ಪುತ್ತೂರು: ‘ಸರ್ವ ಜನಾಂಗದ ಶಾಂತಿಯ ತೋಟ ಇದುವೆ ಕಾಂಗ್ರೆಸ್ ಬದ್ಧತೆ’ ಎನ್ನುವ ಹೆಸರಿನಲ್ಲಿರುವ ಪ್ರಣಾಳಿಕೆಯಲ್ಲಿ ‘ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಚಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಬಜರಂಗದಳ ಮತ್ತು ಪಿ.ಎಫ್.ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡುವ ಮೂಲಕ ಕರ್ನಾಟಕ ರಾಜ್ಯ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ನಗರದ ಹೋಟೆಲೊಂದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಡಾ. ಜಿ ಪರಮೇಶ್ವರ ಮತ್ತಿತರ ಮುಖಂಡರು ಪ್ರಣಾಳಿಕೆ ಬಿಡುಗಡೆಗೊಳಿಸಿದರು.
ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ ಭರವಸೆಗಳು ಇಂತಿದೆ…
*ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್, *ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ, *ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ., *ಯುವನಿಧಿ ಯೋಜನೆಯಡಿ ನಿರುದ್ಯೋಗ ಯುವಕರಿಗೆ ನೆರವು, *ಪದವೀಧರರಿಗೆ 3 ಸಾವಿರ ರೂ., *ಡಿಪ್ಲೊಮೊ ಪದವೀಧರರಿಗೆ 1,500 ರೂ. , *ಸರ್ಕಾರದಲ್ಲಿ ಒಂದು ವರ್ಷದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ, *ಆಶಾ ಕಾರ್ಯಕರ್ತೆಯರ ಗೌರವ ಧನವನ್ನು 5000 ರೂ.ದಿಂದ 8000ಕ್ಕೆ ಏರಿಕೆ , *ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರುವ ನೌಕರರಿಗೆ ಖಾಯಂ, *ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಖಾಯಂ, *ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, *ಪಿಎಫ್ಐ ನಿಷೇಧ, ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರಕ್ಕೆ ಹೆಚ್ಚಳ, *ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ, *ಬಿಸಿಯೂಟ ನೌಕರರ ಮಾಸಿಕ ಗೌರವಧನ 6 ಸಾವಿರ ರೂ.ಗೆ ಹೆಚ್ಚಳ, *ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಭತ್ಯೆ, *ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ, *ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ, *ನಾಲ್ಕು ವರ್ಷದೊಳಗೆ ಎಲ್ಲಾ ಪೊಲೀಸ್ ಸಿಬ್ಬಂದಿಗೂ ವಸತಿ ಸೌಲಭ್ಯ, *ಪ್ರತಿ ಜಿಲ್ಲೆಯಲ್ಲೂ ಸುಸಜ್ಜಿತ ಸೈಬರ್ ಪೊಲೀಸ್ ಠಾಣೆಗಳ ನಿರ್ಮಾಣ, *ಕನಕಪುರದಲ್ಲಿ ವಿಶ್ವದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ.