ಕಡಬ: ಎಲ್. ಪಿ.ಜಿ ಗ್ಯಾಸ್ ದರವು ಕಡಿಮೆಯಾದರೂ ಹಿಂದಿನ ದರವನ್ನೆ ಪಡೆದ ಎಲ್.ಪಿ.ಜಿ.ಗ್ಯಾಸ್ ಸಿಬ್ಬಂದಿಯನ್ನು ಪ್ರಶ್ನಿಸಿದ ಅಟೋ ಚಾಲಕನಿಗೆ “ಹೋಗಿ ಹಗ್ಗ ತಗೊಳ್ಳಿ”
ಎಂದು ಉಢಾಪೆ ಉತ್ತರ ನೀಡಿದ ಬಗ್ಗೆ ಕಡಬದ ಅಟೋ ಚಾಲಕರು ಪಂಪ್ ಗೆ ಮುತ್ತಿಗೆ ಹಾಕಿದ ಘಟನೆ ಏ.19ರಂದು ನಡೆದಿದೆ.
ಏ.19ರಂದು ಎಲ್.ಪಿ.ಜಿ.ಗ್ಯಾಸ್ ದರವು ಸುಮಾರು 11ರೂಪಾಯಿ ಕಡಿಮೆ ಆಗಿದ್ದರೂ ಪಂಪ್ ಸಿಬ್ಬಂದಿ ಬೆಳಿಗ್ಗೆ 6 ರಿಂದ ಹಿಂದಿನ ದಿನದ ದರವನ್ನೆ ಪಡೆಯುತ್ತಿದ್ದರು. ಇದನ್ನು ಪ್ರಶ್ನಿಸಿದ ಅಟೋ ಚಾಲಕರೋರ್ವರಿಗೆ ಪಂಪ್ ಸಿಬ್ಬಂದಿ ಹೋಗಿ ಹಗ್ಗ ತಗೊಳ್ಳಿ ಎಂದು ಉಢಾಪೆ ಉತ್ತರ ನೀಡಿದ್ದರೆನ್ನಲಾಗಿದ್ದು ವಿಷಯ ತಿಳಿದ ಅಟೋ ಚಾಲಕರು ಪಂಪ್ ಗೆ ತಂಡೋಪತಂಡವಾಗಿ ಬಂದಿದ್ದರು. ಪ್ರಾರಂಭದಲ್ಲಿ ಹೆಚ್ಚುವರಿ ಪಡೆದ ಹಣವನ್ನು ಅಟೋ ಚಾಲಕರಿಗೆ ನೀಡಲು ಸಿಬ್ಬಂದಿ ಒಪ್ಪಿರಲಿಲ್ಲ.
ಆಟೋ ಚಾಲಕರು, ಅಧಿಕ ದರವನ್ನು ವಾಪಾಸು ನೀಡಬೇಕು, ಸಿಬ್ಬಂದಿ ಕ್ಷಮೆ ಹೇಳಬೇಕೆಂದು ಹಠ ಹಿಡಿದಿದ್ದರು. ಕೂಡಲೇ ಸೇಲ್ಸ್ ಮ್ಯಾನೇಜರ್ ಮಧ್ಯಪ್ರವೇಶಸಿ ಸಿಬ್ಬಂದಿಗಳಿಂದ ಆಗಿರುವ ಪ್ರಮಾದವನ್ನು ಒಪ್ಪಿಕೊಂಡು, ಬೆಳಿಗ್ಗೆ 6 ಗಂಟೆಯಿಂದ 9 ಗಂಟೆ ತನಕ ಗ್ಯಾಸ್ ಹಾಕಿರುವ ಆಟೋಗಳಿಂದ ಹೆಚ್ಚುವರಿಯಾಗಿ ಪಡೆದುಕೊಂಡಿರುವ ಹಣವನ್ನು ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪರ್ಪಲ್ ಎಲ್.ಪಿ.ಜಿ. ಗ್ಯಾಸ್ ಪಂಪ್ ನವರಲ್ಲಿ ವಿಚಾರಿಸಿದಾಗ, ನಮಗೆ ಪರ್ಫಲ್ ಕಂಪೆನಿಯಿಂದ ದರ ಕಡಿಮೆಯಾಗಿರುವ ಬಗ್ಗೆ ಮಾಹಿತಿ ಬರುವಾಗ ತಡವಾಗಿತ್ತು. ಈ ಹಿನ್ನೆಲೆಯಲ್ಲಿ ಗೊಂದಲ ವಾಗಿತ್ತು. ಉಢಾಪೆ ಮಾತನಾಡಿದ ಸಿಬ್ಬಂದಿಯನ್ನು ಇಲ್ಲಿಂದ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.