ಪುತ್ತೂರು: ಮೇ.10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಅರುಣ್ ಕುಮಾರ್ ಪುತ್ತಿಲರಿಂದ ಮೇ.1ರಂದು ಕಾವು ಪಂಚವಟಿನಗರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಿತು.
ಕಾರ್ಯಕರ್ತರ ಧ್ವನಿಯಾಗಿ ಚುನಾವಣೆಗೆ ನಿಂತಿದ್ದೇನೆ-ಪುತ್ತಿಲ:
ಕಾರ್ಯಕರ್ತ ಆಧಾರಿತವಾದ ಪಕ್ಷದಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲದೇ ಹೋದಾಗ, ತತ್ವ ಸಿದ್ಧಾಂತದಡಿಯಲ್ಲಿ ಬೆಳೆದ ಪಕ್ಷದಲ್ಲಿ ತತ್ವಸಿದ್ಧಾಂತವೇ ಕಳೆದು ಹೋದಂತಹ ಅನಿವಾರ್ಯ ಸಂದರ್ಭದಲ್ಲಿ ಕಾರ್ಯಕರ್ತರ ಒಕ್ಕೊರಳ ಧ್ವನಿಯಾಗಿ ಈ ಕ್ಷೇತ್ರವನ್ನು ಹಿಂದುತ್ವದ ಆಧಾರದಲ್ಲಿ ಗೆಲ್ಲಬೇಕೆಂಬ ನಿಶ್ಚಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ, ಈಗಾಗಲೇ ಕ್ಷೇತ್ರದಾದ್ಯಂತ ಹಿರಿಯರು, ಹಿಂದೂ ಕಾರ್ಯಕರ್ತರು, ಮಾತೆಯರು, ಮತದಾರರು ಸ್ವಯಂಪ್ರೇರಿತರಾಗಿ ಸಂಘಟಿತರಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತಿರುವ ಪರಿಣಾಮ ನಮ್ಮ ಗೆಲುವು ನಿಶ್ಚಿತವಾಗಿದೆ. ಮಾಡ್ನೂರು ಗ್ರಾಮದಲ್ಲೂ ನಮ್ಮ ಪರ ಅಲೆ ಇದ್ದು ಈ ಭಾಗದ ಮತದಾರರು ಪಕ್ಷೇತರ ಅಭ್ಯರ್ಥಿಗೆ ಮತ ನೀಡಿ ಹಿಂದುತ್ವವನ್ನು ಗೆಲ್ಲಿಸಿಕೊಡುವಲ್ಲಿ ಶ್ರಮವಹಿಸಿ ಆಶೀರ್ವದಿಸಬೇಕಾಗಿ ಮನವಿ ಮಾಡಿದರು.
ಹಿರಿಯರಾದ ಬರೆಕೆರೆ ಸೀತಾರಾಮ ಭಟ್‌ರವರು ದೀಪ ಬೆಳಗಿಸಿ ಪ್ರಚಾರ ಸಭೆಯನ್ನು ಉದ್ಘಾಟಿಸಿದರು. ಶ್ರೀಕೃಷ್ಣ ಉಪಾಧ್ಯಾಯರವರು ಕಾರ್ಯಕರ್ತರನ್ನುದ್ದೇಶಿಸಿ ಮುಖ್ಯ ಭಾಷಣ ಮಾಡಿದರು. ಪ್ರಮುಖರಾದ ಡಾ. ಗಣೇಶ್ ಮುದ್ರಾಜೆ, ರಾಜಶೇಖರ ಬೆಂಗಳೂರುರವರು ಪ್ರಚಾರಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಸುಂದರ ಪೂಜಾರಿ ಕೆರೆಮಾರು, ಲಿಂಗಪ್ಪ ಪೂಜಾರಿ ಮುಂಡೋಲೆ, ಯೋಗೀಶ್ ಕಾವು ಉಪಸ್ಥಿತರಿದ್ದರು.
ಸುನೀಲ್ ಬೋರ್ಕರ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಸೋಮಶೇಖರ ನಾಯಕ್ ಮೇಲ್ಪಾದೆಯವರು ವಂದಿಸಿದರು. ಚಂದ್ರಕಿರಣ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು.