‘ವಾಮಮಾರ್ಗದ ಮೂಲಕ ನನ್ನನ್ನು ಸೋಲಿಸುವ ಪ್ರಯತ್ನ ನಡೆದಿದೆ’- ಸಂಘದ ಹೆಸರು ಹೇಳದ ಮುಖಂಡರ ವಿರುದ್ಧ ಪುತ್ತಿಲ ಆರೋಪ

0

ಪುತ್ತೂರು: ವಾಮಮಾರ್ಗದ ಮೂಲಕ ನನ್ನನ್ನು ಸೋಲಿಸುವ ಪ್ರಯತ್ನ ನಡೆದಿದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ತತ್ವ ಸಿದ್ಧಾಂತಗಳನ್ನು ಮೀರಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ವಿರೋಚಿತ ಸೋಲು ಪಡೆದ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸಂಘದ ಕೆಲವು ಮುಖಂಡರೇ ನನಗೆ ಮತ ಹಾಕದಂತೆ ಕಾರ್ಯಕರ್ತರಿಗೆ ಒತ್ತಡ ಹಾಕಿದ್ದಾರೆ. ಕಾರ್ಯಕರ್ತರ ಮನೆಗೆ ಹೋಗಿ ಅವರ ತಂದೆ ತಾಯಿ ಫೋಟೋ ಹಿಡಿದು ಪ್ರಮಾಣ ಮಾಡಿಸಿದ್ದಾರೆ. ದೇವಸ್ಥಾನದಲ್ಲೂ ಪ್ರಮಾಣ ಮಾಡಿಸಿದ್ದಾರೆ. ಪ್ರಮಾಣಕ್ಕೆ ವಿರುದ್ಧವಾಗಿ ನನಗೆ ಮತ ಹಾಕಿದರೆ ತಂದೆ-ತಾಯಿ ಸಾಯುತ್ತಾರೆ ಎನ್ನುವ ಬೆದರಿಕೆ ಹಾಕಿದ್ದಾರೆ. ದೇವರ ಫೋಟೋ ಮೇಲೆ ಆಣೆ ಹಾಕಿಸಿದ್ದಾರೆ. ಇಂಥ ಕೆಳಮಟ್ಟಕ್ಕೆ ಸಂಘ ಇಳಿಯಬಾರದಿತ್ತು ಎಂದು ಹೇಳಿದರು.

ಬಿಜೆಪಿ ಮುಖಂಡರ ಬ್ಯಾನರ್‌ಗೆ ಚಪ್ಪಲಿಹಾರ ಹಾಕಿದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರಿಂದ ಅಮಾನುಷ ಹಲ್ಲೆ ನಡೆದಿದೆ. ಆದರೆ ವಿಟ್ಲದಲ್ಲಿ ಹಿಂದೂ ಯುವತಿಯ ಮೇಲೆ ದೌರ್ಜನ್ಯ ಮಾಡಿದ ಅನ್ಯಮತೀಯನ ಮೇಲೆ ಇಂಥ ಶಿಕ್ಷೆ ವಿಧಿಸಲು ಯಾರಿಗೂ ಸಾಧ್ಯವಾಗಿಲ್ಲ. ಅಲ್ಲಿ ಪ್ರತಿಭಟನೆಯನ್ನೂ ಮಾಡಿಲ್ಲ ಎಂದು ಹೇಳಿದ ಪುತ್ತಿಲ, ಇಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಕಾರ್ಯಕರ್ತರನ್ನು ವಿಚಾರಿಸುವ ಸೌಜನ್ಯವನ್ನೂ ಸ್ಥಳೀಯ ಬಿಜೆಪಿ ಮುಖಂಡರು ಮಾಡಿಲ್ಲ ಎಂದರು.

