ಉದ್ಯಮಿ ದಿವಾಕರ ದಾಸ್ ನೇರ್ಲಾಜೆ ನಿರ್ಮಾಣದ ‘ಬೇರ’ ಸಿನಿಮಾದ ಟೀಸರ್ ಬಿಡುಗಡೆ

0

ಬಹಳ ಇಂಟ್ರೆಸ್ಟಿಂಗ್ ಆಗಿದೆ – ಇದೊಂದು ಬೇರೆ ತೆರನಾದ ವಿಭಿನ್ನ ಸಬ್ಜೆಕ್ಟ್ ಹೊಂದಿದ ಚಿತ್ರ: ಶಿವರಾಜ್ ಕುಮಾರ್

ಸದ್ಯ ಟೀಸರ್ ಬಿಡುಗಡೆಯಾಗಿದೆ – ಮೇ ಅಂತ್ಯಕ್ಕೆ ಚಿತ್ರ ಬಿಡುಗಡೆ: ಮನು ಬಳಂಜ

ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ “ಬೇರ” ಚೊಚ್ಚಲ ಚಿತ್ರ : ದಿವಾಕರ ದಾಸ್

ವಿಟ್ಲ: ‘ಬೇರ’ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ ನೋಡಿದೆ, ಬಹಳ ಇಂಟ್ರೆಸ್ಟಿಂಗ್ ಆಗಿದೆ. ವಿಶ್ವಲ್ ತುಂಬಾ ಚೆನ್ನಾಗಿದೆ. ಇದೊಂದು ಬೇರೆ ತರನಾದ ವಿಭಿನ್ನ ಸಬ್ಜೆಕ್ಟ್ ಹೊಂದಿದ ಚಿತ್ತವಾಗಿದೆ. ಮೇ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು ಯಶಶ್ವಿ ಉದ್ಯಮಿ ದಿವಾಕರ ದಾಸ್ ರವರು ನಿರ್ಮಾಣ ಮಾಡಿದ ಚೊಚ್ಚಲ ಚಿತ್ರ ಇದಾಗಿದ್ದು ಎಲ್ಲರೂ ಈ ಚಿತ್ರವನ್ನು ನೋಡಿ ಎಂದು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರು ಹೇಳಿದರು.

ಅವರು ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ನ ಆಡಳಿತ ನಿರ್ದೇಶಕರಾದ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ರವರು ತನ್ನ ಎಸ್. ಎಲ್.ವಿ. ಕಲರ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣ ಮಾಡಿದ ಬಿಗ್ ಬಜೆಟ್ ಚಿತ್ರ ‘ಬೇರ’ ದ ಟೀಸರ್ ಅನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋ ದಲ್ಲಿ
ಬಿಡುಗಡೆ ಮಾಡಿ ಮಾತನಾಡಿದರು.

ಸಿನಿಮಾ ನಿರ್ದೇಶಕ ವಿನು ಬಳಂಜ ಮಾತನಾಡಿ ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂ ಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್ ದಾಸ್. ತುಳುವಿನಲ್ಲಿ ‘ಬೇರ’ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ. ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ‘ಯಾವ ತಾಯಂದ್ರ ಮಕ್ಕಳೂ ಇನ್ನೊಬ್ರಿಂದಾಗಿ ಸಾಯ್ಬಾರ್ದು’ ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ಸದ್ಯ ಟೀಸರ್ ಬಿಡುಗಡೆ ಮಾಡಿದ್ದೇವೆ. ಮೇ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದರು.

ಸಿನಿಮಾ ನಿರ್ಮಾಪಕ ದಿವಾಕರ್ ದಾಸ್ ನೇರ್ಲಾಜೆ ಮಾತನಾಡಿ ಕೇವಲ ಮೂರು ಜನ ಕೆಲಸಗಾರರಿಂದ ಶುರುವಾದ ಎಸ್ ಎಲ್ ವಿ ಸಂಸ್ಥೆಯಲ್ಲಿ ಇಂದು ನೂರೈವತ್ತು ಜನ ಕೆಲಸಗಾರರಿದ್ದಾರೆ. ಈಗ ಎಸ್ ಎಲ್ ವಿ ಕಲರ್ಸ್ ಲಾಂಛನದಲ್ಲಿ “ಬೇರ” ಎಂಬ ಮೊದಲ ಚಿತ್ರ ನಿರ್ಮಾಣ ಮಾಡಿದ್ದೇವೆ. ಈ ಚಿತ್ರಕ್ಕೆ ನಿಮ್ಮ ಹಾರೈಕೆ ಇರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿನಿಮಾ ಛಾಯಾಗ್ರಾಹಕ ರಾಜಶೇಖರ್ ಹಾಗೂ ಕಾರ್ಯಕಾರಿ ನಿರ್ಮಾಪಕ ರಾಮದಾಸ ಶೆಟ್ಟಿ ವಿಟ್ಲ, ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕಾ ಪೂಣಚ್ಛ, ಅಶ್ವಿನ್ ಹಾಸನ್, ಚಿತ್ಕಲ ಬಿರಾದಾರ್, ಮಂಜುನಾಥ್ ಹೆಗಡೆ, ಗುರು ಹೆಗಡೆ, ರಾಕೇಶ್ ಮಯ್ಯ, ಧವಳ್ ದೀಪಕ್ ಸೇರಿದಂತೆ ಹಲವಾರು ಕಲಾವಿದರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here