ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ರೋಡ್ ಶೋ

0

ಕ್ಷೇತ್ರದ ಯಾವುದೇ ವ್ಯಕ್ತಿಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವೆ-ಅಶೋಕ್ ರೈ


ಅಶೋಕ್ ಕುಮಾರ್ ರೈ ನಿಮ್ಮನ್ನು ಕೈ ಬಿಡಲಾರರು-ನಿಕೇತ್‌ರಾಜ್

ಪುತ್ತೂರು: ಈ ಬಾರಿಯ ಚುಣಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ, ಸಮಾಜ ಸೇವೆಯ ಉದ್ದೇಶಕ್ಕೋಸ್ಕರ ನಾನು ರಾಜಕಾರಣಕ್ಕೆ ಬಂದಿದ್ದು , ಬಡವರ ಪರವಾಗಿ ಕೆಲಸ ಮಾಡಲು ಕ್ಷೇತ್ರದ ಜನತೆ ನನಗೊಂದು ಅವಕಾಶ ಮಾಡಿಕೊಡಬೇಕು, ನಾನು ಈ ಕ್ಷೇತ್ರದ ಒಬ್ಬ ವ್ಯಕ್ತಿಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವೆ, ನನ್ನನ್ನು ಬಹುಮತದಿಂದ ಗೆಲ್ಲಿಸಿಕೊಡಬೇಕು ಎಂದು ನೆರೆದಿದ್ದ ಸಹಸ್ರಾರು ಕಾರ್ಯಕರ್ತರ ಮುಂದೆ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೈ ಮುಗಿದು ಬೇಡಿಕೊಂಡರು.


ಮೇ.8ರಂದು ಬೊಳ್ವಾರಿನಿಂದ ದರ್ಬೆ ತನಕ ನಡೆದ ಕಾಂಗ್ರೆಸ್ ರೋಡ್ ಶೋ ಕಾರ್ಯಕ್ರಮ ದರ್ಬೆಯಲ್ಲಿ ಸಮಾಪ್ತಿಗೊಂಡಿತು. ದರ್ಬೆಯಲ್ಲಿ ನೆರೆದಿದ್ದ ಕಾರ್ಯಕರ್ತರನ್ನುದ್ದೇಶಿಸಿ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮಾತನಾಡಿದರು.
ನಾನು ಗೆದ್ದು ಶಾಸಕನಾದರೆ 94ಸಿ ಹಕ್ಕು ಪತ್ರಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ನಿಮ್ಮ ಮನಸ್ಸಿನಲ್ಲಿ ಏನು ಆಸೆ, ನಿರೀಕ್ಷೆಗಳಿವೆಯೋ ಅದಕ್ಕೆ ತಕ್ಕದಾಗಿ ಕೆಲಸ ಮಾಡುತ್ತೇನೆ, ನನ್ನ ಗೆಲುವಿಗೆ ನೀವೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಚುನಾವಣೆಗೆ ದಿನ ಹತ್ತಿರವಾಗಿದ್ದು ಕಾರ್ಯಕರ್ತರು ಒಂದು ನಿಮಿಷವೂ ವ್ಯರ್ಥ ಮಾಡದೇ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕೆಂದು ಛಲದಿಂದ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಿದ್ದು, ಅದನ್ನು ಇನ್ನಷ್ಟು ತೀವ್ರಗೊಳಿಸುವುದು ಅನಿವಾರ್ಯವಾಗಿದೆ. ನೀವು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ, ಅಭಿಮಾನಕ್ಕೆ ನಾನು ಚಿರ ಋಣಿಯಾಗಿದ್ದೇನೆ ಎಂದು ಅವರು ಹೇಳಿದರು.

ಅಶೋಕ್ ರೈ ನಿಮ್ಮನ್ನು ಕೈ ಬಿಡಲಾರರು-ನಿಕೇತ್‌ರಾಜ್
ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರಕಾರ ಬರಲಿದ್ದು, ದೊಡ್ಡ ನಾಯಕರೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ. ಆ ಸಂದರ್ಭದಲ್ಲಿ ಪುತ್ತೂರಿನಲ್ಲೂ ನಮ್ಮ ಪಕ್ಷದ ಶಾಸಕರು ಬೇಕು, ಹಾಗಾಗಿ ಅಶೋಕ್ ರೈ ಅವರನ್ನು ಭರ್ಜರಿ ಬಹುಮತದಿಂದ ಚುನಾಯಿಸಬೇಕು, ಅಶೋಕ್ ರೈ ಗೆದ್ದರೆ ನಿಮ್ಮನ್ನು ಕೈ ಬಿಡಲಾರರು. ಅಶೋಕ್ ರೈ ಗೆದ್ದರೆ ಪುತ್ತೂರು ರಾಜ್ಯವನ್ನೇ ನಾಚಿಸುವ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತದೆ ಎಂದು ಅವರು ಹೇಳಿದರು.

ಇಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು ಮಾಜಿ ಶಾಸಕರು, ಹಾಲಿ ಶಾಸಕರು, ಹೇಮನಾಥ ಶೆಟ್ಟಿಯವರು ಎಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಪುತ್ತೂರಿನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಅವರು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಯಾರೂ ಭಾವನಾತ್ಮಕ ವಿಚಾರಗಳಿಗೆ ಕಿವಿಗೊಡಬೇಡಿ, ನಮ್ಮದು ಅಭಿವೃದ್ಧಿ ಪರವಾದ ಪಕ್ಷ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ 130ರಂದ 140 ಸ್ಥಾನಗಳನ್ನು ಪಡೆಯುವುದು ನಿಶ್ಚಿತ ಎಂದು ಅವರು ಹೇಳಿದರು.

ನಮ್ಮದು ಹನುಮಾನ್ ಚಾಲಿಸಾ; ಬಿಜೆಪಿಯದ್ದು ಚಾಲೀಸ್ ಪರ್ಸಂಟ್:
ನಮ್ಮದು ಹನುಮಾನ್ ಚಾಲಿಸಾ ಆದರೆ ಬಿಜೆಪಿಯದ್ದು ಚಾಲೀಸ್ ಪರ್ಸಂಟ್. ಬಿಜೆಪಿಯವರು ಭ್ರಷ್ಟರು ಎಂದು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. 2500 ಕೋಟಿ ರೂ. ಕೊಟ್ಟರೆ ಮುಖ್ಯಮಂತ್ರಿ ಹುದ್ದೆ ಸಿಗುತ್ತದೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಲ್ ಅವರೇ ಹೇಳಿದ್ದಾರೆ, ಹಾಗಾಗಿ ಭ್ರಷ್ಟ ಬಿಜೆಪಿ ಸರಕಾರವನ್ನು ತೊಲಗಿಸಲು ಜನರು ತೀರ್ಮಾನ ಮಾಡಬೇಕು ಎಂದು ಅವರು ಹೇಳಿದರು.
ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ಊರಿನ ಶಾಂತಿಗಾಗಿ, ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದ್ದು ಎಲ್ಲರೂ ಯೋಚಿಸಿ, ಚಿಂತಿಸಿ ಮತದಾನ ಮಾಡಬೇಕು, ಬಿಜೆಪಿಯನ್ನು ಈ ಬಾರಿ ಸೋಲಿಸಿಯೇ ತೀರಬೇಕು ಎಂದು ಅವರು ಹೇಳಿದರು.
ದೇವಸ್ಥಾನಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆ ಸ್ಥಾಪಿಸಿ ದೇವಸ್ಥಾನಗಳನ್ನು ಕಾಂಗ್ರೆಸ್ ಅಭಿವೃದ್ಧಿ ಮಾಡಿದ್ದು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಎನ್ನುವ ಬೇಧ ಭಾವವಿಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷವಾಗಿದೆ. ಹಾಗಾಗಿ ಕಾಂಗ್ರೆಸನ್ನು ನೀವೆಲ್ಲರೂ ಬೆಂಬಲಿಸಬೇಕು ಎಂದು ನಿಕೇತ್ ರಾಜ್ ಮೌರ್ಯ ಹೇಳಿದರು.
ರೋಡ್ ಶೋ ವಾಹನದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಬಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಗಾಂಧೀಜಿಗೆ ಹಾರಾರ್ಪಣೆ:
ರೋಡ್ ಶೋ ಮಧ್ಯೆ ಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಗೆ ಅಶೋಕ್ ಕುಮಾರ್ ರೈ ಪುತ್ರ ಪ್ರದ್ವಿಲ್‌ರವರು ಹಾರಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು.

ಸುಧಾಕರ್ ಶೆಟ್ಟಿಯವರಿಂದ ಉದ್ಘಾಟನೆ:
ಹಿರಿಯ ಕಾಂಗ್ರೆಸ್ಸಿಗ ಎನ್ ಸುಧಾಕರ ಶೆಟ್ಟಿಯವರು ಬೊಳುವಾರಿನಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ರೋಡ್ ಶೋ ಉದ್ಘಾಟಿಸಿದರು.

LEAVE A REPLY

Please enter your comment!
Please enter your name here