ಇಡೀ ಸಮಾಜ ತಲೆತಗ್ಗಿಸುವ ಕೆಲಸ ಆಗಿದೆ: ಚುನಾವಣೆ ಅಭ್ಯರ್ಥಿಯ ಆಯ್ಕೆಯ ನಂತರದ ಮತ್ತು ಚುನಾವಣೆಯ ಮತ ಎಣಿಕೆ ಬಳಿಕ ನಡೆದ ಅನೇಕ ಘಟನೆಗಳು ನಮಗೆ ಅತ್ಯಂತ ನೋವು ತಂದು ಕೊಟ್ಟಿದೆ. ವಿಟ್ಲದಲ್ಲಿ ಸಹೋದರಿಯ ಮೇಲೆ ನಡೆದಿರುವ ಮಾನಭಂಗ ಯತ್ನ ಪ್ರಕರಣ, ಗ್ಯಾಸ್ ಸಿಲಿಂಡರ್ ಪೂರೈಸದ ಹಿಂದುವಿನ ಮೇಲಿನ ಹಲ್ಲೆ, ಕೂರ್ನಡ್ಕ ಭಾಗದಲ್ಲಿ ಕೇಸರಿ ಶಲ್ಯ ಹಾಕಿದ ವ್ಯಕ್ತಿಗೆ ಹಲ್ಲೆ, ಕಾವಿನಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗೆ ಮಸೀದಿಯಿಂದ ಹೋದ ಮಕ್ಕಳು ಕಲ್ಲು ಬಿಸಾಡಿದ್ದು, ಸವಣೂರು ಭಾಗದಲ್ಲಿ ಅಮಾಯಕರಿಗೆ ಮತ್ತು ಕೇಸರಿಗೆ ಅವಮಾನ ಮಾಡಿದ ವಿದ್ಯಾಮಾನ ಮತ್ತು ಮೇ 15ರಂದು, ಬಿಜೆಪಿ ದೇವದುರ್ಲಭ ಕಾರ್ಯಕರ್ತರಾಗಿ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿರುವ ಕಾರ್ಯಕರ್ತರಿಗೆ ಮತ್ತು ಹಿಂದು ಜಾಗರಣ ವೇದಿಕೆ ತಾಲೂಕು ಸಹಸಂಚಾಲಕರ ಮೇಲೆ ಪೊಲೀಸರಿಂದ ನಡೆದಿರುವ ಮಾರಣಾಂತಿಕ ಹಲ್ಲೆ ಮೂಲಕ ಚುನಾವಣೆಯ ನಂತರದ ದಿವಸದಲ್ಲಿ ಯಾವ ರೀತಿಯ ಘಟನೆಗಳು ನಡೆಯಬಹುದು ಎಂದು ಸಮಾಜ ಕಂಡಿದೆ. ಇಂತಹ ಘಟನೆಗಳು ಮರುಕಳಿಸದ ರೀತಿಯಲ್ಲಿ ಇಲಾಖೆ ಕಾರ್ಯೋನ್ಮುಖವಾಗಬೇಕು. ಒತ್ತಡದ ವಿಚಾರದ ನಡುವೆ ಡಿವೈಸ್ಪಿ ಅವರಿಂದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದು ಸಮಾಜಕ್ಕೆ ಗೊತ್ತಿದೆ. ಸಣ್ಣ ವಿಚಾರಕ್ಕೆ ಕಾರ್ಯಕರ್ತರಿಗೆ ಈ ರೀತಿ ಹಲ್ಲೆ ನಡೆಸಿರುವುದು ಇಡೀ ಸಮಾಜ ತಲೆತಗ್ಗಿಸುವ ಕೆಲಸ ಆಗಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯ ಜೊತೆಗೆ ಕೆಲಸ ಮಾಡಿದ್ದಾರೆ. ಅಂಥವರ ಕೈಕಾಲುಗಳನ್ನು ಮುರಿದು ಹಾಕಬೇಕೆಂದು ಯಾರದ್ದೋ ಮಾತು ಕೇಳಿ ಒತ್ತಡ ತಂದರೆ ಹಿಂದು ಸಮಾಜ ಯಾವತ್ತು ಕೂಡಾ ಸಹಿಸಲಾರದು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಪಾರದರ್ಶಕವಾಗದ ಕಾನೂನು ರೀತಿಯ ಕ್ರಮ ಕೈಗೊಳ್ಳಬೆಕು. ಹಲ್ಲೆ ನಡೆಸಿದವರನ್ನು ಅಮಾನತು ಗೊಳಿಸಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಅವರು ಆಗ್ರಹಿಸಿದರಲ್ಲದೆ, ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ದೊಡ್ಡದಾದ ಕಂದಕ ನಿರ್ಮಾಣ ಆಗಿದೆ ಎಂಬುದು ಪೊಲೀಸರು ನಡೆಸಿರುವ ಈ ಹಲ್ಲೆಯಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.ಮುಂದಿನ ದಿನ ಇಂತಹ ಚಟುವಟಿಕೆಗಳು ನಡೆದರೆ ಮುಂದೆ ಆಗುವ ಎಲ್ಲಾ ಬೆಳವಣಿಗೆಗೆ ಇಲಾಖೆಗಳೇ ಕಾರಣ ಎಂದು ಎಚ್ಚರಿಕೆ ನೀಡಿದರು.

