




ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಹಿಂದು ಮುಖಂಡ, ಮಾತೆಯರ ರಕ್ಷಕ, ರೈತಪರ ಎಂದು ಹೇಳಿಕೊಂಡು ತಾಲೂಕಿನಾದ್ಯಂತ ಬಿಂಬಿಸುತ್ತಿದ್ದಾರೆ. ಆದರೆ ಅವರ ಇನ್ನೊಂದು ಮುಖ ತಾಲೂಕಿನ ಜನತೆಗೆ ತಿಳಿದಿಲ್ಲ. ಅವರು ಊರಿನ ರೈತ, ಹಿಂದುಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸಮಿತಿ ಸದಸ್ಯ ಸುಬ್ರಾಯ ಬಿ.ಎಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.




ಹಲವು ಆರೋಪಗಳ ನಡುವೆ ಇರುವ ಅರುಣ್ ಕುಮಾರ್ ಪುತ್ತಿಲ ಅವರು ಒಂದು ಬಿಲ್ ವಿಚಾರದಲ್ಲಿ 20 ವರ್ಷಗಳ ಹಿಂದೆ ಗ್ರಾ.ಪಂ ಮೀಟಿಂಗ್ ಹಾಲ್‌ನಲ್ಲಿ ಅಕ್ರಮ ಪ್ರವೇಶಿಸಿ, ಆಗ ಗ್ರಾ.ಪಂ ಸದಸ್ಯನಾಗಿದ್ದ ನನಗೆ ಹಲ್ಲೆ ಮಾಡಿದ್ದರು. ಈ ಕುರಿತು ಕೇಸು ಕೂಡಾ ದಾಖಲಾಗಿತ್ತು. ಬಳಿಕ ಅವರು ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ರಾಜಿಯಲ್ಲಿ ಇತ್ಯರ್ಥ ಮಾಡಲಾಗಿತ್ತು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಊರಿನ ರೈತಾಪಿ ವರ್ಗಕ್ಕೆ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಅವರು ತಾಲೂಕಿನ ಶಾಸಕನಾಗಿ ಬಂದರೆ ಯಾವ ರೀತಿ ರೈತರಿಗೆ ತೊಂದರೆ ಆಗಬಹುದು ಎಂದು ಊಹಿಸಲೂ ಸಾಧ್ಯವಿಲ್ಲ ಎಂದು ಅವರು ಆರೋಪಿಸಿದ್ದಾರೆ.










