ಈ ಪ್ರಜಾಪ್ರಭುತ್ವದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಲಿಕ್ಕಾಗಿ ನಾವೇ ಪ್ರತಿನಿಧಿಯನ್ನು ಆಯ್ಕೆ ಮಾಡಿದ್ದೇವೆ. ಈ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದ ಎಲ್ಲರ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಹರೀಶ್ ಪೂಂಜ, ಸುಳ್ಯದ ಭಾಗೀರಥಿ, ಪುತ್ತೂರಿನ ಅಶೋಕ್ ರೈಯವರಿಗೆ ವಿಶೇಷ ಅಭಿನಂದನೆಗಳು. ಅದರೊಂದಿಗೆ ತಮ್ಮದೇ ಆದ ಕಾರಣಗಳಿಗಾಗಿ ಚುನಾವಣೆಗೆ, ಜನಸೇವೆಯ ಅವಕಾಶಕ್ಕೆಂದು ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಅವರ ಪ್ರಯತ್ನಕ್ಕೆ ಅಭಿನಂದನೆಗಳು. ಪ್ರಧಾನಿ ಮೋದೀಜಿಯವರು ತಾನು ಜನರ ಹಿತವನ್ನು ಕಾಯುವ ಚೌಕಿದಾರ, ಜನಸೇವಕ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಹಾಗಿರುವಾಗ ಇಲ್ಲಿ ಚುನಾಯಿತರಾಗಿರುವ ಶಾಸಕರು ತಾನೂ ಜನಸೇವಕ, ರಾಜನಲ್ಲ ಎಂದು ತಿಳಿದುಕೊಳ್ಳಬೇಕಲ್ಲವೇ? ಜನರು ತಾವು ಆರಿಸಿದ ಶಾಸಕರನ್ನು ರಾಜನೆಂದು ನೋಡದೆ, ಜನಸೇವಕನೆಂದೇ ತಿಳಿದರೆ ಅದನ್ನು ಪ್ರಜಾಪ್ರಭುತ್ವಕ್ಕೆ ಸಂದ ಜಯವೆಂದು ಪರಿಗಣಿಸಬೇಕಲ್ಲವೇ?.
ಚುನಾವಣೆ ಎಂದರೆ ಯುದ್ದವಲ್ಲ, ಜನಸೇವೆಗಾಗಿ ಸ್ಪರ್ಧೆ ಎಂದು ಹಲವಾರು ಬಾರಿ ಉಲ್ಲೇಖಿಸಿದ್ದೇನೆ. ಪ್ರಧಾನಿ ಮೋದೀಜಿ, ಅಮಿತ್ ಷಾ, ಯೋಗೀಜಿ, ಜೆಪಿ ನಡ್ಡಾ ಮೊದಲಾದವರು ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕಾಂಗ್ರೆಸನ್ನು ಸೋಲಿಸಲು ಬಹಳ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸನ್ನು ಟೀಕಿಸಿ ಅವರನ್ನು ಆಯ್ಕೆ ಮಾಡದಂತೆ ಜನರಿಗೆ ಕರೆ ನೀಡಿದ್ದಾರೆ. ಆದರೂ ಚುನಾವಣೆಯ ಫಲಿತಾಂಶ ಬಂದ ಮೇಲೆ ಅದನ್ನು ಸ್ವೀಕರಿಸಿ ಗೆದ್ದ ಕಾಂಗ್ರೆಸ್ ಸರಕಾರಕ್ಕೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಮುಂದೆ ಕೇಂದ್ರ ಬಿಜೆಪಿ ಸರಕಾರ ತಾವು ವಿರೋಧಿಸಿದ ರಾಜ್ಯದ ಕಾಂಗ್ರೆಸ್ ಸರಕಾರದೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡಿ ಜನಸೇವೆ ಮಾಡಲಿದೆ.
ಪುತ್ತೂರು ಕ್ಷೇತ್ರದಲ್ಲಿ ಅಶೋಕ್ ಕುಮಾರ್ ರೈಯವರು ಕಾಂಗ್ರೆಸ್‌ನಿಂದ ಪ್ರಥಮ ಬಾರಿಗೆ ಸ್ಪರ್ಧಿಸಿ ಜಯಶಾಲಿಯಾಗಿದ್ದಾರೆ. ಪ್ರಥಮ ಬಾರಿ ಸ್ಪರ್ಧಿಸಿದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರವರು ಹತ್ತಿರದ ಸ್ಪರ್ಧಿಯಾಗಿದ್ದಾರೆ. ಅವರೊಂದಿಗೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ , ಜೆಡಿಎಸ್‌ನ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಆಮ್ ಆದ್ಮಿಯ ಡಾ|ವಿಶು ಕುಮಾರ್, ಎಸ್‌ಡಿಪಿಐ ಅಭ್ಯರ್ಥಿ ಇಸ್ಮಾಯಿಲ್ ಶಾಫಿ ಬೆಳ್ಳಾರೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಐವನ್ ಫೆರಾವೋ, ಪಕ್ಷೇತರ ಅಭ್ಯರ್ಥಿ ಸುಂದರ ಕೊಯಿಲರವರು ಸ್ಪರ್ಧಿಸಿದ್ದಾರೆ. ಅವರು ಎಷ್ಟೇ ಓಟು ಪಡೆದಿದ್ದರೂ ಅವರಿಗೆ ಕ್ಷೇತ್ರದ ಬಗ್ಗೆ, ಅಭಿವೃದ್ಧಿ ಬಗ್ಗೆ ಕೆಲಸ ಮಾಡುವಂತೆ ಪ್ರಶ್ನಿಸುವ ಅಧಿಕಾರ ಮತ್ತು ಜನಪರ ಜವಾಬ್ದಾರಿ ಇದ್ದೇ ಇದೆ. ಮುಂದಕ್ಕೆ ಅವರು ಗೆದ್ದು ಬರಬಾರದು ಎಂದೇನಿಲ್ಲ. ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವಿನ ಸಮೀಪ ಬಂದಿರುವುದು, ಯಡಿಯೂರಪ್ಪನವರು ಕೇವಲ 2 ಸೀಟ್‌ನಿಂದ ರಾಜ್ಯದ ಆಡಳಿತ ನಡೆಸುವಷ್ಟು ಸೀಟುಗಳನ್ನು ಏಕಾಂಗಿ ಹೋರಾಟದಲ್ಲಿ ಪಡೆದಿರುವುದು ಇದಕ್ಕೆ ಉತ್ತಮ ಉದಾಹರಣೆ ಆಗಬಹುದು.
ಈ ಸಲ ಪುತ್ತೂರಿನಲ್ಲಿ ಸ್ಪರ್ಧೆಗೆ ನಿಂತ ಎಲ್ಲಾ ಅಭ್ಯರ್ಥಿಗಳು ಮತ್ತು ಅವರ ಪಕ್ಷದವರು ‘ಸುದ್ದಿ ಜನಾಂದೋಲನ’ದ ಲಂಚ-ಭ್ರಷ್ಟಾಚಾರದ ವಿರುದ್ಧ ಫಲಕ ಹಿಡಿದು ಬೆಂಬಲ ಸೂಚಿಸಿದ್ದಾರೆ. ಲಂಚ-ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಧಿಕಾರಿಗಳು ಹೆಚ್ಚುವರಿ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದಾರೆ. ಈ ಜವಾಬ್ದಾರಿ ಗೆದ್ದ ಅಭ್ಯರ್ಥಿಗೂ, ಸೋತ ಅಭ್ಯರ್ಥಿಗಳಿಗೂ, ಅವರ ಪಕ್ಷದವರಿಗೂ ಇದೆ ಎಂದು ತಿಳಿಸಲು ಇಚ್ಚಿಸುತ್ತೇನೆ. ಅದರ ಭಾಗವಾಗಿ ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಅಲ್ಲಲ್ಲಿ ನಡೆದ ಕಾಮಗಾರಿಗಳನ್ನು ಅಲ್ಲಿಯ ಜನರು ಪರಿಶೀಲಿಸಬೇಕು. ಪುತ್ತೂರು ಕ್ಷೇತ್ರದಲ್ಲಿ ಕಳೆದ 5 ವರ್ಷದಲ್ಲಿ 1250 ಕೋಟಿ ರೂಪಾಯಿ ಅನುದಾನ ಬಂದು ಕಾಮಗಾರಿ ಆಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. (ಅನುದಾನ ಪಟ್ಟಿಯನ್ನು ಮುಂದಿನ ವಾರ ನೀಡಲಾಗುವುದು) ಅಲ್ಲಿ ಉತ್ತಮ ಕೆಲಸವಾಗಿದ್ದರೆ ಅದಕ್ಕೆ ಜವಾಬ್ದಾರಿಯಾಗಿದ್ದ ಜನಪ್ರತಿನಿಧಿಗಳಿಗೆ, ಶಾಸಕರಿಗೆ, ಕೆಲಸ ಮಾಡಿದ ಗುತ್ತಿಗೆದಾರರಿಗೆ, ಇಂಜಿನಿಯರ್‌ಗಳಿಗೆ ಅಭಿನಂದನೆ ಸಲ್ಲಿಸಬೇಕು. ಇಲ್ಲದಿದ್ದರೆ ಅವರನ್ನು ಪ್ರಶ್ನಿಸಬೇಕು, ತರಾಟೆಗೆ ತೆಗೆದುಕೊಳ್ಳಬೇಕು. ಸರಿಪಡಿಸುವಂತೆ ಒತ್ತಡ ತರಬೇಕು. ಭ್ರಷ್ಟಾಚಾರ ನಡೆದಿದ್ದರೆ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕು. ಆ ಕಾಮಗಾರಿಗಳು ನಮಗಾಗಿ ನಮ್ಮ ಹಣದಲ್ಲಿ ನಡೆದಿದೆ ಎಂಬುದನ್ನು ಜನರು ಅವರಿಗೆ ನೆನಪಿಸುವ ಕೆಲಸ ಮಾಡಬೇಕು. ಹಾಗೆ ಮಾಡುವುದು ಪ್ರಜಾರಾಜರಾದ ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಎಲ್ಲರ ಗಮನಕ್ಕೆ ತರಲು ಇಚ್ಚಿಸುತ್ತೇನೆ.
