ನಳಿನ್, ಡಿ.ವಿ.ಎಸ್ ಫೋಟೋಗಳಿದ್ದ ಬ್ಯಾನರ್‌ಗೆ ಚಪ್ಪಲಿ ಹಾರ ಪ್ರಕರಣ ; ಬಂಧಿತ ಆರೋಪಿಗಳಿಗೆ ಪೊಲೀಸರಿಂದ ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ಆರೋಪ – ತಪ್ಪಿತಸ್ಥ ಪೊಲೀಸರು 24 ಗಂಟೆಗಳೊಳಗೆ ಸಸ್ಪೆಂಡ್ ಆಗದಿದ್ದರೆ ಡಿವೈಎಸ್ಪಿ ಕಚೇರಿಯಲ್ಲಿ ಪ್ರತಿಭಟನೆ ಎಚ್ಚರಿಕೆ

0

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ

  • ಗಾಯಾಳುಗಳು ಮಹಾವೀರ ಆಸ್ಪತ್ರೆಯಲ್ಲಿ ದಾಖಲು
  • ಡಿವೈಎಸ್ಪಿ, ಸಂಪ್ಯ ಎಸ್‌ಐ, ಸಿಬ್ಬಂದಿಗಳ ಆರೋಪ
  • ಸತ್ಯಾಂಶ ತಿಳಿದುಕೊಳ್ಳಲು ವಿಚಾರಣೆ -ಎಸ್ಪಿ
  • ಎಡಿಷನಲ್ ಎಸ್ಪಿಯವರಿಂದ ಪುತ್ತೂರುನಲ್ಲಿ ತನಿಖೆ
  • ‘ಕೊಟ್ಟಮಾತಿನಂತೆ ತಾಯಿಯಾಗಿ ಕಾರ್ಯಕರ್ತರ ರಕ್ಷಣೆಗೆ ಬನ್ನಿ ಕಾರ್ಯಕರ್ತರೇ ಆಶಾಕ್ಕರನ್ನು ಸಂಪರ್ಕಿಸಿ’

ಪುತ್ತೂರು:ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಭಾವಚಿತ್ರವಿರುವ ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 9 ಮಂದಿ ಆರೋಪಿಗಳಿಗೆ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ನೀಡಿದ್ದಾರೆ ಎಂದು ಆರೋಪ ವ್ಯಕ್ತವಾಗಿದ್ದು ಪೊಲೀಸ್ ದೌರ್ಜನ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋಟೋ, ವಿಡಿಯೋದೊಂದಿಗೆ ಆಕ್ರೋಶದ ನುಡಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಾಯಾಳುಗಳು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರ ವಿರುದ್ಧ ಹೇಳಿಕೆ ನೀಡಿದ್ದಾರೆ.

ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಅರಣ್ಯ ಇಲಾಖೆಯ ಆವರಣಗೋಡೆಯ ಎದುರು, ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ದಾಂಜಲಿ ಎಂದು, ನೊಂದ ಹಿಂದು ಕಾರ್ಯಕರ್ತರ ಹೆಸರಲ್ಲಿ ಡಿವಿ ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವಿದ್ದ ಬ್ಯಾನರ್ ಅಳವಡಿಸಿ, ಅದಕ್ಕೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಘಟನೆ ಕುರಿತು ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಪೊಲೀಸರು ನರಿಮೊಗರು ನಿವಾಸಿಗಳಾದ ವಿಶ್ವನಾಥ್ ಮತ್ತು ಮಾಧವ ಎಂಬವರನ್ನು ಆರಂಭದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅವರು ವಿಚಾರಣೆ ವೇಳೆ ನೀಡಿದ್ದ ಮಾಹಿತಿಯಾಧರಿಸಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿ ನರಿಮೊಗ್ರು ನಿವಾಸಿಗಳಾದ ವೇಣುಗೋಪಾಲ್ ಅವರ ಪುತ್ರ ಅಭಿ ಯಾನೆ ಅವಿನಾಶ್, ಲಕ್ಷ್ಮಣ್ ಅವರ ಪುತ್ರ ಶಿವರಾಮ್, ಬಾಬು ಅವರ ಪುತ್ರ ಚೈತ್ರೇಶ್, ಪೂವಪ್ಪ ಎಂಬವರ ಪುತ್ರರಾದ ಈಶ್ವರ್, ನಿಶಾಂತ್, ಗುರುವಪ್ಪ ಎಂಬವರ ಪುತ್ರ ದೀಕ್ಷಿತ್ ಮತ್ತು ಗುರುಪ್ರಸಾದ್ ಎಂಬವರನ್ನು ಬಂಧಿಸಿದ್ದರು. ಈ ಕುರಿತು ಮಾಹಿತಿ ತಿಳಿದು ಹಿಂದೂ ಸಂಘಟನೆ ಮುಖಂಡ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರು ತಡರಾತ್ರಿಯೇ ಡಿವೈಎಸ್ಪಿ ಕಚೇರಿಗೆ ತೆರಳಿ ವಿಚಾರಿಸಿದ್ದರು. ಬಳಿಕ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಆರೋಪಿಗಳನ್ನು ಠಾಣೆಯಲ್ಲಿಯೇ ಬಿಡುಗಡೆಗೊಳಿಸಿದ್ದರು. ಅರುಣ್ ಕುಮಾರ್ ಪುತ್ತಿಲ ಅವರೇ ಠಾಣೆಗೆ ಹೋಗಿ ಆರೋಪಿಗಳನ್ನು ಬಿಡುಗಡೆ ಮಾಡಿಸಿದ್ದರು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿತ್ತು.

ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ: ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಆರೋಪಿಗಳಿಗೆ ವಿಚಾರಣೆ ಸಂದರ್ಭ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರ ವಿರುದ್ಧ ಮತ್ತು ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶದ ಸಂದೇಶಗಳು ವೈರಲ್ ಆಗುತ್ತಿವೆ.

