4 ವರ್ಷದ ಸುದೀಪ್ತಿ ಹಾಗೂ 5 ವರ್ಷದ ವಿಖ್ಯಾತ್‌ಗೆ ‘ಬಾಲಸ್ತುತಿ ರತ್ನ’ ಬಿರುದು ಪ್ರದಾನ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಮುನ್ನಡೆಯುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವಿಷು ಹಬ್ಬದ ಪ್ರಯುಕ್ತ ಶುಕ್ರವಾರ ಆಯೋಜಿಸಲಾದ ಹಿಂದೂ ಧಾರ್ಮಿಕ ಶ್ಲೋಕಗಳ ಕಂಠಪಾಠ ಸ್ಪರ್ಧೆ ಬಾಲಸ್ತುತಿ – 2024ರ 4ನೇ ವರ್ಷದ ಮಕ್ಕಳ ವಿಭಾಗದಲ್ಲಿ ಸುದೀಪ್ತಿ ಹಾಗೂ 5ನೇ ವರ್ಷದ ಮಕ್ಕಳ ವಿಭಾಗದಲ್ಲಿ ವಿಖ್ಯಾತ್ ಪ್ರಥಮ ಸ್ಥಾನ ಗಳಿಸುವ ಮೂಲಕ ತಲಾ ಐದು ಸಾವಿರ ರೂಪಾಯಿ ಹಾಗೂ ಶಾರದಾಂಬೆಯ ಭಾವಚಿತ್ರ ಸಹಿತವಾದ ಪಾದುಕೆ ಬಹುಮಾನದೊಂದಿಗೆ ಬಾಲಸ್ತುತಿ ರತ್ನ ಬಿರುದಿಗೆ ಭಾಜನರಾಗಿದ್ದಾರೆ.
ಸುದೀಪ್ತಿ ಪುತ್ತೂರಿನ ಮುರ ನಿವಾಸಿಗಳಾದ ಗುರುರಾಜ ತಂತ್ರಿ ಹಾಗೂ ಶ್ರೀಲಕ್ಷ್ಮೀ ಪ್ರಭಾ ದಂಪತಿ ಪುತ್ರಿ. ಪಾಪೆಮಜಲಿನ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಯಾಗಿರುವ ವಿಖ್ಯಾತ್ ಪಾಪೆಮಜಲಿನ ವಾಮನಾಥ ಹಾಗೂ ಜ್ಯೋತಿ ದಂಪತಿ ಪುತ್ರ ಹಾಗೂ ನಿವೃತ್ತ ಆರ್‌ಎಫ್‌ಒ (ಟ್ರೈನರ್) ಸುಬ್ರಹ್ಮಣ್ಯ ಗೌಡ ಅವರ ಮೊಮ್ಮಗ.
ಬಹುಮಾನ ವಿಜೇತ ಇತರ ಪುಟಾಣಿಗಳು:
ನಾಲ್ಕನೇ ವರ್ಷದ ಮಕ್ಕಳ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಉಪ್ಪಿನಂಗಡಿಯ ಸದಾನಂದ ಹಾಗೂ ಸವಿತಾ ದಂಪತಿ ಪುತ್ರಿ ಸದ್ವಿತಾ ಬಿರಾದಾರ್ ಗಳಿಸಿದರೆ ತೃತೀಯ ಸ್ಥಾನವನ್ನು ನೇರಳಕಟ್ಟೆಯ ಕಾರ್ತಿಕ್ ಹೆಬ್ಬಾರಹಿತ್ಲು ಹಾಗೂ ಸೌಮ್ಯ ದಂಪತಿ ಪುತ್ರಿ ಅದಿತಿ ಹೆಬ್ಬಾರಹಿತ್ಲು ಪಡೆದುಕೊಂಡರು.
