ಅನುರಣಿಸಿದ ‘ಪುತ್ತಿಲ ಪರಿವಾರ’

0

ಆರ್‌ಎಸ್‌ಎಸ್ ಕಲ್ಪನೆಗಳು ಸಾಕಾರಗೊಳ್ಳಬೇಕು – ಅರುಣ್ ಕುಮಾರ್ ಪುತ್ತಿಲ

  • ಯಾರಿಗೂ ಸಿಗದ ಬೆಂಬಲ ಅರುಣಣ್ಣನಿಗೆ ದೊರೆತಿದೆ – ಡಾ. ಸುರೇಶ್ ಪುತ್ತೂರಾಯ
  • ಬೈದವರಿಗೂ ಪಾದಮುಟ್ಟಿ ನಮಸ್ಕರಿಸುವ ಸಂಸ್ಕೃತಿ ನಮ್ಮದು – ಶ್ರೀಕೃಷ್ಣ ಉಪಾಧ್ಯಾಯ
  • ಸುಭಾಸ್ ಚಂದ್ರ ಬೋಸ್ ರವರ ಪುನರ್ಜನ್ಮ – ಪ್ರಸನ್ನ ಕುಮಾರ್ ಮಾರ್ತ

ಪುತ್ತೂರು: ಆರ್‌ಎಸ್‌ಎಸ್ ಕಲ್ಪನೆಗಳನ್ನು ಸಾಕಾರಗೊಳಿಸಲು, ಅಖಂಡ ಹಿಂದು ಸಮಾಜಕ್ಕಾಗುವ ಅನ್ಯಾಯ, ತೊಂದರೆ, ಸವಾಲುಗಳನ್ನು ಮೆಟ್ಟಿ ನಿಲ್ಲಲು ಶಕ್ತಿ ನೀಡಲು, ಕಾರ್ಯಕರ್ತರ ಭಾವನೆಗಳಿಗೆ ಬೆಲೆ ನೀಡುವ ನಿಟ್ಟಿನಲ್ಲಿ ‘ಪುತ್ತಿಲ ಪರಿವಾರ’ ಸಂಘಟನೆ ಕಾರ್ಯರೂಪಕ್ಕೆ ಬರಲಿದೆ ಎಂದು ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಪಕ್ಷೇತರನಾಗಿ ‘ಹಿಂದುತ್ವ’ದ ಪ್ರತೀಕವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಹೇಳಿದರು.

‘ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ’ ಪರಿಕಲ್ಪನೆಯಡಿಯಲ್ಲಿ ಮೇ 21 ರಂದು ಸಂಜೆ ದರ್ಬೆ ವೃತ್ತದಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ನಡೆದ ಕಾಲ್ನಡಿಗೆ ಜಾಥಾ ಮತ್ತು ದೇವರಮಾರು ಗದ್ದೆಯಲ್ಲಿ ನಡೆದ ಬೃಹತ್ ಕಾರ್ಯಕರ್ತರ ಸಭೆ – ಸೇವಾ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ ಸಂಘದ ಹಿರಿಯ ಕಲ್ಪನೆಗಳೇನಿವೆ, ಭಾರತೀಯ ಜನತಾಪಕ್ಷದ ಹಿರಿಯ ನಾಯಕರ ಕಲ್ಪನೆಗಳು, ಈ ಕ್ಷೇತ್ರದ ಹಿರಿಯ ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ಈ ದೇಶದಲ್ಲಿ ಭಗವಾಧ್ವಜ ನಿತ್ಯನಿರಂತರ ಹಾರುತ್ತಿರಬೇಕೆಂಬ ಆಶಯದಲ್ಲಿ ಹಿಂದು ಧರ್ಮದ ಉಳಿವು, ಕಾರ್ಯಕರ್ತರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ. ನಮ್ಮೆಲ್ಲಾ ಕೆಲಸಗಳಿಗೆ ಕಾರ್ಯಕರ್ತರು ಇದೇ ರೀತಿ ಶಕ್ತಿಯಾಗಿ ನಿಲ್ಲಬೇಕೆಂಬ ಕೋರಿಕೆ ನಮ್ಮದು ಎಂದು ಪುತ್ತಿಲ ಹೇಳಿದರು.

