ಸುಧಾಕರ್ ಕಾಣಿಯೂರು
ಕಾಣಿಯೂರು : ಕಡು ಬೇಸಿಗೆ, ಬಿಸಿಲ ಧಗೆ, ಭೂಮಿ ಬೆಂದು ಬರಡಾಗಿ ಬಸವಳಿಯುತ್ತಿದ್ದಂತೆ ಜಲಮೂಲಗಳು ಆವಿಯಾಗಿ ಬತ್ತಿ ಬರಡಾಗುತ್ತಿದೆ. ಬರಗಾಲದೊಂದಿಗೆ ನೀರಿಗೆ ಹಾಹಾಕಾರದ ಮುನ್ಸೂಚನೆ ನೀಡಿ ಶಾಂತಿಮೊಗರು ಕುಮಾರಧಾರ ನದಿ ಬತ್ತಿ ಬರಡಾಗುವ ಆತಂಕ ಎದುರಾಗಿದೆ. ಕುಮಾರಧಾರ ನದಿಗೆ ಶಾಂತಿಮೊಗೇರು ಎಂಬಲ್ಲಿ ನಿರ್ಮಾಣವಾದ ಬೃಹತ್ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಿಸಿದರೂ ನೀರು ಬತ್ತಿ ಹೋಗುತ್ತಿರುವ ಈ ಬಿರುಬೇಸಿಗೆಯಲ್ಲಿ ಅಣೆಕಟ್ಟಿನಲ್ಲಿ ನೀರಿಲ್ಲದೆ ಬಣಗುಡುತ್ತಿದೆ. ಹಲಗೆ ಜೋಡಿಸಿದರೂ ನೀರು ಹಲಗೆಯ ಕೆಳಗಿನಿಂದ ಸೋರಿ ಹೋಗುತ್ತಿದ್ದು, ನೀರಿನ ಶೇಖರಣೆಯೇ ಇಲ್ಲದಂತಾಗಿದೆ. ನದಿಯಲ್ಲಿ ಸಾಕಷ್ಟು ನೀರು ಇದ್ದಾಗ ಹಲಗೆ ಜೋಡಿಸದೆ, ನೀರು ಕಡಿಮೆಯಾದಾಗ ಹಲಗೆ ಜೋಡಿಸಿ ಈಗ ನೀರು ಶೇಖರಣೆಯಾಗದೆ ಅಣೆಕಟ್ಟು ಖಾಲಿ ಖಾಲಿ ಕಾಣುತ್ತಿದೆ. ಅಣೆಕಟ್ಟು ಪರಿಸರದಲ್ಲಿ ನೀರು ಬತ್ತಿ ಹೋಗುತ್ತಿದ್ದು. ಕೃಷಿಕರು ತಮ್ಮ ಕೃಷಿ ತೋಟಗಳಿಗೆ ನೀರುಣಿಸಲು ಪರದಾಡುತ್ತಿರುವ ಈ ಸಂದರ್ಭದಲ್ಲಿ ಅಣೆಕಟ್ಟೆಯಲ್ಲಿ ನೀರು ತುಂಬಿ ತುಳುಕುತ್ತಿದ್ದರೆ ಅನುಕೂಲವಾಗುತ್ತಿತ್ತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಅಂತರ್ಜಲ ಕುಸಿಯುತ್ತಿರುವುದರಿಂದ ರೈತರು ಕಂಗಾಲಾಗಿರುವುದಲ್ಲದೆ, ಧಾರಾಳ ನೀರು ಇದ್ದ ಸಂದರ್ಭ ಹಲಗೆ ಜೋಡಣೆ ಮಾಡಿರುವುದರಿಂದ ಈಗ ಅಣೆಕಟ್ಟಿನಲ್ಲಿ ನೀರು ತುಂಬದೇ ಇರುವುದಕ್ಕೆ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳುವ ಉದ್ದೇಶದಿಂದ ಈ ಕಿಂಡಿ ಅಣೆಕಟ್ಟು ನಿರ್ಮಾಣವಾದರೂ ಈ ಬಿರುಬೇಸಿಗೆಯಲ್ಲಿ ಅದು ಫಲಕ್ಕೆ ಸಿಗುವ ಸಾಧ್ಯತೆ ಇಲ್ಲ. ಇನ್ನೇನಿದ್ದರೂ ಬರುವ ಬೇಸಿಗೆಗೆ ಭರಪೂರ ನೀರು ಶೇಖರಣೆ ಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅಧಿಕಾರಿಗಳ ಭರವಸೆಯ ಮಾತು ಕೇಳಿ ಸಾಕಾಗಿದ್ದ ಇಲ್ಲಿನ ನಾಗರಿಕರು, ಹಲಗೆ ಜೋಡಿಸುವಾಗ ನಿಟ್ಟುಸಿರು ಬಿಟ್ಟಿದ್ದರು. ಆದರೆ ಭರಪೂರ ನೀರಿನ ಭರವಸೆ ಬರಡಾಗಿ ಹೋಯಿತು.
ಇಲ್ಲಿನ ಮೂರು ದಶಕಗಳ ಬೇಡಿಕೆಯಾದ, ಬೃಹತ್ ಸೇತುವೆ ಸಾಕಾರಗೊಂಡ ಬಳಿಕ ಇದೀಗ ಇದೇ ಸೇತುವೆಯ ಕೆಳಗಡೆ ಬೃಹತ್ ಕಿಂಡಿ ಅಣೆಕಟ್ಟು ಹವಾಮಾನ ವೈಪರೀತ್ಯ, ಕೋವಿಡ್, ಮುಂತಾದ ಕಾರಣಗಳನ್ನು ನೀಡಿ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಅಂತು ಇಂತು ಈ ವರ್ಷದಲ್ಲಿ ಕೊನೆಗೊಂಡಿದೆ. ಅಣೆಕಟ್ಟು ಅನುಷ್ಠಾನವಾಗಿರುವುದರಿಂದ ಉದ್ದೇಶಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಪೂರಕವಾಗಲಿದೆ. ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖಾಂತರ 7.5 ಕೋಟಿ ರೂ ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣವಾಗಿದೆ. ಇದರಿಂದ ಕುಡಿಯುವ ನೀರಿಗೆ ಬಳಕೆ ಮಾಡುವ ಉದ್ದೇಶವಿದ್ದರೂ, ಕೃಷಿ ಬಳಕೆಗಾಗಿ ಈ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ನದಿಯ ತಳಮಟ್ಟದಿಂದ ನಾಲ್ಕು ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಈ ಅಣೆಕಟ್ಟು 221.4 ಮೀಟರ್ ಉದ್ದ ಹಾಗೂ 3.75 ಮೀಟರ್ ಅಗಲ ವಿದೆ. ಐವತ್ತಾರು ಕಿಂಡಿಗಳನ್ನು ನಿರ್ಮಾಣ ಮಾಡಲಾಗಿದೆ. 56 ಪಿಲ್ಲರ್‌ಗಳಲ್ಲಿ ಸ್ಲಾಬ್ ಜೋಡನೆ ಮಾಡಲಾಗಿದೆ.
ಹಲಗೆ ಜೋಡಿಸಿದಾಗ ಸುಮಾರು 18.56 ಎಮ್‌ಸಿಎಫ್‌ಟಿ ನೀರು ಶೇಖರಣೆಯಾಗಬೇಕು ದಶಂಬರ್ ಆರಂಭದಿಂದ ನದಿಯ ನೀರಿನ ಮಟ್ಟವನ್ನು ನೋಡಿಕೊಂಡು ಹಲಗೆಗಳನ್ನು ಕಿಂಡಿಗಳಿಗೆ ಜೋಡಣೆ ಮಾಡಬೇಕಾಗಿದೆ. ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದಂತೆ ಹಲಗೆಗಳನ್ನು ತೆಗೆದು ಮಳೆಗಾಲದಲ್ಲಿ ನದಿಯನ್ನು ಯಾವುದೇ ಅಡೆತಡಗಳಿಲ್ಲದೆ ಹರಿಯಬಿಡಬೇಕು. ಕಿಂಡಿ ಅಣೆಕಟ್ಟು ನದಿಯ ಇಕ್ಕೆಲಗಳಲ್ಲಿ ಸುಮಾರು ಎರಡರಿಂದ ಮೂರು ಕಿಲೋ ಮೀಟರ್ ಸುತ್ತಳತೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ, ಕೃಷಿಕರ ಕೊಳವೆಬಾವಿ, ಕುಡಿಯುವ ನೀರಿನ ಬಾವಿ ಹಾಗೂ ಕೆರೆಗಳಲ್ಲಿ ಬಿರು ಬೇಸಿಗೆಯಲ್ಲೂ ಸಾಕಷ್ಟು ನೀರು ತುಂಬಲಿದೆ. ಕುಡಿಯುವ ನೀರಿಗಾಗಿ ಬಳಕೆ ಮಾಡುವ ಉದ್ದೇಶವಿರುವುದರಿಂದ ಪೈಪುಲೈನ್ ಮೂಲಕ ಶಾಂತಿಮೊಗೇರುವಿನ ಆಸು ಪಾಸಿನ ಕುದ್ಮಾರು, ಸವಣೂರು, ಬೆಳಂದೂರು, ಕಾಣಿಯೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಇತ್ತ ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳಿಗೆ ನೀರು ಸರಬರಾಜು ಮಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಟಾನ ಮಾಡುವ ಉದ್ದೇಶ ಹೊಂದಲಾಗಿದ್ದು, ಆದರೆ ಈ ವರ್ಷ ಇದೆಲ್ಲಾ ಮರೀಚಿಕೆಯಾಗಿ ಉಳಿದಿದೆ.
