ಮೇ 22-25: ಬರಿಮಾರು ಶ್ರೀ ಕಾನಲ್ತಾಯ -ಮಹಾಕಾಳಿ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ – ನೇಮೋತ್ಸವ

0

ರಾಣಿ ಅಬ್ಬಕ್ಕ ಆಸ್ಥಾನದ ರಾಜವೈದ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ದೈವಸ್ಥಾನ

ದೈವಿಕ ನಂಬಿಕೆಯಂತೆ ಆದಿಬೆಮ್ಮೆರ್‌ಗಳಿಂದ ಸೃಷ್ಟಿಯಾಗಿರುವ ತುಳುನಾಡು ಉತ್ತರದ ಬಾರ್ಕೂರುನಿಂದ ದಕ್ಷಿಣದ ಚಂದ್ರಗಿರಿಯವರೆಗೆ ದ್ರಾವಿಡ ಮೂಲಪರಂಪರೆಯನ್ನು ಹೊಂದಿರುವ ಪರಮ ಪಾವನ ಪುಣ್ಯಕ್ಷೇತ್ರ, ದೈವ-ದೇವರುಗಳೆಂಬ ಧಾರ್ಮಿಕ ನೆಲೆಗಟ್ಟಿನ ಅಡಿಪಾಯದಲ್ಲಿರುವ ಪ್ರಾದೇಶಿಕ ವೈಶಿಷ್ಟ್ಯತೆ ಹೊಂದಿರುವ ಕ್ಷೇತ್ರ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿ ತಮ್ಮದೇ ಆದ ರೂಢಿ-ಸಂಪ್ರದಾಯಗಳ ದೈವಾರಾಧನೆಯಿಂದ ಜನರ ಜೀವನಶೈಲಿ ಆರಂಭವಾಗುತ್ತದೆ. ಪ್ರಕೃತಿ ರಮಣೀಯ ನಾಡು.. ಜಾತಿ-ಧರ್ಮ ಭೇದವಿಲ್ಲದೆ ಶಾಂತಿ, ಸಹಬಾಳ್ವೆಯ ಬೀಡು.. ಈ ನಾಡಿಗಿದೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆಯ ಜಾಡು..


ಇಲ್ಲಿನ ದೈವರಾಧನೆಯ ಪರಂಪರೆಯನ್ನು ಒಮ್ಮೆ ಅವಲೋಕಿಸಿದರೆ ನಾನಾ ಐತಿಹ್ಯ, ಪುರಾಣ ಗಳಲ್ಲಿ ದೈವಗಳು ಧರ್ಮಸ್ಥಾಪನೆಗಾಗಿ ವಿವಿಧ ಅವತಾರ ಸ್ವರೂಪ ತಾಳಿರುವುದು ಕಂಡುಬರುತ್ತದೆ. ಅಂತಹ ವಿಶೇಷ ಪುರಾಣ ಐತಿಹ್ಯವಿರುವ ಕ್ಷೇತ್ರ ಮೊಗರ್ನಾಡು ಸಾವಿರ ಸೀಮೆಯ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕಲ್ಲೆಟ್ಟ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನವೂ ಆಗಿದೆ. 16ನೇ ಶತಮಾನದಲ್ಲಿ ತುಳುನಾಡಿನ ಅಭಯರಾಣಿ ಎಂದೇ ಖ್ಯಾತಿಯ ಉಳ್ಳಾಲದ ವೀರರಾಣಿ ಅಬ್ಬಕ್ಕಳ ಆಸ್ಥಾನದ ರಾಜವೈದ್ಯ, ಉಪದೇಶಿ, ಬಾಲೊಳಿ, ಮಹಾಮಂತ್ರಿಕ ಗುರು ಸಿದ್ಧಮರ್ದ ಬೈದ್ಯರಿಂದ ಪ್ರತಿಷ್ಠಾಪನೆಗೊಂಡಿದೆ ಎನ್ನಲಾದ ಈ ಕ್ಷೇತ್ರದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆ ಮಾಡಿದೆ.