ಕಾರ್ಯಕರ್ತರಿಗೆ ವಿರುದ್ದವಾದುದು ನಡೆಯಕೂಡದು: ಸಮಾಜದ ಯಾವುದೇ ಹಂತದಲ್ಲಿಯೂ ನೈಜ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಇಲ್ಲದಾಗಿ, ಅವರ ಮನಸ್ಸಿಗೆ ವಿರುದ್ದವಾಗಿ ಮಾಡಿದರೆ ಈ ಸಮಾಜದಲ್ಲಿ ಯಾವ ದುಷ್ಕೃತ್ಯ ಪ್ರೇರಿತ ಕೆಲಸ ಕಾರ್ಯಗಳು ನಡೆಯುವುದಿಲ್ಲ ಎಂಬುದು ಈ ಬಾರಿ ಸಾಬೀತಾಗಿದೆ. ಮಹಾಲಿಂಗೇಶ್ವರನೇ ಇದಕ್ಕೆಲ್ಲಾ ಶಕ್ತಿ ನೀಡಿ, ಪ್ರೇರೇಪಣೆ ನೀಡಿ ಮುಂದಿನ ಹಾದಿಯನ್ನು ಸುಗಮಗೊಳಿಸಿದ್ದಾನೆ ಎಂಬ ಭಾವನೆ ಮೂಡುತ್ತಿದೆ ಎಂದರು ಅರುಣ್ ಕುಮಾರ್ ಹೇಳಿದರು.

ಅಪಪ್ರಚಾರ, ಅಪಮಾನಗಳಿಗೆ ಮಹಾಲಿಂಗೇಶ್ವರನೇ ಉತ್ತರ ನೀಡುತ್ತಾನೆ: ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಸೋಲಿಸಲು ಕೆಲವರು ಮಾಡಿರುವ ಅಪಪ್ರಚಾರ, ಅಪಮಾನ, ತೇಜೋವಧೆಗಳನ್ನು ಸಹಿಸಿಕೊಂಡಿದ್ದೇವೆ. ವಾಮಮಾರ್ಗಗಳನ್ನು ಅನುಸರಿಸಿ ಯಾರು ಯಾವುದನ್ನೂ ಮಾಡಬಾರದೋ ಅದೆಲ್ಲವನ್ನೂ ಮಾಡಿದ್ದಾರೆ. ಅವುಗಳಿಗೆಲ್ಲಾ ಆ ಮಹಾಲಿಂಗೇಶ್ವರನೇ ಕಾಲಕೂಡಿಬಂದಾಗ ಉತ್ತರ ನೀಡುತ್ತಾನೆ. ಯಾರು ಅಪಪ್ರಚಾರ ಮಾಡಿದವರೆಲ್ಲಾ ಪಶ್ಚತ್ತಾಪ ಪಡುವಂತೆ ಮತ್ತು ಮುಂದೆ ಅವರಿಗೆ ಉತ್ತಮ ನಡತೆಯನ್ನು ಕರುಣಿಸಲಿ ಎಂದು ಪುತ್ತಿಲ ಗದ್ಗದಿತರಾಗಿ ಹೇಳಿದರು.

ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ: ಧರ್ಮದ್ರೋಹ, ಸ್ವಸಮಾಜಕ್ಕೆ ಮಾಡಿರುವ ದ್ರೋಹ ಚಟುವಟಿಕೆಗಳಿಂದಾಗಿ ಇಂದು ರಾಜ್ಯದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಬಹುಶಃ ಈ ಎಲ್ಲಾ ಧರ್ಮದ್ರೋಹ ಚಟುವಟಿಕೆಗಳು ಮುಂದೆ ನಡೆಯದಂತೆ ನಾವೆಲ್ಲಾ ಸಂಘಟಿತರಾಗಿ ಮುಂದುವರಿಯಬೇಕಾಗಿದೆ ಎಂದರು.

ಇತಿಹಾಸ ನಿರ್ಮಾಣ: ಕಟ್ಟಕಡೆಯ ಹಿಂದುವಿನ ಭಾವನೆಗಳನ್ನು ಗಣನೆಗೆ ತೆಗೆದುಕೊಂಡಲ್ಲಿ ಮಾತ್ರ ಹಿಂದು ಸಮಾಜ ಸದೃಢವಾಗಿ ಬೆಳೆಯುತ್ತದೆ ಎಂಬುದಕ್ಕೆ ಪುತ್ತೂರಿನಲ್ಲಿ ಇತಿಹಾಸ ನಿರ್ಮಾಣಗೊಂಡಿದೆ. ಇಡೀ ದೇಶಕ್ಕೆ ಬದಲಾವಣೆಯ ಸಂದೇಶ ಕೊಟ್ಟಿದ್ದೇವೆ. ಚುನಾವಣೆಯಲ್ಲಿ ಸೋತರೂ ಕಾರ್ಯಕರ್ತರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಜಯಗಳಿಸಿದ್ದೇನೆ. ಈ ಮೂಲಕ ಮುಂದೆಯೂ ಹೊಸ ಭಾಷ್ಯ ಬರೆಯಲು ನಾವೆಲ್ಲಾ ನಮ್ಮ ಪ್ರಬುದ್ದತೆಯನ್ನು ಸಮಾಜಕ್ಕೆ ಶಕ್ತಿಯಾಗಿ ಧಾರೆಯೆರೆಯೋಣ ಎಂದರು.

ಕಾರ್ಯಕರ್ತರ ಪ್ರೀತಿ, ಮಹಾಲಿಂಗೇಶ್ವರನ ಅನುಗ್ರಹ ಜೀವಂತವಾಗಿರಿಸಿದೆ: ನಾಮಪತ್ರ ಸಲ್ಲಿಕೆಯಾದ ಬಳಿಕ ಚುನಾವಣೆ ಮುಗಿಯುವವರೆಗೂ ಜೀವಂತಾಗಿರುತ್ತೇನೋ ಇಲ್ಲವೋ ಎಂಬ ನಂಬಿಕೆ ಇರಲಿಲ್ಲ. ಆದರೆ ಕಾರ್ಯಕರ್ತರ ಪ್ರೀತಿ ವಿಶ್ವಾಸ, ಮಹಾಲಿಂಗೇಶ್ವರನ ಅನುಗ್ರಹ ನನ್ನನ್ನು ಇನ್ನೂ ಜೀವಂತವಾಗಿರಿಸಿದೆ ಎಂದು ಪುತ್ತಿಲ ಹೇಳಿದರು.

ಕೆಟ್ಟ ಯೋಚನೆ ಮಾಡಿಲ್ಲ: ನಾನು ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಅಧಿಕಾರಕ್ಕಲ್ಲ. ನನ್ನಲ್ಲಿ ಕೆಟ್ಟ ಯೋಚೆನಗಳಿಲ್ಲ, ಜಾತೀಯತೆ ಇಲ್ಲ, ನನ್ನಲ್ಲಿರುವುದು ಹಿಂದುತ್ವ ಮಾತ್ರ. ಜೀವದ ಉಸಿರು ಇರುವವರೆಗೂ ಧರ್ಮದ ಕೆಲಸ ಮಾಡುತ್ತೇನೆ. ಕಾರ್ಯಕರ್ತರ ಜೊತೆಗಿರುತ್ತೇನೆ ಎಂದು ಹೇಳಿದ ಪುತ್ತಿಲ ‘ಸಾಮಾಜಿಕ ಜಾಲತಾಣಗಳಲ್ಲಿಯೂ ಕಾರ್ಯಕರ್ತರು ಒಂದಷ್ಟು ಜವಾಬ್ದಾರಿ ಅರಿತು ನನ್ನೊಡನೆ ಸಹಕರಿಸಬೇಕೆಂದು ಕರೆ ನೀಡಿದರು.