ಪೊಲೀಸರು ನಡೆಸಿರುವ ದೌರ್ಜನ್ಯದಿಂದ ಯುವಕರ ಮೈಮೇಲೆ ಆಗಿರುವ ರಕ್ತಸಿಕ್ತ ಗಾಯಗಳು ಹಾಗೂ ತಡರಾತ್ರಿ ಪುತ್ತೂರು ಡಿವೈಎಸ್‌ಪಿ ಕಚೇರಿಯಿಂದ ಬಿಡುಗಡೆಗೊಂಡು ಹೊರಬರುತ್ತಿರುವ ಆರೋಪಿಗಳು ನಡೆದಾಡಲೂ ಕಷ್ಟ ಪಡುವ ರೀತಿಯಲ್ಲಿ ಹೆಜ್ಜೆ ಹಾಕುತ್ತಿರುವುದು ಎನ್ನಲಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿತ ಯುವಕರ ಬೆನ್ನು, ಸೊಂಟದ ಹಿಂಭಾಗದಲ್ಲಿ ಪೊಲೀಸರ ಥಳಿತದಿಂದಾಗಿದ್ದೆನ್ನಲಾ ಗಾಯಗಳು ವೈರಲ್ ಆಗಿರುವ ಫೋಟೋದಲ್ಲಿ ಎದ್ದು ಕಾಣುತ್ತಿದೆ.

ಬಂಧಿತ 9 ಮಂದಿ ಕೂಡಾ ಹಿಂದೂ ಸಂಘಟನೆಯ ಕಾರ್ಯಕರ್ತರು ಮಾತ್ರವಲ್ಲದೆ ಇವರಲ್ಲಿ ಕೆಲವರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪರ ಪರ, ಮತ್ತೆ ಕೆಲವರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಪರ ಪ್ರಚಾರಕ್ಕೆ ಹೋಗಿದ್ದರು ಎನ್ನಲಾಗಿದೆ. ಜಿಲ್ಲೆ, ರಾಜ್ಯದ ಕೆಲ ಪ್ರಭಾವಿಗಳ ಒತ್ತಡದಿಂದ ಬಂಧನದ ನೆಪದಲ್ಲಿ ಪೊಲೀಸ್ ದೌರ್ಜನ್ಯ ನಡೆಸಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಭಾವಪೂರ್ಣ ಶ್ರದ್ಧಾಂಜಲಿ: ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಯುವಕರಿಗೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭರಿತ ಸಂದೇಶಗಳು ರವಾನೆಯಾಗುತ್ತಿರುವ ಜೊತೆಗೇ ನಳಿನ್ ಕುಮಾರ್ ಕಟೀಲ್, ಡಿ.ವಿ.ಸದಾನಂದ ಗೌಡ ಮತ್ತು ಸಂಜೀವ ಮಠಂದೂರು ಅವರ ಭಾವಚಿತ್ರಗಳಿಗೆ ಮಾಲೆ ಹಾಕಿ ‘ಭಾವಪೂರ್ಣ ಶ್ರದ್ಧಾಂಜಲಿ’- ಪೊಲೀಸರ ಮೇಲೆ ಒತ್ತಡ ಹಾಕಿ ನಮ್ಮದೇ ಹಿಂದೂ ಕಾರ್ಯಕರ್ತರಿಗೆ ಪೊಲೀಸರ ಮುಖಾಂತರ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ನಳಿನ್ ಕುಮಾರ್ ಕಟೀಲ್, ಸದಾನಂದ ಗೌಡ ಹಾಗೂ ಸಂಜೀವ ಮಠಂದೂರು ಅವರಿಗೆ ಸಮಸ್ತ ಹಿಂದೂ ಕಾರ್ಯಕರ್ತರ ಪರವಾಗಿ ಎಂದು ಒಕ್ಕಣೆ ಬರೆದು, ಪೊಲೀಸ್ ದೌರ್ಜನ್ಯದಿಂದ ಯುವಕರ ಮೈಮೇಲಾಗಿರುವ ಗಾಯಗಳ ಚಿತ್ರಗಳನ್ನೂ ಪ್ರಕಟಿಸಿ ವೈರಲ್ ಮಾಡಲಾಗಿದೆ. ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಬ್ಯಾನರ್ ಪ್ರಕರಣವೇ ಕಾಣುತ್ತಿದೆ.

ಗಾಯಾಳುಗಳು ಮಹಾವೀರ ಆಸ್ಪತ್ರೆಯಲ್ಲಿ ದಾಖಲು: ಪೊಲೀಸರಿಂದ ಠಾಣೆಯಲ್ಲಿ ಹಲ್ಲೆಗೊಳಗಾಗಿರುವ 7 ಮಂದಿ ಯುವಕರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಡಿವೈಎಸ್‌ಪಿ ಮತ್ತು ಸಂಪ್ಯ ಎಸ್‌ಐ ಹಾಗೂ ಸಿಬ್ಬಂದಿಗಳು ಹಲ್ಲೆ ನಡೆಸಿರುವುದಾಗಿ ಅವರು ಆರೋಪಿಸಿದ್ದಾರೆ. ನಮಗೆ ಪ್ರೆಶರ್ ಇದೆ ಎಂದು ಪೊಲೀಸರು ಹೇಳಿರುವುದಾಗಿಯೂ ಅವರು ಆರೋಪಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದಂತೆ ಪೊಲೀಸರು ಡಾ.ಸುರೇಶ್ ಪುತ್ತೂರಾಯ ಅವರಿಗೆ ಕರೆ ಮಾಡಿ ಒತ್ತಡ ಹೇರಿದ್ದರು ಎಂಬ ಆರೋಪವೂ ವ್ಯಕ್ತವಾಗಿದೆ.

