ಹೊಕ್ಕಾಡಿಗೋಳಿಯ ಉದ್ಯಮಿ, ಕೃಷಿಕ ರಾಘವೇಂದ್ರ ಭಟ್ ರಿಂದ ಮಾನವೀಯ ಸೇವೆ

0

ಪುತ್ತೂರು :ಈ ಬಾರಿ ಬೇಸಿಗೆಯ ಕಾವು ಹೆಚ್ಚಾಗಿದೆ, ನದಿಗಳು ಸಹಿತ ಅಂತರ್ಜಲವೆಲ್ಲಾ ಬತ್ತಿ ಎಲ್ಲೆಡೆ ನೀರಿನ ಸಮಸ್ಯೆ ಕಾಡುತ್ತಿದೆ. ಬಿರು ಬಿಸಿಲಿನಿಂದಾಗಿ ನೀರಿನ ಒರತೆಗಳು ಬತ್ತಿ ಹೋಗಿವೆ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಬಂದಿದೆ.

ಬಂಟ್ವಾಳ ತಾಲೂಕಿನ ಎಲಿಯ ನಡುಗೋಡು ಗ್ರಾಮದ ಉಪ್ಪಿರ ಪರಿಸರದಲ್ಲೂ ನೀರಿನ ಸಮಸ್ಯೆ ತಲೆದೋರಿದ್ದು, ಹೊಕ್ಕಾಡಿಗೋಳಿಯ ಉದ್ಯಮಿ, ಕೃಷಿಕ ರಾಘವೇಂದ್ರ ಭಟ್ ಎಂಬವರು  ಪರಿಸರದ ಸುಮಾರು  ಹಲವು ಮನೆಗಳಿಗೆ ಕಳೆದ ಕೆಲ ದಿನಗಳಿಂದ ಉಚಿತವಾಗಿ ವಾಹನದ ಮೂಲಕ ನೀರು ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

ಎಲಿಯನಡುಗೋಡು ಗ್ರಾಮದ ಉಪ್ಪಿರ ಎಂಬಲ್ಲಿ ಪಂಚಾಯತ್‌ನ  ಕೊಳವೆ ಬಾವಿಗಳು ಬತ್ತಿದ ಹಿನ್ನಲೆಯಲ್ಲಿ ಜನರು ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸುವಂತಾಗಿದೆ. ಈ ಭಾಗದಲ್ಲಿ  ಜನರಿಗೆ ನೀರೊದಗಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಸಾಧ್ಯವಾದ ಕಾರಣ ಸ್ಥಳೀಯ ಪ್ರಗತಿಪರ ಕೃಷಿಕ, ರೊಟರೀ ಕ್ಲಬ್ ಲೊರೆಟ್ಟೋ ಹಿಲ್ಸ್‌ನ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಭಟ್ ಅವರು ಕಳೆದ ಹಲವು ದಿನಗಳಿಂದ ಜನರಿಗೆ ಉಚಿತವಾಗಿ ನೀರು ಒದಗಿಸುತ್ತಿದ್ದಾರೆ.  ತನ್ನ ಮನೆಯ ಬೋರ್‌ವೆಲ್ ನೀರನ್ನು ಟ್ಯಾಂಕ್‌ಗೆ ತುಂಬಿ, ಅದನ್ನು ವಾಹನದ ಮೂಲಕ ಉಪ್ಪಿರ ಪರಿಸರದ ಮನೆ ಮನೆಗಳಿಗೆ ಕೊಂಡೊಯ್ದು ಉಚಿತವಾಗಿ ನೀಡುತ್ತಿದ್ದಾರೆ. ನೀರು ಸಾಗಿಸಲು ವಾಹನ, ಸಿಬ್ಬಂದಿಗಳ ಖರ್ಚನ್ನು ಸ್ವತಃ ಭರಿಸುತ್ತಿದ್ದಾರೆ. ಜನಪ್ರತಿನಿಧಿಗಳು ಮಾಡಬೇಕಾದ ಕಾರ್ಯವನ್ನು ರಾಘವೇಂದ್ರ ಭಟ್ ಸೇವಾರೂಪವಾಗಿ ಮಾಡುತ್ತಿರುವುದು ವಿಶೇಷ. ಕಳೆದ ಎರಡು ವರ್ಷಗಳ ಹಿಂದೆಯೂ ಈ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾದಾಗ ರಾಘವೆಂದ್ರ ಭಟ್ ಇದೇ ರೀತಿ ಮನೆ ಮನೆಗೆ ನೀರು ಪೂರೈಸಿ ಮಾದರಿಯಾಗಿದ್ದರು. 

ರಾಘವೇಂದ್ರ ಭಟ್ ಅವರ ಈ ಸೇವಾ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಜತೆಗೆ ಇನ್ನಷ್ಟು ಮಂದಿ ತಮಗೂ ನೀರು ಒದಗಿಸುವಂತೆ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ರೋಟರಿಯಂತಹ ಸೇವಾ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಇಂತಹ ಜನಸೇವೆಯ ಮೂಲಕ ಜನಾನುರಾಯಿಯಾಗಿದ್ದಾರೆ.

LEAVE A REPLY

Please enter your comment!
Please enter your name here