ಮನವೊಲಿಸುವುದನ್ನು ನಿಲ್ಲಿಸಿದ ಆರ್.ಎಸ್.ಎಸ್! ಮಾಸ್ಟರ್‌ಪ್ಲ್ಯಾನ್ ರೂಪಿಸಿದ ಸಂಘಪರಿವಾರ ; ಪುತ್ತಿಲರನ್ನು ಮಣಿಸಲು ಜಗದೀಶ್ ಕಾರಂತರನ್ನು ಫೀಲ್ಡ್‌ಗಿಳಿಸಲು ಚಿಂತನೆ

0

ವಿಶೇಷ ವರದಿ: ಸಂತೋಷ್ ಕುಮಾರ್ ಶಾಂತಿನಗರ

ಪುತ್ತೂರು; ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅರುಣ್ ಕುಮಾರ್ ಪುತ್ತಿಲರವರ ಮನವೊಲಿಸುವುದನ್ನು ನಿಲ್ಲಿಸಲು ಸಂಘ ಪರಿವಾರದ ನಾಯಕರು ನಿರ್ಧರಿಸಿದ್ದಾರೆ. ಅರುಣ್ ಕುಮಾರ್ ಪುತ್ತಿಲರವರೊಂದಿಗೆ ಗುರುತಿಸಿಕೊಂಡಿರುವ ಕಾರ್ಯಕರ್ತರನ್ನು ಮನವೊಲಿಸಿ ಮತ್ತೆ ಬಿಜೆಪಿಯಲ್ಲಿ ಸಕ್ರಿಯರನ್ನಾಗಿಸಲು ಆರ್‌ಎಸ್‌ಎಸ್ ಪ್ರಮುಖರು ಮಾಸ್ಟರ್‌ಪ್ಲ್ಯಾನ್ ರೂಪಿಸಿದ್ದಾರೆ. ಅರುಣ್ ಕುಮಾರ್ ಪುತ್ತಿಲರವರನ್ನು ಮಣಿಸುವುದಕ್ಕಾಗಿ ಹಿಂದೂ ಸಂಘಟನೆಗಳ ಫೈರ್‌ಬ್ರಾಂಡ್ ನಾಯಕ ಜಗದೀಶ್ ಕಾರಂತ್ ಅವರನ್ನು ಫೀಲ್ಡ್‌ಗಿಳಿಸಲು ಆರ್‌ಎಸ್‌ಎಸ್ ಚಿಂತನೆ ನಡೆಸಿದೆ.

ಪುತ್ತಿಲರ ಮನವೊಲಿಕೆ ಸ್ಥಗಿತ: ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಆಶಾ ತಿಮ್ಮಪ್ಪ ಗೌಡರವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸುತ್ತಿದ್ದಂತೆಯೇ ಸಂಘ ಪರಿವಾರದಲ್ಲಿ ಗುರುತಿಸಿಕೊಂಡ ಕಾರ್ಯಕರ್ತರಿಂದಲೇ ಆಕ್ರೋಶ ಸ್ಫೋಟಗೊಂಡಿತ್ತು. ಹಿಂದುತ್ವದ ಭದ್ರಕೋಟೆಯಾಗಿರುವ ಪುತ್ತೂರಿನಲ್ಲಿ ಜಾತಿ ಆಧರಿತವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಸರಿಯಲ್ಲ ಎಂದು ಕಾರ್ಯಕರ್ತರಿಂದ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಬಾರಿಯೂ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರವರನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ಉಂಟಾಗಿತ್ತು. ಈ ನಿಟ್ಟಿನಲ್ಲಿ ಅಭಿಮಾನಿಗಳ ಆಗ್ರಹದಂತೆ ಅರುಣ್ ಕುಮಾರ್ ಪುತ್ತಿಲರವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಕಣಕ್ಕಿಳಿಯಲಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಸಂಘ ಪರಿವಾರದ ನಾಯಕರು ಅಲರ್ಟ್ ಆಗಿದ್ದರು. ಪುತ್ತಿಲರವರನ್ನು ಮನವೊಲಿಸಲು ಶತ ಪ್ರಯತ್ನ ನಡೆಸಿದ್ದರು. ಆದರೆ, ಈ ಹಿಂದಿನ ಚುನಾವಣೆಗಳಂತೆಯೇ ಈ ಬಾರಿಯೂ ನನಗೆ ಭರವಸೆಯ ಮಾತುಗಳು ಸಿಗುತ್ತಿದೆ ಹೊರತು ನ್ಯಾಯ ಸಿಗುತ್ತಿಲ್ಲ ಎಂದು ಅರುಣ್ ಪುತ್ತಿಲ ಆಕ್ಷೇಪ ವ್ಯಕ್ತಪಡಿಸಿದ್ದರು.

ನಂತರ ಸ್ವಾಮೀಜಿಗಳನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದಿದ್ದ ಅರುಣ್ ಕುಮಾರ್ ಪುತ್ತಿಲರವರು ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಬೆಂಬಲ ಯಾಚಿಸಿದ್ದರು. ಉತ್ತಮ ಸ್ಪಂದನ ದೊರಕಿದ್ದರಿಂದ ಅವರು ಸಾವಿರಾರು ಮಂದಿಯ ಸಮ್ಮುಖದಲ್ಲಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದ್ದಾರೆ. ಅರುಣ್ ಪುತ್ತಿಲರವರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದು ಖಚಿತ ಆಗುತ್ತಿದ್ದಂತೆಯೇ ಸಂಘ ಪರಿವಾರದ ನಾಯಕರು ತಮ್ಮ ಕಾರ್ಯಶೈಲಿ ಬದಲಾಯಿಸಿದ್ದಾರೆ. ಅರುಣ್ ಕುಮಾರ್ ಪುತ್ತಿಲರವರನ್ನು ಮನವೊಲಿಸುವುದನ್ನು ಕೈ ಬಿಡಲು ನಿರ್ಧರಿಸಿರುವ ಪ್ರಮುಖರು ಪುತ್ತಿಲ ಅವರೊಂದಿಗೆ ಇರುವ ಕಾರ್ಯಕರ್ತರನ್ನು ಸೆಳೆಯಲು ಮಾಸ್ಟರ್‌ಪ್ಲ್ಯಾನ್ ರೂಪಿಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರು ತಮ್ಮ ಕೈ ತಪ್ಪದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಂಘ ಪರಿವಾರದ ನಾಯಕರು ಅಲ್ಲಲ್ಲಿ ಸುತ್ತು ಬೈಠಕ್ ನಡೆಸುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲರವರನ್ನು ಬೆಂಬಲಿಸದಂತೆ ಮನವಿ ಮಾಡುತ್ತಿದ್ದಾರೆ. ಹಿರೇಬಂಡಾಡಿ, ಉಪ್ಪಿನಂಗಡಿ, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ, ಪೆರ್ನೆ, ಕೆದಿಲ, ಬಿಳಿಯೂರು, ಬೆಟ್ಟಂಪಾಡಿ, ನರಿಮೊಗ್ರು, ಮುಂಡೂರು, ಮುರ ಮುಂತಾದೆಡೆ ಸುತ್ತು ಬೈಠಕ್ ನಡೆಸಲಾಗಿದೆ. ಕೆಲವು ಕಡೆಗಳಲ್ಲಿ ಸಂಘ ಪರಿವಾರದ ನಾಯಕರ ಮಾತಿಗೆ ಸ್ಪಂದನೆ ದೊರಕಿದೆ. ಕೆಲವೆಡೆ ಮಾತ್ರ ಪ್ರಬಲ ವಿರೋಧ ವ್ಯಕ್ತವಾಗಿದೆ.

ಆಕ್ರೋಶಿತ ಕಾರ್ಯಕರ್ತರು ನಾಯಕರನ್ನು ತರಾಟೆಗೆತ್ತಿಕೊಂಡಿದ್ದಾರೆ. ಜಾತಿ ಆಧಾರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೀರಾ, ನಿಮಗೆ ಬೇಕಾದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ನಮ್ಮಿಂದ ಕೆಲಸ ಮಾಡಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆಶಾ ತಿಮ್ಮಪ್ಪ ಗೌಡರವರನ್ನು ಜಾತಿ ಆಧಾರದಲ್ಲಿ ಕಣಕ್ಕಿಳಿಸಿಲ್ಲ. ಸಂಘ ಪರಿವಾರದ ಮನೆಯವರೇ ಆಗಿರುವ ಆಶಾ ತಿಮ್ಮಪ್ಪರವರು ಸಭ್ಯ ರಾಜಕಾರಣಿಯಾಗಿದ್ದಾರೆ. ಹಾಗಾಗಿ ಅವರನ್ನು ಗೆಲ್ಲಿಸಬೇಕು ಎಂದು ಸಂಘ ಪರಿವಾರದ ನಾಯಕರು ಹೇಳಿದ್ದಾರೆ. ಆದರೂ ಕೆಲವೆಡೆ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಹಲವರು ಅರುಣ್ ಪುತ್ತಿಲ ಜತೆ ಕಾಣಿಸಿಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಪರ್ಯಾಯ ಪ್ಲ್ಯಾನ್ ರೂಪಿಸಿದ್ದಾರೆ.

