ಎಂ.ಪಿ ಓಟ್‌ನತ್ತ ಅರುಣ್‌ಕುಮಾರ್ ಪುತ್ತಿಲರ ಚಿತ್ತ; ’ಇದು ಅಂತ್ಯವಲ್ಲ ಆರಂಭ-ಹಿಂದುತ್ವದ ದಿಗ್ವಿಜಯಕ್ಕೆ’ ಹರಿದಾಡುತ್ತಿರುವ ಸಂದೇಶ

0

‘ಹತ್ತೂರಿಗೆ ಪುತ್ತಿಲ’ ಬದಲಾದ ಗ್ರೂಪ್ ಐಕಾನ್

ತುಳುನಾಡಿಗೆ ಪುತ್ತಿಲ ಆಪ್

ತುಳುನಾಡಿಗೆ ಪುತ್ತಿಲ ಇನ್‌ಸ್ಟಾಗ್ರಾಂ

ಪುತ್ತೂರು: ಬಿಜೆಪಿಗೆ ಸೆಡ್ಡು ಹೊಡೆದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿರುವ ಅರುಣ್ ಕುಮಾರ್ ಪುತ್ತಿಲ ಅವರ ಚಿತ್ತ ಈಗ ಮುಂಬರುವ ಲೋಕಸಭಾ ಚುನಾವಣೆಯತ್ತ ತಿರುಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆಲ್ಲ ಪುಷ್ಠಿ ನೀಡುವಂತೆ ’ಇದು ಅಂತ್ಯವಲ್ಲ ಆರಂಭ ಇನ್ನು ಹಿಂದುತ್ವದ ದಿಗ್ವಿಜಯಕ್ಕೆ’ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಇದರ ಜೊತೆಗೆ ಹತ್ತೂರಿಗೆ ಪುತ್ತಿಲ, ತುಳುನಾಡಿಗೆ ಪುತ್ತಿಲ ಎಂಬ ವಾಟ್ಸಪ್ ಗ್ರೂಪ್, ಆಪ್, ಇನ್‌ಸ್ಟಾಗ್ರಾಂಗಳೂ ಆರಂಭಗೊಂಡಿದ್ದು ಸಂಘಟನೆಯನ್ನೂ ಬಲಿಷ್ಠಗೊಳಿಸುವ ಸಿದ್ಧತೆಗಳೂ ಆರಂಭಗೊಂಡಿವೆ.

ಕೇವಲ 20 ದಿನದ ಅವಧಿಯಲ್ಲಿ ಪುತ್ತೂರು ಕ್ಷೇತ್ರದೆಲ್ಲೆಡೆ ಸುತ್ತಾಡಿ, ಪ್ರಚಾರ ಮಾಡಿ 62,458 ಮತಗಳನ್ನು ಪಡೆದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದುಕೊಂಡ ಉತ್ಸಾಹದಲ್ಲಿರುವ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಬೆಂಬಲಿಗರು ಹೊಸ ಅಧ್ಯಾಯಕ್ಕೆ ಮುನ್ನುಡಿ ಇಡುತ್ತಾರೋ ಎಂಬ ಪ್ರಶ್ನೆ ಇದೀಗ ಜನರಲ್ಲಿ ಕಾಡತೊಡಗಿದೆ. ಅರುಣ್ ಕುಮಾರ್ ಪುತ್ತಿಲ ಅವರು ರಾಷ್ಟ್ರೀಯ ಪಕ್ಷ ಬಿಜೆಪಿಯಿಂದ ಹೊರ ಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತು ಗೆದ್ದವರು. ಅದೂ ಅಲ್ಲದೆ ವಿಜೇತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿ ಕೆಲವೇ ಮತಗಳ ಅಂತರದಿಂದ ಸೋಲು ಕಂಡವರು. ಈ ಎಲ್ಲಾ ಬೆಳವಣಿಗೆಗಳಿಂದ ಅವರು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ತಮ್ಮ ಕಣ್ಣು ಹರಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆಲ್ಲಾ ಪುಷ್ಠಿ ನೀಡುವಂತೆ ’ಇದು ಅಂತ್ಯವಲ್ಲ ಆರಂಭ, ಹಿಂದುತ್ವದ ದಿಗ್ಗಿಜಯಕ್ಕೆ, ಹೊಸ ಅಧ್ಯಾಯಕ್ಕೆ ಮುನ್ನುಡಿ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿದೆ. ಇದರ ಜೊತೆಗೆ ಅವರ ಪುತ್ತೂರಿಗೆ ಪುತ್ತಿಲ ವಾಟ್ಸಪ್ ಗ್ರೂಪ್ ಐಕಾನ್ ಕೂಡಾ ಇದೀಗ ಹತ್ತೂರಿಗೆ ಪುತ್ತಿಲ (ದಕ್ಷಿಣ ಕನ್ನಡ) ಎಂಬುದಾಗಿ ಬದಲಾಗಿದೆ. ’ತುಳುನಾಡಿಗೆ ಪುತ್ತಿಲ ಆಪ್’ ಕೂಡಾ ಬಂದಿದೆ. ಆಟ್ ಪುತ್ತಿಲ ಫಾರ್ ಎಂಪಿ-2024 ಇನ್‌ಸ್ಟ್ರಾಗ್ರಾಂ ಕೂಡಾ ಆರಂಭಿಸಲಾಗಿದ್ದು, ಇದು ಆರಂಭಗೊಂಡ ಕೇವಲ ಒಂದು ಗಂಟೆಯ ಅವಧಿಯಲ್ಲಿ 1,500 ಮಂದಿ ಪಾಲೋವರ‍್ಸ್ ಸೇರಿದ್ದಾರೆ.

ಪ್ರಧಾನಿಗೂ ಪತ್ರ: ಆದರ್ಶ ಗೋಖಲೆ ಮತ್ತು ಅಕ್ಷಯ್ ಗೋಖಲೆ ಅಣ್ಣ ತಂಗಿಯರು ಅರುಣ್ ಕುಮಾರ್ ಪುತ್ತಿಲ ಪರವಾಗಿ ಕಾರ್ಯಕರ್ತರಿಗೆ ಶಕ್ತಿ ನೀಡಿ ಮಾತನಾಡಿದ್ದಲ್ಲದೆ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಪತ್ರವನ್ನು ಬರೆದಿದ್ದಾರೆ ’ಜಾತಿ ಮತ್ತು ವಶೀಲಿಬಾಜಿಗಳಿಗೆ ತಾವು ಕಿವಿಗೊಡುವವರಲ್ಲವೆಂಬ ನಮ್ಮ ನಂಬಿಕೆ ಸುಳ್ಳಾಗದಿರಲಿ. ಸಮಸ್ತ ಪುತ್ತಿಲ ಅಭಿಮಾನಿಗಳ ಪರವಾಗಿ ತಮ್ಮಲ್ಲಿ ನಮ್ಮದೊಂದು ವಿನಂತಿಯಿದೆ. ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರವಾಗಿ ಪ್ರಚಾರ ನಡೆಸಿ ನಿಮ್ಮ ಗೆಲುವಿಗಾಗಿ ಶ್ರಮವಹಿಸಿದ ಅರುಣ್ ಕುಮಾರ್ ಪುತ್ತಿಲರನ್ನು 2024ರ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ/ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆದಷ್ಟು ಶೀಘ್ರದಲ್ಲಿ ಘೋಷಿಸಬೇಕೆಂಬುದು ನಮ್ಮ ಅಪೇಕ್ಷೆ’. ಎಂದು ಪತ್ರದಲ್ಲಿ ಬರೆದಿದ್ದಾರೆ. ಇದು ಮುಂದಿನ ದಿನ ಕಾರ್ಯಕರ್ತರ ಮತ್ತು ಮತದಾರರ ನಿರ್ಣಯವಾದರೆ ಪುತ್ತಿಲರಿಗೆ ಎಂ.ಪಿ ಸೀಟ್ ಬಿಜೆಪಿಯಿಂದ ಗ್ಯಾರೆಂಟಿ. ಇಲ್ಲದಿದ್ದರೆ ಪಕ್ಷೇತರವಾಗಿ ಮತ್ತೊಮ್ಮೆ ಕಾರ್ಯಕರ್ತರ ಮತ್ತು ಮತದಾರರ ನಿರ್ಣಾಯಕ ಮತಗಳಿಂದ ಬಿಜೆಪಿಗೆ ಸೋಲು ಖಚಿತ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ದಿನಕ್ಕೆ ರೂ. 50 ಉಳಿಸಿ: ಹಿಂದುತ್ವದ ಅಜೆಂಡಾದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಎಂ.ಪಿ ಸೀಟ್‌ಗೆ ನಿಲ್ಲುವುದು ಕಾರ್ಯಕರ್ತರ ಅಭಿಲಾಷೆಯಾಗಿದೆ. ನಾನು ಬಡವನಾದರೂ ಇವತ್ತಿನಿಂದಲೇ ಒಂದು ಪಿಗ್ಮಿ ಓಪನ್ ಮಾಡಿ ದಿವಸಕ್ಕೆ ರೂ. 50 ಹಾಕಿ ಅದರಲ್ಲಿ ಸಂಗ್ರಹವಾಗುವ ಹಣವನ್ನು ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲರಿಗೆ ಕೊಡುತ್ತೇನೆ ಎಂದು ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ್ದಾರೆ.

