ ನೆಲೆಯ ದೃಶ್ಯಾವಳಿಗಳನ್ನು ಡಿಲೀಟ್ ಮಾಡಿದರು. ಮಾತ್ರವಲ್ಲದೆ, ನಮ್ಮ ಈ ಕೃತ್ಯವನ್ನು ಹೊರಗಡೆ ಎಲ್ಲಿಯಾದರೂ ತಿಳಿಸಿದ್ದೇ ಆದರೆ ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆಯನ್ನೂ ಹಾಕಿರುತ್ತಾರೆ. ಈ ಸಂದರ್ಭ ಅಪರಿಚಿತ ಮಧ್ಯವಯಸ್ಕ ವ್ಯಕ್ತಿಯೋರ್ವ ಈ ದಾಂಧಲೆ ನಿರತ ವಿದ್ಯಾರ್ಥಿಗಳ ಜೊತೆಗೂಡಿ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದು, ನಿಮಗೆ ಕಾಲೇಜಿಗೆ ಬರಲು ಅನುಮತಿ ನೀಡಿದವರ‍್ಯಾರು ಎಂದು ಪ್ರಶ್ನಿಸುತ್ತಿದ್ದರಲ್ಲದೆ, ವಿದ್ಯಾರ್ಥಿಗಳನ್ನು ಪ್ರಚೋದಿಸುವ ಕೃತ್ಯ ನಡೆಸುತ್ತಿದ್ದರು. ಈ ಬಗ್ಗೆ ಕಾಲೇಜಿನಲ್ಲಿ ವಿಚಾರಿಸಿದಾಗ ಆ ವ್ಯಕ್ತಿಯು ಕಾಲೇಜಿನ ಸಿಬ್ಬಂದಿ ಅಥವಾ ಉಪನ್ಯಾಸಕನಲ್ಲ ಎಂದು ತಿಳಿದು ಬಂದಿದೆ. ಈ ಕಾರಣದಿಂದ ವಿದ್ಯಾರ್ಥಿಗಳನ್ನು ಮಾಧ್ಯಮ ಪ್ರತಿನಿಧಿಗಳ ಮೇಲೆ ಮುಗಿ ಬೀಳಲು ಪ್ರೇರಣೆ ನೀಡುವ ಸಲುವಾಗಿಯೇ ಆ ವ್ಯಕ್ತಿ ಬಂದಿರುವ ಸಾಧ್ಯತೆ ಕಂಡು ಬಂದಿದೆ. ಕಾಲೇಜಿನ ಈ ವಿದ್ಯಾರ್ಥಿಗಳಿಗೂ ನನಗೂ ಈ ಮೊದಲು ಯಾವುದೇ ನೆಲೆಯಲ್ಲಿ ಸಂಬಂಧವಾಗಲೀ, ಪರಿಚಯವಾಗಲೀ ಇರುವುದಿಲ್ಲ. ಆದರೂ ಮಾಧ್ಯಮ ಪ್ರತಿನಿಧಿ ಎಂದು ತಿಳಿದು ಏಕಾಏಕಿ ಹಲ್ಲೆ ನಡೆಸಲು ಮುಂದಾಗಿರುವುದು ಯಾವುದೋ ದುರುದ್ದೇಶದ ಹಿನ್ನೆಲೆಯಿಂದ ನಡೆಸಿದ ಕೃತ್ಯದಂತಿತ್ತು. ಘಟನಾವಳಿಯ ಪೂರ್ಣ ದೃಶ್ಯಾವಳಿಯು ಕಾಲೇಜಿನ ಸಿಸಿ ಕ್ಯಾಮರಾದಲ್ಲಿ ಸೆರೆ ಹಿಡಿಯಲ್ಪಟ್ಟಿರುವುದರಿಂದ ಹಲ್ಲೆಗೆ ಮುಂದಾದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಅಜಿತ್ ಕುಮಾರ್ ದೂರಿನಲ್ಲಿ ತಿಳಿಸಿದ್ದರು.
ಈ ಪ್ರಕರಣದ ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು, ಈ ಪ್ರಕರಣ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಪ್ರಕರಣವೆಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದೆಂದು, ಆಕ್ಷೇಪವಿದ್ದರೆ ಒಂದು ವಾರದೊಳಗೆ ನ್ಯಾಯಾಧೀಶರ ಎದುರು ಆಕ್ಷೇಪ ಸಲ್ಲಿಸಬೇಕೆಂದೂ ಸಹಿ ಹಾಕದೇ ಇರುವ ನೊಟೀಸನ್ನು ದೂರುದಾರ ಅಜಿತ್ ಕುಮಾರ್‌ಗೆ ಜಾರಿ ಮಾಡಿದ್ದಾರೆ.