ಹಿಂದು ವಿರೋಧಿ ನೀತಿಗಳಿಗೆ ಪಶ್ಚತ್ತಾಪ ಪಡಲಿ : ಯಾರೆಲ್ಲಾ ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ, ಅಪಮಾನ ಮಾಡಿದ್ದಾರೋ ಅವರಿಗೆಲ್ಲಾ ಪುತ್ತೂರಿನ ಮಹಾಲಿಂಗೇಶ್ವರ, ಬಲ್ನಾಡಿನ ಉಳ್ಳಾಲ್ತಿ, ಕೊಂಡಾಣದ ಭಗವತಿ, ಕೊರಗಜ್ಜ, ಪಣೊಲಿಬೈಲಿನ ದೈವ, ಧರ್ಮಸ್ಥಳದ ಅಣ್ಣಪ್ಪ ಮುಂದಿನ ದಿನಗಳಲ್ಲಿ ಉತ್ತಮ ನಡತೆ ನೀಡಲಿ. ಅವರೆಲ್ಲಾ ಪಶ್ಚತ್ತಾಪಪಡುವಂತಾಗಲಿ ಎಂದರು ಪುತ್ತಿಲ ಹೇಳಿದರು.

ಸುಭಾಸ್ ಚಂದ್ರ ಬೋಸ್‌ರವರ ಪುನರ್ಜನ್ಮ – ಪ್ರಸನ್ನ ಕುಮಾರ್ ಮಾರ್ತ
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಸನ್ನ ಕುಮಾರ್ ಮಾರ್ತರವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿಂದು ಸಾಮ್ರಾಟ ಸುಭಾಸ್ ಚಂದ್ರ ಬೋಸ್‌ರವರೇ ಪುನರ್ಜನ್ಮವೆತ್ತಿ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲರಾಗಿ ಬಂದಿದ್ದಾರೆ. ಕಾರ್ಯಕರ್ತರೇ ಚುನಾವಣೆ ಎದುರಿಸಿ ಪುತ್ತೂರಿನಲ್ಲಿ ಇತಿಹಾಸ ನಿರ್ಮಾಣವಾಗಿದೆ ಎಂದು ಹೇಳಿ ಚುನಾವಣೆಯ ವೇಳೆ ಸಹಕರಿಸಿದ ಸರ್ವರನ್ನೂ ಅಭಿನಂದಿಸಿದರು.

ಸಂಘಟನೆ ಸಮರ್ಪಣೆಯ ಕೆಲಸ – ಶ್ರೀಕೃಷ್ಣ ಉಪಾಧ್ಯಾಯ: ವೇದಿಕೆಯಲ್ಲಿದ್ದ ಶ್ರೀಕೃಷ್ಣ ಉಪಾಧ್ಯಾಯರು ಮಾತನಾಡಿ ಸಂಘಟನೆ ಎಂಬುದು ದೇವರಿಗೆ ಸಮರ್ಪಣೆಯ ಕೆಲಸ. ಹಾಗಾಗಿ ಅರುಣಣ್ಣನ ಹೋರಾಟ ಹಿಂದು ಸಮಾಜಕ್ಕಾಗಿ ಮುಂದೆಯೂ ಮುಂದುವರಿಯುತ್ತದೆ ಅದೆಲ್ಲವೂ ಮಹಾಲಿಂಗೇಶ್ವರನಿಗೆ ಅರ್ಪಣೆಯಾಗುತ್ತದೆ. ಮತದಾರನೇ ಹಣ ನೀಡಿ ಅಭ್ಯರ್ಥಿಯ ಗೆಲುವಾಗಿ ಶ್ರಮಿಸಿದ ವಿಚಿತ್ರ ಸಂಗತಿ ಪುತ್ತೂರಿನಲ್ಲಿ ನಡೆದಿದೆ. ಇದು ದೈವೀಶಕ್ತಿಯಿಂದಲ್ಲದೇ ಬೇರೇನು ಅಲ್ಲ ಎಂದರು.

ಬೈದವರಿಗೂ ಪಾದಮುಟ್ಟಿ ನಮಸ್ಕರಿಸುವ ಸಂಸ್ಕೃತಿ ನಮ್ಮದು: ಅರುಣಣ್ಣನ ಮೇಲೆ ನಡೆದ ಅಪಪ್ರಚಾರ, ಅಪಮಾನವೆಲ್ಲವನ್ನೂ ಸಹಿಸಿಕೊಂಡಿದ್ದಾರೆ. ಬೈದವರಿಗೂ ಪಾದಮುಟ್ಟಿ ನಮಸ್ಕರಿಸುವ ಸಂಸ್ಕೃತಿಯನ್ನು ಅವರು ತೋರಿಸಿಕೊಟ್ಟಿದ್ದಾರೆ. ಪುತ್ತಿಲ ಪರಿವಾರ ಎಂಬುದು ಕೇವಲ ಚುನಾವಣೆಗೆ ಮಾತ್ರವಲ್ಲ. ನಿತ್ಯನಿರಂತರಾಗಿ ಸೇವಾ ಕಾರ್ಯಕ್ರಮಗಳ ಯೋಜನೆ ಹಾಕಲು, ದೇಶದ ಇತಿಹಾಸ, ಪರಂಪರೆಯನ್ನು ಯುವಪೀಳಿಗೆಗೆ ಹೇಳಿಕೊಡುವ ಕಾರ್ಯ ಆಗಲಿದೆ ಎಂದು ಉಪಾಧ್ಯಾಯ ಹೇಳಿದರು.

ಆರ್‌ಎಸ್‌ಎಸ್‌ಗೆ ಅಪಮಾನವಾಗಬಾರದು: ಹಿಂದು ಸಮಾಜ ಕಟ್ಟುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ. ಅದಕ್ಕೆ ಎಂದಿಗೂ ಅಪಮಾನವಾಗಬಾರದು. ಪುತ್ತೂರಿನಲ್ಲಿ ಸಂಘಟನೆಯನ್ನು ಒಡೆದು ಹಾಕಿದರೆಂಬ ಅಪಾಯಕಾರಿ ಯೋಚನೆಯನ್ನು ಹರಿಯಬಿಡುವ ಕಾರ್ಯ ನಡೆಯುತ್ತಿದೆ. ಹಿಂದುತ್ವ ಸಮಾಜವನ್ನು ಕಟ್ಟಿ ನಾವೆಲ್ಲಾ ಈ ಯೋಚನೆಗೆ ಉತ್ತರ ನೀಡುವ ಕೆಲಸ ಮಾಡೋಣ. ಪುತ್ತೂರಿನ ಒಳ್ಳೆಯ ಜನರೊಂದಿಗೆ ನಾವು ಸದಾ ಇರೊಣ ಎಂದು ಶ್ರೀಕೃಷ್ಣ ಉಪಾಧ್ಯಾಯ ಕರೆ ನೀಡಿದರು.

ಯಾರಿಗೂ ಸಿಗದ ಬೆಂಬಲ ಅರುಣಣ್ಣನಿಗೆ ದೊರೆತಿದೆ – ಡಾ. ಸುರೇಶ್ ಪುತ್ತೂರಾಯ: ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಸುರೇಶ್ ಪುತ್ತೂರಾಯರು ಈ ಕಾರ್ಯಕ್ರಮ ಚುನಾವಣೆಗೆ ಸಂಬಂಧಿಸಿ ಮಾತ್ರವಲ್ಲ. ಬದಲಾಗಿ ಅರುಣಣ್ಣನೊಂದಿಗೆ ಸದಾ ನಾವಿದ್ದೇವೆ. ಮತ್ತು ಅರುಣಣ್ಣ ಸದಾ ಹಿಂದು ಸಮಾಜದೊಂದಿಗೆ ಇರುತ್ತಾರೆ ಎಂಬುದನ್ನು ತೋರಿಸಲು ಆಯೋಜಿಸಲಾಗಿದೆ. ಅತ್ಯಲ್ಪ ಅವಧಿಯಲ್ಲಿ ಅತ್ಯಧಿಕ ಮತಗಳನ್ನು ಪಡೆದು ಇನ್ಯಾರಿಗೂ ಸಿಗದ ಜನಬೆಂಬಲವನ್ನು ಅರುಣಣ್ಣ ತೋರಿಸಿಕೊಟ್ಟಿದ್ದಾರೆ. ಅಧಿಕಾರದ ಆಸೆ ಅವರಿಗಿಲ್ಲ. ಸದಾ ಹಿಂದು ಸಮಾಜದ ನಾಯಕನರಾಗಿರುತ್ತಾರೆ. ಜಾತೀಯತೆ, ಅಸ್ಪೃಶ್ಯತೆಯಂತಹ ಅನಿಷ್ಟಗಳನ್ನು ತೊಡೆದುಹಾಕಲು ಈ ಸಂಘಟನೆ ಕಾರ್ಯಾಚರಿಸಲಿದೆ ಎಂದರು. ವೇದಿಕೆಯಲ್ಲಿ ಬೆಂಗಳೂರಿನ ಉದ್ಯಮಿ ರಾಜಶೇಖರ ಬನ್ನೂರು, ಮಾತೃ ಮಂಡಳಿಯ ಪ್ರಮುಖರಾದ ವಸಂತಲಕ್ಷ್ಮಿ, ಡಾ. ಗಣೇಶ್ ಪ್ರಸಾದ್ ಮುದ್ರಜೆ ಉಪಸ್ಥಿತರಿದ್ದರು. ಶರಣ್ಯ ರೈ ಮತ್ತು ಶ್ರವಣ್ಯ ರೈ ಪ್ರಾರ್ಥಿಸಿದರು. ಉಮೇಶ್ ಕೋಡಿಬೈಲು ಸ್ವಾಗತಿಸಿ, ರವಿಕುಮಾರ್ ರೈ ಕೆದಂಬಾಡಿ ವಂದಿಸಿದರು. ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು. ಸಾವಿರಾರು ಕಾರ್ಯಕರ್ತರು ಕಾಲ್ನಡಿಗೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಹಾಲಿಂಗೇಶ್ವರನಿಗೆ 108 ತೆಂಗಿನಕಾಯಿ ಒಡೆದು ಪ್ರಾರ್ಥನೆ