ಲಿಂಕ್ ಕ್ಲಿಕ್ ಮಾಡಿ ಸದಸ್ಯತ್ವ ಪಡೆಯಿರಿ: ಅರುಣ್ ಕುಮಾರ್ ಪುತ್ತಿಲ ಪರ ತುಳುನಾಡಿಗೆ ಪುತ್ತಿಲ ಆಪ್ ಮಾಡಲಾಗಿದೆ. ಎಲ್ಲಾ ಸದಸ್ಯರು ತಕ್ಷಣವೇ ಲಿಂಕ್ ಕ್ಲಿಕ್ ಮಾಡುವ ಮೂಲಕ ಗುಂಪನ್ನು ಸೇರಿ ಮತ್ತು ನಿಮ್ಮ ಸದಸ್ಯತ್ವವನ್ನು ಗುರುತಿನ ಚೀಟಿಯ ಮೂಲಕ ಪಡೆಯಿರಿ. ಈ ರೀತಿಯಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗುತ್ತಿದೆ.

ಆನ್‌ಲೈನ್ ಓಟಿಂಗ್ ಆರಂಭ: ಮಂಗಳೂರಿನ ಮುಂದಿನ ಸಂಸಂದರು ಯಾರಾಗುತ್ತಾರೆ ಎಂಬ ಆನ್‌ಲೈನ್ ಓಟಿಂಗ್ ಈಗಾಗಲೇ ಪುತ್ತಿಲ ಅಭಿಮಾನಿಗಳು ಮಾಡಿದ್ದು, ಅದರಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಸತ್ಯಜಿತ್ ಸುರತ್ಕಲ್, ಅರುಣ್ ಕುಮಾರ್ ಪುತ್ತಿಲ ಅವರ ಹೆಸರನ್ನು ಹಾಕಿ ಓಟಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ
ಮೇ 17ರಂದು ಕಾರ್ಯಕರ್ತರ ಸಭೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿದ್ದು ಸಭೆಯಲ್ಲಿ ಕಾರ್ಯಕರ್ತರಿಂದ ಬರುವ ಅಭಿಪ್ರಾಯದಂತೆ ಮುಂದಿನ ನಡೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರುಣ್ ಕುಮಾರ್ ಪುತ್ತಿಲ ಅವರು ’ಸುದ್ದಿ’ಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here