ಮೇ 16: ಹನುಮಗಿರಿ ಮೇಳದ 6ನೇ ವರ್ಷದ ತಿರುಗಾಟದ ಕೊನೆಯ ಸೇವೆಯಾಟ-ಶ್ರೀನಿವಾಸ ರಾವ್, ಶ್ರೀಧರ ಉಡುಪರಿಗೆ ಸನ್ಮಾನ

0

ಪುತ್ತೂರು: ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದ 6ನೇ ವರ್ಷದ ತಿರುಗಾಟದ ಕೊನೆಯ ಸೇವೆಯಾಟ ಮೇ 16ರಂದು ಶ್ರೀಕ್ಷೇತ್ರ ಹನುಮಗಿರಿಯಲ್ಲಿ ನಡೆಯಲಿದೆ. ಸಂಜೆ 6ರಿಂದ ಕೊನೆಯ ಸೇವೆಯಾಟವಾಗಿ ವಿದ್ಯುನ್ಮತಿ ಕಲ್ಯಾಣ, ರತಿ ಕಲ್ಯಾಣ ಪ್ರಸಂಗ ನಡೆಯಲಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಪರಿಕರಗಳ ತಯಾರಿ ತಜ್ಞ ಶ್ರೀನಿವಾಸ ರಾವ್ ಮತ್ತು ಹಿರಿಯ ಅನುಭವಿ ಪಾಕತಜ್ಞ ಶ್ರೀಧರ ಉಡುಪರವರಿಗೆ ಸನ್ಮಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶ್ರೀನಿವಾಸ ರಾವ್:
ಸನ್ಮಾನಗೊಳ್ಳಲಿರುವ ಪರಿಕರಗಳ ತಯಾರಿ ತಜ್ಞ ಶ್ರೀನಿವಾಸ ರಾವ್‌ರವರು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾದನ ಸೇವೆ ಮಾಡುತ್ತಿದ್ದಾರೆ. ಯಕ್ಷಗಾನವು ಇವರಿಗೆ ಹಿರಿಯರಿಂದ ಬಂದ ಬಳುವಳಿ. ಯಕ್ಷಗಾನ ಪರಿಕರಗಳ ತಯಾರಿಯು ಅವರಿಗೆ ವೃತ್ತಿ ಹಾಗೂ ಪ್ರವೃತ್ತಿಯಾಗಿದೆ.

ಪುತ್ತೂರಿನ ವಾಸುದೇವ ಮದ್ಲೆಗಾರ್ ಇವರು ಚೆಂಡೆ-ಮದ್ದಳೆಗಳ ತಯಾರಿಯಲ್ಲಿ ನಿಷ್ಣಾತ. ಅವರ ಶಿಷ್ಯವೃತ್ತಿಯಲ್ಲಿ ಬಹುಕಾಲವಿದ್ದು ಸ್ವತಃ ಪರಿಕರಗಳನ್ನು ಸಿದ್ಧಪಡಿಸುವ ಜ್ಞಾನವನ್ನು ಹೊಂದಿದ್ದಾರೆ. ಜತೆಗೆ ಚೆಂಡೆ-ಮದ್ದಳೆಗಳನ್ನು ನುಡಿಸಲು ಕಲಿತಿದ್ದಾರೆ. ಹೀಗೆ ಆರಂಭವಾದ ಅವರ ನಾದಮಯ ಲೋಕವು ಅವರಿಗೆ ಗೌರವವನ್ನು ತಂದುಕೊಟ್ಟಿದೆ. ಸ್ವ-ಶಕ್ತಿ, ಸ್ವ-ಮತಿಯಿಂದ ವಾದನ ಹಾಗೂ ಪರಿಕರಗಳ ತಯಾರಿಯಲ್ಲಿ ಸಿದ್ಧಹಸ್ತರು.

ಹೆಚ್ಚು ತನುಶ್ರಮವನ್ನು ಬೇಡುವ, ಹೆಚ್ಚು ಕ್ರಿಯಾಶೀಲತೆಯನ್ನು ಬಯಸುವ ವಾದನ ಪರಿಕರ ತಯಾರಿ ಕಾಯಕದ ಅವರ ಸಿದ್ಧಿಯು ಪ್ರಸಿದ್ಧಿಗೆ ಕಾರಣವಾಗಿದೆ. ತುಂಬು ತಾದಾತ್ಮö್ಯದ ಈ ಕಾಯಕವು ಪ್ರಶಂಸೆಗೆ ಪಾತ್ರವಾಗಿದೆ. ಶ್ರೀನಿವಾಸ ರಾವ್ ಅವರಿಂದ ಪರಿಕರಗಳನ್ನು ಮಾಡಿಸಿ, ಬಳಸಿದ ಅನೇಕಾನೇಕ ಕಲಾವಿದರು ತೃಪ್ತಭಾವದಿಂದ ಇರುವುದು ಅವರ ವೃತ್ತಿ ಸುಭಗತೆಗೆ ಸಾಕ್ಷಿಯಾಗಿದೆ. ಇವರ ಮಡದಿ ಸತ್ಯವತಿ. ಮೂವರು ಮಕ್ಕಳು.

ಶ್ರೀಧರ ಉಡುಪ:
ಸನ್ಮಾನಗೊಳ್ಳಲಿರುವ ಇನ್ನೋರ್ವ ಹಿರಿಯ ಅನುಭವಿ ಪಾಕತಜ್ಞ ಶ್ರೀಧರ ಉಡುಪ ಅವರು ಮೂಲತಃ ಈಶ್ವರಮಂಗಲ ಸನಿಹದ ನೂಜಿಬೆಟ್ಟಿನವರು. ತಮ್ಮ ತನುಶ್ರಮ, ಸ್ವಾವಲಂಬಿ ಜೀವನ ಮತ್ತು ವೃತ್ತಿನಿಷ್ಠೆಗಳಿಂದ ಪ್ರಸ್ತುತ ಈಶ್ವರಮಂಗಲದಲ್ಲಿ ಸ್ವಂತದ್ದಾದ ನೆಲೆ ಕಂಡಿರುವುದು ನಿಜಕ್ಕೂ ಮಾದರಿ.

ಕೊನೆತೋಟ ಮನೆಯವರ ಪ್ರೀತಿಪಾತ್ರಕ್ಕೆ ಒಳಗಾದವರು. ಅವರ ಒಲವಿನ ಸೂಪಜ್ಞರಾಗಿದ್ದು, ಮನೆಯ ಹಿತೈಷಿಯಾಗಿದ್ದು ನಿಕಟ ಸಂಪರ್ಕ ಹೊಂದಿರುತ್ತಾರೆ. ಈಶ್ವರಮಂಗಲದಲ್ಲಿ ಕಳೆದ ಅರ್ಧ ಶತಮಾನದಷ್ಟು ಕಾಲ ಬದುಕಿಗಾಗಿ ಹೋಟೆಲ್ ನಡೆಸುತ್ತಿದ್ದು, ವಯೋಸಹಜವಾಗಿ ಈಗ ವಿಶ್ರಾಂತಿಯಲ್ಲಿದ್ದಾರೆ. ಮಡದಿ ಸುಮತಿ. ತಮ್ಮ ಉತ್ಕರ್ಷದ ನಿಜಾರ್ಥದ ಸಂಗಾತಿ. ಸುಧೀಂದ್ರ, ಹರ್ಷ, ಪೂರ್ಣಿಮಾ ಮಕ್ಕಳು. ಎಲ್ಲರೂ ವಿವಾಹಿತರು.

LEAVE A REPLY

Please enter your comment!
Please enter your name here