ದೇವಳದಿಂದ ಹೊರ ಬಂದ ಬಳಿಕ ಸಾನ್ನಿಧ್ಯದ ಮುಂಭಾಗದಲ್ಲಿ 108 ತೆಂಗಿನಕಾಯಿ ಒಡೆಯಲಾಯಿತು. ಬ್ಯಾನರ್ ವಿಚಾರದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾದ ಹಿಂದು ಕಾರ್ಯಕರ್ತರಿಗೆ ನ್ಯಾಯ ದೊರಕುವಂತೆ ಮತ್ತು ಹಲ್ಲೆ ಮಾಡಿದವರಿಗೆ, ಪ್ರೇರೇಪಣೆ ನೀಡಿದವರಿಗೆ ಮಹಾಲಿಂಗೇಶ್ವರನು ತಕ್ಕ ಪ್ರತಿಫಲ ನೀಡಲೆಂದು 108 ತೆಂಗಿನಕಾಯಿ ಒಡೆಯಲಾಗಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

ಸುಡುಮದ್ದು ಪ್ರದರ್ಶನ
ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಸುಡುಮದ್ದಿನ ಪ್ರದರ್ಶನ ನಡೆಯಿತು.

ವೇದಿಕೆ ಪರಿಶೀಲಿಸಿದ ಬಾಂಬ್ ಸ್ಕ್ವಾಡ್, ಶ್ವಾನದಳ

ಕಾರ್ಯಕ್ರಮಕ್ಕೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಪೂರ್ವಯೋಜಿತ ಕೃತ್ಯ ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಅಲ್ಲದೇ ಕಾರ್ಯಕ್ರಮ ನಡೆಯುವ ವೇದಿಕೆಯ ಸುತ್ತಮುತ್ತ ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳ ಪರಿಶೀಲನೆ ನಡೆಸಿತು.

ಜೊತೆಯಾಗಿ ಸಾಗುವ ಇಂಗಿತ ವ್ಯಕ್ತಪಡಿಸಿದ ಪುತ್ತಿಲ

ತನ್ನ ಒಟ್ಟು ಭಾಷಣದಲ್ಲಿ ಹಿಂದು ಸಮಾಜದ ಉನ್ನತಿಗಾಗಿ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಮುನ್ನಡೆಯುವ ಇಂಗಿತ ವ್ಯಕ್ತಪಡಿಸಿದರು. ‘ಜೊತೆಜೊತೆಯಾಗಿ ಸಾಗುತ್ತಾ ವಿಶ್ವವಂದ್ಯ ರಾಷ್ಟ್ರಕ್ಕಾಗಿ ಸೇವೆಯನ್ನು ಮುಡಿಪಾಗಿಡೋಣ, ನಮ್ಮೊಳಗೆ ನಡೆದಿರುವ ಎಲ್ಲಾ ಬೆಳವಣಿಗೆಗಳಿಗೂ ಮಹಾಲಿಂಗೇಶ್ವರ ದೇವರು ಸರಿದಾರಿಯನ್ನು ತೋರಿಸಲಿ ಎಂದು ಪುತ್ತಿಲ ಹೇಳಿದರು.

ಹರಿದು ಬಂದ ಕೇಸರಿ ವಾಹಿನಿ
ದರ್ಬೆ ವೃತ್ತದ ಬಳಿ ‘ನಮ್ಮ ನಡಿಗೆ ಮಹಾಲಿಂಗೇಶ್ವರ ನಡೆಗೆ’ ಎಂಬ ಉದ್ಘೋಷದೊಂದಿಗೆ ಕಾಲ್ನಡಿಗೆ ಜಾಥಾ ಆರಂಭಗೊಂಡಿತು. ಅದಕ್ಕೂ ಮೊದಲು ಅರುಣ್ ಕುಮಾರ್ ಪುತ್ತಿಲ ದರ್ಬೆ ವೃತ್ತದ ಅಶ್ವತ್ಥ ಕಟ್ಟೆಗೆ ನಮಸ್ಕರಿಸಿದರು. ಮಹಾಲಿಂಗೇಶ್ವರನಿಗೆ ಗೋವಿಂದ ಹೇಳಿ ಜಾಥಾಗೆ ಪುತ್ತಿಲರವರು ಚಾಲನೆ ನೀಡಿದರು. ಮುಂಭಾಗದಲ್ಲಿ ಪುತ್ತಿಲ ಮತ್ತು ಅವರ ಕೆಲ ಬೆಂಬಲಿಗರು ಬರಿಗಾಲಲ್ಲಿ ನಡೆದರು. ಅವರ ಹಿಂದೆ ಭಜನೆ ಹಾಡುತ್ತಾ ಮಹಿಳೆಯರು, ಬಳಿಕ ಸಾಲುಗಟ್ಟಿ ಕಾರ್ಯಕರ್ತರ ಸಾಗರ ರಸ್ತೆಯುದ್ದಕ್ಕೂ ಹರಿದು ಬಂತು. ಮಹಾಲಿಂಗೇಶ್ವರ ದೇವರಿಗೆ ಮತ್ತು ಭಾರತ ಮಾತೆಗೆ ಜಯಕಾರ ಹೊರತು ಪಡಿಸಿ ಇಡೀ ಜಾಥದಲ್ಲಿ ಇನ್ಯಾವುದೇ ಘೋಷಣೆಗಳು ಕೇಳಿ ಬರಲಿಲ್ಲ. ರಸ್ತೆಯುದ್ದಕ್ಕೂ ಸಾಗಿ ಬರುತ್ತಿದ್ದ ಕೇಸರಿ ವರ್ಣದ ಹಿಂದು ವಾಹಿನಿಯು ಮುಸ್ಸಂಜೆಯ ವೇಳೆಗೆ ಸೂರ್ಯ ರಶ್ಮಿಯ ಹೊಂಬಣ್ಣದಲ್ಲಿ ಮತ್ತಷ್ಟು ಕೇಸರಿಮಯವಾಗಿ ಕಂಗೊಳಿಸುತ್ತಿತ್ತು.

ಪುತ್ತಿಲ ಪರಿವಾರ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತ, ಕಾರ್ಯದರ್ಶಿ ಉಮೇಶ್ ಕೋಡಿಬೈಲು ಆಯ್ಕೆ

ಕಾರ್ಯಕ್ರಮದಲ್ಲಿ ಪುತ್ತಿಲ ಪರಿವಾರ ಲೋಗೋ ಅನಾವರಣ ಗೊಳಿಸಲಾಯಿತು. ಪುತ್ತಿಲರವರು ತನ್ನ ಭಾಷಣದಲ್ಲಿ ಈ ಸಂಘಟನೆಯ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತ ಮತ್ತು ಕಾರ್ಯದರ್ಶಿಯಾಗಿ ಉಮೇಶ್ ಗೌಡ ಕೋಡಿಬೈಲು ಹೆಸರನ್ನು ಘೋಷಿಸಿದರು.

ಕೈಮುಗಿಯುತ್ತಾ, ಹಿರಿಯರಿಗೆ ನಮಸ್ಕರಿಸುತ್ತಾ ಬಂದ ಪುತ್ತಿಲ
ಕಾಲ್ನಡಿಗೆಯ ದಾರಿಯುದ್ದಕ್ಕೂ ಅರುಣ್ ಪುತ್ತಿಲರವರು ಕೈಮುಗಿದುಕೊಂಡು, ಹಿರಿಯರನ್ನು ಕಂಡೊಡನೆ ಪಾದಮುಟ್ಟಿ ನಮಸ್ಕರಿಸುತ್ತಾ ಬಂದರು. ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯರವರು ಪುತ್ತಿಲ ಮತ್ತು ಅಭಿಮಾನಿಗಳನ್ನು ಬರಮಾಡಿಕೊಂಡು ದೇವಾಲಯಕ್ಕೆ ಒಂದು ಸುತ್ತು ಬಂದು ಪರಿವಾರ ದೈವ ದೇವರುಗಳಿಗೆ ನಮಸ್ಕರಿಸಿದ ಬಳಿಕ ಸಾನ್ನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಳದ ಪ್ರಧಾನ ಅರ್ಚಕ ಪ್ರಾರ್ಥಿಸಿ ದೇವರ ಪ್ರಸಾದ ನೀಡಿದರು.

ಗೋವಿಂದ ದಿಂದ ಆರಂಭ, ಗೋವಿಂದಾ ದೊಂದಿಗೆ ಮುಕ್ತಾಯ: ಪಾದಯಾತ್ರೆ ಆರಂಭವಾಗುವ ಮುನ್ನ ದರ್ಬೆಯಲ್ಲಿ ಮಹಾಲಿಂಗೇಶ್ವರ ದೇವರಿಗೆ ಗೋವಿಂದ ಹೇಳಿದ ಅರುಣ್ ಪುತ್ತಿಲರವರು ತನ್ನ ಭಾಷಣದ ಕೊನೆಯಲ್ಲಿಯೂ ಗೋವಿಂದ ಹೇಳಿ ಮುಕ್ತಾಯಗೊಳಿಸಿದರು. ಕಾರ್ಯಕ್ರಮದುದ್ದಕ್ಕೂ ಭಾರತ ಮಾತೆಗೆ ಜಯಕಾರ ಮೊಳಗುತ್ತಿತ್ತು. ಸಭಾ ಕಾರ್ಯಕ್ರಮದ ವೇದಿಕೆ ಬಳಿಗೆ ಪುತ್ತಿಲರು ಆಗಮಿಸುತ್ತಿದ್ದಂತೆ ಎಲ್ಲರೂ ಎದ್ದುನಿಂತು ಜೈಕಾರ ಹಾಕಿದರು.

ಉಪಹಾರದ ವ್ಯವಸ್ಥೆ: ಕಾರ್ಯಕ್ರಮದ ಬಳಿಕ ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಧರ್ಮಸ್ಥಳದ ಉದ್ಯಮಿ ಕಿರಣ್ ಕುಮಾರ್ ರವರು ಉಪಾಹಾರದ ಪ್ರಾಯೋಜಕತ್ವ ವಹಿಸಿದ್ದರು. ಅವರಿಗೆ ವೇದಿಕೆಯಲ್ಲಿ ಶಾಲು ಹೊದೆಸಿ ಗೌರವಿಸಲಾಯಿತು. ವೇದಿಕೆ ಹತ್ತಿದ ಪುತ್ತಿಲರವರು ಸಭಿಕರಿಗೆ ಮಂಡಿಯೂರಿ ಪ್ರಣಾಮ ಸಲ್ಲಿಸಿದರು. ವೇದಿಕೆಯಲ್ಲಿ ಜೊತೆಗಿದ್ದವರೂ ಇದೇ ರೀತಿ ಪ್ರಣಾಮ ಸಲ್ಲಿಸಿದರು.

LEAVE A REPLY

Please enter your comment!
Please enter your name here