ಕಾಯಕ್ಕಿಂತ ಕಾಯಕ ಮುಖ್ಯ: ಗುಡ್ಡಪ್ಪ ಗೌಡ ಬಲ್ಯ
ನೆಲ್ಯಾಡಿ: ಎ.4ರಂದು ನಿಧನರಾದ ಹವ್ಯಾಸಿ ಯಕ್ಷಗಾನ ಕಲಾವಿದ, ಕಡಬ ತಾಲೂಕಿನ ಬಲ್ಯ ಗ್ರಾಮದ ನಾಲ್ಗುತ್ತು ವಾಸಪ್ಪ ಗೌಡರವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಎ.14ರಂದು ಅವರ ಸ್ವಗೃಹದಲ್ಲಿ ನಡೆಯಿತು.
ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಗುಡ್ಡಪ್ಪ ಬಲ್ಯರವರು ಮಾತನಾಡಿ, ವಾಸಪ್ಪ ಗೌಡರು ಹುಟ್ಟು ಕಲಾವಿದ. ಅವರ ಕುಟುಂಬವೇ ಯಕ್ಷಗಾನದ ಮನೆ. ಕೃಷಿಯೊಂದಿಗೆ ಹೋಟೆಲ್ ಉದ್ಯಮ ನಡೆಸಿದವರು. ನಾಟಿವೈದ್ಯರಾಗಿಯೂ ಅನೇಕ ಜನರ ಜೀವ ಉಳಿಸಿದ್ದಾರೆ. ಬಲ್ಯದ ಶ್ರೀ ವಿನಾಯಕ ಯಕ್ಷಗಾನ ಸಂಘದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಕಲಾವಿದರಾಗಿ ಕೆಲಸ ಮಾಡಿದವರು. ಯಕ್ಷಗಾನ ಸಂಘಟಕ, ವಿಮರ್ಶಕ ಹಾಗೂ ಸಹೃದಯಿಯಾಗಿದ್ದು ಜನಸ್ನೇಹಿಯಾಗಿದ್ದರು. ಊರಿನ ಜನರ ನೋವು ನಲಿವುಗಳಲ್ಲಿ ಪಾಲ್ಗೊಂಡು ಜನಾನುರಾಗಿಯಾಗಿದ್ದರು. ಅವರ ಬದುಕನ್ನು ನೋಡಿದರೆ ಕಾಯಕ್ಕಿಂತ ಕಾಯಕ ಮುಖ್ಯ ಎಂದು ಅನಿಸುತ್ತದೆ. ಸಾರ್ಥಕ ಬದುಕು ನಡೆಸಿದ ವಾಸಪ್ಪ ಗೌಡರ ಆತ್ಮಕ್ಕೆ ಮೋಕ್ಷದಾಯಕನಾದ ಶ್ರೀಮನ್ನಾರಾಯಣ ದೇವರು ಸಾಯುಜ್ಯವನ್ನು ಕರುಣಿಸಲಿ ಎಂದರು.
ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರಾದ ಕಡೀರ ಮೋನಪ್ಪ ಗೌಡ, ನಾಲ್ಗುತ್ತು ಮನೆತನದ ಹಿರಿಯರಾದ ರಮೇಶ ಗೌಡ, ಊರ ಗೌಡರಾದ ಕಿರಣ್ ಪುತ್ತಿಲ, ಊರ ಪ್ರಮುಖರಾದ ಧನಂಜಯ ಕೊಡಂಗೆ, ಪೂರ್ಣೇಶ ಬಾಬ್ಲುಬೆಟ್ಟು, ನಾರಾಯಣ ಬಲ್ಯ, ಶಿವಪ್ರಸಾದ್ ಪುತ್ತಿಲ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ದೇವಯ್ಯ ಪನ್ಯಾಡಿ, ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ, ಯಕ್ಷಗಾನ ಭಾಗವತರಾದ ಲಕ್ಷ್ಮೀ ನಾರಾಯಣ ಶೆಟ್ಟಿ ನೆಲ್ಯಾಡಿ, ನಿವೃತ್ತ ಯೋಧ ಗಿರಿಧರ ಗೌಡ ಕಡೀರ, ಕೃಷ್ಣಪ್ಪ ದೇವಾಡಿಗ, ಸತೀಶ್ಚಂದ್ರ ಅತ್ರಿಜಾಲು, ಚಂದ್ರಶೇಖರ ಪಾತ್ರಾಜೆ ಸೇರಿದಂತೆ ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು, ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದರು. ಸಭೆಯ ಕೊನೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಮ್ಮಿ ಗೌಡ ನಾಲ್ಗುತ್ತು, ಜಯರಾಮ ಗೌಡ ನಾಲ್ಗುತ್ತು ಕಾರ್ಯಕ್ರಮ ನಿರೂಪಿಸಿದರು. ಮೃತರ ಪತ್ನಿ ಸುಶೀಲಾ, ಮಕ್ಕಳಾದ ಯಶೋಧರ ಗೌಡ, ಕೇಶವ ಗೌಡ, ರಾಜೀವಿ, ಅಳಿಯ ನಾರಾಯಣ ಗೌಡ, ಸೊಸೆ ಸುನಂದ ಹಾಗೂ ಮೊಮ್ಮಕ್ಕಳು ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದರು.