115 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ; ಪತ್ರಿಕಾಗೋಷ್ಠಿಯಲ್ಲಿ ಚುನಾವಣಾಧಿಕಾರಿ ಗಿರೀಶ್ ನಂದನ್ ಮಾಹಿತಿ

0

  • ಲೈವ್ ವೀಡಿಯೋಗಳ ಮೂಲಕ ಮತಗಟ್ಟೆಗಳ ಮೇಲ್ವಿಚಾರಣೆ
  • ಜಿಲ್ಲಾಡಳಿತದಿಂದಲೇ ನೇರವಾಗಿ ವೀಕ್ಷಣೆಗೆ ಅವಕಾಶ
  • ಸುಗಮ ಚುನಾವಣೆಗೆ ಅಗತ್ಯ ಕ್ರಮ

ಪುತ್ತೂರು:ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದ 220 ಮತಗಟ್ಟೆಗಳ ಪೈಕಿ 115 ಮತಗಟ್ಟೆಗಳಿಂದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿದ್ದು, ಜಿಲ್ಲಾಡಳಿತದಿಂದಲೇ ನೇರವಾಗಿ ಮತಗಟ್ಟೆಯಲ್ಲಿ ಏನು ನಡೆಯುತ್ತದೆ ಎಂಬುದನ್ನು ನೋಡಲಾಗುತ್ತದೆ. ಮತಗಟ್ಟೆಗಳಲ್ಲಿ ವೆಬ್-ಕಾಸ್ಟಿಂಗ್ ಮಾಡುವ ಮೂಲಕ ಲೈವ್ ವೀಡಿಯೊಗಳ ಮೂಲಕ ಮತಗಟ್ಟೆಗಳನ್ನು ಮೇಲ್ವಿಚಾರಣೆ ಮಾಡುವ ಉಪಕ್ರಮವನ್ನು ಪ್ರಾರಂಭಿಸಲಿದೆ. ಯಾವುದೇ ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ರಾಜಕೀಯ ಏಜೆಂಟರು, ಮತಗಟ್ಟೆ ಆವರಣದಲ್ಲಿ ಯಾವುದೇ ರೀತಿಯ ಉಪದ್ರವವನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದಲ್ಲಿ, ಚುನಾವಣಾ ಆಯೋಗವು ವೆಬ್-ಕಾಸ್ಟಿಂಗ್ ಪ್ರಾರಂಭಿಸಲು ಕ್ರಮ ಕೈಗೊಂಡಿರುವುದರಿಂದ ಎರಡು ಬಾರಿ ಯೋಚಿಸಬೇಕಾಗುತ್ತದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಗಿರೀಶ್‌ನಂದನ್ ಅವರು ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಪುತ್ತೂರಿನಲ್ಲಿ 115 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. 40 ಮತಗಟ್ಟೆಗಳಿಗೆ ಸೆಂಟ್ರಲ್ ಆರ್ಮ್ ಫೋರ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. 66 ಮತಗಟ್ಟೆಗಳಿಗೆ ಮೈಕ್ರೋ ಒಬ್ಸರ್ವರ್, ಸಿಆರ್‌ಪಿಎಫ್‌ 2, ಸಿ.ಐ.ಎಸ್.ಎ-.2, ಹರಿಯಾಣ ಪೊಲೀಸ್ 1 ಮತ ಕೇಂದ್ರದಲ್ಲಿ ಹಾಕಲಾಗಿದೆ. ಪಡ್ನೂರು ಗ್ರಾಮಕ್ಕೆ ಸಂಬಂಧಿಸಿ ಪುತ್ತೂರು ವಿವೇಕಾನಂದ ಪಾಲಿಟಿಕ್ನಿಕ್‌ನಲ್ಲಿರುವ ಮತಗಟ್ಟೆಯನ್ನು ಅತಿಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಮೇ10ರಂದು ಬೆಳೆಗ್ಗೆ 7ರಿಂದ ಸಾಯಂಕಾಲ 6ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

2,12,753 ಮತದಾರರು: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 104918 ಪುರುಷ, 107832 ಮಹಿಳೆ ಹಾಗೂ 3 ಇತರ ಮತದಾರರು ಸೇರಿ ಒಟ್ಟು 2,12,753 ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟ 4482 ಹಾಗೂ ಅಂಗವಿಕಲ 2047 ಮತಗಳಿವೆ. ಪೋಸ್ಟಲ್ ಬ್ಯಾಲೆಟ್ ಮೂಲಕ ಸುಮಾರು 3048 ಮತಗಳಿದ್ದು, 80 ವರ್ಷ ಮೇಲ್ಪಟ್ಟ 1299 ಮತದಾರಲ್ಲಿ 1229 ಮತ, ಅಂಗವಿಕಲರಲ್ಲಿ 298 ಮತದಾರಲ್ಲಿ 288 ಮತ, ಎಸೆನ್ಶಿಯಲ್ ಮತದಾರರ 30 ಮತದಲ್ಲಿ 28 ಮತ ಈಗಾಗಲೇ ಚಲಾವಣೆಯಾಗಿದೆ. ಪೋಲಿಂಗ್ ಸ್ಟಾಫ್‌ಗಳಲ್ಲಿ 1421 ಮತದಲ್ಲಿ 417 ಚಲಾವಣೆಯಾಗಿದ್ದು, 1004 ಅಂಚೆ ಮೂಲಕ ಕಳುಹಿಸುತ್ತಿದ್ದಾರೆ. 80 ವರ್ಷಕ್ಕೆ ಮೇಲ್ಪಟ್ಟವರಲ್ಲಿ 3 ಮಂದಿ ಮತದಾನ ಮಾಡಲು ನಿರಾಕರಿಸಿದ್ದು, 50 ಮಂದಿ ಗೈರಾಗಿದ್ದು, 27 ಮಂದಿ ನಿಧನರಾಗಿದ್ದರು.ಒಟ್ಟು ಸುಮಾರು 80 ಮತ ಚಲಾವಣೆಯಾಗಿಲ್ಲ. ಮತಪಟ್ಟಿಯಿಂದ ಹೆಸರು ಕೈಬಿಟ್ಟ ವಿಚಾರದಲ್ಲಿ ಒಂದು ದೂರು ಬಂದಿದ್ದು, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಗಿರೀಶ್ ನಂದನ್ ಮಾಹಿತಿ ನೀಡಿದರು.

220 ಮತಗಟ್ಟೆ: ಪುತ್ತೂರು ಕ್ಷೇತ್ರದಲ್ಲಿ 220 ಮತಗಟ್ಟೆಗಳಿದ್ದು, ನಗರದಲ್ಲಿ 61 ಹಾಗೂ 159 ಗ್ರಾಮೀಣ ಭಾಗದ ಮತಗಟ್ಟೆಗಳಾಗಿದೆ. ಒಂದು ಮತಗಟ್ಟೆ ಇರುವ 66 ಕೇಂದ್ರಗಳು, ಎರಡು ಮತಗಟ್ಟೆ ಇರುವ 57 ಕೇಂದ್ರಗಳು, ಮೂರು ಮತಗಟ್ಟೆ ಇರುವ 6 ಕೇಂದ್ರಗಳು, ನಾಲ್ಕು ಮತಗಟ್ಟೆ ಇರುವ 4 ಕೇಂದ್ರ, ಆರು ಮತಗಟ್ಟೆಗಳಿರುವ 1 ಕೇಂದ್ರ ಸೇರಿ ಒಟ್ಟು 134 ಕೇಂದ್ರಗಳನ್ನು ಹೊಂದಲಾಗಿದೆ. ಇದರಲ್ಲಿ 13 ವಿಶೇಷ ಮತಗಟ್ಟೆಗಳಾಗಿ ಮತದಾರರನ್ನು ಆಕರ್ಷಿಸುವ ಕಾರ್ಯ ಮಾಡಲಿದೆ. ಈಗಾಗಲೇ ಎಲ್ಲಾ ಅಭ್ಯರ್ಥಿಗಳನ್ನು ಕರೆಸಿ, ಸಭೆಯನ್ನು ನಡೆಸಿ ವಿವಿಧ ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ಭಾಗದಲ್ಲಿ ಹೆಚ್ಚಿನ ನಿಗಾ ಇಡುವಂತೆ ತಂಡಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಸೆಕ್ಟರ್ ಆಫೀಸರ್‌ಗೆ ರಿಸರ್ವ್ ಇವಿಎಂಎಸ್ ನೀಡಲು ಅವಕಾಶವನ್ನು ನೀಡಲಾಗಿದೆ. 20 ಸೆಕ್ಟರ್ ಆಗಿ ವಿಭಾಗಿಸಿದ್ದು, 3 ಫ್ಲೈಯಿಂಗ್ ಸ್ಕ್ವಾಡ್, 4 ಎಸ್.ಎಸ್.ಟಿ., 4 ವಿಎಸ್‌ಟಿ, 1 ವಿವಿಟಿ ಜತೆಗೆ ಆರ್ ಪಿಎಫ್, ಸಿಐಎಸ್‌ಎಫ್‌, ಹರಿಯಾಣ ಪೊಲೀಸ್ ಮತ್ತು ರಾಜ್ಯ ಪೊಲೀಸರು ಭದ್ರತೆಯನ್ನು ನೀಡಲಿದ್ದಾರೆ ಎಂದು ಗಿರೀಶ್‌ನಂದನ್ ಹೇಳಿದರು.

