ಸತ್ಯನಾರಾಯಣ ಪೂಜೆ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಪುತ್ತೂರು:ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎ.22ರಂದು ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬೆಳಿಗ್ಗೆ 8 ಗಂಟೆಗೆ ಶ್ರೀಸತ್ಯನಾರಾಯಣ ಪೂಜೆಯು ಪ್ರಾರಂಭಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬೆಂಗಳೂರು ಮರಾಟಿ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಮಜಕ್ಕಾರ್, ಗಂಜಿಮಠ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶೇಖರ ಕಡ್ತಲ, ಪೆರ್ಲ ಶ್ರೀಶಾರದಾ ಮರಾಟಿ ಸಮಾಜ ಸೇವ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾರಿಕ್ಕಾಡು, ಮೆಸ್ಕಾ ಪುತ್ತೂರಿನ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ನಾಯ್ಕ್, ಮಂಗಳೂರು ನ್ಯೂ ಇಂಡಿಯಾ ಅಶ್ಯೂರೆನ್ಸ್‌ನ ಡಿವಿಜನಲ್ ಮ್ಯಾನೇಜರ್ ವೇದಾವತಿ ಎನ್., ಪೆರ್ಲಂಪಾಡಿ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪದ್ಮನಾಭ ನಾಯ್ಕ ಸರಸ್ವತಿಮೂಲೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕರವರಿಗೆ ವಿಶೇಷ ಸನ್ಮಾನ ನಡೆಯಲಿದೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಮಾಜ ಬಾಂಧವ ಸಾಧಕರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.