ತಿಂಗಳಾಡಿಯಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಪ್ರಚಾರ ಸಭೆ

0

ನನ್ನ ಗೆಲುವು ಅದು ಕಾರ್ಯಕರ್ತರ ಗೆಲುವು: ಅರುಣ್ ಪುತ್ತಿಲ

ಪುತ್ತೂರು: ಭ್ರಷ್ಟಾಚಾರ ರಹಿತ ಆಡಳಿತ, ಮೂಲಭೂತ ಸೌಕರ್ಯಗಳಿಂದ ವಂಚಿತ ಬಡ ವರ್ಗದ ಜನರಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವ ಮೂಲಕ ಸರಕಾರದ ಸೌಲಭ್ಯಗಳನ್ನು ದೊರಕಿಸಿ ಕೊಡುವುದು ಇತ್ಯಾದಿ ಹಲವು ಯೋಚನೆ, ಯೋಜನೆಗಳನ್ನು ಇಟ್ಟುಕೊಂಡು ಈ ಚುನಾವಣೆಯ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ. ಕೇವಲ ಆಶ್ವಾಸನೆ ಕೊಡುವುದು ಮಾತ್ರವಲ್ಲ 5 ವರ್ಷಗಳ ಆಡಳಿತ ವ್ಯವಸ್ಥೆಯಲ್ಲಿ ಅದನ್ನು ಮಾಡಿತೋರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ನನ್ನ ಗೆಲುವು ಅದು ಸಮಸ್ತ ಕಾರ್ಯಕರ್ತರ ಗೆಲುವು ಆಗಲಿದೆ. ನಾನು ಗೆದ್ದರೆ ನನ್ನಂತಹ ಸಾವಿರಾರು ಕಾರ್ಯಕರ್ತರು ಗೆದ್ದಂತೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಹೇಳಿದರು.


ಅವರು ಮೇ.5 ರಂದು ಸಂಜೆ ತಿಂಗಳಾಡಿ ಜಂಕ್ಷನ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಳೆದ ೫ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ನಡೆದ ಭ್ರಷ್ಟಾಚಾರದ ಆಡಳಿತದ ಬಗ್ಗೆ ಮಾತನಾಡಿದ ಪುತ್ತಿಲರವರು, ಸ್ವಜನಪಕ್ಷಪಾತದ ಮುಖಾಂತರ ಪಕ್ಷದ ಕಾರ್ಯಕರ್ತರ ವಿರುದ್ಧವಾದ ಬೆಳವಣಿಗೆಗಳು ಕಾರ್ಯಕರ್ತರಿಗೆ ನೋವುಂಟು ಮಾಡಿದ್ದು ಆದ್ದರಿಂದ ರಾಜಕಾರಣದಲ್ಲಿ ಹೊಸ ವ್ಯವಸ್ಥೆಯನ್ನು ತರಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲಾ ಹೆಜ್ಜೆ ಹಾಕುತ್ತಿದ್ದೇವೆ. ಆದರೆ ನಮ್ಮೆಲ್ಲರ ಕಾರ್ಯಕರ್ತರ ಉತ್ಸಾಹವನ್ನು ಕುಗ್ಗಿಸುವ ಪ್ರಯತ್ನ, ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡುವ ವ್ಯವಸ್ಥಿತವಾದ ಕಾರ್ಯಗಳು ರಾಷ್ಟ್ರೀಯ ಪಕ್ಷದಿಂದ ಆಗುತ್ತಿದೆ. ಇದಕ್ಕೆಲ್ಲ ನಾವು ಮೇ.೧೩ ನೇ ತಾರೀಖಿನ ವಿಜಯೋತ್ಸವದಲ್ಲಿ ಉತ್ತರ ಕೊಡಲಿದ್ದೇವೆ ಎಂದು ಅರುಣ್ ಪುತ್ತಿಲ ಹೇಳಿದರು.


ನಾವು ಸಂಘರ್ಷದ ವಾತಾವರಣವನ್ನು ಬಯಸುವುದಿಲ್ಲ
ಪುತ್ತೂರಿನಲ್ಲಿ ಒಂದು ಹೊಸ ಇತಿಹಾಸವನ್ನು ನಿರ್ಮಾಣ ಮಾಡಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲರ ಹೆಜ್ಜೆ ಇಟ್ಟಿದ್ದೇವೆ. ಆದರೆ ಹತಾಶೆ ಮನೋಭಾವ ಮುಖಾಂತರ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಬೆಳವಣಿಗೆಗಳು ನಡೆಯುತ್ತಿವೆ. ಮೊನ್ನೆ ತಾನೆ ತಿಂಗಳಾಡಿ ಭಾಗದಲ್ಲೂ ತಮ್ಮ ಪ್ರಚಾರ ವಾಹನದ ಕೀಯನ್ನು ತೆಗೆದುಕೊಂಡು ಕಾರ್ಯಕರ್ತರ ಮೇಲೆ ಒತ್ತಡ ತರುವಂತಹ ಕೆಲಸವೂ ನಡೆಯಿತು. ಆದರೆ ನಾವು ಯಾವತ್ತೂ ಸಂಘರ್ಷದ ವಾತಾವರಣವನ್ನು ಬಯಸುವುದಿಲ್ಲ. ನಾವು ಗೂಂಡಾ ಸಂಸ್ಕೃತಿಯನ್ನು ವಿರೋಧಿಸುತ್ತೇವೆ. ಮುಂದಿನ ೫ ವರ್ಷಗಳ ಕಾಲ ಪ್ರೀತಿ ವಿಶ್ವಾಸದೊಂದಿಗೆ ಧರ್ಮಧಾರಿತ ಆಡಳಿತವನ್ನು ಮಾಡುತ್ತೇವೆ ಎಂದು ಅರುಣ್ ಪುತ್ತಿಲ ಹೇಳಿದರು.


ಬಿಜೆಪಿ ಓಟಿಗಾಗಿ ಧರ್ಮವನ್ನು ಹಿಡಿದುಕೊಂಡಿದೆ: ರಾಜಶೇಖರ್
ಬಿಜೆಪಿ ಪಕ್ಷವು ಕೇವಲ ರಾಜಕೀಯ ಮಾಡಲಿಕ್ಕೆ, ಓಟಿಗಾಗಿ ಮಾತ್ರ ಧರ್ಮವನ್ನು ಹಿಡಿದುಕೊಂಡಿದೆ ವಿನಹ ಧರ್ಮಕ್ಕಾಗಿ ರಾಜಕೀಯ ಮಾಡುತ್ತಿಲ್ಲ, ಹಿಂದೂ ಧರ್ಮವನ್ನು ಓಟಿಗಾಗಿ, ಹಿಂದೂ ಧರ್ಮದ ಹೆಸರನ್ನು ಹೇಳಿಕೊಂಡು, ಯುವ ಜನರ ತಲೆಯಲ್ಲಿ ಧರ್ಮದ ಬಗ್ಗೆ ಬೇಡದನ್ನೆಲ್ಲಾ ತುಂಬಿಸಿ ಕೇವಲ ಓಟಿಗಾಗಿ ಧರ್ಮವನ್ನು ಬಳಸುತ್ತಿದ್ದಾರೆ ಎಂದು ಬೆಂಗಳೂರಿನ ಉದ್ಯಮಿ ರಾಜಶೇಖರ್ ಗಂಭೀರ ಆರೋಪ ಮಾಡಿದರು. ನಾವೆಲ್ಲರೂ ಅಂದಿನಿಂದ ಇಂದಿನ ತನಕವೂ ಬಿಜೆಪಿಗೆ ಮತ ನೀಡುತ್ತಾ ಬಂದಿದ್ದೇವೆ ಆದರೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷದವರು ನಮ್ಮ ಮೇಲೆಯೇ ಸವಾರಿ ಮಾಡುತ್ತಾ ಬರುತ್ತಿದ್ದಾರೆ, ಜಾತಿಯ ಹೆಸರೇಳಿಕೊಂಡು ಜಾತಿ ನಡುವೆ ಸಂಘರ್ಷವನ್ನು ತರಲು ಪ್ರಯತ್ನಿಸುತ್ತಿದ್ದಾರೆ ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ಜಾತಿಗೆ ಬೆಲೆ ಕೊಟ್ಟವರಲ್ಲ, ನಾವೆಲ್ಲರೂ ಒಂದೇ ಜಾತಿ ಎಂಬ ನೆಲೆಯಲ್ಲಿ ಧರ್ಮದ ಅಡಿಯಲ್ಲಿ ಜೀವನ ಮಾಡುತ್ತಾ ಬಂದವರಾಗಿದ್ದೇವೆ. ಆದರೆ ಬಿಜೆಪಿಯವರು ಜಾತಿಯನ್ನು ಎತ್ತಿ ತೋರಿಸುವ ಮೂಲಕ ಧರ್ಮವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜಶೇಖರ್ ಹೇಳಿದರು.


ಧರ್ಮಕ್ಕಾಗಿ ಬಲಿದಾನ ಮಾಡಿದ ಯುವಕರಿಗೆ ನ್ಯಾಯ ಕೊಡಿಸುವ ಕೆಲಸ ಆಗಿಲ್ಲ
ಪ್ರವೀಣ್ ನೆಟ್ಟಾರ್, ಶರತ್ ಮಡಿವಾಳ, ಪ್ರಶಾಂತ್ ಪೂಜಾರಿ ಈ ಯುವಕರೆಲ್ಲರೂ ಧರ್ಮಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಆದರೆ ನಾವು ನಂಬಿರುವ ಭಾರತೀಯ ಜನತಾ ಪಾರ್ಟಿ ಎರಡು ಅವಧಿಯಲ್ಲಿ ಅಧಿಕಾರಕ್ಕೆ ಬಂದರೂ ಧರ್ಮಕ್ಕಾಗಿ ವೀರ ಮರಣವನ್ನಪ್ಪಿದ ಯುವಕರಿಗೆ ಇಂದಿಗೂ ನ್ಯಾಯ ಕೊಡಿಸುವ ಸಾಧ್ಯವಾಗಿಲ್ಲ ಎಂದು ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಪ್ರವೀಣ್ ನೆಟ್ಟಾರ್ ಹತ್ಯೆ ವಿಷಯದಲ್ಲಿ ಬಿಜೆಪಿಯವರು ಕೇವಲ ರಾಜಕೀಯ ಲಾಭಕ್ಕಾಗಿ ನೋಡಿದ್ದಾರೆ. ಅವರಿಗೆ ಮನೆ ಕಟ್ಟಿ ಕೊಟ್ಟಿದ್ದೇವೆ ಹಾಗೆ ಹೀಗೆ ಎಲ್ಲಾ ಮಾಡಿಕೊಟ್ಟಿದ್ದೇವೆ ಎಂದು ಮಾಧ್ಯಮಗಳಲ್ಲಿ ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ಪ್ರವೀಣ್ ನೆಟ್ಟಾರ್‌ನಂತೆ ಪ್ರಾಣ ಬಿಟ್ಟಂತಹ ಶರತ್ ಮಡಿವಾಳ, ಪ್ರಶಾಂತ್ ಪೂಜಾರಿಯವರ ಮನೆಗೆ ಹೋಗಿಲ್ಲ ಆದರೆ ರಾಜಕೀಯ ಲೆಕ್ಕಚಾರಕ್ಕೆ ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ಕೊಡುತ್ತಿದ್ದಾರೆ. ಪ್ರವೀಣ್ ನೆಟ್ಟಾರ್ ಹತ್ಯೆಗೆ ಸೂಕ್ತ ನ್ಯಾಯ ಸಿಗಬೇಕು ಎಂಬ ಹೋರಾಟದ ಹಿಂದೆ ಇದ್ದವರು ಬೇರೆ ಯಾರು ಅಲ್ಲ ಅದು ಅರುಣ್ ಕುಮಾರ್ ಪುತ್ತಿಲ ಆಗಿದ್ದಾರೆ ಎಂಬುದು ಸತ್ಯ ಎಂದು ರಾಜಶೇಖರ್ ಹೇಳಿದರು. ನಕಲಿ ಬಿಜೆಪಿಯವರ ಕಾರು ಯಾವಾಗ ಅಲ್ಲಾಡಿತೋ ಆಗ ಅವರಿಗೆ ಎಲ್ಲವೂ ಅರಿವಾಯಿತು. ಅಂದಿನಿಂದ ಎಲ್ಲವೂ ಶುರುವಾಯಿತು ಎಂದು ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದರು.


