ಹೆತ್ತವರ ಸೇವೆ ನನ್ನ ಪಾಲಿಗೊಲಿದ ಪರಮ ಭಾಗ್ಯ ಎಂದ ಐಟಿ ಉದ್ಯೋಗಿ ಪ್ರಸನ್ನ ಪೈ

0


ಉಪ್ಪಿನಂಗಡಿ : ವೃದ್ದಾಪ್ಯದಲ್ಲಿನ ಹೆತ್ತವರವನ್ನು ಕಡೆಗಣಿಸುತ್ತಿರುವ ಘಟನಾವಳಿಗಳೇ ಎಲ್ಲೆಡೆ ಕಾಣುತ್ತಿರುವಾಗ, ದೂರದ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಟಿ ಉದ್ಯೋಗಿಯೋರ್ವರು ತನ್ನ ಹುಟ್ಟೂರಾದ ಉಪ್ಪಿನಂಗಡಿಯಲ್ಲಿರುವ ವೃದ್ದಾಪ್ಯದ ಮಾತಾಪಿತರ ಸೇವೆಗೆಂದು ಬದುಕನ್ನು ಮೀಸಲಿರಿಸುವ ಮೂಲಕ ಸಕಲ ಸಂಪತ್ತಿಗಿಂತಲೂ ಹೆತ್ತವರ ಸೇವೆಯೇ ಹಿರಿದಾದ ಸಂಪತ್ತೆಂದು ಕಾರ್ಯರೂಪದಲ್ಲಿ ಮಾಡಿ ಗಮನ ಸೆಳೆದಿದ್ದಾರೆ.


ಉಪ್ಪಿನಂಗಡಿಯ ಹಿರಿಯ ಸ್ವಯಂಸೇವಕ ಯು ಶ್ರೀನಿವಾಸ್ ಪೈ ರವರು ಕಳೆದ ಶನಿವಾರ ನಿಧನರಾದ ಕಾರಣಕ್ಕೆ ನಮ್ಮ ಪತ್ರಿಕಾ ಪ್ರತಿನಿಧಿ ಅವರ ಅಂತಿಮ ದರ್ಶನಕ್ಕೆಂದು ಅವರ ಮನೆಗೆ ಭೇಟಿ ನೀಡಿದ ಸಂಧರ್ಭದಲ್ಲಿ ಅವರ ಮಗ ಪ್ರಸನ್ನ ಪೈ ರವರ ಆದರ್ಶಮಯವಾದ ಕರ್ತವ್ಯ ಬದ್ದತೆ ಅನಾವರಣವಾಗಿತ್ತು. 6 ತಿಂಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡೆ. ಇದೀಗ ತನ್ನ ತಂದೆಯನ್ನೂ ಕಳೆದುಕೊಂಡೆ ಎಂದು ದುಃಖಿಸುತ್ತಿದ್ದ ಪ್ರಸನ್ನ ರವರನ್ನು ಮಾತಿಗಿಳಿಸಿದಂತೆ ಅವರೊಳಗಿನ ಆದರ್ಶಮಯವಾದ ಮಗನ ಪಾತ್ರ ಅನಾವರಣಗೊಂಡಿತ್ತು.
ಅದು ಸುಮಾರು 2017 ರ ಇಸವಿಯ ಒಂದು ದಿನ. ತಾಯಿ ತೀವ್ರ ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಯ ಕಾರಣಕ್ಕೆ ಬೆಂಗಳೂರಿನಿಂದ ಉಪ್ಪಿನಂಗಡಿಗೆ ಬಂದಿದ್ದೆ. ತಾಯಿಗೆ ಎದ್ದೆಳಲೂ ನನ್ನ ಸಹಾಯದ ಅಗತ್ಯ ಇದ್ದ ಸಮಯದಲ್ಲಿ ನಾನು ಅವರ ಸೇವೆ ಮಾಡಿ ಅವರನ್ನು ಮಲಗಿಸಿ ನನ್ನ ಕೊಠಡಿಗೆ ಹೋಗಬೇಕೆನ್ನುವಷ್ಟರಲ್ಲಿ ನನ್ನ ಕೈಯನ್ನು ಬಲವಾಗಿ ಹಿಡಿದುಕೊಂಡು ನನ್ನನ್ನು ಬಿಟ್ಟು ಹೋಗಬೇಡ ಎಂದು ವಿನಂತಿಸಿದ ಆ ದಿನ ನನ್ನ ಮನಸ್ಸು ದೃಢ ನಿಶ್ಚಯವನ್ನು ಮಾಡಿತ್ತು. ತಾಯಿಯ ಈ ಬಾಳ ಸಂಧ್ಯಾ ಸಮಯದಲ್ಲಿ ಅವರ ಮನೋಭಿಲಾಷೆಯಂತೆ ನಾನು ಅವರ ಸಾಮೀಪ್ಯದಲ್ಲಿರಬೇಕಾದ ಅಗತ್ಯತೆ ಇದೆ ಎಂದು ನಿಶ್ಚಯಿಸಿ ಕರ್ತವ್ಯಕ್ಕೆ ಬೆಂಗಳೂರಿಗೆ ಬರಲು ಅಸಾಧ್ಯ ಎಂದು ಸಂಸ್ಥೆಗೆ ಸಂದೇಶ ರವಾನಿಸಿದ್ದೆ. ನನ್ನ ನಿರ್ಧಾರದ ಹಿಂದೆ ಇರುವ ಸದುದ್ದೇಶವನ್ನು ಗೌರವಿಸಿದ ಸಂಸ್ಥೆಯು ನನಗೆ 2017 ರಿಂದಲೇ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ನೀಡಿತ್ತು. ಹಾಸಿಗೆ ಹಿಡಿದಿದ್ದ ತಾಯಿಯ ಸೇವೆಯನ್ನು ಆತ್ಮ ಸಂತೋಷದಿಂದಲೇ ಮಾಡುತ್ತಿದ್ದೆ. ಆದರೂ 6 ತಿಂಗಳ ಹಿಂದೆ ಅವರು ನಮ್ಮನಗಲಿದರು. ತಾಯಿಯ ಅಗಲಿಕೆಯ ಬಳಿಕ ಒಂಟಿಯಾಗಿದ್ದ 89 ರ ಹರೆಯದ ವಯೋವೃದ್ದ ತಂದೆಯವರನ್ನು ಬಿಟ್ಟು ಹೋಗಲೂ ಮನಸ್ಸಾಗದೆ ಅವರ ಸೇವೆ ಮಾಡುತ್ತಾ ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದೆ. ಇತ್ತೀಚಿನ ಒಂದೆರಡು ತಿಂಗಳಲ್ಲಿ ತಂದೆಯ ಆರೋಗ್ಯವೂ ಹದಗೆಟ್ಟು ಅವರ ಎಲ್ಲಾ ಸೇವೆಯನ್ನು ಮಾಡುವ ಸೌಭಾಗ್ಯವೂ ನನ್ನ ಪಾಲಿಗೊದಗಿತ್ತು. ಆದಾಗ್ಯೂ ಅವರನ್ನು ಉಳಿಸಲು ನನಗೆ ಸಾಧ್ಯವಾಗದೆ ಎಪ್ರಿಲ್ 22 ರಂದು ಅವರು ನನ್ನನಗಲಿದರು ಎಂದು ವಿವರಿಸುತ್ತಿದ್ದ ಪ್ರಸನ್ನ ಪೈ ಯವರ ಮಾತಿನಲ್ಲಿ ಒಂದಿನಿತೂ ತಾನು ತನ್ನ ಹೆತ್ತವರಿಗಾಗಿ ಕಷ್ಠಪಟ್ಟೆ ಎಂಬ ಭಾವನೆಯೇ ವ್ಯಕ್ತವಾಗಲಿಲ್ಲ. ನಮಗಾಗಿ ಅದೆಷ್ಟೋ ಕಷ್ಠ ಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದ ಆಪ್ಪ ಅಮ್ಮನಿಗಾಗಿ ನಮ್ಮದೇನಿದ್ದರೂ ಒಂದು ಬಿಂದು ಮಾತ್ರ ಎನ್ನುವ ಪ್ರಸನ್ನ ಪೈಯವರ ನಡೆ ಸಿಂಧೂ ಸಾಗರದಂತೆ ಭಾಸವಾಗಿತ್ತು.


