ಉಪ್ಪಿನಂಗಡಿ: 18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ದತ್ತಿ ನಿಧಿ ಕಾರ್ಯಕ್ರಮ

0

ಯಂತ್ರ ಕೇಂದ್ರೀತವಾದ ಶಿಕ್ಷಣದ ಬಗ್ಗೆ ಎಚ್ಚರ ಅಗತ್ಯ: ಡಾ. ನರೇಂದ್ರ ರೈ ದೇರ್ಲ

ಉಪ್ಪಿನಂಗಡಿ: ಗುರುಕುಲ ಕೇಂದ್ರೀತವಾದ ನಮ್ಮ ಶಿಕ್ಷಣ ವ್ಯವಸ್ಥೆಯು ಬದಲಾವಣೆಯಾಗುತ್ತಲೇ ಹೋಗುತ್ತಿದ್ದು, ಕೋರೋನಾ ಕಾರಣದಿಂದಾಗಿ ಆನ್‌ಲೈನ್ ಶಿಕ್ಷಣಕ್ಕೆ ಒಳಗಾಗಿದ್ದು, ವಿದ್ಯಾರ್ಥಿಗಳಲ್ಲಿ ಹೊಸ ಸಮಸ್ಯೆಯನ್ನು ಉದ್ಭವಿಸಿದೆ. ಆದ್ದರಿಂದ ಯಂತ್ರ ಕೇಂದ್ರೀತವಾದ ಶಿಕ್ಷಣದಿಂದಾಗಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ ಎಂದು ಹಿರಿಯ ಸಾಹಿತಿ, ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ತಿಳಿಸಿದರು.


ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ೧೮ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದ ಅವರು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ತರಗತಿಯೊಳಗೆ ಜೀವವಿದೆ. ಮನಸ್ಸು ಬೇರೆಲ್ಲೋ ಇದೆ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೇಳುವ- ನೋಡುವ ಕ್ರಮಗಳೆಲ್ಲವೂ ಬದಲಾಗಿದೆ. ಇದು ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸಿದ್ದು, ಯುವ ಸಮಾಜಕ್ಕೆ ಪುಸ್ತಕ ಪ್ರೀತಿ ಮೂಡಿಸುವ ಮೂಲಕ ಅವರನ್ನು ಸಮಾಜಕ್ಕೆ ಸಂಪತ್ತಾಗಿ ರೂಪಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ, ಕನ್ನಡ ಎನ್ನುವುದು ಜೀವ ತುಂಬುವ, ಮನಸ್ಸು ಮನಸ್ಸುಗಳ ನಡುವೆ ಭಾಂಧವ್ಯದ ಸೌಧ ಕಟ್ಟುವ ಭಾಷೆಯಾಗಿದೆ. ಎಳೆಯ ಮನಸ್ಸುಗಳನ್ನು ಸಾಹಿತ್ಯದತ್ತ ಸೆಳೆಯುವ ಕಾರ್ಯ ನಡೆಯಬೇಕಾಗಿದೆ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್‌ನ ಕೋಶಾಧಿಕಾರಿ ಬಿ. ಐತ್ತಪ್ಪ ನಾಯ್ಕ್ ಮಾತನಾಡಿ, 18 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಹಿತಮಿತ ಖರ್ಚಿನೊಂದಿಗೆ ನಡೆಸಿ ಉಳಿಕೆಯಾದ ಮೊತ್ತವನ್ನು ದತ್ತಿ ನಿಧಿಯನ್ನಾಗಿಸಿದ ಕಾರಣಕ್ಕೆ ಪ್ರತಿ ವರ್ಷವೂ ಕನ್ನಡ ಸಾಹಿತ್ಯ ಸೇವೆ ಸಲ್ಲಿಸುವ ಅವಕಾಶ ಒದಗಿಸಲಾಗಿದೆ ಎಂದರು.
ವಿವೇಕಾನಂದ ಸ್ವ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲಪತಿ ಎಚ್.ಜಿ. ಶ್ರೀಧರ್ ಮಾತನಾಡಿ, ಯುವ ಮನಸ್ಸುಗಳನ್ನು ಹುಡುಕುವ ಹವ್ಯಾಸದತ್ತ ಸೆಳೆಯುವ ಜೊತೆಗೆ ಪುಸ್ತಕ ಪ್ರೀತಿಯನ್ನು ಹೆಚ್ಚಿಸಬೇಕಾಗಿದೆ. ಇಲ್ಲದೇ ಹೋದರೆ ಜೀವನೋತ್ಸಾಹ ಮೂಡಿಸುವ ಸಂಸ್ಕೃತಿಯೇ ಮರೆಯಾಗಲಿದೆ ಎಂದರು.


ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಸಾಹಿತ್ಯ ಸರಸ್ವತಿಯ ಸೇವೆ ಸಲ್ಲಿಸುವಂತಾಗಲು ದತ್ತಿ ನಿಧಿ ಯೋಜನೆಯು ಉತ್ತಮ ಅವಕಾಶವನ್ನು ಒದಗಿಸಲಿದೆ ಎಂದರು. ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಉಮೇಶ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದ ಅಂಗವಾಗಿ ವಿವಿಧ ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಗೀತಾಗಾಯನ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಸದಸ್ಯ ಯು.ಎಲ್. ಉದಯ ಕುಮಾರ್ ಸ್ವಾಗತಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಬಸವರಾಜೇಶ್ವರಿ ದಿಡ್ಡಿಮನಿ ವಂದಿಸಿದರು. ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here