ಕುಮಾರಧಾರ ನದಿಗೆ ಶಾಂತಿಮೊಗರು ಎಂಬಲ್ಲಿ ಬೃಹತ್ ಅಣೆಕಟ್ಟು ನಿರ್ಮಾಣವಾಗಿ ವರ್ಷ ಕಳೆದರೂ ಕೂಡ ಹಲಗೆ ಜೋಡಣೆಯಾಗದೆ ಯೋಜನೆ ನಿರುಪಯುಕ್ತವಾಗಿತ್ತು. ಸಾರ್ವಜನಿಕ ಆಕ್ರೋಶದ ಬಳಿಕ ಹಲಗೆ ಜೋಡಣೆ ಕಾರ್ಯ ನಡೆದಿದೆ. ಹಲಗೆ ಜೋಡಣೆ ಕಾರ್ಯ ನಡೆದ ತಕ್ಷಣವೇ ಹಲಗೆ ಕೆಳ ಭಾಗದಿಂದ ನೀರಿನ ಸೋರಿಕೆ ಉಂಟಾಗಿರುವ ಬಗ್ಗೆಯೂ ಸಾರ್ವಜನಿಕ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಹಲಗೆ ಜೋಡಣೆ ಕಾರ್ಯಕ್ಕೆ ನೂತನ ಶೈಲಿಯಲ್ಲಿ ರೈಲ್ವೇ ಗೇಟ್‌ಗಳನ್ನು ಜೋಡಿಸಿ ಕಾಮಗಾರಿ ನಡೆಸುವ ಉದ್ದೇಶದಿಂದ ಪರಿಕರಗಳನ್ನು ತಂದು ಹಾಕಲಾಗಿತ್ತು. ಈ ಯೋಜನೆ ತುಂಬ ದುಬಾರಿಯಾಗಿರುವುದರಿಂದ ಅದನ್ನು ಕೈಬಿಟ್ಟು ಈ ಹಿಂದಿನಂತೆ ಹಳೆಯ ವಿಧಾನದಲ್ಲಿ ಹಲಗೆ ಜೋಡಿಸುವ ಕಾರ್ಯ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದ ಈ ಕಾರ್ಯ ತಡವಾಗಿದೆ. ಹಾಗಾಗಿ ನೀರಿನ ಒಳಹರಿವು ಕಡಿಮೆಯಾದ ಸಂದರ್ಭದಲ್ಲಿ ಹಲಗೆ ಜೋಡಿಸಬೇಕಾಯಿತು. ಸಾಮಾನ್ಯವಾಗಿ ಮಳೆ ಕಡಿಮೆಯಾದ ತಕ್ಷಣ ಹಲಗೆ ಜೋಡಿಸಿದರೆ ನೀರಿನ ಒತ್ತಡಕ್ಕೆ ಹಲಗೆ ರಬ್ಬರ್‌ನಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ನೀರು ಸೋರಿಕೆಯಾಗುವುದಿಲ್ಲ. ಈಗ ನೀರಿನ ಒತ್ತಡ ಇಲ್ಲ. ಹಾಗಾಗಿ ನೀರು ಸೋರಿಕೆಯಾಗುತ್ತಿದೆ. ಈ ವರ್ಷದ ಮಳೆಗಾಲ ಮುಗಿದ ಬಳಿಕ ನೀರಿನ ಒತ್ತಡ ಇರುವಾಗಲೇ ಹಲಗೆಗಳನ್ನು ಸಮರ್ಪಕವಾಗಿ ಜೋಡಣೆ ಮಾಡಿ ನೀರು ಶೇಖರಣೆ ಮಾಡಲಾಗುವುದು- ಡಿ.ಎಂ.ಶಿವಪ್ರಸನ್ನ, ಸಹಾಯಕ ಇಂಜಿನಿಯರ್, ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಮಂಗಳೂರು