ಪುತ್ತೂರು: ಟಿಕೆಟ್ ನೀಡುವುದು, ಬಿಡುವುದು ಹೈಕಮಾಂಡ್, ಪಕ್ಷದ ವರಿಷ್ಠರ ತೀರ್ಮಾನ. ಬದಲಾವಣೆಗಳನ್ನು ಹಲವೆಡೆ ಮಾಡಲಾಗಿದೆ. ಅವಕಾಶ ಕೈತಪ್ಪಿದಾಗ ಅಸಮಾಧಾನ ಉಂಟಾಗುವುದು ಸಹಜ. ಅತೃಪ್ತರನ್ನು ಸಮಾಧಾನಪಡಿಸುವ ಕೆಲಸ ಮಾಡಲಾಗುವುದು. ಎಲ್ಲರನ್ನೂ ಜೊತೆಗೆ ಸೇರಿಸಿಕೊಂಡೇ ಚುನಾವಣೆ ಎದುರಿಸಲಾಗುವುದು ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ಹೇಳಿದ್ದಾರೆ.
ಎ.12ರಂದು ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ವೇಳೆ ‘ಸುದ್ದಿ’ ಜೊತೆಗೆ ಮಾತನಾಡಿದ ಅವರು, ಸುಳ್ಯ ಮತ್ತು ಪುತ್ತೂರಿನಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. ಟಿಕೆಟ್ ನೀಡುವುದು ಪಕ್ಷದ ನಿರ್ಧಾರ. ಅದಕ್ಕೆ ಬದ್ಧರಾಗಿ ನಾವು ಕೆಲಸ ಮಾಡಬೇಕು. ಸುಳ್ಯ, ಪುತ್ತೂರಿಗೆ ಹೊಸ ಅಭ್ಯರ್ಥಿಗಳನ್ನು ನೀಡಲಾಗಿದೆ. ಇಡೀ ದೇಶದಲ್ಲಿ ಮಹಿಳಾ ಮೀಸಲಾತಿಯ ಕೂಗು ಕೇಳಿಬರುತ್ತಿದೆ. ಜಿಲ್ಲೆಯಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಸಂಘಟನೆಯ ಜೊತೆಗೆ ಇರುವುದರಿಂದ ಮಹಿಳೆಯರ ಬೇಡಿಕೆಗೆ ಮನ್ನಣೆ ಕೊಟ್ಟ ರೀತಿಯಲ್ಲಿ ಪುತ್ತೂರಿನಲ್ಲಿ ಆಶಾ ತಿಮ್ಮಪ್ಪ ಗೌಡ ಮತ್ತು ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಕಾರ್ಯಕರ್ತರು ಸ್ವಾಭಾವಿಕವಾಗಿ ಅಭ್ಯರ್ಥಿಯನ್ನು ಸ್ವೀಕಾರ ಮಾಡುತ್ತಾರೆ. ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಈಗಾಗಲೇ ಸೂಚನೆ ನೀಡಿದ್ದೇವೆ. ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆನ್ನುವ ಆಶಾಭಾವನೆಯಿದೆ ಎಂದು ಹೇಳಿದರು.
ರಾಜ್ಯದಲ್ಲಿ ಟಿಕೆಟ್ ವಿಚಾರದಲ್ಲಿ ಹಲವು ಬದಲಾವಣೆಗಳಾಗಿದೆ. ಹಲವು ಸಚಿವರಿಗೇ ಟಿಕೆಟ್ ನೀಡಿಲ್ಲ. ಎಲ್ಲವನ್ನೂ ಗುಜರಾತ್ ಮಾದರಿ ಎಂದು ಹೇಳಲು ಸಾಧ್ಯವಿಲ್ಲ. ಒಂದೊಂದು ರಾಜ್ಯಕ್ಕೆ ಒಂದೊಂದು ಮಾದರಿಯನ್ನು ವರಿಷ್ಠರು ಅನುಸರಿಸುತ್ತಾರೆ. ತುಂಬಾ ಯುವಕರಿಗೆ ಆದ್ಯತೆ ನೀಡಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ದೃಷ್ಟಿಯಲ್ಲಿ ಏನೇನು ತಂತ್ರಗಾರಿಕೆಯನ್ನು ಮಾಡಬೇಕೋ, ಅದನ್ನು ರಾಷ್ಟ್ರೀಯ ಅಧ್ಯಕ್ಷರು, ವರಿಷ್ಠರು ತೆಗೆದುಕೊಂಡಿದ್ದಾರೆ. ಸುಳ್ಯದಲ್ಲಿ ಎಸ್. ಅಂಗಾರ ಆರು ಬಾರಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಓರ್ವ ಸಜ್ಜನ ರಾಜಕಾರಣಿ. ಎಷ್ಟೋ ಬಾರಿ ಪಕ್ಷ ಬದಲಾವಣೆ ಬಯಸುತ್ತದೆ. ಹಾಗೆಂದು ಯಾರನ್ನು ಕೂಡ ಪಕ್ಷ ಬದಿಗಿಡುವ ಪ್ರಶ್ನೆಯಿಲ್ಲ. ಅವರಿಗೆ ಬೇರೆ ಬೇರೆ ಜವಾಬ್ದಾರಿ ನೀಡಿ ಪಾರ್ಟಿಯಲ್ಲಿ ತೊಡಗಿಸಿಕೊಳ್ಳುವ ಕೆಲಸ ಮಾಡಲಿದ್ದೇವೆ. ಪುತ್ತೂರು, ಉಡುಪಿ ಹೀಗೆ ಎಲ್ಲೆಲ್ಲಿ ಬದಲಾವಣೆ ಬೇಕೆಂದು ವರಿಷ್ಠರು ನಿರ್ಧಾರ ತೆಗೆದುಕೊಂಡಿದ್ದಾರೋ ಅದರ ಪ್ರಕಾರ ಬದಲಾವಣೆಯಾಗಿದೆ ಎಂದು ಹೇಳಿದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಬಿಜೆಪಿಗೆ ಗೆಲುವು ಅನಿವಾರ್ಯ ಆಗಲೇಬೇಕಾಗಿದೆ. ನಾವೇನಾದರೂ ಎಚ್ಚರ ತಪ್ಪಿ ಅವಕಾಶ ಕಳೆದುಕೊಂಡರೆ ಮುಂದಕ್ಕೆ ಜಿಲ್ಲೆ ಏನಾಗುತ್ತದೆ, ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರ ಇಲ್ಲದೇ ಇದ್ದರೆ ಯಾವ ವಿದ್ಯಾಮಾನಗಳು ನಡೆಯುತ್ತವೆ ಎನ್ನುವ ಇತಿಹಾಸ ನಮ್ಮ ಮುಂದಿದೆ. ಅದು ಮತ್ತೊಮ್ಮೆ ಮರುಕಳಿಸಬಾರದು. ಅಸಮಾಧಾನಿತರನ್ನು ಸಮಾಧಾನಗೊಳಿಸುವ ಕೆಲಸ ನಮ್ಮ ಪಕ್ಷ, ಸಂಘಟನೆಯಿಂದ ನಡೆಯುತ್ತದೆ ಎಂದು ಸುದರ್ಶನ್ ಎಂ ಹೇಳಿದರು.
ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ಇಂದು ಉಳ್ಳಾಲದಲ್ಲಿ ಅಭಿವೃದ್ಧಿ ಆಗಿದ್ದರೂ ಅದು ಬಿಜೆಪಿ ಸರಕಾರದ ಕೊಡುಗೆ. ನಮ್ಮ ಏಳೂ ಶಾಸಕರು ಏಳೂ ಕ್ಷೇತ್ರಗಳಲ್ಲಿ ಅದ್ಭುತ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬಿಜೆಪಿ ಅಽಕಾರದಲ್ಲಿದ್ದರೆ ಮಾತ್ರ ಶಾಂತಿ ಸಾಮರಸ್ಯದಿಂದ ಬದುಕಲು ಸಾಧ್ಯ, ಸರಕಾರದ ಸವಲತ್ತುಗಳು ಕಟ್ಟಕಡೆಯ ವ್ಯಕ್ತಿಗೆ ಬಿಜೆಪಿ ಸರಕಾರ ಇದ್ದಾಗ ಮಾತ್ರ ಸಿಗುತ್ತದೆ ಎಂದು ಜನರಿಗೆ ಅರಿವಾಗಿದೆ. ಹೀಗಾಗಿ ಬಿಜೆಪಿ ಅಧಿಕಾರದಲ್ಲಿ ಇರಲೇಬೇಕು, ಬಿಜೆಪಿ ಅನಿವಾರ್ಯ ಎನ್ನುವ ಭಾವನೆ ಜನಸಾಮಾನ್ಯರಲ್ಲಿದೆ. ಬಿಜೆಪಿಯಲ್ಲಿ ಅಭ್ಯರ್ಥಿಯನ್ನು ನೋಡುವುದಿಲ್ಲ. ಪಕ್ಷದ ಸಿದ್ಧಾಂತ, ರಾಷ್ಟೀಯ ವಿಚಾರಧಾರೆಯನ್ನು ನೋಡಿ ಜನರು ಬೆಂಬಲಿಸುತ್ತಿದ್ದಾರೆ. ಅದುವೇ ನಮಗೆ ಶ್ರೀರಕ್ಷೆ ಎಂದು ಹೇಳಿದರು.
ಟಿಕೆಟ್ ಘೋಷಣೆಯಾದಾಗ ಅವಕಾಶ ಕೈತಪ್ಪಿದಾಗ ಆಕಾಂಕ್ಷಿಗಳಿಗೆ ಅಸಮಾಧಾನ ಆಗುತ್ತದೆ. ಅದನ್ನು ಬಗೆಹರಿಸುವ ಸಾಮರ್ಥ್ಯ ಬಿಜೆಪಿಗೆ ಇದೆ. ಅಸಮಾಧಾನಿತರನ್ನು ಪ್ರತ್ಯೇಕವಾಗಿ ಕರೆದು ಮಾತನಾಡುವ ವ್ಯವಸ್ಥೆ ಇದೆ. ಸಂಘಟನೆ, ಸಂಘಪರಿವಾರದ ಮುಖಂಡರು ಸಮಾಲೋಚನೆ ಮಾಡುತ್ತಾರೆ ಎಂದು ಸುದರ್ಶನ್ ಹೇಳಿದರು.