ಸ್ಥಳ ಪುರಾಣ :
ಉಪ್ಪಿನಂಗಡಿಯ ನಡುಮಖೆಗೆ `ಅಂಬೆರ್ಲು’ ಎಂಬ ಕಾರಣಿಕ ಪುರುಷರು ಸ್ನಾನಕ್ಕೆಂದು ತೆರಳಿದಾಗ, ಘಟ್ಟ ಇಳಿದು ಬಂದ ದೈವಶಕ್ತಿಯೊಂದು ಮಾನವ ರೂಪದಲ್ಲಿ ಅಂಬೆರ್ಲರನ್ನು ಸಂಧಿಸುತ್ತದೆ. ಅವರನ್ನು ಗುಣಗಾನ ಮಾಡುತ್ತಾ “ನಾನೋರ್ವ ನಿಮ್ಮೊಂದಿಗೆ ಬರಬಹುದೇ?” ಎಂದು ಕೇಳುತ್ತದೆ. “ಬರುವವರನ್ನು ಬರಬೇಡಿ ಎನ್ನಲಾರೆವು, ಬಾರದವರನ್ನು ಬನ್ನಿ ಎನ್ನಲಾರೆವು. ನಮ್ಮ ಜೊತೆಗೆ ಬಂದರೆ ಸೂಕ್ತ ಸ್ಥಾನಮಾನ ಕೊಟ್ಟು ಆದರಿಸುವೆವು” ಎನ್ನುತ್ತಾರೆ ಅಂಬೆರ್ಲು. ಹಾಗೇ ಬಂದ ಈ ದೈವಶಕ್ತಿ ಹಾಗೂ ಅಂಬೆರ್ಲು ಜೊತೆಯಾಗಿ ಮಾನವ ರೂಪದಲ್ಲಿ ನೇತ್ರಾವತಿ ನದಿ ದಡದಲ್ಲಿ ಹೆಜ್ಜೆ ಹಾಕಿಬಂದು ಮುಳಿಬೈಲಿನ ಸುತ್ತಂಗಣದ ಮನೆಯ ಅಂಗಳದ ಆನೆಬಾಗಿಲಿನ ಎದುರುಗಡೆ ಇದ್ದ ಬಾವಿಗೆ ಹಾರಿ ಅಂಬೆರ್ಲು’ ಎಂಬ ಕಾರಣೀಕ ಪುರುಷರು ಅದೃಶ್ಯರಾಗುತ್ತಾರೆ. ಮುಳಿಬೈಲಿನ ಈ ಬಾವಿ ಮುಂದಕ್ಕೆ ‘ಅಂಬೆರ್ಲೆ ಚಿತ್ತ’ ಬಾವಿ ಎಂದೇ ಖ್ಯಾತಿ ಪಡೆದು ತೀರ್ಥವಾವಿಯಾಗುತ್ತದೆ. ಇಂದಿಗೂ ಆ ಬಾವಿಯಲ್ಲಿ ದೈವಶಕ್ತಿಯ ಸಾನ್ನಿಧ್ಯವಿದೆಯೆಂದು ನಂಬಲಾಗುತ್ತದೆ.ಅಂಬೆರ್ಲರ ಜೊತೆಯಾಗಿ ಬಂದ ವ್ಯಕ್ತಿಯು ಕಾಯ ಬಿಟ್ಟು ಮಾಯ ಸೇರಿ ಅದೃಶ್ಯವಾಗುತ್ತದೆ. ದೈವಶಕ್ತಿ ಅದೃಶ್ಯವಾದ ಬಳಿಕ ಮುಳಿಬೈಲಿನ ಸುತ್ತಂಗಣದ ಮನೆಯ ಮುಂದೆ ಮಜಲುಗದ್ದೆಯ ಬದಿಯಲ್ಲಿ ಕುರಮ್ (ಪಣೋಲಿ) ಮರದಲ್ಲಿ ಪಾಂಚ ಪಕ್ಷಿಯೊಂದು ಕುಳಿತು ವಿಶಿಷ್ಟವಾಗಿ ಧ್ವನಿ ಹೊರಡಿಸುತ್ತಿರುತ್ತದೆ. ದಿನಗಳು ಕಳೆದರೂ ಆ ಪಕ್ಷಿ ಅದೇ ರೀತಿ ಧ್ವನಿ ಮೂಡಿಸುತ್ತಿದ್ದಾಗ ಕೌತುಕ ನಿವಾರಿಸಲು ಮುಳಿಬೈಲಿನ ಯಜಮಾನರಾದ ಗುಡ್ಡ ಬೈದ್ಯರ ಹಿರಿಯರು ಉಳ್ಳಾಲದ ವೀರರಾಣಿ ಅಬ್ಬಕ್ಕಳ ಆಸ್ಥಾನದ ರಾಜವೈದ್ಯ, ಮಹಾಮಂತ್ರಿಕ ಹೆಸರುವಾಸಿ ಗುರು ಸಿದ್ಧಮರ್ದ ಬೈದ್ಯರನ್ನು ಬರಮಾಡಿಕೊಳ್ಳುತ್ತಾರೆ. ಸಿದ್ಧಮರ್ದ ಬೈದ್ಯರು ಪಾಂಚಪಕ್ಷಿಗೆ ಆವೇಶಗೊಂಡಿರುವುದು ಕಾನಾಯ ದೈವವೆಂದು ಮನವರಿಕೆ ಮಾಡಿ, ಆ ದೈವಶಕ್ತಿಯನ್ನು ತೆಂಗಿನಕಾಯಿಗೆ ಆವಾಹನೆ ಮಾಡುತ್ತಾರೆ. ಮುಂದೆ ಆ ಪಾಂಚಪಕ್ಷಿ ಕಾಯ ಬಿಟ್ಟು ಮಾಯ ಸೇರಿತು. ಈ ಹಿನ್ನೆಲೆಯಲ್ಲಿ ಇಂದಿಗೂ ಹಾಲು-ಅಕ್ಕಿ (ಕಾಯ ಬಿಟ್ಟು ಮಾಯಾ ಸೇರಿದ ಪಕ್ಷಿಗೆ ಅಕ್ಕಿ, ತೆಂಗಿನಕಾಯಿಗೆ ಆವಾಹನೆಗೊಂಡ ದೈವಕ್ಕೆ ಹಾಲು) ಇಡುವ ಕಟ್ಟಳೆಯನ್ನು ಪ್ರತೀ ಭಾನುವಾರ ಮತ್ತು ಮಂಗಳವಾರದಂದು ಮುಂಜಾನೆಯ ಸಮಯದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಮುಳಿಬೈಲಿನ ಮಜಲಿನಲ್ಲಿದ್ದ ಪಣೋಲಿ (ಕುರಮ್) ಮರದಲ್ಲಿ ದೈವವು ನೆಲೆಸಿದ್ದ ಕಾರಣದಿಂದಾಗಿ ‘ಕುರಮಜಲು’ ಎಂದು ಹೆಸರು ಬರುತ್ತದೆ. ಕಾನಲ್ತಾಯ ದೈವವನ್ನು ಮತ್ತು ಸಿದ್ಧಮರ್ದ ಬೈದ್ಯರ ಜಪದ ದೈವವಾದ ಮಹಾಕಾಳಿ ದೈವವನ್ನು ಗ್ರಾಮದಲ್ಲಿ ಯಾವುದೇ ದೇವಸ್ಥಾನ ಹಾಗೂ ದೈವಸ್ಥಾನ ಇಲ್ಲದೇ ಇರುವ ಆ ಕಾಲದಲ್ಲಿ ಗ್ರಾಮಸ್ಥರು ದೇವರೂ ಆಗಿ, ದೈವವಾಗಿಯೂ ಆರಾಧಿಸುವ ಸಲುವಾಗಿ ಶ್ರೀ ಕಾನಲ್ತಾಯ-ಮಹಾಕಾಳಿ ದೈವಗಳಾಗಿ ಉಪದೇಶಿ ಬಾಲೊಳಿ ಮಹಾಗುರು ಸಿದ್ಧಮರ್ದ ಬೈದ್ಯರು ತಮ್ಮ ದಿವ್ಯಹಸ್ತದಿಂದಲೇ ಪ್ರತಿಷ್ಠಾಪನೆ ಮಾಡಿರುತ್ತಾರೆ ಎಂಬ ಉಲ್ಲೇಖವಿದೆ. ಮುಂದೆ ಗ್ರಾಮ ಸೇರಿಯಾಗುವ ಕೂಟ ಕಲ್ಲೆಟ್ಟಿಯಲ್ಲಿ ಕುರಮಜಲಿನಿಂದ ಭಂಡಾರ ಹೊರಟು ನೇಮಾದಿಗಳು ನಡೆಯುತ್ತಿದ್ದವು.