ಸರಿ ತಪ್ಪನ್ನು ಮಹಾಲಿಂಗೇಶ್ವರ ದೇವರ ಪಾದಕ್ಕೆ ಸಮರ್ಪಣೆ ಮಾಡಿದ್ದೇನೆ: ನಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಣ ಪಡೆದಿರುವವರು. ನಮ್ಮೆಲ್ಲರ ಯೋಚನೆಗಳು ಭಗವಧ್ವಜದ ಅಡಿಯಲ್ಲಿ ಹಿಂದು ಸಮಾಜದ ಅಡಿಯಲ್ಲಿರುವಂಥದ್ದು, ಸಮಾಜದ ಒಟ್ಟಿಗೆ ಹೋಗಬೇಕು. ಹಿಂದು ಸಮಾಜ ತಲೆಎತ್ತಿ ನಡೆಯುವ ಕೆಲಸವಾಗಬೇಕು. ಭವಿಷ್ಯದಲ್ಲಿ ಹಿಂದು ರಾಷ್ಟ್ರ ಆಗಬೇಕೆನ್ನುವ ಯೋಚನೆಯಲ್ಲಿ ಕೆಲಸ ಮಾಡಿರುವುದು.ಯಾರು ಸರಿ-ತಪ್ಪು ಮಾಡಿದ್ದಾರೋ ಅವೆಲ್ಲವನ್ನು ಮಹಾಲಿಂಗೇಶ್ವರ ದೇವರ ಪಾದಕ್ಕೆ ಸಮರ್ಪಣೆ ಮಾಡಿದ್ದೇನೆ. ಮುಂದಿನ ದಿವಸದಲ್ಲಿ ಭಗವಂತನೇ ಅವರಿಗೆ ಒಳ್ಳೆಯ ಬುದ್ದಿ ಕೊಡಲಿ. ಯಾರು ತಪ್ಪು ಮಾಡಿದ್ದಾನೋ ಅವರನ್ನು ಸರಿ ದಾರಿಗೆ ಕೊಂಡೊಯ್ಯವ ಕೆಲಸ ಆಗಲಿ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರಲ್ಲದೆ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಸಾಮಾಜಿಕ ನ್ಯಾಯ, ಯಾವುದೇ ಪಕ್ಷದಲ್ಲಿರುವ ಅಮಾಯಕರಿಗೆ ನೋವಾದರೂ ಪೂರ್ಣ ಪ್ರಮಾಣದಲ್ಲಿ ನಾವು ಅವರ ಜೊತೆಗೆ ನಿಂತು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೋರಾಟ ಮಾಡುವ ಕೆಲಸವನ್ನು ಮುಂದಿನ ದಿವಸಗಳಲ್ಲಿ ಮಾಡುತ್ತೇನೆ ಎಂಬ ವಿಶ್ವಾಸದ ಮಾತುಗಳನ್ನು ಉಲ್ಲೇಖ ಮಾಡುತ್ತೇನೆ ಎಂದರು.

ಹೆಸರು ಹೇಳಲು ಬಯಸುವುದಿಲ್ಲ: ಕಾಂಗ್ರೆಸ್‌ಗೆ ಮತ ಹಾಕಿದರೂ ಸಮಸ್ಯೆಯಿಲ್ಲ, ಆದರೆ ಪಕ್ಷೇತರ ಅಭ್ಯರ್ಥಿ ಸೋಲಬೇಕು ಎಂಬ ಮಾತನ್ನು ಹೇಳಿದವರ ಹೆಸರನ್ನು ಉಲ್ಲೇಖ ಮಾಡಲು ಬಯಸುವುದಿಲ್ಲ. ಅದು ಈ ಕ್ಷೇತ್ರದ ಜನತೆಗೆ ತಿಳಿದಿದೆ. 22 ದಿವಸಗಳಲ್ಲಿ 62 ಸಾವಿರ ಮಂದಿ ನಮ್ಮ ಜೊತೆ ಇದ್ದಾರೆ ಎಂಬುದನ್ನು ಜನ ಅರಿತಿದ್ದಾರೆ. ಫ್ಲೆಕ್ಸ್‌ಗೆ ಸಂಬಂಧಿಸಿ ಪ್ರತಿಭಟನೆ ಮಾಡಿರುವುದು ಎಲ್ಲರಿಗೂ ಗೊತ್ತಿಗೆ. ಹಿಂದು ಕಾರ್ಯಕರ್ತರಿಗೆ ಧಿಕ್ಕಾರ ಕೂಗಿಸಿರುವುದೂ ಗೊತ್ತಿದೆ. ಮತ್ತೆ ಅದರ ಬಗ್ಗೆ ಇನ್ನಷ್ಟು ಹೇಳುವುದಿಲ್ಲ. ವಿಟ್ಲದಲ್ಲಿ ಹಿಂದೂ ಸೋದರಿಯ ಮಾನಭಂಗಕ್ಕೆ ಯತ್ನಿಸಿದ್ದ ಘಟನೆ ಖಂಡಿಸಿ ಇದೇ ರೀತಿಯಾಗಿ ಪ್ರತಿಭಟನೆ ಮಾಡಿದ್ದರೆ ಸಮಾಜ ಒಪ್ಪಿಕೊಳ್ಳುತ್ತಿತ್ತು. ಬ್ಯಾನರ್ ವಿಚಾರದಲ್ಲಿ ಪ್ರತಿಭಟನೆ ನಡೆಸಿ ಅಮಾಯಕ ಯುವಕರ ಮೇಲೆ ಪೈಶಾಚಿಕ ರೀತಿಯಲ್ಲಿ ಹಲ್ಲೆ ನಡೆಸಿರುವುದನ್ನು ಸಮಾಜ ಒಪ್ಪುವುದಿಲ್ಲ. ಗಾಯಾಳುಗಳ ವಿಚಾರಣೆಗೆ ಮೊನ್ನೆ ಸಂಜೀವ ಮಠಂದೂರು ಅವರು ಬರಬೇಕಾಗಿತ್ತು. ಆದರೆ ಅವರು ಬಂದಿಲ್ಲ. ಅವರು ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಕೂಗಿರುವುದು ಎಲ್ಲರಿಗೂ ಗೊತ್ತಿದೆ. ಅದೇ ದಿನ ರಾತ್ರಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗುತ್ತಿರುವವರನ್ನು ರಾತ್ರಿ ಸುಮಾರು ಒಂದು ಗಂಟೆಗೆ ನಾನೇ ಸಾಮಾಜಿಕ ಬದ್ಧತೆಯಲ್ಲಿ ಬಿಡಿಸಿಕೊಂಡು ಬಂದಿದ್ದೇನೆ. ಈ ಹಿಂದು ಕಾರ್ಯಕರ್ತರು ಯಾವ ಪಕ್ಷದಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಚುನಾವಣೆಯ ಸಂದರ್ಭ ಎಲ್ಲಾ ಹಿಂದುಗಳು ನನಗೆ ಮತ ಹಾಕಿದ್ದಾರೆ. ಅವರ ಜೊತೆಗೆ ನಿಲ್ಲುವುದು ನನ್ನ ಕರ್ತವ್ಯ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಸಂಘಕ್ಕೆ ಸರಿಯಾದ ದಿಕ್ಕು ತೋರಿಸಲು ಸ್ಪರ್ಧಿಸಿದ್ದೆ: ನಾನು ಪ್ರಚಾರಕ್ಕಾಗಿ ಅಥವಾ ಸ್ವಾರ್ಥದ ಉದೇಶಕ್ಕೆ ಸ್ಪರ್ಧೆ ಮಾಡಿರುವುದು ಅಲ್ಲ.ಕಾರ್ಯಕರ್ತರ ಭಾವನೆ ಯಾವ ರೀತಿಯಲ್ಲಿ ಬದಲಾವಣೆ ಆಗಬೇಕು. ತತ್ವ ಸಿದ್ಧಾಂತ ಬಿಟ್ಟು ಸರ್ವಾಧಿಕಾರ ಧೋರಣೆಯಲ್ಲಿ ಕಾರ್ಯ ನಡೆಯುತ್ತಿದ್ದಾಗ ಸಂಘಕ್ಕೆ ಸರಿಯಾದ ದಿಕ್ಕು ತೋರಿಸಬೇಕೆಂಬ ನಿಟ್ಟಿನಲ್ಲಿ ಕಾರ್ಯಕರ್ತರ ಆಶಯದೊಂದಿಗೆ ಹಿರಿಯರ ಕಲ್ಪನೆಗಳನ್ನು ಸಾಕಾರಗೊಳಿಸುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಕಳೆದ 5 ವರ್ಷದ ಅವಧಿಯಲ್ಲಿ ಕಾರ್ಯಕರ್ತರ ಭಾವನೆಗಳ ವಿರುದ್ಧ ಕೆಲಸ ಮಾಡಬೇಕಾಗಿತ್ತು. ಗೋ ಹತ್ಯೆಯ ಸಂದರ್ಭದ ಕೇಸು, ಲವ್ ಜಿಹಾದ್ ಪ್ರಕರಣ ಸಂಬಂಧದ ಕೇಸುಗಳನ್ನು ತೆಗೆಸಬೇಕಾಗಿತ್ತು. ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಡುವುದು ಇತರ ರಾಜಕೀಯ ಪಕ್ಷದಂತೆ ಆಗಬಾರದು. ಕಾರ್ಯಕರ್ತರ ಆಧಾರದಲ್ಲಿ ಬಂದಿರುವ ಪಕ್ಷದಲ್ಲಿ ಕಾರ್ಯಕರ್ತರು ಹಿರಿಯರ ಕಲ್ಪನೆಯನ್ನು ಸಾಕಾರಗೊಳಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ನೋವಾಗಿದೆ, ಆಕ್ರೋಶವಾಗಿದೆ. ಕಾರ್ಯಕರ್ತರ ಜೊತೆಗೆ ನಿಲ್ಲುವುದು ಅನಿವಾರ್ಯ ಮತ್ತು ಅವಶ್ಯಕ ಎನ್ನುವ ನಿಟ್ಟಿನಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಿರುವುದು ಮತ್ತು ಕಾರ್ಯಕರ್ತರು ಕೈಜೋಡಿಸಿರುವುದು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