ಫೈರ್‌ಬ್ರಾಂಡ್ ನಾಯಕ ಜಗದೀಶ್ ಕಾರಂತ್‌ಗೆ ಬುಲಾವ್!

ತನ್ನ ಖಾರದ ಮಾತುಗಳ ಮೂಲಕ ಹಿಂದೂ ಸಂಘಟನೆಯ ಕಾರ್ಯಕರ್ತರ ಹಾಟ್ ಫೇವರೆಟ್ ಆಗಿರುವ ಜಗದೀಶ್ ಕಾರಂತರವರನ್ನು ಪುತ್ತೂರಿಗೆ ಕರೆ ತರಲು ಆರ್‌ಎಸ್‌ಎಸ್ ಸಿದ್ಧತೆ ನಡೆಸಿದೆ. ಹಿಂದು ಜಾಗರಣ ವೇದಿಕೆಯ ಪರಮೋಚ್ಛ ನಾಯಕರಾಗಿರುವ ಜಗದೀಶ್ ಕಾರಂತ್ ಅವರನ್ನು ಪುತ್ತೂರಿಗೆ ಕರೆಸಿಕೊಂಡು ಅರುಣ್ ಕುಮಾರ್ ಪುತ್ತಿಲರವರನ್ನು ಮಣಿಸಬೇಕು ಎಂಬುದು ಆರ್‌ಎಸ್‌ಎಸ್ ರೂಪಿಸಿದ ಹೊಸ ಯೋಜನೆಯಾಗಿದೆ. ಜಗದೀಶ್ ಕಾರಂತ ಅವರು ಪುತ್ತೂರಿಗೆ ಅತ್ಯಂತ ನಿಕಟವರ್ತಿಯಾಗಿರುವ ನಾಯಕರಾಗಿದ್ದಾರೆ. ತನ್ನ ಬೆಂಕಿ ಉಗುಳುವ ಭಾಷಣದಿಂದ ಮತ್ತು ಖಡಕ್ ಮಾತಿನಿಂದ ಪ್ರಸಿದ್ಧಿ ಪಡೆದಿರುವ ಹಾಗೂ ಸಂಘ ಪರಿವಾರದ ಶಿಸ್ತನ್ನು ತಪ್ಪಿದರೆ ಬಿಜೆಪಿ ನಾಯಕರನ್ನೂ ನೇರಾನೇರ ತರಾಟೆಗೆತ್ತಿಕೊಳ್ಳುವ ಹಿರಿಯರಾದ ಜಗದೀಶ್ ಕಾರಂತ್ ಅವರು ಪುತ್ತೂರಿಗೆ ಬಂದು ಠಿಕಾಣಿ ಹೂಡಿದರೆ ಖಂಡಿತವಾಗಿಯೂ ಅರುಣ್ ಪುತ್ತಿಲ ಮತ್ತು ಅವರ ಟೀಮನ್ನು ಕಂಟ್ರೋಲ್ ಮಾಡಬಹುದು ಎಂದು ಸಂಘದ ಬೈಠಕ್‌ನಲ್ಲಿ ಚರ್ಚೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕಾರಂತರಿಗೆ ಬುಲಾವ್ ಹೋಗಿದೆ. ಈ ಹಿಂದೆ ಬಜರಂಗದಳ ಮತ್ತು ಶ್ರೀರಾಮಸೇನೆಯಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಪ್ರಸ್ತುತ ಯಾವ ಹಿಂದೂ ಸಂಘಟನೆಯ ಜವಾಬ್ದಾರಿಯನ್ನೂ ಹೊಂದಿಲ್ಲ. ಆದರೆ, ಪುತ್ತಿಲ ಅವರೊಂದಿಗೆ ಹಿಂದು ಜಾಗರಣ ವೇದಿಕೆಯ ಹಲವು ಕಾರ್ಯಕರ್ತರು ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅರುಣ್ ಪುತ್ತಿಲರವರ ಜತೆ ಇರುವ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರನ್ನು ತಮ್ಮತ್ತ ಸೆಳೆಯಲು ಹಿಂದು ಜಾಗರಣ ವೇದಿಕೆಯ ನಾಯಕರಾಗಿರುವ ಜಗದೀಶ್ ಕಾರಂತ್ ಅವರೇ ಸೂಕ್ತ ವ್ಯಕ್ತಿ ಎಂದು ಸಂಘದ ನಾಯಕರ ಮಧ್ಯೆ ಮಾತುಕತೆ ನಡೆದು ಕಾರಂತರಿಗೆ ಕರೆ ಹೋಗಿದೆ. ಅಳೆದು ತೂಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರಾಗಿರುವ ಜಗದೀಶ್ ಕಾರಂತ್ ಅವರು ಪುತ್ತೂರಿಗೆ ಬರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here