ಮೇ 9ಕ್ಕೆ ಮಸ್ಟರಿಂಗ್ : ಮೇ 9ರಂದು ಬೆಳಿಗ್ಗೆ ಗಂಟೆ 9ರಿಂದ ತೆಂಕಿಲ ವಿವೇಕಾನಂದ ಇಂಗ್ಲಿಷ್ ಮೀಡಿಯಮ್ ಸ್ಕೂಲ್‌ನಲ್ಲಿ ಮಸ್ಟರಿಂಗ್ ನಡೆಯಲಿದೆ. 2 ಗಂಟೆಯ ಒಳಗೆ ಪೋಲಿಂಗ್ ಆಫೀಸರ್‌ಗಳನ್ನು ಮತಗಟ್ಟೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಿದ್ದೇವೆ. 1056 ಪೋಲಿಂಗ್ ಆಫೀಸರ‍್ಸ್, 66 ಮಂದಿ ಮೈಕ್ರೋ ಒಬ್ಸರ್ವರ್, 20 ಮಂದಿ ಸೆಕ್ಟರ್ ಆಫೀಸರ‍್ಸ್ ರಿಸರ್ವ್ ಆಗಿರುತ್ತಾರೆ ಎಂದು ಗಿರೀಶ್ ನಂದನ್ ಹೇಳಿದರು.

ಎರಡು ಪ್ರಕರಣ ದಾಖಲು: ಚುನಾವಣೆಗೆ ಸಂಬಂಧಿಸಿ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಕುರಿತು 18 ದೂರುಗಳು ಬಂದಿತ್ತು. ಆದರೆ ಎರಡು ಪ್ರಕರಣಗಳಲ್ಲಿ ಎಫ್‌ಐಆರ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಗಿರೀಶ್ ನಂದನ್ ಅವರು ಈ ಕುರಿತು ಜಿಲ್ಲಾ ಮಟ್ಟದಿಂದ ತನಿಖೆ ಆಗುತ್ತದೆ ಎಂದರು. ಮನೆ ಮನೆಗೆ ಎಲ್ಲಾ ಚೀಟಿಗಳ ವಿತರಣೆ ಮಾಡುವ ಕಾರ್ಯ ಮಾಡಿದ್ದು, ಯಾವುದೇ ದೂರು ಬಂದಿಲ್ಲ. ಚುನಾವಣೆಯ ವಿಚಾರದಲ್ಲಿ ಸುಮಾರು ಮತಗಟ್ಟೆಯಲ್ಲಿ ವೀಲ್‌ಚೇರ್, ವೈದ್ಯರು, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 200 ಮೀಟರ್ ದೂರದಲ್ಲಿ ಅಭ್ಯರ್ಥಿಗಳಿಗೆ ಕೇಂದ್ರ ರಚನೆಗೆ ಅವಕಾಶಗಳನ್ನು ನೀಡಲಾಗಿದೆ. ಅಭ್ಯರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗಳನ್ನು ಮಾಡುವ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಪರವಾನಿಗೆಯನ್ನು ಪಡೆದುಕೊಳ್ಳಬೇಕು ಎಂದರು.

LEAVE A REPLY

Please enter your comment!
Please enter your name here