ಈ ಮೇಲಿನ ವಿಷಯದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಸಿಟಿ ರವಿಯನ್ನು ಸೋಲಿಸಿ ಗೆದ್ದು ಶಾಸಕರಾಗಿರುವ ತಮ್ಮಯ್ಯ ಗೌಡ ಅವರ ಹೇಳಿಕೆಯನ್ನು ಈ ಕೆಳಗೆ ನೀಡಲಾಗಿದೆ.
ಇಲ್ಲಿಯ ಶಾಸಕರು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸ್ನೇಹಿತರಿಗೂ ಅಂತಹ ಅವಕಾಶ ನೀಡುವುದಿಲ್ಲ ಮತ್ತು ಯಾರೇ ಮಾಡಿರಲಿ ಅದು ಕಳಪೆಯಾಗದಂತೆ ಅಲ್ಲಿ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಎಂದು ಸೇರಿಸಿಕೊಳ್ಳಬೇಕು.
ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಲಂಚ, ಭ್ರಷ್ಟಾಚಾರ ಮುಕ್ತ ಮಾಡುವ ಸುದ್ದಿ ಜನಾಂದೋಲನ ಮುಂದುವರಿಯಲಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಆ ಕಾರ್ಯ ಯಶಸ್ವಿಯಾಗಿ ನಡೆಯಲಿ. ಅದರ ಮಾದರಿಯನ್ನು ಉಪಯೋಗಿಸಿ ನಾನು ಸ್ಪರ್ಧಿಸಿರುವ ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿ ಮತ್ತು ಸಿದ್ದರಾಮಯ್ಯರವರ ವರುಣಾ ಕ್ಷೇತ್ರದಲ್ಲಿ ಈ ಆಂದೋಲನವನ್ನು ಮುಂದುವರಿಸಬೇಕೆಂದಿದ್ದೇನೆ. ಅದರೊಂದಿಗೆ ಬೇರೆ ಯಾರೇ ಮುಖ್ಯಮಂತ್ರಿಯಾದರೂ ಅವರ ಕ್ಷೇತ್ರದಲ್ಲಿ ಆಂದೋಲನ ಮುಂದುವರಿದು ಅದನ್ನು ರಾಜ್ಯಾದ್ಯಂತ ವಿಸ್ತರಿಸಬೇಕೆಂದಿದ್ದೇನೆ. ಪುತ್ತೂರನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುವ ಮೂಲಕ ಪುತ್ತೂರಿನಲ್ಲಿ ಜನತೆ ನಮ್ಮ ಆಂದೋಲನಕ್ಕೆ ಬೆಂಬಲ ಮತ್ತು ಮಾರ್ಗದರ್ಶನ ನೀಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
ಸಾಮೂಹಿಕ ನಿರ್ಧಾರ: ಜನಸ್ನೇಹಿ ಆಡಳಿತ –ಶಾಸಕ ಎಚ್.ಡಿ.ತಮ್ಮಯ್ಯ
ಚಿಕ್ಕಮಗಳೂರು: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ‘ತಾನಾಗಲಿ ತನ್ನ ಮನೆಯವರಾಗಲಿ ಸಂಬಂಧಿಕರಾಗಲಿ ಗುತ್ತಿಗೆ ಕೆಲಸವನ್ನು ಮಾಡುವುದಿಲ್ಲ, ನಿಜವಾದ ಗುತ್ತಿಗೆದಾರರೇ ಕೆಲಸ ಮಾಡಿಕೊಂಡು ಹೋಗಲಿ’. ಇದು ತನ್ನ ಪ್ರತಿಜ್ಞೆ ಎಂದರು.
ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಬದಲು ಶಾಸಕ ಸಿ.ಟಿ. ರವಿ ತಮ್ಮ ಸಂಬಂಧಿಕನನ್ನು ರಾಜ್ಯದಲ್ಲಿ ನಂಬರ್ ಒನ್ ಗುತ್ತಿಗೆದಾರನನ್ನಾಗಿ ಮಾಡಿದ್ದರು ಎಂದು ಟೀಕಿಸಿದ್ದಾರೆ.