ಬಂಟ್ವಾಳ:ಸೈಕಲ್ ಏರಿ ದೇಶ ಪರ್ಯಟನೆ ಮಾಡುವ ಈ ಯುವಕ ಎಲ್ಲರಿಗೂ ಪರಿಸರ ಸಂರಕ್ಷಣೆಯ ಪಾಠ ಮಾಡುತ್ತಿದ್ದಾರೆ.
ಹೌದು ಇವರ ಹೆಸರು ಚೈತನ್ಯ. ಆಂಧ್ರಪ್ರದೇಶದ ನಲ್ಲೂರು ಇವರ ತವರು ಜಿಲ್ಲೆ. ಕಳೆದ 2022 ಡಿ.25ರಂದು ನಲ್ಲೂರಿನಿಂದ ಯಾತ್ರೆ ಹೊರಟಿರುವ ಈತ ಈವರೆಗೆ 9400 ಕಿಮೀ ಸೈಕಲ್‌ನಲ್ಲೇ ಕ್ರಮಿಸಿದ್ದಾರೆ. ಕಳೆದ 146 ದಿನಗಳಲ್ಲಿ ಪಾಂಡಿಚೇರಿ, ತಮಿಳುನಾಡು, ಕೇರಳ ರಾಜ್ಯಗಳನ್ನು ಸಂಪರ್ಕಿಸಿರುವ ಈತ ಒಟ್ಟು 625 ದಿನಗಳ ಕಾಲ ಸೈಕಲ್‌ನಲ್ಲಿ ಪಯಣಿಸಿ ಗಿನ್ನೆಸ್ ದಾಖಲೆಯ ಉದ್ದೇಶವನ್ನೂ ಇರಿಸಿಕೊಂಡಿದ್ದಾರೆ. ಪುತ್ತೂರಿನಿಂದ ಮಂಗಳೂರಿಗೆ ಸಾಗುವ ದಾರಿ ಮಧ್ಯೆ ಕಲ್ಲಡ್ಕದಲ್ಲಿ ಪತ್ರಿಕೆಯ ಜೊತೆ ಮಾತನಾಡಿದ ಚೈತನ್ಯ ತನ್ನ ಅನಿಸಿಕೆಗಳನ್ನು ತೆರೆದಿಟ್ಟಿದ್ದಾರೆ.
ಪರಿಸರ ಜಾಗೃತಿಯೇ ಆಶಯ:
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವುದು ತನ್ನ ಮುಖ್ಯ ಧ್ಯೇಯ ಎನ್ನುವ ಈತ ಪ್ಲಾಸ್ಟಿಕ್‌ನ ಬಳಕೆ ಕಡಿಮೆ ಮಾಡಬೇಕು, ಬಳಸಿದ ಪ್ಲಾಸ್ಟಿಕನ್ನು ಮತ್ತೆ ಮತ್ತೆ ಮರುಬಳಕೆ ಮಾಡುವ ಮೂಲಕ ಹೊಸ ಪ್ಲಾಸ್ಟಿಕ್ ಉತ್ಪಾದನೆ, ಉಪಯೋಗವನ್ನು ತಡೆಯಬೇಕು, ಅತಿಯಾದ ಉಷ್ಟಾಂಶವನ್ನು ಕಡಿಮೆ ಮಾಡಲು ಮರಗಿಡಗಳನ್ನು ಬೆಳೆಸಿ ಎನ್ನುವ ಈತ ಪ್ರತೀ ಮನೆಯ ಸುತ್ತಮುತ್ತ ಕನಿಷ್ಟ ನಾಲ್ಕೈದು ಗಿಡಗಳನ್ನು ನೆಟ್ಟು ಮರವಾಗಿಸಬೇಕು ಎನ್ನುತ್ತಾರೆ. ಪ್ಲಾಸ್ಟಿಕ್ ಹಾವಳಿ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಲು ತನ್ನ ತಂದೆ ಗುರಂ ನರಸಿಂಹಲು ಪ್ರೇರಣೆಯಾಗಿದ್ದಾರೆ ಎನ್ನುವ ಈತ ಡಿ.ಫಾರ್ಮ್ ವಿದ್ಯಾರ್ಜನೆ ಪೂರೈಸಿದ್ದು, ತಾನೇನಾದರೂ ಸಾಧಿಸಬೇಕು, ತನ್ನ ಸಾಧನೆ ಸಮಾಜಮುಖಿಯಾಗಿರಬೇಕು ಎನ್ನುವ ಛಲ ಹೊಂದಿದ್ದಾರೆ. ಒಟ್ಟು 50 ಸಾವಿರ ಕಿಮೀ. ದೂರ ಸೈಕಲ್‌ನಲ್ಲೇ ಕ್ರಮಿಸಿ ದೇಶ ಸುತ್ತುವ ಜೊತೆಗೆ ವೈವಿಧ್ಯಮಯ ಸಂಸ್ಕೃತಿಯನ್ನು ತಿಳಿಯುವ ಉದ್ದೇಶವೂ ಈತನದ್ದಾಗಿದ್ದು, ಸೈಕಲ್‌ಯಾತ್ರೆಯ ಮೂಲಕ ಭೂಮಿಗೇ ಚೈತನ್ಯ ನೀಡಲು ಹೊರಟ ಚೈತನ್ಯನ ಯಾತ್ರೆ ಯಶಸ್ವಿಯಾಗಲಿ.