ಪುತ್ತೂರು: ಕ್ರೈಸ್ತನ ಪುನರುತ್ಥಾನಕ್ಕಾಗಿ ಎದುರು ನೋಡುವ ಶುಭ ರಾತ್ರಿಯ ದಿನದಂದು ಬೆಳಕುಗಳಲ್ಲಿ ಬೆಳಕಾದ ಪ್ರಭು ಕ್ರಿಸ್ತರ ವಿಜಯದ ಸಂಕೇತವಾದ ಪಾಸ್ಖ ಬತ್ತಿ'ಯ ಬೆಳಗುವಿಕೆ, ಪ್ರಭು ಕ್ರಿಸ್ತರನ್ನು ಸ್ತುತಿಸಿ ನಮಿಸಿ ಹಾಡುವ ಪಾಸ್ಖ ಸಂದೇಶ, ಜೀವವಾಕ್ಯದ ಧ್ಯಾನ, ದೀಕ್ಷಾ ಸ್ನಾನದ ಪ್ರಮಾಣವಚನದ ನವೀಕರಣ, ಪರಮಪ್ರಸಾದ ಸಂಸ್ಕಾರದ ಶ್ರದ್ಧಾಭಕ್ತಿಯ ಜಾಗರಣೆ ಕಾರ್ಯಕ್ರಮ ಎ.೮ ರಂದು ರಾತ್ರಿ ದೇಶಾದ್ಯಂತ ನಡೆದಿದ್ದು ಪುತ್ತೂರು ತಾಲೂಕಿನಾದ್ಯಂತವೂ ಕ್ರೈಸ್ತ ದೇವಾಲಯಗಳಲ್ಲಿ ಶ್ರದ್ಧೆಯಿಂದ ಆಚರಿಸಲಾಯಿತು. ಶಿಲುಬೆ ಪ್ರಭುವಿನ ಸಾವನ್ನು ಸಾರಿದಂತೆಯೇ ಅವರ ಪುನರುತ್ಥಾನವನ್ನೂ ಸಾರಿತು.
ಶಿಲುಬೆಯ ಮೇಲೆ
ನಜರೇತಿನ ಯೇಸು?, ಯೆಹೂದ್ಯರ ಅರಸ’ ಎಂಬ ನಾಮಫಲಕ ಹಾಕಿ ಯೇಸುವಿನ ನಿಜ ಸ್ವರೂಪ ತಿಳಿಸಿದ್ದು ಒಂದಾದರೆ, ಯೇಸುವಿನ ಪಾರ್ಥಿವ ಶರೀರವನ್ನು ಕದ್ದುಕೊಂಡು ಹೋಗಲು ಬಿಡದ ಪಿಲಾತ ಅರಸನು ಈ ಮೂಲಕ ಪುನರುತ್ಥಾನಕ್ಕೆ ಪ್ರಥಮ ಸಾಕ್ಷಿಯಾಗಿರುತ್ತಾನೆ. ಪುನರುತ್ಥಾನದ ರಾತ್ರಿ ಇದಾಗಿದ್ದು ಈ ಪುನರುತ್ಥಾನದೊಂದಿಗೆ ಹೊಸ ಜೀವನ ಪಡೆಯಲಿದ್ದೇವೆ ಎನ್ನುವ ಕಾರಣಕ್ಕಾಗಿ ಕ್ರೈಸ್ತ ಬಾಂಧವರು ಈ ರಾತ್ರಿಯನ್ನು ಪ್ರಾರ್ಥನೆ ಹಾಗೂ ಜಾಗರಣೆಯೊಂದಿಗೆ ಕಳೆಯುತ್ತಾರೆ. ಹೊಸ ಬದುಕನ್ನು ಸೂಚಿಸಲು ಬೆಳಕು ಮತ್ತು ನೀರಿನ ಆಶೀರ್ವಚನ ಕಾರ್‍ಯ ಈ ರಾತ್ರಿ ನಡೆಯುತ್ತದೆ.
ಚರ್ಚ್‌ಗಳಲ್ಲಿ: ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ವಂ|ಸ್ಟ್ಯಾನಿ ಪಿಂಟೋ, ವಂ|ಅಶೋಕ್ ರಾಯನ್ ಕ್ರಾಸ್ತಾ, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ವಂ|ಡೆನ್ಝಿಲ್ ಲೋಬೊ, ಉಜಿರೆ ದಯಾಳ್‌ಭಾಗ್‌ನ ವಂ|ಎಡ್ವಿನ್ ಡಿ’ಸೋಜ, ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊ, ಸಹಾಯಕ ಧರ್ಮಗುರು ವಂ|ಬೆನೆಡಿಕ್ಟ್ ಗೋಮ್ಸ್, ಹಿರಿಯ ಧರ್ಮಗುರು ವಂ|ಆಲ್ಫೋನ್ಸ್ ಮೊರಾಸ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದಲ್ಲಿ ವಂ|ಅಬೆಲ್ ಲೋಬೋ, ಬೆಳ್ಳಾರೆ ಚರ್ಚ್‌ನಲ್ಲಿ ವಂ|ಆಂಟನಿ ಪ್ರಕಾಶ್ ಮೊಂತೇರೊ ಸಹಿತ ಇತರ ಚರ್ಚ್‌ಗಳಲ್ಲಿ ಧರ್ಮಗುರುಗಳು ಪಾಸ್ಖ ಬತ್ತಿಯನ್ನು ಬೆಳಗಿಸಿ ಬಳಿಕ ಕ್ರೈಸ್ತ ಭಕ್ತಾದಿಗಳಿಗೆ ಹಸ್ತಾಂತರಿಸಿ ಪಾಸ್ಖ ಬತ್ತಿಯೊಂದಿಗೆ ಚರ್ಚ್ ಪ್ರವೇಶಿಸಿದರು. ಬಳಿಕ ಚರ್ಚ್‌ನಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಆಯಾ ಚರ್ಚ್‌ಗಳ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್‍ಯದರ್ಶಿ, ಧರ್ಮಭಗಿನಿಯರು, ಪಾಲನಾ ಸಮಿತಿ ಸದಸ್ಯರು, ಸ್ಯಾಕ್ರಿಸ್ಟಿಯನ್, ವೇದಿ ಸೇವಕರು, ವಾಳೆ ಗುರಿಕಾರರು, ಗಾಯನ ಮಂಡಳಿಯವರು ಸಹಕರಿಸಿದರು. ಸಾವಿರಾರು ಭಕ್ತಾದಿಗಳು ಚರ್ಚ್‌ನಲ್ಲಿ ನಡೆಯುವ ಪೂಜಾವಿಧಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.
ಯೇಸುಕ್ರಿಸ್ತರ ಪುನರುತ್ಥಾನ
ಕತ್ತಲನ್ನು ಭೇದಿಸಿದ ಪ್ರಭು ನಮಗೆ ಜೀವಜಲವಾಗುತ್ತಾರೆ. ಅವರ ಜೀವ ನಮ್ಮ ಜೀವನವಾಗುತ್ತದೆ. ನಮಗೆ ಈ ಪುನರುತ್ಥಾನ ಕತ್ತಲಿಂದ ಬೆಳಕಿಗೆ ಒಂದು ಆಹ್ವಾನ. ಹೊಸ ಬದುಕಿಗೆ ಸ್ವಾಗತ. ಈ ಬೆಳಕಲ್ಲಿ ಬದುಕು ಹೊಸದಾಗುತ್ತದೆ. ಪ್ರತಿಯೊಬ್ಬರು ಯೇಸುವಿನ ಸಹೋದರ, ಸಹೋದರಿಯರಾಗುತ್ತಾರೆ. ಯೇಸು ಮತ್ತೊಮ್ಮೆ ನಮ್ಮ ಮಧ್ಯೆ ಅದ್ಭುತಗಳನ್ನು ಮಾಡುತ್ತಾರೆ ಎನ್ನುವ ಸಂತೋಷದ ಸುದ್ದಿಯಿದು. ನಮ್ಮ ನೋವು, ನಿರಾಸೆ ಯಾವುದೂ ಶಾಶ್ವತವಲ್ಲ, ನಮ್ಮ ನಂಬಿಕೆ ಮೂಡಿಬರುತ್ತದೆ. ಈ ನಂಬಿಕೆಗಳು ಅಂತಿಮವಾಗಿ ನಮ್ಮ ಸಾವು ಕೂಡ ಅಂತಿಮವಲ್ಲ ಎಂಬ ದೃಢವಾದ ನಂಬಿಕೆಗೆ ನಮ್ಮನ್ನು ಕರೆದೊಯ್ಯುತ್ತದೆ. ಅವರ ಪುನರುತ್ಥಾನವೇ ನಮ್ಮ ಪುನರುತ್ಥಾನವಾಗುತ್ತದೆ. ಇದುವೇ ಪಾಸ್ಖ ಜಾಗರಣೆ ಎನ್ನುವುದು ಕ್ರೈಸ್ತ ಬಾಂಧವರ ನಂಬಿಕೆ.