ವಾಟ್ಸಪ್ ಗ್ರೂಪ್ ಕೈಮೀರಿ ಹೋಗಿದೆ ಮುಂದಿನ ದಿನ ಸರಿ ಹೋಗುತ್ತದೆ: ಮೊನ್ನೆಯ ಚುನಾವಣೆಯ ಫಲಿತಾಂಶದ ಬಳಿಕ ಇಡೀ ಜಿಲ್ಲೆಯ ಕಾರ್ಯಕರ್ತರಿಗೆ, ನೈಜ ಹಿಂದುತ್ವಗಳಿಗೆ ನೋವಾಗಿದೆ. ಅವರ ನೋವು ಆಕ್ರೋಶಗಳು ಮುಂದಿನ ಚುನಾವಣೆಯಲ್ಲಿ ಫಲಿಸಬೇಕು ಎಂಬ ರೀತಿಯಲ್ಲಿ ವಾಟ್ಸಪ್ ಗ್ರೂಪ್ ರಚನೆಯಾಗಿ ಸುಮಾರು ಒಂದುವರೆ ಲಕ್ಷ ಸದಸ್ಯರು ಸೇರಿದಾರೆ. ಅದು ನಮ್ಮ ಕೈ ಮೀರಿ ಹೋಗಿದೆ. ಕಾರ್ಯಕರ್ತರ ಭಾವನೆಗಳು ಯಾವ ರೀತಿ ಇದೆ. ಅವರ ಭಾವನೆಗಳಿಗೆ ಪೂರಕವಾಗಿ ಸ್ಪಂದಿಸುತ್ತಾರೋ ಎಂಬ ಯೋಚನೆಯ ಯಕ್ಷ ಪ್ರಶ್ನೆ ಇಡೀ ಜಿಲ್ಲೆಯ ಜನತೆಯ ಮುಂದಿದೆ. ಸುಮಾರು 150ಕ್ಕೂ ಮಿಕ್ಕಿ ಫ್ಲೆಕ್ಸ್‌ಗಳ ಅಳವಡಿಕೆ ಆಗಿದೆ. ಇದು ಯಾರು ಯಾರಿಗೆ ಹೇಳಿ ಮಾಡಿಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದ ಪುತ್ತಿಲ, ಸಾಮಾಜಿಕ ಜಾಲತಾಣದಲ್ಲಿ ಹಿರಿಯರನ್ನು ಹೀಯಾಳಿಸುವ, ಸಂಘದ ಹಿರಿಯರಿಗೆ, ಸಂಘಟನೆ ಪದಾಧಿಕಾರಿಗಳಿಗೆ ಅವಮಾನ ಮಾಡಿ ಅವರನ್ನು ತೇಜೋವಧೆ ಮಾಡಬಾರದು. ಮುಂದಿನ ದಿನಗಳಲ್ಲಿ ಇವೆಲ್ಲ ಸರಿಯಾಗುತ್ತದೆ ಎಂದು ಎಲ್ಲರೂ ಸಂಯಮದಲ್ಲಿ ಇರಬೇಕು. ನಾವು ಕೂಡಾ ಕಾರ್ಯಕರ್ತರ ಭಾವನೆಗಳ ಜೊತೆಗೆ ನಿಲ್ಲುವ ಕೆಲಸ ಮಾಡುತ್ತೇವೆ. ಯಾವುದೇ ರೀತಿಯ ಗೊಂದಲ ಬೇಡ. ಯಾರೋ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದರೂ ಅದು ನಾವು ಮಾಡಿಸಿದ್ದು ಅನ್ನುವ ಪ್ರಚಾರ ನಡೆಯುತ್ತಿದೆ. ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿ ನಾನು ಯಾವತ್ತು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಮಾಡಿ ಎಂದು ಯಾರ ಹತ್ತಿರವೂ ಹೇಳಿಲ್ಲ. ಮುಂದಿನ ದಿವಸದಲ್ಲೂ ಅದನ್ನು ಹೇಳುವ ಪ್ರಯತ್ನವನ್ನೂ ಮಾಡುವುದಿಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಸನ್ನ ಕುಮಾರ್ ಮಾರ್ತ, ಪ್ರವೀಣ್ ಭಂಡಾರಿ, ರಾಜಶೇಖರ್ ಬೆಂಗಳೂರು, ಅನಂತಕೃಷ್ಣ, ನವೀನ್ ರೈ ಪಂಜಳ ಉಪಸ್ಥಿತರಿದ್ದರು.

ಮುಂದಿನ ದಿನ ಎಲ್ಲವೂ ಸರಿಯಾಗುತ್ತದೆಂಬ ವಿಶ್ವಾಸವಿದೆ ನಾನು ಹಿಂದೆಯೂ ಬಿಜೆಪಿ, ನಾಳೆಯೂ ಬಿಜೆಪಿ

ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿರುವ ಅಣ್ಣಾಮಲೈ ಅವರು ನನಗೆ ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಅದೇ ರೀತಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ಜೀ ಕೂಡಾ ನನ್ನನ್ನು ಸಂಪರ್ಕಿಸಿದ್ದಾರೆ. ಎಲ್ಲಾ ಸರಿಯಾಗಬೇಕೆನ್ನುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಆದರೆ ನಾನು ಹಿಂದೆಯೂ, ನಾಳೆಯೂ, ಯಾವತ್ತು ಕೂಡಾ ಬಿಜೆಪಿ, ಮೋದಿಯವರ ಆದರ್ಶದ ಜೊತೆಗೆ ರಾಜಕಾರಣದಲ್ಲಿ ಇರುವವರು ನಾವು. ತಪ್ಪು ಯಾರಿಂದ ಅಗಿರುವುದು ಎಂದು ಇಡೀ ಕ್ಷೇತ್ರದ ಜಿಲ್ಲೆಯ ಜನತೆಗೆ ಗೊತ್ತಿದೆ. ಈ ನಿಟ್ಟನಲ್ಲಿ ಅವರೆಲ್ಲ ಸರಿ ಮಾಡುತ್ತಾರೆ. ಯಾರು ಈ ಸನ್ನಿವೇಶ ನಿರ್ಮಾಣ ಮಾಡಲು ಪೂರ್ವಾಗ್ರಹ ಪೀಡಿತವಾಗಿ ಕೆಲಸ ಮಾಡಿದ್ದಾರೋ ಸರಿ ಮಾಡುವ ವ್ಯವಸ್ಥೆ ಮುಂದಿನ ದಿನ ಆಗುತ್ತದೆ ಎಂಬ ವಿಶ್ವಾಸ ನಮ್ಮ ಮೇಲಿದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮುಂದಿನ ದಿನ ಪಕ್ಷದ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಆ ಸಂದರ್ಭ ಮತ್ತು ಸನ್ನಿವೇಶಕ್ಕೆ ಸರಿಯಾಗಿ ನಾವು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ.

– ಅರುಣ್ ಕುಮಾರ್ ಪುತ್ತಿಲ

LEAVE A REPLY

Please enter your comment!
Please enter your name here