ಹರೀಶ್ ಪೂಂಜ ಭೇಟಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ರಾತ್ರಿ ವೇಳೆ ಮಹಾವೀರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಯುವಕರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ. ಈ ಸಂದರ್ಭ ಆಸ್ಪತ್ರೆಯಲ್ಲಿ ಗಾಯಾಳುಗಳೊಂದಿಗಿದ್ದ ಅರುಣ್ ಕುಮಾರ್ ಪುತ್ತಿಲ ಅವರಲ್ಲಿ ಘಟನೆ ಕುರಿತು ಪೂಂಜ ಅವರು ಮಾಹಿತಿ ಪಡೆದುಕೊಂಡರು.

ಗಾಯಾಳುಗಳೊಂದಿಗೆ ಮುಖಂಡರ ಮಾತುಕತೆ- ದೂರು ಕೊಡದಂತೆ ಒತ್ತಡ?: ಈ ನಡುವೆ ಪೊಲೀಸರಿಂದ ಹಲ್ಲೆಗೊಳಗಾಗಿರುವ ಯುವಕರ ಜೊತೆ ಬಿಜೆಪಿ, ಪರಿವಾರ ಸಂಘಟನೆಗಳ ಕೆಲವು ಮುಖಂಡರು ಬೆಳಿಗ್ಗೆ ನರಿಮೊಗರಲ್ಲಿ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಾಗದಂತೆ ನೋಡಿಕೊಳ್ಳೋಣ ಎಂದು ಹೇಳಿದ ಮುಖಂಡರು, ಈಗ ನಡೆದಿರುವ ಘಟನೆ ಕುರಿತು ಪೊಲೀಸರಿಗೆ ದೂರು ನೀಡದಂತೆ ಒತ್ತಡ ಹೇರಿದ್ದರು. ಆದರೆ ಯುವಕರು ಅದಕ್ಕೆ ಒಪ್ಪಿಕೊಳ್ಳಲಿಲ್ಲ ಎಂದು ಸುದ್ದಿಯಾಗಿದೆ.

ಇಂದು ಸಂಜೆಯೊಳಗೆ ತಪ್ಪಿತಸ್ಥರನ್ನು ಅಮಾನತುಗೊಳಿಸಬೇಕು

ಈ ರೀತಿಯ ಕೃತ್ಯ ಮಾಡುವವರಿಗೆ ಪುತ್ತೂರಿನ ಪುಣ್ಯ ಭೂಮಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡೋದಿಲ್ಲ

ಪುತ್ತೂರಿನ ಪವಿತ್ರ ಮಣ್ಣಿನಲ್ಲಿ ಯಾವುದೇ ಕಾರ್ಯಕರ್ತನಿಗೂ ಹಲ್ಲೆ ಮಾಡುವ, ಈ ರೀತಿಯ ಪೈಶಾಚಿಕ ಕೆಲಸ ಮಾಡುವ ಅಧಿಕಾರಿಗಳಿಗೆ ಈ ಪುಣ್ಯ ಭೂಮಿಯಲ್ಲಿ ಸೇವೆ ಸಲ್ಲಿಸಲು ನಾವು ಅವಕಾಶ ಕೊಡುವುದಿಲ್ಲ. ಈ ಕೃತ್ಯ ಮಾಡಿದ ಅಧಿಕಾರಿಗಳ ವಿಚಾರಣೆಗೆ ನಾಳೆ ಬೆಳಿಗ್ಗೆ ಎಸ್ಪಿಯವರು ಬರ‍್ತೇನೆ ಹೇಳಿದ್ದಾರೆ. ತಪ್ಪು ಮಾಡಿರುವ ಅಧಿಕಾರಿಗಳನ್ನು ನಾಳೆ ಸಂಜೆಯೊಳಗೆ ಅಮಾನತುಗೊಳಿಸಿ ನ್ಯಾಯ ಒದಗಿಸಬೇಕು ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.

15ನೇ ತಾರೀಕು ಸುಮಾರು 11 ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಡಿವೈಎಸ್ಪಿ ಕಚೇರಿಯಲ್ಲಿ ಅಮಾನುಷವಾಗಿ ಹಲ್ಲೆ ಮಾಡಿ ಅವರಿವತ್ತು ಸಾವು ಬದುಕಿನ ನಡುವೆ ಹೋರಾಟ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಯಾವ ವಿಚಾರ ಮುಂದಿಟ್ಟುಕೊಂಡು ಈ ರೀತಿಯ ಗಂಭೀರವಾದ ಹಲ್ಲೆ ನಡೆದಿದೆ ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಚುನಾವಣೆ ಸಂದರ್ಭ ಬಿಜೆಪಿ ಪರವಾಗಿ ಇಡೀ ಹಿಂದೂ ಸಮಾಜವನ್ನು ಶಕ್ತಿ ತುಂಬುವ ನಿಟ್ಟಿನಲ್ಲಿ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳಾಗಿ ಕೆಲಸ ಮಾಡಿರುವ ಕಾರ್ಯಕರ್ತರ ಮೇಲೆ ಈ ರೀತಿ ಹಲ್ಲೆ ಮಾಡಿ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿರುವುದು ಈ ಕ್ಷೇತ್ರದ ಜನರಿಗೆ ಅತ್ಯಂತ ದು:ಖ ತಂದಿದೆ ಎಂದು ಪುತ್ತಿಲ ಹೇಳಿದ್ದಾರೆ.

ಸರಕಾರ ಬದಲಾದ ಕೂಡಲೇ ಈ ರೀತಿಯ ನಡವಳಿಕೆಗಳು ಪೊಲೀಸ್ ಇಲಾಖೆಯಿಂದ ಬಂದರೆ, ಜನಸ್ನೇಹಿ ಪೊಲೀಸ್ ಇಲಾಖೆ ಇರಬೇಕು, ಜನರ ಮತ್ತು ಪೊಲೀಸ್ ಇಲಾಖೆ ಮಧ್ಯೆ ಒಳ್ಳೆಯ ಬಾಂಧವ್ಯ ಇರಬೇಕು ಎನ್ನುವ ಸರಕಾರದ ಆಶಯದ ವಿರುದ್ಧವಾಗಿ ಯಾರು ಈ ರೀತಿಯ ಪ್ರಚೋದನೆ ಮಾಡಿದ್ದಾರೆ ನಮಗೆ ಗೊತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ವಿರುದ್ಧವಾದ ಕೆಲಸವನ್ನು ಮಾಡಿರುವ ಡಿವೈಎಸ್ಪಿಯವರು ಮತ್ತು ಸಂಪ್ಯದ ಎಸ್.ಐ. ಮತ್ತು ಸಿಬ್ಬಂದಿಗಳನ್ನು ತಕ್ಷಣ ಅಮಾನತುಗೊಳಿಸಬೇಕು ಎನ್ನುವುದು ಇಡೀ ಹಿಂದೂ ಸಮಾಜದ ಆಗ್ರಹವಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಯನ್ನು ಸಮರ್ಥನೆ ಮಾಡುವ ಇದೇ ರೀತಿಯ ಚಾಳಿ ಮುಂದುವರಿಸಿದರೆ, ಈ ಘಟನೆ ಬಗೆಗೆ ಈಗಾಗಲೇ ಎಸ್ಪಿಯವರ ಜೊತೆ ಮಾತುಕತೆ ಮಾಡಿದ್ದೇವೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಜೊತೆಗೂ ಮಾತುಕತೆ ಮಾಡಿದ್ದೇವೆ. ಅವರು ಈಗಾಗಲೇ ಗಾಯಾಳುಗಳನ್ನು ನೋಡಿ ಹೋಗಿದ್ದು ಇಲಾಖೆಯನ್ನು ಸಂಪರ್ಕಿಸುವ ಕೆಲಸವನ್ನು ಮಾಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕೇಸು ದಾಖಲಾಗಲು ಈಗಾಗಲೇ ಹಾಸ್ಪಿಟಲ್‌ನಿಂದ ಇಂಟಿಮೇಶನ್ ಹೋಗಿದೆ. ಜೊತೆಗೆ ಮಾನವ ಹಕ್ಕು ಆಯೋಗದಲ್ಲೂ ದೂರು ದಾಖಲಿಸಲಿದ್ದೇವೆ. ಸರಕಾರ ಬದಲಾದ ಕೂಡಲೇ ಕಳೆದ ಕೆಲವು ದಿನಗಳಲ್ಲಿ ಏಳೆಂಟು ಘಟನೆಗಳನ್ನು ನಾವಿಲ್ಲಿ ಕಂಡಿದ್ದೇವೆ. ವಿಟ್ಲದಲ್ಲಿ ಹಿಂದೂ ಸಹೋದರಿಯ ಮಾನಭಂಗ ಯತ್ನ, ಗ್ಯಾಸ್ ಸಪ್ಲೈ ಮಾಡುವ ವ್ಯಕ್ತಿಯ ಮೇಲೆ ಹಲ್ಲೆ, ಕೂರ್ನಡ್ಕದಲ್ಲಿ ಕೇಸರಿ ಬಟ್ಟೆ ಧರಿಸಿದ್ದಕ್ಕೆ ಹಲ್ಲೆ, ಕಾವಲ್ಲಿ ಬ್ಯಾನರ್‌ಗೆ ಹಲ್ಲೆ, ಸವಣೂರುಲ್ಲಿ ಕೇಸರಿ ಧರಿಸಿದವನಿಗೆ ಹಲ್ಲೆ ನಡೆಸಿರುವುದನ್ನು ನಾವು ಗಮನಿಸಿದ್ದೇವೆ. ಈ ರೀತಿಯ ಘಟನೆ ನಡೆದರೆ ನಾವು ಸಂಘರ್ಷಕ್ಕೂ ಸಿದ್ದ ಎಂದು ಹೇಳಿದ ಪುತ್ತಿಲ ಅವರು, ಮುಂದಿನ ಅಹಿತರಕ ಘಟನೆ ನಡೆದರೆ ಶಾಂತಿ ಸುವ್ಯವಸ್ಥೆ ಕಾಪಾಡುವ ಇಲಾಖೆಗಳೇ ಅದಕ್ಕೆ ಹೊಣೆ ಎಂದರಲ್ಲದೆ, ನಾವು ಯಾವತ್ತೂ ಹಿಂದೂ ಸಮಾಜದ ಜೊತೆಗಿದ್ದೇವೆ. ಯಾವುದೇ ಕಾರ್ಯಕರ್ತನಿಗೆ ತೊಂದರೆಯಾದರೂ ನಾವು ಸುಮ್ಮನಿರೋದಿಲ್ಲ ಎಂದು ಹೇಳಿದರು.

ಪೊಲೀಸರು ಕಾನೂನು ಮೀರಿ ವರ್ತಿಸಿದ್ದಲ್ಲಿ ಕ್ರಮ

ಪ್ರಕರಣದಲ್ಲಿ ಪೊಲೀಸರು ಕಾನೂನು ಮೀರಿ ವರ್ತಿಸಿದ್ದಲ್ಲಿ ಅಂತವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ‘ಬಿಜೆಪಿ ರಾಜ್ಯಾಧ್ಯಕ್ಷರ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯದ ಬಗೆಗಿನ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಘಟನೆಯ ಸತ್ಯಾಂಶದ ಬಗ್ಗೆ ಸಂಬಂಧಪಟ್ಟವರ ಜೊತೆ ಮಾಹಿತಿ ಪಡೆದುಕೊಳ್ಳುವೆ. ಪ್ರಕರಣದಲ್ಲಿ ಪೊಲೀಸರು ಕಾನೂನು ಮೀರಿ ವರ್ತನೆ ತೋರಿದ್ದು ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮಕೈಗೊಳ್ಳಲು ಸಂಬಂಧಿಸಿದವರಿಗೆ ಸೂಚನೆ ನೀಡುತ್ತೇನೆ’ ಎಂದು ಅಶೋಕ್ ಕುಮಾರ್ ರೈ ‘ಸುದ್ದಿ’ಗೆ ತಿಳಿಸಿದ್ದಾರೆ.

ಧರ್ಮದ ಮಣ್ಣಲ್ಲಿ ಅಧರ್ಮ ಮೆರೆಯುತ್ತಿದೆ ಇದು ತಾಲೀಬಾನ್ ಆಡಳಿತ ಅಲ್ಲ ನೀವು ಕೈಹಾಕಿದ್ದು ಜೇನುಗೂಡಿಗೆ..

ಬ್ಯಾನರ್ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಪೊಲೀಸರಿಂದ ದೌರ್ಜನ್ಯ ನಡೆದಿದೆ ಎಂದು ಫೋಟೋ, ವೀಡಿಯೋ ತುಣುಕುಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಆಕ್ರೋಶದ ನುಡಿಗಳೂ ವೈರಲ್ ಆಗಿವೆ. ಅದರಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ನೀಡಲಾಗಿದೆ.
‘ಈ ಶಿಕ್ಷೆಯನ್ನು ಅವತ್ತು ಹಿಂದುಗಳನ್ನು ಹತ್ಯೆ ಮಾಡಿದ ಆರೋಪಿಗಳಿಗೆ ನೀಡುತ್ತಿದ್ದರೆ ಇವತ್ತು ಬಿಜೆಪಿಗೆ ಈ ರೀತಿಯ ನಾಚಿಕೆಗೇಡಿನ ಪರಿಸ್ಥಿತಿ ಬರುತ್ತಿರಲಿಲ್ಲ’.
‘ಕೇವಲ ಚಪ್ಪಲಿ ಹಾರ ಹಾಕಿದ್ದಕ್ಕೆ ನೀವು ಇತರ ನಡೆಸಿಕೊಳ್ಳುತ್ತೀರಾದರೆ ಪ್ರವೀಣ್ ನೆಟ್ಟಾರ್‌ರನ್ನು ಕೊಂದ ಬೋಸುಡಿ ಮಕ್ಕಳಿಗೆ ಎನ್ಕೌಂಟರ್ ಮಾಡಬೇಕಲ್ಲವೇ’
‘ದನಕಳ್ಳರಿಗೆ ಶಿಕ್ಷೆಯಿಲ್ಲ, ಮೋದಿ ಯೋಗಿಜಿಗೆ ಅವಮಾನ ಮಾಡಿದವರಿಗೆ ಶಿಕ್ಷೆಯಿಲ್ಲ. ಹಿಂದು ದೇವರನ್ನು ಅವಮಾನಿಸಿದವರಿಗೆ ಶಿಕ್ಷೆಯಿಲ್ಲ. ಶಿಕ್ಷೆ ಬಿಡಿ ಅವರನ್ನು ಬಂಧಿಸುವ ಪ್ರಯತ್ನ ಕೂಡಾ ಮಾಡಲ್ಲ ನಮ್ಮ ಬಿಜೆಪಿ ನಾಯಕರು.. ಇದನ್ನು ಪ್ರಶ್ನೆ ಮಾಡುವ ಹಾಗೆ ಕೂಡ ಇಲ್ಲ ಯಾಕೆಂದರೆ ಬಿಜೆಪಿದ್ದು ಮಾತ್ರ ನೈಜ ಹಿಂದುತ್ವ ಅಲ್ವಾ ಅದಕ್ಕೆ..ಬಕೆಟುಗಳಿಗೆ ಅರ್ಥ ಮಾಡಿಸುವುದು ಕಷ್ಟಧರ್ಮಕ್ಕಾಗಿ ದುಡಿಯುವ ಹಿಂದುಗಳು ಅರ್ಥಮಾಡಿ ಈ ವಿಷಯವನ್ನು ಬಿಜೆಪಿ ನಾಯಕರಲ್ಲಿ ಪ್ರಶ್ನಿಸಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮಗೆಯೇ ಕಷ್ಟ ಆಗಬಹುದು’
‘ಇದು ತಾಲಿಬಾನ್ ಆಡಳಿತ ಅಲ್ಲ ಕರಾವಳಿಯ ಬಿಜೆಪಿ ನಾಯಕರಾದ ಸಿ.ಡಿ.ಸದಾನಂದ ಮತ್ತು ನಾಟ್ಯ ಮಯೂರಿ ನಳಿನನಿಂದ ಬಿಜೆಪಿಯ ದೇವ ದುರ್ಲಭ ಕಾರ್ಯಕರ್ತರ ಮೇಲೆ ನಡೆದಿರುವ ದೌರ್ಜನ್ಯ’
‘ಧರ್ಮದ ಮಣ್ಣಲ್ಲಿ ಅಧರ್ಮ ಮೆರೆಯುತ್ತಿದೆ ಮಹಾಲಿಂಗೇಶ್ವರ ಕಾಪಾಡು..’
‘ನೀವು ಕೈಹಾಕಿರೋದು ಜೇನು ಗೂಡಿಗೆ’

ತಪ್ಪಿತಸ್ಥ ಪೊಲೀಸರು 24 ಗಂಟೆಗಳೊಳಗೆ ಸಸ್ಪೆಂಡ್ ಆಗದಿದ್ದರೆ ಡಿವೈಎಸ್ಪಿ ಕಚೇರಿಯಲ್ಲಿ ಪ್ರತಿಭಟನೆ ಎಚ್ಚರಿಕೆ:
ಪೊಲೀಸರಿಂದ ಹಲ್ಲೆಗೊಳಗಾಗಿರುವವರ ಪೈಕಿ ಅವಿನಾಶ್ ಅವರು ಹಿಂದೂ ಜಾಗರಣ ವೇದಿಕೆಯ ತಾಲೂಕು ಸಹಸಂಚಾಲಕರಾಗಿದ್ದಾರೆ. ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆಯ ಕೆಲವು ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಯುವಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಪ್ರಮುಖರು ಸುದ್ದಿಯೊಂದಿಗೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಯುವಕರ ಮೇಲೆ ಅಮಾನುಷ ರೀತಿಯ ಹಲ್ಲೆ ಮಾಡಿರುವ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು 24 ಗಂಟೆಗಳೊಳಗೆ ಅಮಾನತುಗೊಳಿಸಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಡಿವೈಎಸ್ಪಿ ಕಚೇರಿಯಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವಿಶ್ವಹಿಂದೂ ಪರಿಷತ್ ಮಂಗಳೂರು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷ್ ಕುಮಾರ್ ರೈ ಕೈಕಾರ ಹೇಳಿದ್ದಾರೆ.

ಇಂದು ಸಂಜೆಯೊಳಗೆ ಅಂತಿಮ ರೂಪ ಕೊಡದಿದ್ದಲ್ಲಿ ಹಿಂದೂ ಸಮಾಜ, ಬಿಜೆಪಿ, ಪರಿವಾರ ಸಂಘಟನೆಗಳಿಂದ ಹೋರಾಟ: ಹರೀಶ್ ಪೂಂಜ
ಪೊಲೀಸರು ಈ ರೀತಿ ಅಮಾನುಷ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದ್ದು ಕಾಂಗ್ರೆಸ್ ಸರಕಾರ ಬಂದ ಕೂಡಲೇ ಪೊಲೀಸ್ ಇಲಾಖೆಯ ಮಾನಸಿಕತೆ ಹೇಗಿರುತ್ತದೆ ಎಂದು ಇವತ್ತು ತಿಳಿಯುತ್ತದೆ. ಯಾವ ಕಾರಣಕ್ಕೂ ನಮ್ಮ ಹಿಂದೂ ಸಮಾಜದ ಕಾರ್ಯಕರ್ತರಿಗೆ ಅನ್ಯಾಯವಾದರೆ ಖಂಡಿತವಾಗಿಯೂ ನಾವು ಹೋರಾಟ ಮಾಡುತ್ತೇವೆ. ಈ ಘಟನೆಗೆ ಸಂಬಂಧಿಸಿ ನಾಳೆ ಸಂಜೆಯೊಳಗೆ ಪೊಲೀಸ್ ಇಲಾಖೆ ಒಂದು ಅಂತಿಮ ರೂಪ ಕೊಡುತ್ತದೆ ಎನ್ನುವ ವಿಶ್ವಾಸವಿದೆ. ಇಲ್ಲವಾದಲ್ಲಿ ಇಡೀ ಹಿಂದೂ ಸಮಾಜ, ಬಿಜೆಪಿ, ಪರಿವಾರ ಸಂಘಟನೆಗಳು ಒಟ್ಟು ಸೇರಿ ಇದರ ವಿರುದ್ಧ ಹೋರಾಟ ನಡೆಸುವುದಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಹಿಂದೂ ಜಾಗರಣ ವೇದಿಕೆಯ ಅಜಿತ್ ರೈ ಹೊಸಮನೆ, ವಿಶ್ವಹಿಂದೂ ಪರಿಷದ್‌ನ ಡಾ.ಕೃಷ್ಣಪ್ರಸನ್ನ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.

ಶಿಕ್ಷೆಯಾಗುವ ತನಕ ವಿರಮಿಸುವುದಿಲ್ಲ: ದೇವಿಪ್ರಸಾದ್
ರೇಪ್ ಮಾಡಿದ ವ್ಯಕ್ತಿಗಿಂತ ವಿಪರೀತವಾದ ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ನೀಡಿದ್ದಾರೆ. ಯಾವುದೋ ಪ್ರತಿಭಟನೆ ಬಂದಾಗ ಮುಖ್ಯಮಂತ್ರಿ, ಮಂತ್ರಿಗಳ ಪ್ರತಿಕೃತಿ ದಹನ ಮಾಡ್ತೇವೆ. ಬ್ಯಾನರ್ ಮೇಲೆ ಚಪ್ಪಲಿ ಹಾರ ಹಾಕಿರುವ ಆರೋಪ ಇವರ ಮೇಲಿರೋದು. ಇದು ಪ್ರಜಾಪ್ರಭುತ್ವದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ತಪ್ಪು ಆಗಿದ್ದರೆ ಕಾನೂನು ಇದೆ. ಶಿಕ್ಷೆ ಕೊಡಲು ಕೋರ್ಟ್ ಇದೆ. ಹಿಂದೂ ಸಮಾಜಕ್ಕಾಗಿ ಕೆಲಸ ಮಾಡುವ ಯುವಕರ ಮೇಲೆ ಪೊಲೀಸರು ಈ ರೀತಿ ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧವಾಗಿದ್ದು ಇದರ ವಿರುದ್ಧ ಎಲ್ಲ ರಾಜಕೀಯ ಭಿನ್ನಾಭಿಪ್ರಾಯ ಮರೆತು ದೊಡ್ಡ ಹೋರಾಟದ ಆಕ್ರೋಶದ ಕಿಡಿ ಸೃಷ್ಟಿಯಾಗಿದೆ. ಇದರ ಹಿಂದೆ ಬಿಜೆಪಿ ಇರಬಹುದು, ಕಾಂಗ್ರೆಸ್ ಇರಬಹುದು. ಯಾರು ಷಡ್ಯಂತ್ರ ಮಾಡಿದ್ದಾರೆ. ತಪ್ಪು ಮಾಡಿದ ಪೊಲೀಸ್ ಅಧಿಕಾರಿಗಳಿರಬಹುದು. ಯಾರಿದ್ದರೂ ಅವರಿಗೆ ಶಿಕ್ಷೆಯಾಗುವ ತನಕ ನಾವು ವಿರಮಿಸುವುದಿಲ್ಲ ಎಂದು ವಿಶ್ವಹಿಂದೂ ಪರಿಷದ್ ಮಂಗಳೂರು ವಿಭಾಗದ ಕಾರ್ಯದರ್ಶಿ ದೇವಿಪ್ರಸಾದ್ ಹೇಳಿದ್ದಾರೆ.

ನ್ಯಾಯ ಸಿಗದೇ ಇದ್ದಲ್ಲಿ ತೀವ್ರ ಹೋರಾಟ: ದಿನೇಶ್ ಪಂಜಿಗ
ಹಿಂದೂ ಜಾಗರಣ ವೇದಿಕೆ ಸಹಸಂಚಾಲಕ ಅವಿನಾಶ್ ಹಾಗೂ ಇತರ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಖಂಡಿಸುತ್ತೇವೆ. ಪುತ್ತೂರು ಡಿವೈಎಸ್ಪಿ ಹಾಗೂ ಸಂಪ್ಯ ಎಸ್.ಐ.ಮತ್ತು ಸಿಬ್ಬಂದಿಗಳು ಈ ಕೃತ್ಯ ಎಸಗಿದ್ದು ಇವರ ವಿರುದ್ಧ ಕೇಸು ದಾಖಲಿಸಲಿದ್ದೇವೆ. ನ್ಯಾಯ ಸಿಗದೇ ಇದ್ದಲ್ಲಿ ತೀವ್ರ ರೀತಿಯ ಹೋರಾಟ ಮಾಡುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ದಿನೇಶ್ ಪಂಜಿಗ ಹೇಳಿದ್ದಾರೆ.

24 ಗಂಟೆಗಳೊಳಗೆ ಕ್ರಮವಾಗದಿದ್ದಲ್ಲಿ ಇಲಾಖೆ ಹೊಣೆ: ಜಿತೇಶ್ ಮೊಡಪ್ಪಾಡಿ
ರಾತ್ರಿ 9 ಗಂಟೆ ಬಳಿಕ ಠಾಣೆಗೆ ಕರೆದೊಯ್ಯದೆ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.ಪಾಕಿಸ್ಥಾನಕ್ಕೆ ಜಿಂದಾಬಾದ್ ಕೂಗಿದವರ ಮೇಲೆ ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.ಸಣ್ಣಪುಟ್ಟ ಬ್ಯಾನರ್ ಅಳವಡಿಸಿದ್ದ ವಿಚಾರಕ್ಕೆ ಠಾಣೆಗೆ ಕರೆದೊಯ್ದು ಡಿವೈಎಸ್ಪಿಯವರು, ಸಂಪ್ಯ ಠಾಣಾಧಿಕಾರಿಯವರು ಹಲ್ಲೆ ಮಾಡ್ತಾರೆಂದಾದರೆ ಅದನ್ನು ಹಿಂದೂ ಸಮಾಜ ಪ್ರಶ್ನೆ ಮಾಡಬೇಕು. ಆರೋಪಿಗಳಿಗೆ ಕಾನೂನಿನಡಿ ಶಿಕ್ಷೆ ಕೊಡಿ. ಅದು ಬಿಟ್ಟು ಈ ರೀತಿ ಅಮಾನುಷ ಹಲ್ಲೆ ಅಕ್ಷಮ್ಯ ಅಪರಾಧವಾಗಿದ್ದು ಹಲ್ಲೆ ಮಾಡಿದವರ ವಿರುದ್ಧ 24 ಗಂಟೆಗಳೊಳಗೆ ಇಲಾಖೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಆಗುವ ಘಟನೆಗಳಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೇರ ಕಾರಣ ಎಂದು ತಾಲೂಕು ಯುವವಾಹಿನಿ ಸಂಯೋಜಕ ಜೀತೇಶ್ ಮೊಡಪ್ಪಾಡಿ ಹೇಳಿದ್ದಾರೆ.

ನ್ಯಾಯ ಸಿಗುವ ತನಕ ಬಿಡುವುದಿಲ್ಲ: ಕಿಶೋರ್ ಕುಮಾರ್ ಬೊಟ್ಯಾಡಿ
ಸಣ್ಣ ವಿಚಾರಕ್ಕೆ ಈ ರೀತಿ ಅಮಾನುಷವಾಗಿ ದೌರ್ಜನ್ಯ ಎಸಗಿದ್ದು ಅಕ್ಷಮ್ಯ ಅಪರಾಧ, ಈ ಕುರಿತು ಈಗಾಗಲೇ ಎಸ್ಪಿಯವರ ಜೊತೆ ಮಾತನಾಡಿದ್ದೇನೆ. ಯಾರು ತಪ್ಪು ಮಾಡಿದ್ದಾರೆ ತಕ್ಷಣ ಅವರು ಸಸ್ಪೆಂಡ್ ಆಗಬೇಕು. ಇದು ಕೇವಲ ಈ ಕಾರ್ಯಕರ್ತರಿಗೆ ಮಾತ್ರ ಆಗಿರುವ ನೋವಲ್ಲ. ಇಡೀ ಹಿಂದೂ ಸಮಾಜಕ್ಕೆ ಆಗಿರುವ ನೋವು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯನ್ನು ಇಡೀ ಹಿಂದೂ ಸಮಾಜ ಪ್ರಶ್ನೆ ಮಾಡಬೇಕು. ಇಡೀ ಸಮಾಜ ನೊಂದಿರುವ ಕಾರ್ಯಕರ್ತರೊಂದಿಗಿದೆ. ತಪ್ಪು ಮಾಡಿರುವವರಿಗೆ ಶಿಕ್ಷೆಯಾಗುವ ತನಕ ನಾವು ಬಿಡೋದಿಲ್ಲ. ಇಲ್ಲಿ ರಾಜಕೀಯ, ಭಿನ್ನಾಭಿಪ್ರಾಯಗಳೆಲ್ಲವನ್ನೂ ಮರೆತು ನಾವೆಲ್ಲರೂ ಕಾರ್ಯಕರ್ತರ ಪರ ನಿಲ್ಲುತ್ತೇವೆ. ಅವರಿಗೆ ನ್ಯಾಯ ಸಿಗುವ ತನಕ ನಾವು ಬಿಡೋದಿಲ್ಲ ಎಂದು ಹಿಂದೂ ಸಂಘಟನೆ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದ್ದಾರೆ.

ಶೋಭಾ ಕರಂದ್ಲಾಜೆ ಫೋನ್:
ಗಾಯಾಳು ಅವಿನಾಶ್ ಅವರಿಗೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಅವರು -ನ್ ಮಾಡಿ ಮಾತನಾಡಿ, ಧೈರ್ಯ ತುಂಬಿರುವುದಾಗಿ ತಿಳಿದು ಬಂದಿದೆ.

‘ಕೊಟ್ಟಮಾತಿನಂತೆ ತಾಯಿಯಾಗಿ ಕಾರ್ಯಕರ್ತರ ರಕ್ಷಣೆಗೆ ಬನ್ನಿ ಕಾರ್ಯಕರ್ತರೇ ಆಶಾಕ್ಕರನ್ನು ಸಂಪರ್ಕಿಸಿ’

ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಶಾ ತಿಮ್ಮಪ್ಪ ಅವರನ್ನು ಕಾರ್ಯಕರ್ತರು ಸಂಪರ್ಕಿಸುವಂತೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸಲಾಗುತ್ತಿದೆ. ಹಿಂದೂ ಕಾರ್ಯಕರ್ತರಿಗೆ ಯಾರಿಗಾದರೂ ಏನಾದರೂ ಆದರೆ ಈ ನಿಮ್ಮ ಆಶಾತಿಮ್ಮಪ್ಪ ಗೌಡ ಎಷ್ಟೊತ್ತಿಗಾದರೂ ನಿಮ್ಮ ರಕ್ಷಣೆಗೆ ಬರುತ್ತೇನೆ. ನನ್ನ ಈ ತಾಯಿಗೆ ನಿಮ್ಮೆಲ್ಲರ ರಕ್ಷಣೆ ಇದೆ. ಅದೇ ರೀತಿ ನನ್ನಿಂದ ಏನಾಗಬೇಕು ಎನ್ನುವ ಜವಾಬ್ದಾರಿಯನ್ನು ಹಿರಿಯರ ನೆರವಿನೊಂದಿಗೆ ಮಾಡಲು ಬದ್ಧ..’ಎಂದು ಆಶಾ ತಿಮ್ಮಪ್ಪ ಅವರು ಚುನಾವಣಾ ಪ್ರಚಾರದ ಸಂದರ್ಭ ಮಾಡಿರುವ ಭಾಷಣದ ವಿಡಿಯೋ ತುಣುಕಿನೊಂದಿಗೆ, ‘ಆಶಾಕ್ಕ ಹತಾಶೆಯಲ್ಲಿ ಹುಡುಗರು ಏನೋ ತಪ್ಪು ಮಾಡಿರಬಹುದು. ನೀವು ಕೊಟ್ಟ ಮಾತಿನಂತೆ ತಾಯಿಯಾಗಿ ಕಾರ್ಯಕರ್ತರ ರಕ್ಷಣೆಗೆ ಬನ್ನಿ ಪುತ್ತೂರಿನ ಕಾರ್ಯಕರ್ತರೇ ಆಶಾಕ್ಕರನ್ನು ಸಂಪರ್ಕಿಸಿ ನಿಮ್ಮ ರಕ್ಷಣೆಗೆ ಕರೆಯಿರಿ’ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಸತ್ಯಾಂಶ ತಿಳಿದುಕೊಳ್ಳಲು ವಿಚಾರಣೆ-ಎಸ್ಪಿ:

ಬ್ಯಾನರ್ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಲೇ, ಘಟನೆ ಕುರಿತು ತಿಳಿದುಕೊಳ್ಳಲು ವಿಚಾರಣೆ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|ಅಮಟೆ ವಿಕ್ರಂ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ಬಿಜೆಪಿ ರಾಜ್ಯಾಧ್ಯಕ್ಷರ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಪುತ್ತೂರು ನಗರ ಠಾಣೆಯಲ್ಲಿ ದಸ್ತಗಿರಿ ಮಾಡಿದ ಆರೋಪಿತರಿಗೆ ಪೊಲೀಸರು ಹಲ್ಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವ ಬಗ್ಗೆ ತಿಳಿದು ಬಂದಿದ್ದು ಈ ಬಗ್ಗೆ ಸತ್ಯಾಂಶ ತಿಳಿದುಕೊಳ್ಳಲು ವಿಚಾರಣೆ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಎಡಿಷನಲ್ ಎಸ್ಪಿಯವರಿಂದ ಪುತ್ತೂರುನಲ್ಲಿ ತನಿಖೆ
ಘಟನೆ ಕುರಿತು ಸತ್ಯಾಂಶ ತಿಳಿದುಕೊಳ್ಳಲು ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದ ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ|ಅಮಟೆ ವಿಕ್ರಂ ಅವರ ಸೂಚನೆಯಂತೆ ಎಡಿಷನಲ್ ಎಸ್ಪಿ ಧರ್ಮಪ್ಪ ಅವರು ಪುತ್ತೂರುಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮೇ 17ರ ಸಂಜೆ 5ಗಂಟೆಗೆ ಪುತ್ತೂರು ನಗರ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿಗೆ ಆಗಮಿಸಿ ಅವರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here