ಬೆಟ್ಟಂಪಾಡಿ: ವಿಷು ಹಬ್ಬದ ಸಂದರ್ಭದಲ್ಲಿ ವರುಣನ ಕೃಪೆಗಾಗಿ ರುದ್ರಪಾರಾಯಣ ಮತ್ತು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸೀಯಾಳಾಭಿಷೇಕ ಏ. 15 ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜರಗಿತು.
ಪ್ರತೀ ವರ್ಷ ಕ್ಷೇತ್ರದಲ್ಲಿ ಈ ಪುಣ್ಯಪ್ರದ ಕಾರ್ಯಕ್ರಮ ನೆರವೇರುತ್ತಿದ್ದು, ವರುಣ ದೇವರು ಸಂತುಷ್ಟನಾಗಿ ಭೂಮಿಗೆ ವರ್ಷಧಾರೆ ಕಲ್ಪಿಸಿಕೊಡುತ್ತಾನೆ ಎಂಬ ನಂಬಿಕೆ ಅತೀವವಾಗಿದೆ. ಈ ಹಿನ್ನೆಲೆಯಲ್ಲಿ ಊರ ಪರವೂರ ಭಕ್ತಾಭಿಮಾನಿಗಳು ಸೀಯಾಳ ಸಮರ್ಪಿಸಿ ದೇವರನ್ನು ಪ್ರಸನ್ನೀಕರಿಸುತ್ತಾರೆ. ಈ ಬಾರಿ ವಿಷು ಸಂಕ್ರಮಣದ ವಿಶೇಷ ದಿನವೇ ಕ್ಷೇತ್ರದಲ್ಲಿ ಸೀಯಾಳಾಭಿಷೇಕ ನಡೆದಿದೆ. ಅದರ ಜೊತೆ ನೂರಾರು ರುದ್ರಾಧ್ಯಾಯಿಗಳಿಂದ ರುದ್ರಪಾರಾಯಣವೂ ನಡೆಯಿತು.
ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಆಡಳಿತ ಸಮಿತಿ, ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಅರ್ಚಕ ವೆಂಕಟ್ರಮಣ ಭಟ್, ನಿವೃತ್ತ ಅರ್ಚಕ ದಿವಾಕರ ಭಟ್ ಸೇರಿದಂತೆ ಭಕ್ತಾಭಿಮಾನಿಗಳು ಪಾಲ್ಗೊಂಡರು. ಇದೇ ವೇಳೆ ವಿಷು ಹಬ್ಬದ ಪ್ರಯುಕ್ತ ಮಾಮೂಲಿ ಸಂಪ್ರದಾಯದಂತೆ ದೇವಾಲಯದ ಅಂಗಣದಲ್ಲಿ ಅಂಬುಕಾಯಿ ಸ್ಪರ್ಧೆ ನಡೆಯಿತು.