ಐದು ವರ್ಷ ವಯಸ್ಸಿನ ಮಕ್ಕಳ ವಿಭಾಗದಲ್ಲಿ ಕೆಮ್ಮಾಯಿಯ ಪ್ರಸನ್ನ ಎಚ್.ಎಸ್ ಹಾಗೂ ಗೀತಾ ಡಿ ದಂಪತಿ ಪುತ್ರಿ ಅನ್ವಿತಾ ಎಚ್.ಪಿ ಹಾಗೂ ತೃತೀಯ ಸ್ಥಾನವನ್ನು ಕಲ್ಲಡ್ಕದ ಹರೀಶ್ ಎಂ ಹಾಗೂ ಪ್ರೀತಾ ದಂಪತಿ ಪುತ್ರ ನಿಹಾಂತ್ ಎಂ ಪಡೆದುಕೊಂಡರು. ನಾಲ್ಕು ಹಾಗೂ ಐದನೆಯ ವಯಸ್ಸಿನ ಎರಡು ವಿಭಾಗಗಳಲ್ಲಿಯೂ ದ್ವಿತೀಯ ಸ್ಥಾನ ವಿಜೇತರು ಮೂರು ಸಾವಿರ ನಗದು ಹಾಗೂ ಶಾರದಾಂಬೆಯ ಭಾವಚಿತ್ರ ಸಹಿತವಾದ ಪಾದುಕೆ ಹಾಗೂ ತೃತೀಯ ಸ್ಥಾನ ವಿಜೇತರು ಎರಡು ಸಾವಿರ ನಗದಿನೊಂದಿಗೆ ಶಾರದಾಂಬೆಯ ಭಾವಚಿತ್ರ ಸಹಿತವಾದ ಪಾದುಕೆಯನ್ನು ಬಹುಮಾನವಾಗಿ ಪಡೆದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನ ವಿತರಿಸಲಾಯಿತು.
ಹಿನ್ನೆಲೆ:
ಹಿಂದೂ ಸಂಸ್ಕೃತಿ, ಸಂಸ್ಕಾರಗಳ ಉಳಿವು ಬೆಳೆವಿನ ನೆಲೆಯಲ್ಲಿ ಹಿಂದೂ ಧಾರ್ಮಿಕ ಶ್ಲೋಕಗಳ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಲಾಯಿತು. ಎಳೆಯ ವಯಸ್ಸಿನಿಂದಲೇ ಇಂತಹ ಕಲ್ಪನೆಗಳನ್ನು ತುಂಬುತ್ತಾ ಬಂದಲ್ಲಿ ಹಿಂದೂ ಸಂಸ್ಕೃತಿಯ ಪ್ರಸಾರಕ್ಕೆ ಭದ್ರ ಬುನಾದಿ ಹಾಕಿದಂತಾಗುತ್ತದೆ ಎಂಬ ಯೋಚನೆ ಈ ಸ್ಪರ್ಧೆಯ ಆಯೋಜನೆಯ ಹಿಂದೆ ಕೆಲಸ ಮಾಡಿದೆ. ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಒಂದು ವಿನೂತನ ಸಾಧ್ಯತೆಯ ಅನಾವರಣವೆಂಬಂತೆ ರೂಪುಗೊಂಡಿತು.
ಪುತ್ತೂರಿನ ಸುತ್ತಮುತ್ತಲಿನ ಅನೇಕ ಎಳೆಯ ಪುಟಾಣಿಗಳು ವಿವಿಧ ಶ್ಲೋಕಗಳನ್ನು ಕಂಠಪಾಠ ಮಾಡಿ ತೀರ್ಪುಗಾರರ ಸಮ್ಮುಖದಲ್ಲಿ ಪ್ರಸ್ತುತಪಡಿಸಿದ ರೀತಿ ಮನೋಜ್ಞವಾಗಿ ಮೂಡಿಬಂತು. ಪ್ರತಿಯೊಂದು ಮಗುವೂ ಸ್ಪರ್ಧಾ ಮನೋಭಾವದಿಂದ ಭಾಗಿಯಾಗಿ ತನಗೆ ತಿಳಿದಿರುವ ಶ್ಲೋಕಗಳನ್ನು ಮೈಕ್ ಮೂಲಕ ಪ್ರಸ್ತುತಿಗೈದು ನೆರೆದವರಿಂದ ಮೆಚ್ಚುಗೆ ಪಡೆದದ್ದು ಗಮನಾರ್ಹ.
ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ, ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ, ಸಂಸ್ಕೃತ ವಿಭಾಗದ ಉಪನ್ಯಾಸಕಿ ಶಶಿಕಲಾ ವರ್ಕಾಡಿ ಹಾಗೂ ಅಂಬಿಕಾ ವಿದ್ಯಾಲಯದ ಸಂಸ್ಕೃತ ಶಿಕ್ಷಕಿ ಸೌಂದರ್ಯಲಕ್ಷ್ಮೀ ತೀರ್ಪುಗಾರರಾಗಿ ಸಹಕರಿಸಿದರು.
ಅಂಬಿಕಾ ವಿದ್ಯಾಲಯ ಸಂಸ್ಕೃತಿ, ಸಂಸ್ಕಾರ ಪ್ರಸರಣದ ಹತ್ತು ಹಲವು ಕಾರ್ಯಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಶಿಕ್ಷಣದೊಂದಿಗೆ ದೇಶಪ್ರೇಮ, ಧರ್ಮಜಾಗೃತಿ ಕಾರ್ಯದಲ್ಲೂ ತೊಡಗಿಸಿಕೊಂಡಿದೆ. ಇದರಿಂದಾಗಿ ಸಂಸ್ಕಾರ ಬೆಳೆಸುವ ತಾಣವಾಗಿ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆ ಮಾತ್ರವಲ್ಲದೆ ಸಂಪೂರ್ಣ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಬೆಳೆದು ಬರುತ್ತಿವೆ. ವಿಶೇಷವಾಗಿ ಎಳೆಯ ಮಕ್ಕಳಿಗೆ ಸಂಸ್ಕಾರದ ಅರಿವನ್ನು ಮೂಡಿಸಿದಲ್ಲಿ ಅದು ನಾಳಿನ ಸಮಾಜಕ್ಕೆ ಉಪಯೋಗಿಯೆನಿಸುತ್ತದೆ ಎಂಬ ಆಲೋಚನೆಯೊಂದಿಗೆ ಮಕ್ಕಳಲ್ಲಿ ಆ ಕುರಿತಾದ ಜಾಗೃತಿ ಮೂಡಿಸುವ ಪ್ರಯತ್ನ ಈ ವಿದ್ಯಾಸಂಸ್ಥೆಯಲ್ಲಾಗುತ್ತಿದೆ. ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ, ದೇಶಪ್ರೇಮಗಳ ಬಗೆಗೂ ಮಕ್ಕಳಿಗೆ ಜ್ಞಾನ ಒದಗಿಸುತ್ತಿರುವುದರಿಂದ ಅನೇಕ ಹೆತ್ತವರು ತಮ್ಮ ಮಕ್ಕಳನ್ನು ಅಂಬಿಕಾ ವಿದ್ಯಾಲಯದಲ್ಲಿ ದಾಖಲಾತಿ ಮಾಡಿಸಿಕೊಳ್ಳುತ್ತಿದ್ದಾರೆ.
ನಮ್ಮ ಸಂಸ್ಕಾರ, ಆಚಾರ ವಿಚಾರಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯ. ಅಂಬಿಕಾ ಶಿಕ್ಷಣ ಸಂಸ್ಥೆ ಈ ಕರ್ತವ್ಯವನ್ನು ತನ್ನ ಆರಂಭದಿಂದಲೂ ಮಾಡಿಕೊಂಡು ಬರುತ್ತಿದೆ. ಬಾಲಸ್ತುತಿಯ ಮೂಲಕ ಸಂಸ್ಕಾರ ಪ್ರಸರಣದ ಮತ್ತೊಂದು ಹೆಜ್ಜೆಯನ್ನು ಇಡಲಾಗಿದೆ. ಈ ಬಾಲಸ್ತುತಿ ಪ್ರತಿವರ್ಷವೂ ನಡೆದುಬರಲಿದೆ.
ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿಗಳು
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು