ರಮಾನಾಥ ರೈ ಪ್ರಾಮಾಣಿಕ ಜನಸೇವಕ – ಸತ್ಯದ ಹಾದಿಯಲ್ಲಿ ನಡೆದವರು : ಜನಾರ್ಧನ ಪೂಜಾರಿ

0

ವಿಟ್ಲ : ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈಯವರು ಪ್ರಾಮಾಣಿಕವಾಗಿ ಜನಸೇವೆ ಮಾಡಿದವರು. ಅವರಿಗೆ ಸುಳ್ಳು ಹೇಳಲು ಗೊತ್ತಿಲ್ಲ. ಅವರು ಸತ್ಯದ ಹಾದಿಯಲ್ಲಿ ನಡೆದವರು. ಅವರ ಸಾಧನೆ ಕಡಿಮೆಯೇನಿಲ್ಲ ಎಂದು ಮಾಜಿ ಕೇಂದ್ರ ಸಚಿವ, ಹಿರಿಯ ನಾಯಕರು ಬಿ.ಜನಾರ್ಧನ ಪೂಜಾರಿ ಹೇಳಿದರು. ತಮ್ಮ ಆಶೀರ್ವಾದ ಪಡೆಯಲು ಬಂದಿದ್ದ ರಮಾನಾಥ ರೈಯವರರಿಗೆ ಶುಭಕೋರಿ ಮಾತನಾಡಿದರು.


ರೈಯವರು ಮತ್ತೆ ಗೆಲ್ಲಬೇಕು. ಆ ಮೂಲಕ ಜನತೆಗೆ ಮತ್ತು ಪಕ್ಷಕ್ಕೆ ಅವರ ಸೇವೆ ಸಿಗಬೇಕು. ಅವರಂತಹ ವ್ಯಕ್ತಿ ದೇಶಕ್ಕೆ ಅಗತ್ಯವಿದೆ ಎಂದು ಅವರು ತಿಳಿಸಿದರು.
ರೈಯವರು ಹಲವು ವರ್ಷಗಳಿಂದ ಕ್ಷೇತ್ರದ ಜನತೆಯ ಸೇವೆ ಮಾಡಿದವರು. ಕ್ಷೇತ್ರದ ಮತದಾರರಾದ ನೀವು ಅವರಿಗೆ ಬೆಂಬಲ ನೀಡಿದ್ದೀರಿ. ಅವರು ಯಾವತ್ತೂ ನಿಮ್ಮನ್ನು ಮರೆಯಲಿಲ್ಲ, ನಿರಂತರ ನಿಮ್ಮ ಸೇವೆ ಮಾಡುತ್ತಿದ್ದಾರೆ. ಈ ಬಾರಿ ನೀವು ಅವರನ್ನು ಮರೆಯಬಾರದು. ಅವರ ಶ್ರಮಕ್ಕೆ ಬೆಲೆ ಇದೆ ಅಂತ ತೋರಿಸಿಕೊಡಬೇಕು. ರೈಯವರಿಗೆ ಮತ ನೀಡಿ ಬಹುಮತದಿಂದ ಗೆಲ್ಲಿಸಿಕೊಡಬೇಕು ಎಂದು ಜನಾರ್ಧನ ಪೂಜಾರಿ ಮತದಾರರಲ್ಲಿ ಮನವಿ ಮಾಡಿದರು.


ಕಳೆದ ಐವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಹಗಲಿರುಳು ಪಕ್ಷಕ್ಕಾಗಿ ದುಡಿದಿದ್ದೇನೆ. ಈಗಲೂ ಬಿ.ರಮಾನಾಥ ರೈಯವರ ಪರ ಪ್ರಚಾರಕ್ಕೆ ಬರಲು ಉತ್ಸುಕನಾಗಿದ್ದೇನೆ. ಆದರೆ ಈಗ ವಯೋಸಹಜ ಸಮಸ್ಯೆಗಳಿರುವುದರಿಂದ ಮನೆ ಮನೆಗೆ ಬರಲು ಅಸಾಧ್ಯವಾಗಿದೆ. ಆದ್ದರಿಂದ ಈಗ ಮಾಧ್ಯಮದ ಮೂಲಕ ಬಿ.ರಮಾನಾಥ ರೈ ಅವರ ಪರವಾಗಿ ಮತ ಯಾಚಿಸುತ್ತಿದ್ದೇನೆ ಎಂದು ಪೂಜಾರಿ ಹೇಳಿದರು.


ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ರೈಯವರ ಕೊಡುಗೆ ಅಪಾರವಾದುದು. ಅವರ ಶ್ರಮ ಮತ್ತು ಸಾಧನೆಗೆ ಬೆಲೆ ಇದೆ ಎಂಬುದನ್ನು ಮತದಾರರು ತೋರಿಸಿಕೊಡಬೇಕು ಎಂದು ಅವರು ತಿಳಿಸಿದರು.


ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಬೀರ್ ಸಿದ್ದಕಟ್ಟೆ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ವಾಸು ಪೂಜಾರಿ ಲೊರೆಟ್ಟೊ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here