ಉಪ್ಪಿನಂಗಡಿ: ಬ್ಯಾಂಕ್ ಖಾತೆಗಳಿಗಿರುವ ವಿಮಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡರೆ ಅಕಾಲಿಕವಾಗಿ ಎರಗುವ ಅಪಾಯದಿಂದ ಕುಟುಂಬಸ್ಥರನ್ನು ರಕ್ಷಿಸಬಹುದೆನ್ನುವುದಕ್ಕೆ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇದರ ಸುರಕ್ಷಾ ವಿಮಾ ಯೋಜನೆ ಉತ್ತಮ ಉದಾಹರಣೆಯಾಗಿದೆ. ಕೆಲ ತಿಂಗಳ ಹಿಂದೆ ಉಪ್ಪಿನಂಗಡಿಯ ಗಾಂಧೀಪಾರ್ಕ್ ಬಳಿಯ ಟಯರ್ ರೀಸೋಲ್ ಘಟಕದಲ್ಲಿ ಸ್ಪೋಟ ಸಂಭವಿಸಿ ಸಾವನ್ನಪ್ಪಿದ್ದ ರಾಜೇಶ್ ಪೂಜಾರಿಯವರು ವಿಮಾ ಯೋಜನೆಗೆ ಸೇರಿದ ನಡೆಯಿಂದಾಗಿ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿಯ ವಿಮಾ ಮೊತ್ತವನ್ನು ಮೇ.21ರಂದು ಕರ್ನಾಟಕ ಬ್ಯಾಂಕ್ ನ ಉಪ್ಪಿನಂಗಡಿ ಶಾಖೆಯಲ್ಲಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಆಲಂಕಾರು ಗ್ರಾಮದ ಶರವೂರು ನಿವಾಸಿ ರಾಜೇಶ್ ಕಳೆದ ನಾಲ್ಕು ತಿಂಗಳ ಹಿಂದೆ ಸಂಭವಿಸಿದ ಟಯರ್ ರಿಸೋಲ್ ಘಟಕದಲ್ಲಿ ಸ್ಪೋಟ ಸಂಭವಿಸಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದರು. ಮನೆಯಲ್ಲಿ ಪತ್ನಿ , ಇಬ್ಬರು ಪುಟ್ಟ ಮಕ್ಕಳ ಜವಾಬ್ದಾರಿ ಹೊತ್ತಿದ್ದ ರಾಜೇಶ್ ಅಕಾಲಿಕ ಮರಣದಿಂದಾಗಿ ಕುಟುಂಬ ಅತಂತ್ರವಾಗಿತ್ತು. ಆದರೆ ರಾಜೇಶ್ ರವರು ಕರ್ನಾಟಕ ಬ್ಯಾಂಕ್ ಲಿ ನ ಉಪ್ಪಿನಂಗಡಿ ಶಾಖೆಯಲ್ಲಿ ಹೊಂದಿದ್ದ ಉಳಿತಾಯ ಖಾತೆದಾರರಿಗೆ ಒದಗಿಸಲಾದ ವಾರ್ಷಿಕ 300 ರೂಪಾಯಿ ಪಾವತಿಸುವ ಕೆಬಿಎಲ್ ಸುರಕ್ಷಾ ವಿಮಾ ಯೋಜನೆಗೆ ಹಣ ಪಾವತಿಸಿದ್ದರಿಂದ , ಬ್ಯಾಂಕ್ ಅಧಿಕಾರಿಗಳು ವಿಮಾ ಸೌಲಭ್ಯವನ್ನು ಒದಗಿಸುವಲ್ಲಿ ಮುತುವರ್ಜಿಯನ್ನು ತೋರಿದ್ದಾರೆ.
ಪರಿಣಾಮ ಮಂಜೂರಾತಿಯಾದ 10 ಲಕ್ಷ ರೂ ವಿಮಾ ಮೊತ್ತವನ್ನು ಬ್ಯಾಂಕ್ ಮೆನೇಜರ್ ಮುಳಿಯ ಶ್ಯಾಮ್ ಭಟ್, ಬ್ಯಾಂಕ್ ಸಿಬ್ಬಂದಿ ಹರಿಶ್ಚಂದ್ರ ಯು ಅವರು ರಾಜೇಶ್ ರವರ ಪತ್ನಿ ಸವಿತಾ ಪೂಜಾರಿ ರವರಿಗೆ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಬ್ಯಾಂಕ್ ಮೇನೇಜರ್ ಕನಿಷ್ಠ ಮೊತ್ತದ ಪಾವತಿಯಿಂದ ಕುಟುಂಬಕ್ಕೆ ಗರಿಷ್ಠ ಮೊತ್ತದ ಭದ್ರತೆಯನ್ನು ಒದಗಿಸುವ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.