ಬಿಜೆಪಿ ಸರಕಾರದಿಂದ ಅಭಿವೃದ್ಧಿ ಶೂನ್ಯ: ಅಶೋಕ್ ಕುಮಾರ್ ರೈ
ಭ್ರಷ್ಟ ಬಿಜೆಪಿ ಸರಕಾರವನ್ನು ಬೇರು ಸಹಿತ ಕಿತ್ತೆಸೆಯಬೇಕು: ಡಾ.ರಾಜಾರಾಮ್ ಕೆ.ಬಿ.
ಕಾಂಗ್ರೆಸ್ ನ ಗ್ಯಾರಂಟಿ ಬಗ್ಗೆ ಬಿಜೆಪಿಯಿಂದ ವ್ಯಂಗ್ಯ: ಎಂ.ಎಸ್.ಮಹಮ್ಮದ್
ವಿಟ್ಲ: ಬಿಜೆಪಿಯಿಂದ ಅಭಿವೃದ್ಧಿ ಶೂನ್ಯವಾಗಿದೆ. ನಾವು ಹೋದಲ್ಲಿ ಎಲ್ಲಾ ಜನರು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಶಾಸಕರಿಂದ ಈ. ಬಾಗದ ಜನರಿಗೆ ಭಾರೀ ತೊಂದರೆಯಾಗಿದೆ . ಬಿಜೆಪಿಗರು ನಡೆಸುತ್ತಿರುವ ಭ್ರಷ್ಟಾಚಾರವನ್ನು ಕಂಡು ಎಂದಿಗೂ ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳಲಾರೆ.
ಅವರು ಮಾಡಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡಿಯೇ ಸಿದ್ದ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದರು.
ಅವರು ವಿಟ್ಲ ಸಮೀಪದ ಬೊಳಂತಿಮೊಗರಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಅಕ್ರಮ ಸಕ್ರಮ ನನೆಗುದಿಗೆ ಬಿದ್ದಿದೆ. 94 ಸಿ ಯಲ್ಲಿ ಭ್ರಷ್ಟಾಚಾರ ನಡೆದಿದೆ. ಕಡತಗಳು ಇನ್ನೂ ವಿಲೇವಾರಿಯಾಗಿಲ್ಲ. 94ಸಿ ಹೆಸರಿನಲ್ಲಿ ಜನರಿಂದ ಭಾರೀ ಲೂಟಿ ಮಾಡಲಾಗಿದೆ. ಬಡವರ ಮನೆಗಳು ಶಿಥಿಲಗೊಂಡರು. ಕೇಳುವವರು ಇಲ್ಲದಂತಾಗಿದೆ. ಕಾಂಗ್ರೆಸ್ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಯಬೇಕು. ಪುತ್ತೂರಿಗೆ ಅತೀ ಅಗತ್ಯವಿರುವ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಕೆಲಸ ರಾಜ್ಯ ಹಾಗು ಕೇಂದ್ರದಲ್ಲಿರುವ ಬಿಜೆಪಿ ಸರಕಾರದಿಂದ ಆಗಿಲ್ಲ. ಐದು ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಬಿಜೆಪಿಯ ಸಾಧನೆ ಶೂನ್ಯವಾಗಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಿಂದುತ್ವವನ್ನು ಹೇಳಿಕೊಂಡು ಮತ ಪಡೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ತಳಮಟ್ಟದ ಕಾರ್ಯಕರ್ತರನ್ನು ಬಲಿಷ್ಠಗೊಳಿಸುವ ಕೆಲಸವಾಗಬೇಕು. ನಿಜ ವಿಚಾರ ಹೇಳಿ ಜನರ ಮನಸ್ಸನ್ನ ಪರಿವರ್ತನೆ ಮಾಡುವ ಕೆಲಸವಾಗಬೇಕು. ಕಾರ್ಯಕರ್ತರು ಪ್ರತಿಯೊಂದೂ ಮನೆಗಳಿಗೆ ತೆರಳಿ ಪಕ್ಷದ ಪ್ರಣಾಳಿಕೆ ಬಗ್ಗೆ ತಿಳಿಹೇಳುವ ಕೆಲಸವಾಗಬೇಕು.
ನಮ್ಮ ಧರ್ಮವನ್ನು ಪ್ರೀತಿಸಿ ಅನ್ಯಧರ್ಮವನ್ನು ಗೌರವಿಸುವ ಮನಸ್ಸು ನಮ್ಮದಾಗಬೇಕು. ನಾನು ಯಾವತ್ತೂ ಜಾತಿ – ಭೇದ ಮಾಡಿಲ್ಲ. ನಾನು ಧರ್ಮದ ಆಧಾರದಲ್ಲಿ ಕೆಲಸ ಮಾಡಿಲ್ಲ, ಮಾನವೀಯತೆಯ ಅಡಿಯಲ್ಲಿ ಕೆಲಸಮಾಡಿದ್ದೇನೆ. ನಿಮ್ಮ ಘನತೆ ಗೌರವಕ್ಕೆ ಚ್ಯುತಿ ಭಾರದಂತೆ ಕೆಲಸ ಮಾಡುತ್ತೇನೆ.
ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಬಿರವರು ಮಾತನಾಡಿ ಭ್ರಷ್ಟ ಬಿಜೆಪಿ ಸರಕಾರವನ್ನು ಬೇರು ಸಹಿತ ಕಿತ್ತೆಸೆಯಬೇಕು. ನಾವು ಈಗಾಗಲೇ ಚುನಾವಣೆಗೆ ಸನ್ನದ್ದರಾಗಿದ್ದೇವೆ. ಕಾಂಗ್ರೆಸ್ ಸರಕಾರ ನಮಗೆ ಅನಿವಾರ್ಯ. ಸಮಾನತೆಯ ಸಂದೇಶ ಸಾರಿದ ಕಾಂಗ್ರೆಸ್ ಪಕ್ಷ ಜನರಿಗೆ ಬೇಕಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಬಿಜೆಪಿ ಸರಕಾರದಿಂದ ಆಗುತ್ತಿದೆ.ಬಿಜೆಪಿಗರ ಈ ಕುತಂತ್ರವನ್ನು ಜನರಿಗೆ ಮನಮುಟ್ಟುವ ರೀತಿಯಲ್ಲಿ ನಾವು ತಿಳಿಹೇಳುವ ಕೆಲಸವಾಗಬೇಕು. ನಮ್ಮ ಕಾರ್ಯಕರ್ತರು ಯಾವುದರೆ ಟೀಕೆ – ಟಿಪ್ಪಣಿ ಗಳಿಗೆ ಕಿವಿಕೊಡದೆ ಮುಂದುವರಿಯಿರಿ. ಕಾಂಗ್ರೆಸ್ ಈ ಹಿಂದೆ ನೀಡಿದ ಪ್ರಣಾಳಿಕೆಯಂತೆ ನಡೆದುಕೊಂಡಿದೆ. ಕಾಂಗ್ರೆಸ್ ಸರಕಾರ ಪ್ರಾಮಾಣಿಕತೆಯಿಂದ ಕೆಲಸಮಾಡಿದೆ. ಮೇ 8 ರಂದು ಪುತ್ತೂರಿನಲ್ಲಿ ಕಾಂಗ್ರೆಸ್ ರೋಡ್ ಶೋ ನಡೆಯಲಿದ್ದು, ಸ್ಟಾರ್ ಪ್ರಚಾರಕಿ ರಮ್ಯ ಭಾಗವಹಿಸಲಿದ್ದು, ಎಲ್ಲರೂ ಭಾಗವಹಿಸಬೇಕು ಎಂದರು.
ಎಂ.ಎಸ್. ಮೊಹಮ್ಮದ್ ಮಾತನಾಡಿ ಬಿಜೆಪಿ ಸರಕಾರ ಪಡಿತರ ಅಕ್ಕಿಯನ್ನು ಕಡಿತ ಮಾಡಿದೆ. ಆದರೆ ಇಂದು ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳನ್ನು ವ್ಯಂಗ್ಯ ಮಾಡುತ್ತಿದೆ. ಕಾಂಗ್ರೆಸ್ ನ ಘೋಷಣೆಗಳು ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗಲಿದೆ. ಅಶೋಕ್ ರೈ ಬೇರೆ ಪಕ್ಷದಲ್ಲಿದ್ದರೂ ಕೋಮುವಾದಿ ಆಗಿರಲಿಲ್ಲ. ಪ್ರಮಾಣಿಕವಾಗಿ ಎಲ್ಲ ವರ್ಗದ ಜನರನ್ನು ಸಮಾನವಾಗಿ ನೋಡುತ್ತಿದ್ದು, ಈ ಬಾರಿ ಅವರನ್ನು ಬೆಂಬಲಿಸಬೇಕು ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಹಿರಿಯ ನಾಯಕರಾದ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮಾನಾಥ್ ಶೆಟ್ಟಿ ಪೆರ್ನೆ, ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಅಧ್ಯಕ್ಷ ಶುಭಾಸ್ ಚಂದ್ರ ಶೆಟ್ಟಿ ಕುಳಾಲು, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಕೊಲ್ಯ ಶ್ರೀನಿವಾಸ್ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿ ಮಹೇಶ್ ಅಂಕೊತ್ತಿಮಾರ್, ಜಿಲ್ಲಾ ಪ್ರಚಾರ ಸಮಿತಿ ಜಂಟಿ ಸಂಯೋಜಕರುಗಳಾದ ವೇದನಾತ್ ಸುವರ್ಣ, ವಿ ಕೆ ಎಂ ಅಶ್ರಫ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ರಮಾನಾಥ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಹಸೈನಾರ್ ನೆಲ್ಲಿಗುಡ್ಡೆ, ಲತಾವೇಣಿ ಅಶೋಕ್ ಪೂಜಾರಿ, ಡೀಕಯ್ಯ ಸುರಲಿಮೂಲೆ, ಪದ್ಮಿನಿ, ಬೂತ್ ಅಧ್ಯಕ್ಷರುಗಳಾದ ವಹಿದ್ ಬಿ, ಜೋನ್ಸನ್, ಅಶೋಕ್ ಪೂಜಾರಿ ಎನ್ ಎಸ್ ಡಿ.ಪ್ರಮುಖರಾದ ಮಂಜಲಾಡಿ ಗುತ್ತಿನ ಲಕ್ಷ್ಮಣ್ ಗೌಡ, ಇಕ್ಬಾಲ್ ಹೊನೆಸ್ಟ್, ರಶೀದ್ ವಿ ಎ, ಅಝೀಜ್, ಶ್ರೀಚರಣ್ ಶೆಟ್ಟಿ ಪಲೇರಿ, ರಾಜೇಶ್ ಮೊಂತೇರೋ, ಅಬ್ಬಾಸ್ ದಾಸರಬೆಟ್ಟು, ವಿ ಕೆ ಎಂ ಹಂಝ, ಹನೀಫ್ ಎಚ್ ಎಸ್, ಅಬ್ಬು ನವಗ್ರಾಮ, ಕರುಣಾಕರ ನೆಲ್ಲಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.