ನಮ್ಮ ಸ್ಪರ್ಧೆ ಕಾಂಗ್ರೆಸ್, ಎಸ್‌ಡಿಪಿಐ ವಿರುದ್ಧ: ಮನ್ಮಥ್ ಶೆಟ್ಟಿ
ಮನ್ಮಥ್ ಶೆಟ್ಟಿ ಮಾತನಾಡಿ, ಅರುಣ್ ಪುತ್ತಿಲ ಯಾಕೆ ಪಕ್ಷೇತರ ಅಭ್ಯರ್ಥಿಯಾಗಿ ಯಾಕೆ ಕಣಕ್ಕೆ ಇಳಿದಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿ ಇಂದಿಗೂ ಇರಬಹುದು ಆದರೆ ನಮ್ಮ ಸ್ಪರ್ಧೆ ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ, ಪಕ್ಷದ ವಿರುದ್ಧ ಅಲ್ಲ ನಮ್ಮ ಸ್ಪರ್ಧೆ ಹಿಂದೂ ವಿರೋಧಿ ಧೋರಣೆ ತಂದಂತಹ ಸಿದ್ದರಾಮಯ್ಯ ಸರಕಾರದ ಕಾಂಗ್ರೆಸ್ ವಿರುದ್ಧ ಆಗಿದೆ. ದಿ.ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಹಕರಿಸಿದ ಎಸ್‌ಡಿಪಿಐಯ ಶಾಫಿ ಬೆಳ್ಳಾರೆಯ ವಿರುದ್ಧ ಆಗಿದೆ ಎಂದರು.


ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಸಂದರ್ಭೋಚಿತವಾಗಿ ಮಾತನಾಡಿ ಪುತ್ತಿಲ ಪರ ಮತಯಾಚನೆ ಮಾಡಿದರು. ಉದ್ಯಮಿ ಹರೀಶ್ ಪುತ್ತೂರಾಯ ಪ್ರಾಸ್ತಾವಿಕವಾಗಿ ಮಾತನಾಡಿ ಅರುಣ್ ಪುತ್ತಿಲರಿಗೆ ಮತ ನೀಡುವಂತೆ ಕೇಳಿಕೊಂಡರು. ವೇದಿಕೆಯಲ್ಲಿ ಚಂದ್ರಹಾಸ ನಾಯ್ಕ ನೆಕ್ಕಿಲು, ಡೊಂಬಯ್ಯ ಗೌಡ ಎರಕ್ಕಳ ಉಪಸ್ಥಿತರಿದ್ದರು. ಪ್ರಶಾಂತ್ ರೈ ಮಿತ್ತೋಡಿ, ಹರೀಶ್ ಪುತ್ತೂರಾಯ, ಪ್ರಸಾದ್ ರೈ ಚಾವಡಿರವರುಗಳು ಅರುಣ್ ಪುತ್ತಿಲರಿಗೆ ಹೂ ಹಾರ ಹಾಕಿ ಸ್ವಾಗತಿಸಿದರು. ಪ್ರಜ್ವತ್ ರೈಯವರು ಶಾಲು ಹಾಕಿ ಸ್ವಾಗತಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆಯ ಮೂಲಕ ಸಭೆ ಆರಂಭವಾಯಿತು. ರವಿ ಕುಮಾರ್ ರೈ ಕೆದಂಬಾಡಿಮಠ ಸ್ವಾಗತಿಸಿ,ವಂದಿಸಿದರು. ಪಟಾಕಿ ಸಿಡಿಸಿ, ಜೈಕಾರ ಹಾಕುವ ಮೂಲಕ ಅರುಣ್ ಪುತ್ತಿಲರನ್ನು ಬರಮಾಡಿಕೊಳ್ಳಲಾಯಿತು. ಸಭೆಯ ಬಳಿಕ ಕೆಲವು ಮಂದಿ ಅರುಣ್ ಪುತ್ತಿಲರವರಿಗೆ ಚುನಾವಣೆಗೆ ಆರ್ಥಿಕ ಧನ ಸಹಾಯ ಮಾಡಿದರು.

LEAVE A REPLY

Please enter your comment!
Please enter your name here