ಸಂಪಾದನೆಯೇ ಪರಮ ಧ್ಯೇಯವೆಂದು ಸ್ವ ಹಿತದ ಕಾರಣಕ್ಕೆ ಜನ್ಮವಿತ್ತ ಅಪ್ಪ ಅಮ್ಮನವರನ್ನು ವೃದ್ದಾಪ್ಯದ ದಿನಗಳಲ್ಲಿ ಸಾಮೀಪ್ಯದಿಂದ ದೂರವಿರಿಸಿ ಅಸಹನೀಯ ಬದುಕಿಗೆ ತಳ್ಳುವ ಇಂದಿನ ಯುವ ಜನಾಂಗಕ್ಕೆ ಪ್ರಸನ್ನ ಪೈ ನಿಜಕ್ಕೂ ಆದರ್ಶಪ್ರಾಯರಾಗಿದ್ದಾರೆ. ನಾವು ಹಸುಕೂಸುವಾಗಿದ್ದಾಗ ನಮ್ಮೆಲ್ಲಾ ಗಲೀಜುಗಳನ್ನು ಇಷ್ಟಪಟ್ಟು ಸ್ವಚ್ಚ ಮಾಡುತ್ತಿದ್ದ ಹೆತ್ತವರ ಬಾಳ ಸಂಧ್ಯಾ ಸಮಯದಲ್ಲಿ ಅವರನ್ನು ಸ್ವಚ್ಚ ವಾಗಿಡಲು ಹಣಕೊಟ್ಟು ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಅವಕಾಶವಿದ್ದರೂ, ಹೆತ್ತವರಿಗೆ ನಮ್ಮವರೆನಿಸಿದ ಮಂದಿಯ ಹಾರೈಕೆಯು ಹೆಚ್ಚು ಮುದ ನೀಡುವುದರಿಂದ , ಹಾಗೂ ಮಕ್ಕಳಿಗೆ ಹಾಗೂ ಹೆತ್ತವರ ನಡುವೆ ಕರುಳ ಸಂಬಂಧದ ನಂಟು ಬೆಸೆದಿರುವುದರಿಂದ ಮಾಡುವ ಸೇವೆಯಲ್ಲಿಯೂ ನಿಷ್ಕಲ್ಮಶ ಭಾವವಿರುವುದರಿಂದ ಹೆತ್ತವರಿಗಾಗಿ ನಾನು ಸ್ವತಃ ಸಮಯ ಮೀಸಲಿರಿಸಲು ನಿರ್ಧರಿಸಿದ್ದೆ. ಇದು ನನ್ನ ಜೀವಮಾನದ ಕರ್ತವ್ಯವೂ ಆಗಿದೆ ಎಂಬ ಪೈ ಯವರ ನುಡಿಗಳು ಇಂದಿನ ಸಮಾಜಕ್ಕೆ ಪ್ರೇರಣಾದಾಯಿಯಾಗಿದೆ.

LEAVE A REPLY

Please enter your comment!
Please enter your name here