ನೆಲ್ಯಾಡಿ: ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಗೌಡರಿಗೆ ಸಾರ್ವಜನಿಕ ಸನ್ಮಾನ

0

ನೆಲ್ಯಾಡಿ: ನೆಲ್ಯಾಡಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯಲ್ಲಿ 33 ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಜ.31ರಂದು ನಿವೃತ್ತರಾದ ಜನಾರ್ದನ ಗೌಡ ಟಿ. ಅವರಿಗೆ ಶಾಲೆಯ ಪೂರ್ವ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನೆಲ್ಯಾಡಿಯ ವಿದ್ಯಾಭಿಮಾನಿಗಳ ವತಿಯಿಂದ ಸಾರ್ವಜನಿಕ ಸನ್ಮಾನ ’ ಗುರುಭ್ಯೋ ನಮ: ’ ಮಾ.9ರಂದು ರಾತ್ರಿ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ’ರಂಗಭಾರತಿ’ ವೇದಿಕೆಯಲ್ಲಿ ನಡೆಯಿತು.

ಗುರುವನ್ನು ಮೀರಿಸಿದ ಶಿಷ್ಯರ ತಯಾರಿ:
ಅಭಿನಂದನಾ ಭಾಷಣ ಮಾಡಿದ ಪೂರ್ವವಿದ್ಯಾರ್ಥಿಯೂ ಆಗಿರುವ ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ್‌ಕುಮಾರ್ ರೈ ಅವರು, ಜನಾರ್ದನ ಗೌಡರವರು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಕ್ರೀಡಾಪಟುವಾಗಿ ಮಿಂಚಿದವರು. ಅವರೊಬ್ಬ ಕಂಬಳದ ಓಟಗಾರರೂ, ಸಂಘಟಕರೂ ಆಗಿದ್ದಾರೆ. ಉತ್ತಮ ಖೋ ಖೋ, ಕಬಡ್ಡಿ ಆಟಗಾರ. ಸ್ವತ: ಕ್ರೀಡಾಪಟುವಾಗಿದ್ದ ಜನಾರ್ದನ ಗೌಡ ಅವರಿಗೆ ಗುರುವನ್ನು ಮೀರಿಸುವ ಶಿಷ್ಯರನ್ನು ತಯಾರು ಮಾಡಿದ ಕೀರ್ತಿ ಸಲ್ಲುತ್ತದೆ ಎಂದರು. ಇವರ ಗರಡಿಯಲ್ಲಿ ಪಳಗಿದ ಏಕಲವ್ಯ ಪ್ರಶಸ್ತಿ ಪುರಸ್ಕೃತ ಡೆಕತ್ಲಾನ್ ಕ್ರೀಡಾಪಟು ಅಭಿಷೇಕ್ ಶೆಟ್ಟಿ ಸೇರಿದಂತೆ ಇತರೇ ಹಲವು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಮಿಂಚಿದ್ದಾರೆ. ಜನಾರ್ದನ ಗೌಡ ಅವರು ತಾಳ್ಮೆಯ ಸಾಕಾರಮೂರ್ತಿಯಾಗಿ ಸುಸೂತ್ರವಾಗಿ, ಸಂಘಟನಾತ್ಮಕವಾಗಿ ತನ್ನ ಜವಾಬ್ದಾರಿ ನಿರ್ವಹಿಸಿದ್ದಾರೆ. ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿ ಪಡೆದುಕೊಂಡು ಶಾಲೆಯಲ್ಲಿ ಸ್ಕೌಟ್ ಘಟಕವನ್ನು ಆರಂಭಿಸಿ ಸ್ಕೌಟ್ ವಿದ್ಯಾರ್ಥಿಗಳನ್ನು ರಾಜ್ಯ ಪುರಸ್ಕಾರ, ರಾಷ್ಟ್ರಪತಿ ಸ್ಕೌಟ್‌ಗಳಾಗಿ ತಯಾರುಗೊಳಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇವರ ಸೇವೆಗೆ ಜನಮೆಚ್ಚಿದ ಉತ್ತಮ ಶಿಕ್ಷಕ, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯೂ ಬಂದಿದೆ. ನಿವೃತ್ತಿಯಾದರೂ ಅವರು ವೃತ್ತಿಯಿಂದ ಹಿಂದೆ ಸರಿಯುವವರಲ್ಲ, ಅವರ ಮುಂದಿನ ಜೀವನವು ಸುಖಮಯವಾಗಿ ಸಾಗಲೆಂದು ಹೇಳಿ ಶುಭ ಹಾರೈಸಿದರು.

ನೆಲ್ಯಾಡಿ ಜನರ ಪ್ರೀತಿಗೆ ಪಾತ್ರ:
ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ನೆಲ್ಯಾಡಿಯಲ್ಲಿ ಹಲವು ಕ್ರೀಡಾಪಟುಗಳನ್ನು ಸೃಷ್ಟಿಸಿ ಜಿಲ್ಲೆ, ರಾಜ್ಯಮಟ್ಟದಲ್ಲಿ ಮಿಂಚುವಂತೆ ಮಾಡಿರುವ ಜನಾರ್ದನ ಗೌಡರವರು ನೆಲ್ಯಾಡಿಯ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ನಿವೃತ್ತಿ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.

ಶಾಲೆಯನ್ನು ಮನೆಯಂತೆ ಕಂಡಿದ್ದೇನೆ:
ಸನ್ಮಾನ ಸ್ವೀಕರಿಸಿ ಮಾತನಾಡಿದ ಜನಾರ್ದನ ಗೌಡ ಅವರು, ಆರಂಭದ 5 ವರ್ಷ ಸುಳ್ಯ ತಾಲೂಕಿನ ಮಂಡೆಕೋಲು ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ 1990ರಲ್ಲಿ ನೆಲ್ಯಾಡಿ ಶಾಲೆಗೆ ವರ್ಗಾವಣೆಗೊಂಡು ಆಗಮಿಸಿದ್ದೇನೆ. ಇಲ್ಲಿ ಸುಮಾರು 33 ವರ್ಷ ಸೇವೆ ಸಲ್ಲಿಸಿದ್ದು ಈ ಶಾಲೆಯನ್ನು ನನ್ನ ಮನೆಯಂತೆ ನೋಡಿದ್ದೇನೆ. ಇದೊಂದು ಪುಣ್ಯಭೂಮಿ. ಊರಿನ ಜನ ಶಾಲೆಯ ಮೇಲಿನ ಅಭಿಮಾನದಿಂದ ವಿವಿಧ ರೀತಿಯ ಕೊಡುಗೆ ನೀಡಿದ್ದಾರೆ. ಅವರ ಸಹಕಾರದಿಂದಲೇ ಇಲ್ಲಿ ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಸಲು ಸಾಧ್ಯವಾಗಿದೆ. ಊರಿನ ಜನ ಪ್ರೀತಿಯಿಂದ ನೀಡಿದ ಈ ಸನ್ಮಾನವನ್ನು ಸ್ವೀಕರಿಸಿದ್ದೇನೆ. ಸನ್ಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದರು. ಊರಿನ ಜನರ ಪ್ರೀತಿ, ವಾತ್ಸಲ್ಯ ಈ ಶಾಲೆಯನ್ನು ಬೆಳೆಸಿದೆ. ಇಲ್ಲಿನ ಮಣ್ಣಿನ ಗುಣವೇ ಹಾಗಿದೆ. ಸಾಧಕ ವಿದ್ಯಾರ್ಥಿಗಳು ತಮ್ಮ ಶ್ರಮ, ಪೋಷಕರ ಪ್ರೋತ್ಸಾಹದಿಂದ ಎತ್ತರಕ್ಕೆ ಬೆಳೆದಿದ್ದಾರೆ. ನೆಲ್ಯಾಡಿಯ ಜೆಸಿಐ ಸಂಸ್ಥೆಯೂ ನನ್ನನ್ನು ಬೆಳೆಸಿದೆ. ಇಲ್ಲಿನ ಪೂರ್ವ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ, ಶಿಕ್ಷಕರೂ ಪ್ರೋತ್ಸಾಹ ನೀಡಿದ್ದಾರೆ. ಇವರೆಲ್ಲರ ಸಹಕಾರದಿಂದಲೇ ನನ್ನ ಗರಡಿಯಲ್ಲಿ ಪಳಗಿದ ಹಲವು ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಮಿಂಚಿ ಶಾಲೆಗೆ, ಊರಿಗೆ ಹೆಸರು ತಂದಿದ್ದಾರೆ. 75 ವರ್ಷಗಳ ಇತಿಹಾಸವಿರುವ ನೆಲ್ಯಾಡಿಯ ಈ ಶಾಲೆ ಇನ್ನಷ್ಟೂ ಬೆಳಗಬೇಕು. ಇನ್ನಷ್ಟೂ ಮೇಲ್ಮಟ್ಟಕ್ಕೇರಬೇಕು ಎಂದು ಜನಾರ್ದನ ಗೌಡ ಹೇಳಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಪೂರ್ವ ವಿದ್ಯಾರ್ಥಿಯೂ ಆಗಿರುವ ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿಯವರು, ನೆಲ್ಯಾಡಿಯ ಸರಕಾರಿ ಶಾಲೆಯೊಂದರಲ್ಲಿಯೇ 33 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲೆ, ರಾಜ್ಯಮಟ್ಟದ ಹಲವು ಕ್ರೀಡಾಪಟುಗಳನ್ನು ಸೃಷ್ಟಿಸಿರುವ ಜನಾರ್ದನ ಗೌಡರಿಗೆ ಸಾರ್ವಜನಿಕ ಸನ್ಮಾನ ಮಾಡಬೇಕೆಂಬ ಇರಾದೆಯೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದೇವೆ. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ನೇತೃತ್ವ ವಹಿಸಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದಕ್ಕೆ ಊರಿನ ಎಲ್ಲಾ ಜನರ ಕಾಣಿಕೆ ಸಿಗಬೇಕು. ಸಮರ್ಪಣಾ ಮನೋಭಾವನೆಯ ಉದ್ದೇಶದೊಂದಿಗೆ ತುಳು ಹಾಸ್ಯಮಯ ನಾಟಕ ಆಯೋಜಿಸಿ ಕೂಪನ್ ಮಾಡಲಾಗಿದೆ. ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಿ ಉಳಿಯಬೇಕೆಂದು ಹೇಳಿದರು. ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಆನಂದ ಅಜಿಲ ವಂದಿಸಿದರು. ಶಿಕ್ಷಕ ವಿಮಲ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಹೊಸಮಜಲು ಶಾಲಾ ಶಿಕ್ಷಕಿ ಸಿಮಿ ಪ್ರಾರ್ಥಿಸಿದರು.

ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಎಸ್‌ಡಿಎಂಸಿ ಅಧ್ಯಕ್ಷ ಬಿನೋಜ್, ಕಡಬ ಉಪತಹಶೀಲ್ದಾರ್ ಗೋಪಾಲ, ವಲಯ ಅರಣ್ಯಾಧಿಕಾರಿ ರವಿಚಂದ್ರ ಪಡುಬೆಟ್ಟು, ಉದ್ಯಮಿ ಸತೀಶ್ ಕೆ.ಎಸ್.ದುರ್ಗಾಶ್ರೀ, ನೆಲ್ಯಾಡಿ ಜೆಸಿಐ ನಿಕಟಪೂರ್ವಾಧ್ಯಕ್ಷೆ ಜಯಂತಿ ಬಿ.ಎಂ., ಪೂರ್ವಾಧ್ಯಕ್ಷರಾದ ಗಿರೀಶ್ ಡಿ. ದರ್ಖಾಸು, ಶಿವಪ್ರಸಾದ್ ಬೀದಿಮಜಲು, ವೆಂಕಟ್ರಮಣ ಆರ್., ಮೋಹನ ವಿ., ನಾರಾಯಣ ಎನ್.ಬಲ್ಯ, ವಿ.ಆರ್.ಹೆಗ್ಡೆ, ರವಿಚಂದ್ರ ಹೊಸವೊಕ್ಲು, ಚಂದ್ರಶೇಖರ ಬಾಣಜಾಲು, ಪುರಂದರ ಗೌಡ ಡೆಂಜ, ನೆಲ್ಯಾಡಿ ಜೆಸಿಐ ಕಾರ್ಯದರ್ಶಿ ಸುಚಿತ್ರಾ ಜೆ.ಬಂಟ್ರಿಯಾಲ್, ಸುಪ್ರಿತಾ ರವಿಚಂದ್ರ ಹೊಸವೊಕ್ಲು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಉಲಹನ್ನನ್, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸದಾನಂದ ಕುಂದರ್, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಧರ್ಣಪ್ಪ ಹೆಗ್ಡೆ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯೋಗೀಶ್ ಪಂಜ, ಪಡುಬೆಟ್ಟು ಶಾಲಾ ಶಿಕ್ಷಕ ಕುಶಾಲಪ್ಪ ಗೌಡ, ನೆಲ್ಯಾಡಿ ಗಾಂಧಿಮೈದಾನ ಗೆಳೆಯರ ಬಳಗದ ರಾಮಚಂದ್ರ ಆಚಾರ್ಯ, ರತ್ನಾಕರ ’ಅಶ್ವಮೇಧ’ಕೊಲ್ಯೊಟ್ಟು, ತುಕಾರಾಮ ರೈ, ಟಿಟ್ಟಿ ಕೆ.ಪಿ., ಮನೋಜ್ ಟಿ.ಪಿ., ಸ್ಕಂದ ಯುವಕ ಮಂಡಲದ ಉದಯಕುಮಾರ್ ದೋಂತಿಲ, ನೆಲ್ಯಾಡಿ ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ಕಾಂತಪ್ಪ ಗೌಡ ಪೂವಾಜೆ, ಜಿನ್ನಪ್ಪ ಗೌಡ ಪೂವಾಜೆ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ, ನೆಲ್ಯಾಡಿ ವರ್ತಕ ಸಂಘದ ಉಪಾಧ್ಯಕ್ಷ ಗಣೇಶ್ ಕೆ.ರಶ್ಮಿ, ಶಾರದಾ ಫ್ಯಾನ್ಸಿಯ ಜಯಕುಮಾರ್, ದಯಾನಂದ ವಾಣಿಶ್ರೀ, ಗಣೇಶ್ ಕಾಂಪ್ಲೆಕ್ಸ್‌ನ ರಾಮಣ್ಣ ಗೌಡ ನೆಲ್ಯಾಡಿ, ಕೌಕ್ರಾಡಿ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ, ಮಾದೇರಿ ಒಕ್ಕೂಟದ ಅಧ್ಯಕ್ಷ ಸೆಬಾಸ್ಟಿನ್, ನೆಲ್ಯಾಡಿ ಸಿಎ ಬ್ಯಾಂಕ್‌ನ ನಿವೃತ್ತ ಮೇನೇಜರ್ ಸತೀಶ್ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ್, ಎಸ್‌ಡಿಎಂಸಿ ಸದಸ್ಯರಾದ ಕೆ.ಪಿ.ಪ್ರಸಾದ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಜನಾರ್ದನ ಗೌಡರನ್ನು ಅಭಿನಂದಿಸಿದರು.

ಸಂಗೀತ/ಡ್ಯಾನ್ಸ್/ನಾಟಕ:
ಸಂಜೆ ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇಲ್ಲಿನ ಕಲಾವಿದರಿಂದ ವಿವಿಧ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಕುಶಾಲಪ್ಪ ನೆಲ್ಯಾಡಿ ಅವರ ನೇತೃತ್ವದ ಡ್ಯಾನ್ಸ್ ಸ್ಟುಡಿಯೋದ ಕಲಾವಿದರಿಂದ ಡ್ಯಾನ್ಸ್ ಕಾರ್ಯಕ್ರಮ ನಡೆಯಿತು. ಸಾರ್ವಜನಿಕ ಸನ್ಮಾನ ಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ ಅಲೇ..! ಬುಡಿಯೆರ್‌ಗೆ..! ತುಳು ನಾಟಕ ಪ್ರದರ್ಶನಗೊಂಡಿತು.

ಬೃಹತ್ ಹೂವಿನ ಹಾರ, ವಿದ್ಯಾಸರಸ್ವತಿ ಮಂಟಪ ಕೊಡುಗೆ
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಗೌಡ ಹಾಗೂ ಅವರ ಪತ್ನಿ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿರುವ ದಿವ್ಯರವರಿಗೆ ಬೃಹತ್ ಹೂವಿನ ಹಾರಾರ್ಪಣೆ, ವಿದ್ಯಾಸರಸ್ವತಿ ಮಂಟಪ, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜನಾರ್ದನ ಗೌಡರವರಿಗೆ ಮೈಸೂರು ಪೇಟ ತೊಡಿಸಿ ಗೌರವಿಸಲಾಯಿತು. ವಿವಿಧ ಸಂಘಸಂಸ್ಥೆಗಳ ವತಿಯಿಂದಲೂ ಶಾಲು,ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಇದಕ್ಕೂ ಮೊದಲು ಅವರನ್ನು ಪುಷ್ಪಾರ್ಚನೆ ಮಾಡುವುದರೊಂದಿಗೆ ವೇದಿಕೆಗೆ ಕರೆತರಲಾಯಿತು. ನೆಲ್ಯಾಡಿ ಜೆಸಿಐ ಅಧ್ಯಕ್ಷ ದಯಾಕರ ರೈ ಅವರು ಅಭಿನಂದನಾ ಪತ್ರ ವಾಚಿಸಿದರು. ಟಿಟ್ಟಿ ಕೆ.ಪಿ.ಹಾಗೂ ಮನೆಯವರು ಬೃಹತ್ ಹೂವಿನ ಹಾರ ನೀಡಿ ಸಹಕರಿಸಿದರು. ವಿಶ್ವನಾಥ ಶೆಟ್ಟಿ, ಶ್ರದ್ಧಾ, ನೆಲ್ಯಾಡಿ ಶಾಲಾ ಶಿಕ್ಷಕಿ ಶ್ರೀಮತಿ ಪ್ರಸನ್ನ ಅವರು ಜನಾರ್ದನ ಗೌಡರ ಕುರಿತು ರಚಿಸಿದ ಕವನ ಹಾಡಿ ರಂಜಿಸಿದರು. ಜನಾರ್ದನ ಗೌಡರ ಕುರಿತ ಕೆಲವೊಂದು ಪ್ರಶ್ನೆಗಳನ್ನು ಸಾರ್ವಜನಿಕರಿಗೆ ಕೇಳಿ ಸರಿಯಾದ ಉತ್ತರ ನೀಡಿದವರಿಗೆ ಶಟ್ಲ್ ಬ್ಯಾಟ್ ನೀಡಿ ಗೌರವಿಸಲಾಯಿತು.

ಕಲಾವಿದರಿಗೆ ಗೌರವಾರ್ಪಣೆ:ನಾಟಕ ಕಲಾವಿದ ಸುಂದರ ರೈ ಮಂದಾರ, ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇಲ್ಲಿನ ವಿಶ್ವನಾಥ ಶೆಟ್ಟಿ, ನಟವರ್ಯ ಡ್ಯಾನ್ಸ್ ಸ್ಟುಡಿಯೋದ ಕುಶಾಲಪ್ಪ ಅವರಿಗೆ ಹಾರಾರ್ಪಣೆ ಮಾಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here