ಕಾಲಕ್ರಮೇಣ ನಾನಾ ಕಾರಣಗಳಿಂದಾಗಿ ಸಾನ್ನಿಧ್ಯವು ಪುನರುಜ್ಜಿವನಗೊಳ್ಳದೆ ಉಳಿದುಹೋದ ಕ್ಷೇತ್ರವನ್ನು ದೈವ ಪ್ರೇರಣೆಯಿಂದ ಭಕ್ತಜನರಲ್ಲಿ ಧಾರ್ಮಿಕ ಚಿಂತನೆಯು ಜಾಗೃತಗೊಂಡು ಕುರಮಜಲುಗುತ್ತಿನ ಶ್ರೀ ಲಕ್ಷ್ಮೀನಾರಾಯಣ ಸುವರ್ಣರ ನೇತೃತ್ವದಲ್ಲಿ ವೇ| ಮೂ| ಶ್ರೀಧರ ಗೋರೆಯವರಿಂದ ತಾಂಬೂಲ ಪ್ರಶ್ನಾಚಿಂತನೆಯನ್ನು ನಡೆಸಿ ಪುನರ್ ಪ್ರತಿಷ್ಠೆಯನ್ನು ಮಾಡಲಾಯಿತು. ಸಾನ್ನಿಧ್ಯ ಪುನರ್ ಪ್ರತಿಷ್ಠಾಪನೆಗೊಂಡು 12 ವರ್ಷಗಳ ಬಳಿಕ ಪುನರ್ ಪ್ರತಿಷ್ಠೆ – ಕಲಶಾದಿಗಳನ್ನು ಮಾಡುವ ಬಗ್ಗೆ ದೈವದ ಸಂಬಂಧಪಟ್ಟ ಗುತ್ತುಗಳ ಅನುಮತಿಯ ಮೇರೆಗೆ ಕಟ್ಟುಕಟ್ಟಳೆಯಂತೆ ಮಗದೊಮ್ಮೆ ಪುನರುಜ್ಜಿವನಗೊಳಿಸುವ ನಿಟ್ಟಿನಲ್ಲಿ 2021 ರಲ್ಲಿ ಏಳು ದಿನಗಳ ಕಾಲ ಮೊಗರ್ನಾಡು ಸಾವಿರಸೀಮೆ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ, ಜ್ಯೋತಿಷಿ ಸಿ. ಪಿ. ಗೋಪಾಲಕೃಷ್ಣ ಪಣಿಕ್ಕರ್‌ರವರಿಂದ ಪ್ರಶ್ನಾಚಿಂತನೆ ನಡೆಸಲಾಯಿತು. ಇದರಲ್ಲಿ ಕಂಡುಬಂದಂತೆ, ಈಗ ನಡೆಯುತ್ತಿರುವ ಆರಾಧನೆಯು ಆತ್ಮವಿಲ್ಲದ ಶರೀರವನ್ನು ಪೂಜಿಸಿದಂತೆ ನಡೆಯುತ್ತಿದೆ. ಒಂದೇ ಮಣೆ-ಮಂಚವುನಲ್ಲಿ ಕಾನಲ್ತಾಯ ಮಹಾಕಾಳಿ ಮೊಗ-ಮೂರ್ತಿ ಆರಾಧನೆಗೊಳ್ಳಬೇಕಾದ ಜಾಗದಲ್ಲಿ ಬೇರೆ ಬೇರೆ ಮಣೆ-ಮಂಚವುನಲ್ಲಿ ಪ್ರತಿಷ್ಠಾಪಿಸಿ ಆರಾಧನೆ ಮಾಡುತ್ತಿದ್ದು, ಮೊಗ-ಮೂರ್ತಿಯು ಒಡಕಿನದ್ದಾಗಿರುತ್ತದೆ. ಸಂಬಂಧಪಟ್ಟ ಗುತ್ತಿನವರು ಎರಕಹೊಯ್ಯದೆ ಕೇವಲ ಮಾರುಕಟ್ಟೆಯಲ್ಲಿ ಸಿದ್ಧಪಡಿಸಿರುವ ಮೊಗ-ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದರಿಂದ ಸಾನ್ನಿಧ್ಯ ಅಪರಿಪೂರ್ಣವಾದ ಹಿನ್ನೆಲೆಯಲ್ಲಿ ಹೊಸದಾಗಿ ಪಂಚಲೋಹದಿಂದ ತಯಾರಿಸಿದಂತಹ ಮೊಗ-ಮೂರ್ತಿಯನ್ನು ಸಂಬಂಧಪಟ್ಟ ಸಮಸ್ತ ಗುತ್ತು ಬಾಂಧವರಿಂದ ಎರಕಹೊಯ್ದು ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಎಂದು ತಿಳಿದು ಬಂದಿದೆ.


ಜೀರ್ಣೋದ್ಧಾರ ಕಾರ್ಯಗಳು:
ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಜೀರ್ಣೋದ್ದಾರ ಕಾರ್ಯ ಕೈಗೆತ್ತಿಕೊಂಡು ಶ್ರೀ ಕಾನಾಯ-ಮಹಾಕಾಳಿ ದೈವಗಳ ಮೊಗ-ಮೂರ್ತಿಗಳ ಪ್ರತಿಷ್ಠಾಪನೆಗೆ ಮಣೆ-ಮಂಚವು, ಕೀರ್ತಿ ಮುಖ ತಯಾರಿಸಲಾಗಿದೆ. ದೈವಸ್ಥಾನದ ಗೋಪುರದ ಮೇಲ್ಪಾವಣಿ, ಮುಗುಳಿ, ಉತ್ತರ ಭಾಗದ ಸುತ್ತುಮೌಲ್ಯ, ವೈದಿಕರ ವಿಶ್ರಾಂತಿ ಕೊಠಡಿ ಇತ್ಯಾದಿ ಮೂಲಸೌಕಾರ್ಯಗಳು ಸೇರಿದಂತೆ ಸುಮಾರು ರೂ. ಒಂದು ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯಗಳನ್ನು ಮಾಡಲಾಗಿದೆ.

ಪಾಂಚಪಕ್ಷಿಯ ಶರೀರದಲ್ಲಿದ್ದ ದೈವ..!
ಪಾಂಚಪಕ್ಷಿಯ ಶರೀರದಿಂದ ತೆಂಗಿನಕಾಯಿಗೆ ಆವಾಹನೆಗೊಂಡ ಕಾನಲ್ತಾಯ ದೈವವನ್ನು ಮತ್ತು ಸಿದ್ಧಮರ್ದ ಬೈದ್ಯರ ಜಪದ ದೈವವಾದ ಮಹಾಕಾಳಿ ದೈವವನ್ನು ಗ್ರಾಮದಲ್ಲಿ ಯಾವುದೇ ದೇವಸ್ಥಾನ ಹಾಗೂ ದೈವಸ್ಥಾನ ಇಲ್ಲದೇ ಇರುವ ಆ ಕಾಲದಲ್ಲಿ ಗ್ರಾಮಸ್ಥರು ದೇವರೂ ಆಗಿ, ದೈವವಾಗಿಯೂ ಆರಾಧಿಸುವ ಸಲುವಾಗಿ ಶ್ರೀ ಕಾನಲ್ತಾಯ-ಮಹಾಕಾಳಿ ದೈವಗಳನ್ನು ಉಳ್ಳಾಲದ ರಾಣಿ ಅಬ್ಬಕ್ಕಳ ಆಸ್ಥಾನ ರಾಜವೈದ್ಯರಾದ ಬಾಲೊಳಿ ಮಹಾಗುರು ಸಿದ್ಧಮರ್ದ ಬೈದ್ಯರು ತಮ್ಮ ದಿವ್ಯಹಸ್ತದಿಂದಲೇ ಪ್ರತಿಷ್ಠಾಪನೆ ಮಾಡಿರುತ್ತಾರೆ ಎಂಬ ಉಲ್ಲೇಖವಿದೆ.


ಮೇ 24: ದೈವಗಳ ಪುನರ್‌ ಪ್ರತಿಷ್ಠೆ – ಕಲಶಾಭಿಷೇಕ‌:

ಕ್ಷೇತ್ರದಲ್ಲಿ ಶ್ರೀ ಕಾನಲ್ತಾಯ ಮಹಾಕಾಳಿ ಪರಿವಾರ ದೈವಗಳ ಪುನರ್‌ ಪ್ರತಿಷ್ಠಾ ಕಲಶೋತ್ಸವ ಮತ್ತು ನೇಮೋತ್ಸವಗಳು ಮೇ 22 ರಂದು ಆರಂಭಗೊಂಡು ಮೆ. 25 ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

LEAVE A REPLY

Please enter your comment!
Please enter your name here